ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರು ಬಿತ್ತನೆ ಪ್ರಮಾಣ ಕುಂಠಿತ

Last Updated 14 ಅಕ್ಟೋಬರ್ 2017, 6:30 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ಎಲ್ಲ ಕಡೆ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ವಾಣಿ ವಿಲಾಸ ಜಲಾಶಯ ಹೊರತುಪಡಿಸಿ ಬಹುತೇಕ ಕೆರೆಗಳಿಗೆ ನಿರೀಕ್ಷೆಗೂ ಮೀರಿ ನೀರು ಬಂದಿದ್ದು, ಚೆಕ್ ಡ್ಯಾಂ, ಕೃಷಿಹೊಂಡ, ನಾಲಾಬದುಗಳು ತುಂಬಿ ಹರಿದಿವೆ.

ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಅರ್ಧದಷ್ಟು ಮಾತ್ರ ಮಳೆಯಾಗಿತ್ತು. ಆಗಸ್ಟ್ ನಂತರ ಮಳೆಯ ಪ್ರಮಾಣ ಹೆಚ್ಚಿತು. ತಾಲ್ಲೂಕಿನ ಎಲ್ಲ ಕಡೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಅಸ್ಲಂ ತಿಳಿಸಿದ್ದಾರೆ. ‌

ಹಿಂಗಾರು ಬಿತ್ತನೆ ಕುಂಠಿತ: ‘ಒಂದೂವರೆ ತಿಂಗಳಿಂದ ಬಿಟ್ಟೂ ಬಿಡದೆ ಬರುತ್ತಿರುವ ಮಳೆಯಿಂದ ಹಿಂಗಾರು ಬಿತ್ತನೆಗೆ ಅಡ್ಡಿಯಾಗಿದೆ. ಹೀಗಾಗಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಕಸಬಾ ಹೋಬಳಿಯಲ್ಲಿ ಏಕದಳ ಧಾನ್ಯಗಳ ಬಿತ್ತನೆ ಖುಷ್ಕಿ ಮತ್ತು ನೀರಾವರಿ ಸೇರಿ 3,450 ಹೆಕ್ಟೇರ್ ಆಗಬೇಕಿತ್ತು. ಆದರೆ, ಕೇವಲ 590 ಹೆಕ್ಟೇರ್ ಬಿತ್ತನೆಯಾಗಿದೆ. ಧರ್ಮಪುರ ಹೋಬಳಿಯಲ್ಲಿ 990 ಹೆಕ್ಟೇರ್ ಗುರಿಯ ಪೈಕಿ ಕೇವಲ 670 ಹೆಕ್ಟೇರ್ ಬಿತ್ತನೆಯಾಗಿದೆ.

ಜವನಗೊಂಡನಹಳ್ಳಿ ಹಾಗೂ ಐಮಂಗಲ ಹೋಬಳಿಯಲ್ಲಿ ಕ್ರಮವಾಗಿ 300 ಹಾಗೂ 4,200 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದರೂ ಇಲ್ಲಿ ಸ್ವಲ್ಪವೂ ಬಿತ್ತನೆಯೇ ಆಗಿಲ್ಲ’ ಎಂದು ಅಸ್ಲಂ ಹೇಳಿದ್ದಾರೆ.

ತಾಲ್ಲೂಕಿನಲ್ಲಿ ಸೂರ್ಯಕಾಂತಿ 1,060 ಹೆಕ್ಟೇರ್ ಬದಲು ಕೇವಲ 360 ಹೆಕ್ಟೇರ್ ಬಿತ್ತನೆ ಆಗಿದೆ. ಕುಸುಬೆ 1,600 ಹೆಕ್ಟೇರ್ ಗುರಿ ಇದ್ದರೂ ಕೇವಲ 20 ಹೆಕ್ಟೇರ್ ಬಿತ್ತನೆಯಾಗಿದೆ. ಕಡಲೆ 14,570 ಹೆಕ್ಟೇರ್ ಬಿತ್ತನೆ ಆಗಬೇಕಿತ್ತು. ಆದರೆ, ಇನ್ನೂ ಬಿತ್ತನೆ ಕಾರ್ಯ ಆರಂಭವಾಗಿಲ್ಲ.

ಒಟ್ಟಾರೆ 27,400 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು. ಕೇವಲ 1,938 ಹೆಕ್ಟೇರ್ ಬಿತ್ತನೆಯಾಗಿದೆ. ಮಳೆ ಬಿಡುವ ನೀಡಿದರೆ ಕಡಲೆ, ಜೋಳ ಬಿತ್ತನೆ ನಿರೀಕ್ಷಿತ ಪ್ರಮಾಣದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಬೆಳೆ ಸ್ಥಿತಿ: ತಾಲ್ಲೂಕಿನಲ್ಲಿ ಬಿತ್ತನೆ ಮಾಡಿದ್ದ ರಾಗಿ, ತೊಗರಿ, ಮೆಕ್ಕೆಜೋಳ, ಶೇಂಗಾ, ಹತ್ತಿ ಬೆಳೆಗಳು ಈಚೆಗೆ ಬಿದ್ದ ಮಳೆಯಿಂದಾಗಿ ಚೇತರಿಸಿಕೊಂಡಿವೆ. ಎಲೆ ತಿನ್ನುವ ಹಾಗೂ ಸೈನಿಕ ಹುಳುವಿನ ಬಾಧೆ ನಿಯಂತ್ರಿಸುವ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗಿದೆ ಎಂದು ಅಸ್ಲಂ ಹೇಳಿದ್ದರು.
**

ಹಿರಿಯೂರು ತಾಲ್ಲೂಕಿನ ಮಳೆ ವಿವರ
ಹೋಬಳಿ ವಾಡಿಕೆ ಮಳೆ ಬಿದ್ದ ಮಳೆ
ಕಸಬಾ 447 ಮಿ.ಮೀ 670.7 ಮಿ.ಮೀ
ಐಮಂಗಲ 449.5 ಮಿ.ಮೀ 567.7 ಮಿ.ಮೀ
ಧರ್ಮಪುರ 386.8 ಮಿ.ಮೀ 759 ಮಿ.ಮೀ
ಜವನಗೊಂಡನಹಳ್ಳಿ 441.4 ಮಿ.ಮೀ 711.8 ಮಿ.ಮೀ
(* ಅಕ್ಟೋಬರ್‌ 12ರವರೆಗೆ; ಮಾಹಿತಿ: ಕೃಷಿ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT