ಸಾವಿರ ಚಿತ್ರದ ಸರದಾರ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಹಿರಿಯ ನಟ ಹೊನ್ನವಳ್ಳಿ ಕೃಷ್ಣರ ಮನದಾಳದ ಮಾತು

ಸಾವಿರ ಚಿತ್ರದ ಸರದಾರ

Published:
Updated:
ಸಾವಿರ ಚಿತ್ರದ ಸರದಾರ

ಬೆಂಗಳೂರು: ‘ನನಗೆ ಗಾರೆ ಕೆಲಸ, ಎಲೆಕ್ಟ್ರಿಕ್‌ ಕೆಲಸ ಗೊತ್ತಿಲ್ಲ. ಬಣ್ಣ ಹಚ್ಚಿಯೇ ಬದುಕಬೇಕು. ಸಿನಿಮಾ ನನ್ನ ಉಸಿರು. ಇಂದಿಗೂ ನಿರ್ದೇಶಕರು, ನಿರ್ಮಾಪಕರ ಬಳಿ ಚಾನ್ಸ್‌ ಕೇಳುತ್ತೇನೆ. ಈಗಲೂ ನಿನಗೆ ಚಾನ್ಸ್‌ ಕೊಡಬೇಕೇ? ಎನ್ನುತ್ತಾರೆ. ನಾನು ಸಿನಿಮಾ ವಿದ್ಯಾರ್ಥಿ. ನಟನೆ ಮೂಲಕ ಕಲಿಕೆ ಮುಂದುವರಿಸಿದ್ದೇನೆ’ ಎಂದು ಮಾತಿಗಿಳಿದರು ಹಿರಿಯ ನಟ ಹೊನ್ನವಳ್ಳಿ ಕೃಷ್ಣ.

ಕೃಷ್ಣ ಅವರು ಕನ್ನಡ ಚಿತ್ರರಂಗ ಪ್ರವೇಶಿಸಿದ್ದು, 70ರ ದಶಕದಲ್ಲಿ. ‘ನ್ಯಾಯವೇ ದೇವರು’ ಅವರು ನಟಿಸಿದ ಮೊದಲ ಚಿತ್ರ. ಈ ಚಿತ್ರದಿಂದ ಆರಂಭಗೊಂಡ ಅವರ ಸಿನಿಯಾನ ಈಗ ‘ಬೂತಯ್ಯನ ಮೊಮ್ಮಗ ಅಯ್ಯು’ ಚಿತ್ರದವರೆಗೂ ಬಂದು ನಿಂತಿದೆ. ಈ ಚಿತ್ರದಲ್ಲಿ ಅಭಿನಯಿಸುವ ಮೂಲಕ ಒಂದು ಸಾವಿರ ಕನ್ನಡ ಚಿತ್ರಗಳಲ್ಲಿ ನಟಿಸಿದ ಅಪರೂಪದ ಸಾಧನೆಗೆ ಅವರು ಪಾತ್ರರಾಗಿದ್ದಾರೆ.

ವರನಟ ರಾಜ್‌ಕುಮಾರ್, ಅಂಬರೀಷ್‌, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಜಗ್ಗೇಶ್‌ ಸೇರಿದಂತೆ ಹೊಸಪೀಳಿಗೆಯ ಕಲಾವಿದರ ಸಿನಿಮಾಗಳಲ್ಲಿಯೂ ನಟಿಸಿರುವುದು ಅವರ ಹೆಗ್ಗಳಿಕೆ.

ಸಹ ನಿರ್ದೇಶಕನಾಗಿ 40 ಸಿನಿಮಾಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವೂ ಅವರ ಬೆನ್ನಿಗಿದೆ. ಆದರೆ, ಅವರೊಬ್ಬ ನಿರ್ದೇಶಕರಾಗಿ ಗುರುತಿಸಿಕೊಳ್ಳಲು ಅದೃಷ್ಟ ಕೂಡಿಬರಲಿಲ್ಲ ಎಂಬುದು ಅವರ ಕೊರಗು.

‘ಅದೃಷ್ಟ ಅನ್ನುವುದು ನಮ್ಮಿಷ್ಟದ್ದಲ್ಲ. ನಾನು ಗಂಧವನ್ನು ತೇಯುತ್ತಲೇ ಇದ್ದೆ. ಎಲ್ಲರೂ ಬಂದು ಹಣೆಗೆ ಹಚ್ಚಿಕೊಂಡು ಹೋಗುತ್ತಿದ್ದರು. ಕೊನೆಗೆ ಗಂಧದ ಚೂರು ಉಳಿಯಿತು. ಅಲ್ಲಿಗೆ ಸಹ ನಿರ್ದೇಶಕನ ಪಾತ್ರ ಕಳಚಿ ಹೊರಬರಲು ನಿರ್ಧರಿಸಿದೆ’ ಎಂದು ನಕ್ಕರು ಕೃಷ್ಣ.

‘ನನಗೆ ಒಂದು ಸಾವಿರ ಸಿನಿಮಾಗಳಲ್ಲಿ ನಟಿಸಿದ್ದೇನೆಂಬ ಅಹಂ ಇಲ್ಲ. ಕಲಾವಿದರಿಗೆ ಅಹಂ ಒಳ್ಳೆಯದಲ್ಲ. ವೃತ್ತಿಯಲ್ಲಿ ನಯ, ವಿನಯ ಇರಬೇಕು. ಆಗ ಮಾತ್ರವೇ ಉನ್ನತಮಟ್ಟಕ್ಕೇರಲು ಸಾಧ್ಯ. ‘ನಾನು’ ಎನ್ನುವುದು ಒಳ್ಳೆಯದಲ್ಲ. ‘ನಾವು’ ಎಂದು ಸಾಗಿದರೆ ಯಶಸ್ಸು ಕಟ್ಟಿಟ್ಟಬುತ್ತಿ’ ಎಂದ ಅವರ ಮಾತುಗಳಲ್ಲಿ ಕಿರಿಯ ಕಲಾವಿದರಿಗೆ ಸಲಹೆ ಇತ್ತು.

68 ವರ್ಷದ ಕೃಷ್ಣ ಅವರ ಮಾತು ರಾಜಕೀಯದತ್ತ ಹೊರಳಿತು. ಗೆಲುವಿಗಾಗಿ ಬಣ್ಣದ ವೇಷ ತೊಡುವ ರಾಜಕಾರಣಿಗಳ ಬಗ್ಗೆ ಅವರ ಮಾತುಗಳಲ್ಲಿ ವಿಷಾದ ಇಣುಕಿತು. ರಾಜಕೀಯ ಧುರೀಣರ ವರ್ತನೆಯು ಸಮಾಜದ ಏಳಿಗೆಗೆ ಕಂಟಕ ತರಲಿದೆ ಎಂಬ ಆತಂಕ ವ್ಯಕ್ತವಾಯಿತು.

‘ನಲವತ್ತೈದು ವರ್ಷದಿಂದಲೂ ಬಣ್ಣದ ಬದುಕಿನಲ್ಲಿದ್ದೇನೆ. ಸೂಕ್ಷ್ಮವಾಗಿ ರಾಜಕೀಯವನ್ನು ಗಮನಿಸುತ್ತಿದ್ದೇನೆ. ಪ್ರಸ್ತುತ ರಾಜಕಾರಣಿಗಳು ಸಮಾಜದಲ್ಲಿ ಧರ್ಮ, ಜಾತಿಯ ಹೆಸರಿನಲ್ಲಿ ಕಂದಕ ಸೃಷ್ಟಿಸುತ್ತಿದ್ದಾರೆ. ನಾವೆಲ್ಲರೂ ಇದರಿಂದ ಹೊರಬಂದು ಸಮಸಮಾಜ ನಿರ್ಮಿಸಬೇಕಿದೆ’ ಎಂದರು ಕೃಷ್ಣ.

‘ನನ್ನ ಮತ್ತು ಪುನೀತ್‌ರಾಜ್‌ಕುಮಾರ್‌ ಒಡನಾಟ ಅವಿಸ್ಮರಣೀಯ. ಅಂದು ನನ್ನ ಮೇಲೆ ಪುನೀತ್‌ ತೋರುತ್ತಿದ್ದ ಪ್ರೀತಿ ಇಂದಿಗೂ ಕಡಿಮೆಯಾಗಿಲ್ಲ. ಅಣ್ಣಾವ್ರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಾನು ಸಾಗುತ್ತಿದ್ದೇನೆ’ ಎಂದರು.

‘ಆಟೊ ನಿಲ್ದಾಣ, ಬಸ್‌ನಿಲ್ದಾಣಕ್ಕೆ ಹೋದಾಗ ಜನರು ಗುರುತಿಸುತ್ತಾರೆ. ಚಿತ್ರರಂಗವು ಸಮಾಜದಲ್ಲಿ ನನಗೊಂದು ಸ್ಥಾನಮಾನ ಕಲ್ಪಿಸಿಕೊಟ್ಟಿದೆ. ಹಣ ಕೊಟ್ಟು ಸಿನಿಮಾ ನೋಡುವ ಪ್ರೇಕ್ಷಕನಿಗೆ ಎಲ್ಲಿಯವರೆಗೆ ಗೌರವ ಕೊಡುತ್ತೇವೆಯೋ ಅಲ್ಲಿಯವರೆಗೆ ಕಲಾವಿದರಿಗೆ ಸಮಾಜದಲ್ಲಿ ಗೌರವ ಲಭಿಸಲಿದೆ’ ಎಂದು ಮಾತು ಮುಗಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry