ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗಿನೆಲೆ: ‘ಕನಕ ನಡೆ-ನುಡಿ’ ಡಿ. 23ರಿಂದ

Last Updated 14 ಅಕ್ಟೋಬರ್ 2017, 7:14 IST
ಅಕ್ಷರ ಗಾತ್ರ

ಹಾವೇರಿ: ‘ಸಂತ ಕನಕದಾಸರ ವಿಚಾರಧಾರೆಗಳನ್ನು ಯುವಜನತೆಗೆ ತಲುಪಿಸುವ ನಿಟ್ಟಿನಲ್ಲಿ ಡಿಸೆಂಬರ್ 23 ರಿಂದ 25ರ ತನಕ ಕಾಗಿನೆಲೆಯಲ್ಲಿ ‘ಕನಕ ನಡೆ-ನುಡಿ’ ಸಮಾವೇಶ ನಡೆಯಲಿದೆ’ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದರು.

ಕಾಗಿನೆಲೆ ಕನಕ ಸಭಾಂಗಣದಲ್ಲಿ ಜರುಗಿದ ‘ಕನಕ ನಡೆ–ನುಡಿ ಸಮಾವೇಶದ’ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.‘ಕನಕರ ಸಾಹಿತ್ಯದ ವಿವಿಧ ಆಯಾಮಗಳ ಕುರಿತು ವಿಚಾರಗೋಷ್ಠಿ, ಸಂವಾದ, ಚಿತ್ರಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ ರಚನೆ, ಕಾವ್ಯ ರಚನೆ, ಶಾಸ್ತ್ರ ಅಧ್ಯಯನ, ತತ್ವಜ್ಞಾನ ಒಳಗೊಂಡಂತೆ ಬಹುಮುಖ ಆಯಾಮಗಳನ್ನು ಹೊಂದಿದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಂತ ಕನಕರ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ ಮಾಡಿದ ರಾಜ್ಯದ ವಿವಿಧೆಡೆಯ ತಜ್ಞರು, ಸಂಶೋಧಕರು, ಬೋಧಕರನ್ನು ಆಹ್ವಾನಿಸಲಾಗುವುದು. ಒಟ್ಟಾರೆ, 800 ತಜ್ಞರು ಭಾಗವಹಿಸುವರು’ ಎಂದು ವಿವರಿಸಿದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿ. 23 ರಂದು ಕಾರ್ಯಕ್ರಮವನ್ನು ಉದ್ಘಾಟಿಸುವರು. ಈ ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲಾ ಮಟ್ಟದಲ್ಲಿ ವಿವಿಧ ಸಮಿತಿಗಳನ್ನು ರಚಿಸಬೇಕು’ ಎಂದು ಸಚಿವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ‘ಕನಕ ನಡೆ–ನುಡಿ ಕಾರ್ಯಕ್ರಮವು ಕಳೆದ ವರ್ಷವೇ ನಿಗದಿಯಾಗಿದ್ದು, ಸಿದ್ಧತೆಯನ್ನು ಆರಂಭಿಸಲಾಗಿತ್ತು. ‘ಬರ’ದ ಕಾರಣ ಕುಡಿಯುವ ನೀರು ಮತ್ತಿತರ ಕಾರಣಗಳಿಗಾಗಿ ಮುಂದೂಡಲಾಗಿತ್ತು. ಡಿಸೆಂಬರ್‌ನಲ್ಲಿ ‘ಕನಕ ನಡೆ-–ನುಡಿ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಮಾತನಾಡಿ, ‘ಕನಕ ನಡೆ–ನುಡಿ ಕಾರ್ಯಕ್ರಮದ ಸಿದ್ಧತೆಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ, ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

‘ವಿವಿಧ ತಜ್ಞರು, ಕಲಾವಿದರು, ಸಾಹಿತಿಗಳು, ವಿದ್ಯಾರ್ಥಿಗಳು, ಯುವ ಸಮೂಹವನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು’ ಎಂದ ಸಾಹಿತಿ ಕಾ.ತ.ಚಿಕ್ಕಣ್ಣ, ಊಟ, ವಸತಿ, ಸಾರಿಗೆ, ವಸ್ತು ಪ್ರದರ್ಶನ ಮಳಿಗೆ, ಪ್ರಚಾರದ ವ್ಯವಸ್ಥೆಗಳನ್ನು ಕೈಗೊಳ್ಳಬೇಕಾದ ಸ್ವರೂಪಗಳ ಕುರಿತು ವಿವರಿಸಿದರು.

ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ನಾಯಕ್, ಕಾಗಿನೆಲೆ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಬಿ.ಅಂಜನಪ್ಪ, ಸದಸ್ಯ ಅಬ್ದುಲ್ ಮುನಾಫ್ ಎಲಿಗಾರ, ಚನ್ನಪ್ಪ ಕಟ್ಟಿ, ಜಗದೀಶ ಪೂಜಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT