ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿದ ಅಣೆಕಟ್ಟೆ: ಬೆಳೆ ನೀರುಪಾಲು

Last Updated 14 ಅಕ್ಟೋಬರ್ 2017, 8:26 IST
ಅಕ್ಷರ ಗಾತ್ರ

ಕೊಪ್ಪಳ: ಅಣೆಕಟ್ಟೆ ತುಂಬದಿದ್ದರೆ ಬರಗಾಲದ ಸಮಸ್ಯೆ. ಈ ಬಾರಿ ಅನಿರೀಕ್ಷಿತವಾಗಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಪ್ರಮಾಣ ಏರಿಕೆಯಾಗಿದೆ. ಪರಿಣಾಮ ಹಿನ್ನೀರು ಪ್ರದೇಶದ ಖಾಲಿ ಜಾಗದಲ್ಲಿ ರೈತರು ಬೆಳೆದ ಸಜ್ಜೆ, ಮೆಕ್ಕೆಜೋಳ, ಈರುಳ್ಳಿ ಬೆಳೆ ನೀರುಪಾಲಾಗಿದೆ.

ತಾಲ್ಲೂಕಿನ ಮತ್ತೂರು, ಕಾತರಕಿ, ಗುಡ್ಲಾನೂರು, ಹನಕುಂಟಿ ಪ್ರದೇಶಗಳ ನೂರಾರು ಎಕರೆಯಲ್ಲಿ ರೈತರು ಹಲವು ವಿಧದ ಬೆಳೆ ಬೆಳೆದಿದ್ದರು. ಆರಂಭಿಕ ಸಾಧಾರಣ ಮಳೆಗೆ ಸಸಿಗಳು ಚೆನ್ನಾಗಿಯೇ ಚಿಗುರಿದ್ದವು. ಮುಂಗಾರು ಹಂಗಾಮಿನಲ್ಲಿ ಮಳೆಯ ಲಕ್ಷಣ ಕಾಣಲಿಲ್ಲ. ಸಹಜವಾಗಿ ರೈತರು ಅಣೆಕಟ್ಟೆ ಹಿನ್ನೀರು ಪ್ರದೇಶದ ಖಾಲಿ ಜಾಗದಲ್ಲಿ ತಮ್ಮ ಬೆಳೆ ಪ್ರದೇಶ ವಿಸ್ತರಿಸಿದರು.

ಸೆಪ್ಟೆಂಬರ್‌ ಮಧ್ಯಭಾಗದಿಂದ ಸುರಿದ ಮಳೆಯ ಪರಿಣಾಮ ಅಣೆಕಟ್ಟೆಗೆ ನಿರೀಕ್ಷೆಗೂ ಮೀರಿ ಒಳಹರಿವು ಹೆಚ್ಚಾಯಿತು. ನೀರಿನ ಮಟ್ಟ ಮೇಲೇರುತ್ತಾ ಬಂದು ಕೃಷಿ ಮಾಡಿದ ಪ್ರದೇಶಗಳಿಗೂ ವಿಸ್ತರಿಸಿತು. ಸಾವಿರಾರು ರೂಪಾಯಿ ಹೂಡಿದ್ದ ರೈತರು ಅಸಹಾಯಕರಾಗಿ ಕೈಚೆಲ್ಲಿದ್ದಾರೆ ಎಂದು ಮತ್ತೂರು ಗ್ರಾಮದ ರೈತ ಗಂಗಾಧರಪ್ಪ ಹೇಳಿದರು.

‘ಸಾಮಾನ್ಯವಾಗಿ ನೀರು ಕೆಳಗೆ ಹೋದ ನಂತರ (ಡಿಸೆಂಬರ್‌ ಅಂತ್ಯಕ್ಕೆ) ಇಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಳ್ಳುತ್ತವೆ. ಈ ಬಾರಿ ಮಳೆ ಸುರಿಯುವ ಲಕ್ಷಣ ಗೋಚರಿಸದ ಕಾರಣ ರೈತರು ನೀರು ತುಂಬುವ ಅವಧಿ (ಜೂನ್‌ - ಜುಲೈ ವೇಳೆಗೆ)ಯಲ್ಲಿ ಇಲ್ಲಿ ಕೃಷಿ ಚಟುವಟಿಕೆ ಆರಂಭಿಸಿದರು. ಆದರೆ ರೈತರ ಲೆಕ್ಕಾಚಾರ ತಲೆಕೆಳಗಾಯಿತು. ಸಹಜವಾಗಿ ನಷ್ಟ ಅನುಭವಿಸಿದ್ದಾರೆ’ ಎಂದು ಬೆಟಗೇರಿ ಗ್ರಾಮದ ರೈತ ಏಳು ಕೋಟೇಶ ಕೋಮಲಾಪುರ ಮಾಹಿತಿ ನೀಡಿದರು.

‘ನಮಗೆ ನಷ್ಟವಾಗಿದೆ ನಿಜ. ಆದರೆ, ಅಣೆಕಟ್ಟೆ ತುಂಬಿದ್ದು ನಮಗೂ ಸಂತಸ ತಂದಿದೆ. ಈ ಭಾಗದ ಅಂತರ್ಜಲ ವೃದ್ಧಿಯಾಗಿದೆ. ನೀರಾವರಿ ಪ್ರದೇಶದ ಬೆಳೆಗಳನ್ನು ಈ ವರ್ಷ ನಿರಾತಂಕವಾಗಿ ಬೆಳೆಯಬಹುದು. ನೀರು ಕೆಳಗೆ ಹೋದ ನಂತರ ನಮ್ಮ ಕೃಷಿ ಚಟುವಟಿಕೆ ಮುಂದುವರಿಯಲಿದೆ’ ಎಂದರು ಕಾತರಕಿ ಸಮೀಪದ ರೈತ ಹನುಮಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT