ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸರು ಗದ್ದೆಯಂತಾದ ರಸ್ತೆ: ರಾಗಿ ಪೈರು ನಾಟಿ ಮಾಡಿ ಪ್ರತಿಭಟನೆ

Last Updated 14 ಅಕ್ಟೋಬರ್ 2017, 9:14 IST
ಅಕ್ಷರ ಗಾತ್ರ

ಹುಳಿಯಾರು: ಹೋಬಳಿಯ ಯಳನಡು–ಭಟ್ಟರಹಳ್ಳಿ ಸಂಪರ್ಕ ರಸ್ತೆಗೆ ಸಾರ್ವಜನಿಕರು ಶುಕ್ರವಾರ ರಾಗಿ ಪೈರು ನಾಟಿ ಮಾಡುವ ಮೂಲಕ ರಸ್ತೆ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಯಳನಡು ಗ್ರಾಮದಿಂದ ಭಟ್ಟರಹಳ್ಳಿ ಗ್ರಾಮಕ್ಕೆ ಸುಮಾರು ಒಂದೂವರೇ ಕಿ.ಮೀ ರಸ್ತೆ ಇತ್ತೀಚೆಗೆ ಬಂದ ಮಳೆಗೆ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ.

ರಸ್ತೆಯಲ್ಲಿ ವಾಹನ ಹೋಗವುದು ಇರಲಿ ನಡೆದು ಹೋಗುವುದೇ ದುಸ್ತರವಾಗಿದೆ. ರಸ್ತೆಯ ತುಂಬಾ ಗುಂಡಿಗಳು ಬಿದ್ದು ನೀರು ಶೇಖರಣೆಯಾಗಿ ಕೆಸರಿನ ರಾಡಿಯಂತಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಬಿದ್ದು ಕೈ, ಕಾಲು ಮುರಿದುಕೊಳ್ಳುವುದು ಗ್ಯಾರಂಟಿ ಎಂದು ಪ್ರತಿಭಟನಾನಿರತರು ದೂರಿದರು.

ಕಳೆದ ವಾರದಿಂದ ಭಟ್ಟರಹಳ್ಳಿ ಗ್ರಾಮದ ಗುರುಸಿದ್ದರಾಮೇಶ್ವರ ಸ್ವಾಮಿಯ ದಸರಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ದೂರದ ಊರುಗಳಿಂದ ಬಂದಿದ್ದ ಸಿದ್ದರಾಮೇಶ್ವ ಸ್ವಾಮಿಯ ಭಕ್ತರು ರಸ್ತೆಯ ಅವ್ಯವಸ್ಥೆ ಕಂಡು ಹಿಡಿಶಾಪ ಹಾಕಿದರು. ರಸ್ತೆಯ ಸ್ಥಿತಿ ಶುಕ್ರವಾರ ಗ್ರಾಮಸ್ಥರೊಂದಿಗೆ ಗುಬ್ಬಿ ತಾಲ್ಲೂಕು ಸೂಲಯ್ಯನಪಾಲ್ಯ, ಹೊಸದುರ್ಗ ತಾಲ್ಲೂಕು ಕಂಚೀಪುರ ಸೇರಿದಂತೆ ಇತರ ಗ್ರಾಮಗಳ ಗ್ರಾಮಸ್ಥರು ರಸ್ತೆಗೆ ರಾಗಿ ಪೈರು ನಾಟಿ ಮಾಡಿ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥ ಭಟ್ಟರಹಳ್ಳಿ ಮಲ್ಲಿಕಾರ್ಜುನಯ್ಯ ಮಾತನಾಡಿ, ‘ಕಳೆದ 20 ವರ್ಷಗಳಿಂದ ಮಣ್ಣಿನ ರಸ್ತೆ ಸುಸ್ಥಿತಿಯಲ್ಲಿತ್ತು. ಇಲ್ಲಿನ ಕೆಲ ರಾಜಕಾರಣಿಗಳು ಕಳೆದ ಮಾರ್ಚ್‌ನಲ್ಲಿ ಹಣ ಗಳಿಕೆಯ ಉದ್ದೇಶದಿಂದ ರಸ್ತೆ ಅಭಿವೃದ್ಧಿಗೆ ಮುಂದಾದರು. ಸುಮಾರು ₹ 5ಲಕ್ಷ ಹಣದಲ್ಲಿ ರಸ್ತೆಯನ್ನು ಗುಣಮಟ್ಟವಾಗಿ ಮಾಡದೆ ಇಂತಹ ದುಸ್ಥಿತಿಗೆ ತಂದಿದ್ದಾರೆ’ ಎಂದು ತಿಳಿಸಿದರು.

‘ಪರ ಊರುಗಳಿಂದ ಬಂದಿದ್ದ ಭಕ್ತರು ರಸ್ತೆಯಲ್ಲಿ ಎದ್ದು ಬಿದ್ದು ಬಂದು ದೇವರ ದರ್ಶನ ಮಾಡಿಕೊಂಡು ಹೋಗುವಂತಾಗಿದೆ. ಭಟ್ಟರಹಳ್ಳಿ ಸಿದ್ದರಾಮೇಶ್ವರ ಸ್ವಾಮಿಯ ದಸರಾ ಜಾತ್ರೆಗೆ ಬರಲು ಸರ್ಕಸ್ ಮಾಡಬೇಕಾಯಿತು’ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಕುಮಾರಯ್ಯ, ಪುನೀತ್, ಗುರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT