‘ಜೈನರ ಕಾಶಿ’ಗೆ ತಲುಪಲು ಯಾತ್ರಿಗಳ ಪರದಾಟ

ಬುಧವಾರ, ಜೂನ್ 19, 2019
31 °C

‘ಜೈನರ ಕಾಶಿ’ಗೆ ತಲುಪಲು ಯಾತ್ರಿಗಳ ಪರದಾಟ

Published:
Updated:
‘ಜೈನರ ಕಾಶಿ’ಗೆ ತಲುಪಲು ಯಾತ್ರಿಗಳ ಪರದಾಟ

ಹಿರೀಸಾವೆ: ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕದ ಪೂರ್ವ ತಯಾರಿ ಚಟುವಟಿಕೆಗಳು ಗರಿಗೆದರಿವೆ. ಆದರೆ, ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಿಂದ ಶ್ರವಣಬೆಳಗೊಳಕ್ಕೆ ತೆರಳಲು ರಸ್ತೆಗಳ ಪಕ್ಕದಲ್ಲಿ ಸೂಚನಾ ಮತ್ತು ಮಾಹಿತಿ ಫಲಕಗಳನ್ನು ಹಾಕಿಲ್ಲ.

ದೇಶ, ವಿದೇಶಗಳಿಂದ ಬರುವ ಯಾತ್ರಿಗಳು ಬೆಂಗಳೂರಿನಿಂದ ಎನ್‌ಎಚ್‌ 75ರಲ್ಲಿ 120 ಕಿ.ಮೀ ಪ್ರಯಾಣ ಮಾಡುತ್ತಾರೆ. ನಂತರ ಹಿರೀಸಾವೆಯಿಂದ ರಾಜ್ಯ ಹೆದ್ದಾರಿ 8ರ ಮೂಲಕ ಶ್ರವಣಬೆಳಗೊಳಕ್ಕೆ 17 ಕಿ.ಮೀ. ಸಂಚರಿಸಬೇಕು. ನಿತ್ಯ ನೂರಾರು ಯಾತ್ರಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ‘ಶ್ರವಣಬೆಳಗೊಳಕ್ಕೆ ಯಾವ ರಸ್ತೆಯಲ್ಲಿ ತೆರಳಬೇಕು’ ಎಂದು ಸ್ಥಳಿಯ ಜನರನ್ನು ಕೇಳುತ್ತಿದ್ದಾರೆ.

ಕೆಲವು ಸಲ ಭಾಷೆಯ ತೊಡಕಿನಿಂದ ಸರಿಯಾದ ಮಾಹಿತಿ ಸಿಗದೆ, ಅಗತ್ಯಕ್ಕಿಂತ ಹೆಚ್ಚು ದೂರ ಕ್ರಮಿಸುತ್ತಿದ್ದಾರೆ. ಹಿರೀಸಾವೆಯಿಂದ 17 ಕಿ.ಮೀ. ಪ್ರಯಾಣಿಸಬೇಕಾದ ಯಾತ್ರಿಗಳು, ರಾಷ್ಟ್ರೀಯ ಹೆದ್ದಾರಿಯಲ್ಲಿ 20 ಕಿ.ಮೀ. ಹೆಚ್ಚು ದೂರಹೋಗಿ ಚನ್ನರಾಯಪಟ್ಟಣದ ಬಳಿ ಶ್ರವಣಬೆಳಗೊಳಕ್ಕೆ ಹೋಗುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಾದವರು ರಸ್ತೆ ಪಕ್ಕದಲ್ಲಿ ಮತ್ತು ಹಿರೀಸಾವೆ ಸಮೀಪದಲ್ಲಿ ಯಾವುದೇ ಸೂಚನಾ ಫಲಕಗಳನ್ನು ಹಾಕಿಲ್ಲ. ಹಿರೀಸಾವೆಯಿಂದ 8 ಕಿ.ಮೀ. ದೂರದಲ್ಲಿ ಟೋಲ್‌ಗೇಟ್‌ ಇದೆ. ಅಲ್ಲಿಯೂ ಶ್ರವಣಬೆಳಗೊಳಕ್ಕೆ ಸಾಗುವ ಬಗ್ಗೆ ಮಾಹಿತಿ ನೀಡುವ ಯಾವುದೇ ಫಲಕಗಳು ಇಲ್ಲ. ಇನ್ನು ಎನ್‌ಎಚ್‌ನಿಂದ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಇಲ್ಲಿನ ಶ್ರೀಕಂಠಯ್ಯ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆಯವರು ಸಹ ಯಾವುದೇ ಮಾಹಿತಿಯ ಫಲಕಗಳನ್ನು ಅಳವಡಿಸಿಲ್ಲ. ಪ್ರವಾಸೋದ್ಯಮ ಇಲಾಖೆಯವರು ಈ ಬಗ್ಗೆ ಕ್ರಮ ಸಹ ಕೈಗೊಂಡಿಲ್ಲ.

ಉತ್ತರ ಕರ್ನಾಟಕದ ಕಡೆಯಿಂದ ಬರುವ ಯಾತ್ರಿಗಳು ತುಮಕೂರು ಜಿಲ್ಲೆಯಿಂದ ದಿಡಗ, ನುಗ್ಗೇಹಳ್ಳಿ ರಸ್ತೆಗಳ ಮೂಲಕ ಹಿರೀಸಾವೆ ತಲುಪಿ, ಶ್ರವಣಬೆಳೊಳಕ್ಕೆ ತೆರಳುತ್ತಾರೆ. ಈ ಎರಡು ರಸ್ತೆಗಳಿಗೂ ಜಿಲ್ಲಾ ಆಡಳಿತ ಯಾವುದೇ ಮಾಹಿತಿ ಮತ್ತು ಸೂಚಾನ ಫಲಕಗಳನ್ನು ಹಾಕದೆ ಇರುವುದರಿಂದ ಪ್ರವಾಸಿಗರು ಪ್ರತಿ ಹಳ್ಳಿಯ ಬಳಿ ವಾಹನಗಳನ್ನು ನಿಲ್ಲಿಸಿ, ಶ್ರವಣಬೆಳಗೊಳಕ್ಕೆ ಯಾವ ಮಾರ್ಗದಲ್ಲಿ ಹೋಗ ಬೇಕು ಎಂಬ ಮಾಹಿತಿ ಪಡೆಯುಬೇಕಾಗಿದೆ.

‘ಪ್ರವಾಸೋದ್ಯಮ ಇಲಾಖೆಗೆ ಸೂಚನಾ ಮತ್ತು ಮಾಹಿತಿ ಫಲಕಗಳನ್ನು ಹಾಕಲು ತಿಳಿಸಲಾಗಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ರಸ್ತೆಗೂ ಫಲಕಗಳನ್ನು ಅಳವಡಿಸಲಾಗವುದು’ ಎಂದು ಮಹಾಮಸ್ತಕಾಭಿಷೇಕದ ವಿಶೇಷ ಅಧಿಕಾರಿ ವರಪ್ರಸಾದ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂತರರಾಷ್ಟ್ರೀಯ ಪ್ರಸಿದ್ಧ ಸ್ಥಳಕ್ಕೆ ಬರುವ ಯಾತ್ರಿಗಳು ರಸ್ತೆಯ ಬಗ್ಗೆ ಮಾಹಿತಿ ಇಲ್ಲದೆ ಪರದಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯವರು ಅಗತ್ಯ ಇರುವ ಕಡೆ ಸೂಚನಾ ಮತ್ತು ಮಾಹಿತಿ ಫಲಕಗಳನ್ನು ಅಳವಡಿಸಿದರೆ, ಶ್ರವಣಬೆಳಗೊಳಕ್ಕೆ ಬರುವ ಯಾತ್ರಿಗಳಿಗೆ ಅನುಕೂಲವಾಗಲಿದೆ’ ಟೀ ಅಂಗಡಿ ವ್ಯಾಪಾರಿ ಗಿರೀಶ್‌.

* * 

ಮುಂದಿನ ದಿನಗಳಲ್ಲಿ ಪ್ರವಸೋದ್ಯಮ ಇಲಾಖೆಯವರು ಸೂಚನಾ, ಮಾಹಿತಿ ಫಲಕಗಳನ್ನು ರಸ್ತೆಗಳ ಪಕ್ಕದಲ್ಲಿ ಹಾಕಲಿದ್ದಾರೆ

ವರಪ್ರಸಾದ ರೆಡ್ಡಿ

ಮಹಾಮಸ್ತಕಾಭಿಷೇಕ ಮಹೋತ್ಸವದ ವಿಶೇಷ ಅಧಿಕಾರಿ

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry