ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡವಾಗಿ ತೆರೆದ ವಸ್ತುಪ್ರದರ್ಶನ

Last Updated 14 ಅಕ್ಟೋಬರ್ 2017, 8:47 IST
ಅಕ್ಷರ ಗಾತ್ರ

ಮೈಸೂರು: ದೊಡ್ಡಕೆರೆ ಮೈದಾನಕ್ಕೆ ಮಳೆನೀರು ನುಗ್ಗಿದ್ದರಿಂದ ಉಂಟಾಗಿರುವ ನಷ್ಟವನ್ನು ಭರಿಸಿಕೊಡುವಂತೆ ಗುತ್ತಿಗೆದಾರ ಹಾಗೂ ಮಳಿಗೆ ಮಾಲೀಕರು ಪಟ್ಟುಹಿಡಿದ ಪರಿಣಾಮ ದಸರಾ ವಸ್ತುಪ್ರದರ್ಶನ ಶುಕ್ರವಾರ ಒಂದೂವರೆಗಂಟೆ ತಡವಾಗಿ ಆರಂಭವಾಯಿತು. ನಿತ್ಯ ಮಧ್ಯಾಹ್ನ 3ಕ್ಕೆ ಆರಂಭವಾಗುತ್ತಿದ್ದ ವಸ್ತುಪ್ರದರ್ಶನ ಶುಕ್ರವಾರ ಸಂಜೆ 4.30ಕ್ಕೆ ತೆರೆಯಿತು. ವೀಕ್ಷಣೆಗೆ ಧಾವಿಸಿದ್ದ ಸಾರ್ವಜನಿಕರು ಸಮಸ್ಯೆಗೆ ಸಿಲುಕಿದರು.

ಅಮ್ಯೂಜ್‌ಮೆಂಟ್‌ ಪಾರ್ಕಿನ 32 ಮೋಟಾರು, 8 ಜನರೇಟರ್ ಹಾಳಾಗಿವೆ. ಅಲ್ಲದೇ, ಅನೇಕ ಮಳಿಗೆಗಳ ವಸ್ತುಗಳು ನೀರುಪಾಲಾಗಿದ್ದವು. ಇದರಿಂದ ಆಕ್ರೋಶಗೊಂಡ ಮಾಲೀಕರು ವಸ್ತುಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಣಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

‘90 ದಿನ ನಡೆಯುವ ವಸ್ತುಪ್ರದರ್ಶನ ಆರಂಭವಾಗಿ 23 ದಿನ ಕಳೆದಿವೆ. ದಿನಬಿಟ್ಟು ದಿನ ಸುರಿಯುತ್ತಿರುವ ಮಳೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಜನರು ಬರುತ್ತಿಲ್ಲ. ಅಲ್ಲದೆ, ಮಳೆನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. 2016ರಲ್ಲಿಯೂ ₹ 75 ಲಕ್ಷ ನಷ್ಟ ಅನುಭವಿಸಿದ್ದೇನೆ’ ಎಂದು ಗುತ್ತಿಗೆದಾರ ವಿನೋದಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

‘ಗುರುವಾರ ರಾತ್ರಿ ಪ್ರಾಧಿಕಾರದ ಅಧಿಕಾರಿಗಳು ನೆರವಿಗೆ ಧಾವಿಸಲಿಲ್ಲ. ಎಂಜಿನಿಯರುಗಳು ದೂರವಾಣಿ ಕರೆಯನ್ನು ಸ್ವೀಕರಿಸಲಿಲ್ಲ. ಮೈದಾನಕ್ಕೆ ಬಂದಿದ್ದ ಸಾರ್ವಜನಿಕರು ನೀರಿನ ಸೆಳೆತಕ್ಕೆ ಸಿಲುಕಿದ್ದರು. ಏನಾದರೂ ಅನಾಹುತ ಸಂಭವಿಸಿದ್ದರೆ ಯಾರೂ ಹೊಣೆ’ ಎಂದು ಪ್ರಶ್ನಿಸಿದರು.

ಒಡೆದ ತಡೆಗೋಡೆ:
ಇಟ್ಟಿಗೆಗೂಡು ಹಾಗೂ ದೊಡ್ಡಕೆರೆ ಮೈದಾನದ ನಡುವೆ ಇರುವ ಸುಮಾರು 30 ಅಡಿ ಅಗಲದ ರಾಜಕಾಲುವೆಗೆ ನಿರ್ಮಿಸುತ್ತಿದ್ದ ತಡೆಗೋಡೆ ಸೆ.26ರಂದು ಕೊಚ್ಚಿ ಹೋಗಿದೆ. ಮೈದಾನಕ್ಕೆ ನೀರು ನುಗ್ಗದಂತೆ ತಡೆಯುವ ಉದ್ದೇಶದಿಂದ ಮರಳಿನ ಚೀಲದಿಂದ ನಿರ್ಮಿಸಿದ್ದ ತಾತ್ಕಾಲಿಕ ತಡೆಗೋಡೆ ಕೂಡ ಗುರುವಾರ ರಾತ್ರಿ 8ಕ್ಕೆ ಒಡೆದಿದೆ.

ರಭಸವಾಗಿ ಹರಿದ ನೀರು ಏಕಾಏಕಿ ಅಮ್ಯೂಜ್‌ಮೆಂಟ್‌ ಪಾರ್ಕಿಗೆ ನುಗ್ಗಿದೆ. ಇಲ್ಲಿದ್ದ ಅನೇಕ ಆಟದ ಸಾಮಗ್ರಿಗಳು ನೀರಿನಲ್ಲಿ ಮುಳುಗಿವೆ. ಕೆಲ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇದರಿಂದ ಎಚ್ಚೆತ್ತ ಪ್ರಾಧಿಕಾರ ವಸ್ತುಪ್ರದರ್ಶನ ಮೈದಾನ ಹಾಗೂ ಎಂ.ಜಿ.ರಸ್ತೆಯ ನಡುವೆ ಕಾಲುವೆ ನಿರ್ಮಿಸುತ್ತಿದೆ.

ರಸ್ತೆ ತಡೆದು ಆಕ್ರೋಶ
ಮೈಸೂರು: ಎಲೆತೋಟದ ಬಳಿ ಒತ್ತುವರಿಯಾಗಿರುವ ರಾಜಕಾಲುವೆ ತೆರವುಗೊಳಿಸುವಂತೆ ಆಗ್ರಹಿಸಿ ಕನಕಗಿರಿ ನಿವಾಸಿಗಳು ಊಟಿ ರಸ್ತೆಯ ಜೆಎಸ್‌ಎಸ್‌ ಕಾಲೇಜು ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಜೆಎಲ್‌ಬಿ ರಸ್ತೆ ಹಾಗೂ ಊಟಿ ರಸ್ತೆ ಸೇರುವ ವೃತ್ತದಲ್ಲಿ ಜಮಾಯಿಸಿದ ಮಹಿಳೆಯರು ಮಾನವ ಸರಪಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕೆಲ ಪ್ರಭಾವಿ ವ್ಯಕ್ತಿಗಳು ಹಾಗೂ ಉದ್ಯಮಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿದ್ದಾರೆ. ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಮನೆಗಳಿಗೆ ನುಗ್ಗುತ್ತಿದೆ. ಈ ಕುರಿತು ಪಾಲಿಕೆಯ ಗಮನ ಸೆಳದರೂ ಪ್ರಯೋಜನವಾಗಿಲ್ಲ. ಒತ್ತುವರಿ ತೆರವುಗೊಳಿಸಲು ಸಾರ್ವಜನಿಕರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಜೆಸಿಬಿ ಯಂತ್ರವನ್ನು ಬಾಡಿಗೆ ಪಡೆದು ಒತ್ತುವರಿಗೆ ತೆರವಿಗೂ ಸಾರ್ವಜನಿಕರು ಯತ್ನಿಸಿದರು. ಆದರೆ, ಇದಕ್ಕೆ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ.

* * 

ಚರಂಡಿಗೆ ತಡೆಗೋಡೆ ನಿರ್ಮಾಣಕ್ಕೆ ಮಹಾನಗರ ಪಾಲಿಕೆಯನ್ನು ಹಲವು ಬಾರಿ ಕೋರಿದ್ದೇವೆ. ಗೋಡೆ ನಿರ್ಮಾಣವಾದರೆ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ
ಎನ್‌.ಎಂ.ಶಶಿಕುಮಾರ್‌
ಸಿಇಒ, ವಸ್ತುಪ್ರದರ್ಶನ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT