ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಶೌಚಕ್ಕೆ ಹೊರಟವರ ಪಾದಪೂಜೆ

Last Updated 14 ಅಕ್ಟೋಬರ್ 2017, 6:48 IST
ಅಕ್ಷರ ಗಾತ್ರ

ಮುಂಡರಗಿ: ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಬೀಡನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಪಾಪುರ ಗ್ರಾಮದಲ್ಲಿ ಶೌಚಾಲಯ ಬಳಸುವಂತೆ ಜನರ ಮನವೊಲಿಸಲು ಗ್ರಾಮ ಪಂಚಾಯತಿ ಸದಸ್ಯ ದೇವರಾಜ ಹಡಪದ ಬಯಲು ಶೌಚಕ್ಕೆ ಹೊರಟವರನ್ನು ತಡೆದು, ಅವರ ಪಾದಪೂಜೆ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಪ್ರತಿದಿನ ಮುಂಜಾನೆ ನೀರು, ವಿಭೂತಿ, ಕುಂಕುಮ ಮೊದಲಾದ ಪೂಜಾ ಸಾಮಗ್ರಿಗಳೊಂದಿಗೆ ಶಾಲಾ ವಿದ್ಯಾರ್ಥಿಗಳೊಂದಿಗೆ ಗ್ರಾಮದ ಹೊರಗಿನ ಬಯಲು ಪ್ರದೇಶಕ್ಕೆ ಬರುವ ದೇವ ರಾಜ ಅವರು, ತಂಬಿಗೆ ಹಿಡಿದು ಬಯಲಿಗೆ ಹೊರಟವರನ್ನು ತಡೆದು ಅವರ ಪಾದಪೂಜೆ ಮಾಡುತ್ತಾರೆ. ನಂತರ ಮನೆಯಲ್ಲಿ ನಿರ್ಮಿಸಿರುವ ಶೌಚಾಲಯವನ್ನೆ ಬಳಸಿ ಎಂದು ಮನವಿ ಮಾಡುತ್ತಾರೆ.

ಗ್ರಾಮದಲ್ಲಿ ಈ ಕಾರ್ಯಕ್ರಮ ಪ್ರಾರಂಭಗೊಂಡು ಮೂರು ದಿನಗಳು ಕಳೆದಿದ್ದು, ಪಾದಪೂಜೆ ಮುಜುಗರದಿಂದ ತಪ್ಪಿಸಿಕೊಳ್ಳಲು ಗ್ರಾಮದ ಅನೇಕರು ತಮ್ಮ ಮನೆಯಲ್ಲಿ ನಿರ್ಮಿಸಿಕೊಂಡಿರುವ ಶೌಚಾಲಯವನ್ನೇ ಬಳಸುತ್ತಿದ್ದಾರೆ.

‘ಮೂರು ತಿಂಗಳ ಹಿಂದೆ ಗ್ರಾಮ ಪಂಚಾಯತಿ ವತಿಯಿಂದ ಮನೆಮನೆಗೆ ತೆರಳಿ, ಮನೆಯಲ್ಲಿ ನಿರ್ಮಿಸಿಕೊಂಡಿರುವ ಶೌಚಾಲಯ ಬಳಸುವಂತೆ ಜಾಗೃತಿ ಮೂಡಿಸಲಾಗಿತ್ತು. ಆದರೆ, ಬಯಲು ಪ್ರಿಯರಾದ ಗ್ರಾಮಸ್ಥರು ಇದಕ್ಕೆ ಸರಿಯಾಗಿ ಸ್ಪಂದಿಸಿರಲಿಲ್ಲ. ಹೇಗಾದರೂ ಮಾಡಿ ಅವರ ಮನವೊಲಿಸಿ ಬಯಲಿಗೆ ಹೋಗುವುದನ್ನು ತಡೆಯಲು ಪಾದಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡೆ.

ಶಾಲಾ ವಿದ್ಯಾರ್ಥಿಗಳು ಇದಕ್ಕೆ ಕೈಜೋಡಿಸಿದರು. ಈಗ ನಿಧಾನಕ್ಕೆ ಜನರು ಮನಸ್ಸು ಬದಲಿಸುತ್ತಿದ್ದು, ಬಯಲಿಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ನಿಧಾನವಾಗಿ ನಮ್ಮ ಗ್ರಾಮ ಸಂಪೂರ್ಣವಾಗಿ ಬಯಲು ಬಹಿರ್ದೆಸೆ ಮುಕ್ತವಾಗುತ್ತದೆ’ ಎಂದು ದೇವರಾಜ ಹಡಪದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಂಚಾಯಿತಿಯೋರು ರೊಕ್ಕ ಕೊಟ್ಟು ಪಾಯಖಾನಿ ಕಟ್ಟಿಸ್ಯಾರ್ರಿ, ಇನ್ನಮುಂದ ಎಲ್ಲರೂ ಮನ್ಯಾಗಿನ ಪಾಯಖಾನಿ ಬಳಸತೇವ್ರಿ. ಬಯಲಿಗೆ ಹೋಗಲ್ಲ’ ಎಂದು ತಿಪ್ಪಾಪುರ ಗ್ರಾಮದ ಮಹಿಳೆ ಕೆಂಚವ್ವ ಹಿತ್ಲಮನಿ ಈ ಜಾಗೃತಿ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿದರು.

ಕಾಶೀನಾಥ ಬಿಳಿಮಗ್ಗದ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT