ಗುರುವಾರ , ಸೆಪ್ಟೆಂಬರ್ 19, 2019
26 °C

ತೀರ್ಥೋದ್ಭವಕ್ಕೆ ಕಾವೇರಿ ನಾಡು ಸಜ್ಜು

Published:
Updated:
ತೀರ್ಥೋದ್ಭವಕ್ಕೆ ಕಾವೇರಿ ನಾಡು ಸಜ್ಜು

ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಾಲ್ಲೂಕಿನ ಭಾಗಮಂಡಲ ಸಮೀಪದ ತಲಕಾವೇರಿಯಲ್ಲಿ ನಡೆಯುವ ವಾರ್ಷಿಕ ತೀರ್ಥೋದ್ಭವಕ್ಕೆ ಕಾವೇರಿ ನಾಡು ಸಜ್ಜಾಗಿದೆ. ಅ.17ರಂದು ಮಧ್ಯಾಹ್ನ 12.33ಕ್ಕೆ ಧನುರ್‌ ಲಗ್ನದಲ್ಲಿ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಭಕ್ತರಿಗೆ ಒಲಿಯಲಿದ್ದಾಳೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತುರರಾಗಿದ್ದಾರೆ. ಅಲ್ಲದೇ, ಜೀವನದಿಗೆ ನಮನ ಸಲ್ಲಿಸಲು ಭಕ್ತಸಾಗರವು ತುದಿಗಾಲಲ್ಲಿ ನಿಂತಿದೆ.

ಭಾಗಮಂಡಲದ ಭಗಂಡೇಶ್ವರ ದೇಗುಲದಲ್ಲಿ ತುಲಾ ಸಂಕ್ರಮಣ ಜಾತ್ರೆಯ ಪೂಜಾ ಕಾರ್ಯಗಳು ಆರಂಭಗೊಂಡಿದ್ದು ಭಕ್ತರು ಅತ್ತ ಧಾವಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಜತೆಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ.

ಶಾಸಕ ಕೆ.ಜಿ. ಬೋಪಯ್ಯ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆದಿದ್ದು, ಜಿಲ್ಲಾಡಳಿತವು ಸಕಲ ಸಿದ್ಧತೆ ಕೈಗೊಂಡಿದೆ. ತೀರ್ಥೋದ್ಭವದ ಅಂಗವಾಗಿ ಕೆಲವು ಸಂಘ–ಸಂಸ್ಥೆಗಳು ನದಿ ಹಾಗೂ ದೇವಸ್ಥಾನದ ಸುತ್ತಮುತ್ತ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, ಕಾಡು ಕಡಿದು ರಸ್ತೆಯ ಗುಂಡಿಗಳನ್ನು ಮುಚ್ಚುವ ಕೆಲಸ ಪ್ರಗತಿಯಲ್ಲಿದೆ.

ಈ ಬಾರಿ ಮಧ್ಯಾಹ್ನ ತೀರ್ಥೋದ್ಭವ ನಡೆಯುತ್ತಿದೆ. ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಪ್ರತಿ ವರ್ಷದಂತೆ ಕೊಡಗು ಏಕೀಕರಣ ರಂಗ ಅನ್ನಸಂತಪರ್ಣೆಗೆ ವ್ಯವಸ್ಥೆ ಮಾಡಿಕೊಂಡಿದೆ. ಮಂಡ್ಯ, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಿಂದ ಅಕ್ಕಿ, ಬೆಲ್ಲ, ಎಣ್ಣೆ, ತೆಂಗಿನಕಾಯಿ, ತರಕಾರಿ ಬರುವ ನಿರೀಕ್ಷೆಯಿದೆ.

ತಮಿಳುನಾಡು, ಕೇರಳದ ಭಕ್ತರು: ಕಳೆದ ವರ್ಷ ರಾಜ್ಯದಲ್ಲಿ ಕಾವೇರಿ ಗಲಾಟೆ ನಡೆದಿತ್ತು; ಬೆಂಗಳೂರಿನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಇದರಿಂದ ಆ ರಾಜ್ಯದ ಭಕ್ತರಸಂಖ್ಯೆ ಇಳಿಮುಖವಾಗಿತ್ತು. ಆದರೆ, ಈ ಬಾರಿ ಅಂತಹ ವಾತಾವರಣ ಇಲ್ಲ. ರಾಜ್ಯದಲ್ಲೂ ಉತ್ತಮ ಮಳೆಯಾಗಿದ್ದು, ತಮಿಳುನಾಡು, ಕೇರಳ ಸೇರಿದಂತೆ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಕೋಡಿ ಮನೆತನದವರು ಪೂಜೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ತೀರ್ಥೋದ್ಭವಕ್ಕೂ ಮೊದಲು ಭಾನುವಾರ ಹಾಗೂ ಸೋಮವಾರ ಸಾಂಪ್ರದಾಯಿಕ ಪೂಜೆಗಳು ಜರುಗಲಿದ್ದು, ಎರಡು ದಿವಸ ಕಾವೇರಿ ಮಾತೆ ಚಿನ್ನಾಭರಣದಿಂದ ಕಂಗೊಳಿಸಲಿದ್ದಾಳೆ.

ಬೆಳಕಿನ ಹಬ್ಬ ದೀಪಾವಳಿಯೊಂದಿಗೆ ಕಾವೇರಿ ಜಾತ್ರೆಯೂ ಬಂದಿರುವುದು ಪ್ರಕೃತಿ ಮಡಿಲಿನಲ್ಲಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಕಳೆಗಟ್ಟುವಂತೆ ಮಾಡಿದೆ. ಗದ್ದೆಗಳ, ಬಾವಿ ಪೂಜಿಸಲೂ ಕಾವೇರಿ ತೀರದ ಜನರು ಸಜ್ಜಾಗಿದ್ದಾರೆ.

ಮದ್ಯ ಮಾರಾಟ ನಿಷೇಧ:ಕಾನೂನು ಸುವ್ಯವಸ್ಥೆ ಕಾಪಾಡಲು ಅ.15ರ ಮಧ್ಯರಾತ್ರಿಯಿಂದ ಅ. 18ರ ಬೆಳಿಗ್ಗೆ 10ರ ವರೆಗೆ ಭಾಗಮಂಡಲ ಗ್ರಾಮ ಪಂಚಾಯಿತಿಯ 10 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯದ ಅಂಗಡಿ, ಬಾರ್, ಹೋಟೆಲ್, ಕ್ಲಬ್‌ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಕಣ್ಮನ ಸೆಳೆಯುವ ಭಾಗಮಂಡಲ ನಾಡಿನ ಪ್ರಸಿದ್ಧ ಕ್ಷೇತ್ರಗಳಲ್ಲಿ ಭಾಗಮಂಡಲವೂ ಒಂದು. ಇಲ್ಲಿನ ಭಗಂಡೇಶ್ವರ ದೇವಸ್ಥಾನ ನೋಡುವುದೇ ಆನಂದ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಈ ದೇವಸ್ಥಾನ ಸೇರಲಿದೆ.

ನಿತ್ಯ ಭಕ್ತರಿಗೆ ಮಧ್ಯಾಹ್ನ ಅನ್ನಸಂತರ್ಪಣೆ ವ್ಯವಸ್ಥೆ ಇದೆ. ದೇಗುಲ ಕೇರಳದ ಕಲಾಶೈಲಿಯನ್ನು ಹೋಲುತ್ತದೆ. ನೈಸರ್ಗಿಕ ಹಾಗೂ ಭಾವನಾತ್ಮಕ ವಿಚಾರವಾಗಿ ಇದು ಬಹಳ ಪ್ರಸಿದ್ಧಿ. ಭಾಗಮಂಡಲದಲ್ಲಿ ಮೂರು ನದಿಗಳ ಸಂಗಮವಾಗಲಿದೆ. ಕಾವೇರಿ, ಕನ್ನಿಕೆ ಹಾಗೂ ಬ್ರಹ್ಮಗಿರಿ ಶ್ರೇಣಿಯಿಂದ ಗುಪ್ತಗಾಮಿನಿಯಾಗಿ ಹರಿದು ಬರುವ ಸುಜ್ಯೋತಿ ಇಲ್ಲಿ ಸಂಗಮವಾಗುತ್ತವೆ.

ಹೀಗಾಗಿ ಇದನ್ನು ದಕ್ಷಿಣ ಪ್ರಯಾಗ ಎಂದೇ ಕರೆಯಲಾಗುತ್ತದೆ. ಸಂಗಮದಲ್ಲಿ ವರ್ಷವಿಡೀ ಭಕ್ತರು ಪವಿತ್ರ ಸ್ನಾನ ಮಾಡುತ್ತಾರೆ. ಜಾತ್ರೆಯ ವೇಳೆ ಸಂಗಮದಲ್ಲಿ ಮಿಂದೇಳುವರ ಸಂಖ್ಯೆಯೂ ಅಧಿಕವಾಗಿರುತ್ತದೆ.

Post Comments (+)