ಭಾನುವಾರ, ಸೆಪ್ಟೆಂಬರ್ 22, 2019
22 °C

ಪದ ಪದ ಸೇರಿ ಪದಹತಿಯ ನೋವಾಗಿ...

Published:
Updated:
ಪದ ಪದ ಸೇರಿ ಪದಹತಿಯ ನೋವಾಗಿ...

ಎರಡು ಮನಸುಗಳು ರಾಜ್ಯವಾಳುತ್ತಲಿವೆ. ಅದೆಂತು ಅವು ತಮ್ಮೆರಡೂ ಮುಖಗಳನ್ನು– ಹೊರಗೆ ತೋರುವುದೊಂದು, ಒಳಗೊಂದು– ಒಂದೇ ಮುಖದ ಹಿಂದೆ ಅವಿಸಿಕೊಂಡಿವೆ? ಸರಳ ಸತ್ಯಗಳು ಬಹಳ ಸಲ ಹಾದಿ ತಪ್ಪಿಸುತ್ತವೆ. ಇದು ನಾನು ಬಲ್ಲ ಸತ್ಯ. ಸೌಂದರ್ಯಾನುಭೂತಿಯ ಜೊತೆ ಲಂಪಟತನವೂ ಹೇಗೆ ಹರಿಯುತ್ತದೆ; ನೆತ್ತರ ನಾಳಗಳಲ್ಲಿ ಕೆಂಪು ನೀಲಿಗಳಿದ್ದ ಹಾಗೆ. ಅದಕ್ಕೇ ನಾನು ಪದೇ ಪದೇ ಕವಿತೆ ಬರೆಯಲು ತೊಡಗುತ್ತೇನೆ, ಇಂಥ ಸಂಶಯಗಳು ಮನಸ್ಸನ್ನು ಹೊಕ್ಕ ಕೂಡಲೇ ಮಿದುಳು ಬೇಡತೊಡಗುತ್ತದೆ, ಹೃದಯ ಅಳಲು ತೋಡಿಕೊಳ್ಳುತ್ತದೆ.

ಕಾವ್ಯವೆನ್ನುವುದು ಆತ್ಮಚರಿತ್ರೆಯಲ್ಲ ಎಂಬ ಮಾತು, ತೂಕದ ಮಾತಿದೆ, ಪಾಲ್ ಸಿಲಾನ್‌ರದ್ದು, ಅದರಂತೆ ಕವಿಯ ಸ್ವಂತ ಸ್ಥಳ ಅವನ ಕವಿತೆ. ಇನ್ನು ಮುಂದಕ್ಕೆ ಅವನು ಸೌಂದರ್ಯಾನುಭೂತಿಯನ್ನು ಅಡಗಿಸುತ್ತಾನೆ ಅಂದರೆ ಹುದುಗಿಡುವುದು ಅಥವಾ ದಮನಿಸಿ - ಸಬ್‌ಡ್ಯೂ. ಆದರೆ ನೈತಿಕತೆ ಎನ್ನುವುದು ಅಡಗಿಸಿಡುವುದಲ್ಲ; ಬಿಚ್ಚಿ ತೋರಬೇಕಾದದ್ದು, ಆಗಲೇ ಅದಕ್ಕೆ ತಕ್ಕ ಸನ್ಮಾನ.

ಕಾವ್ಯವನ್ನೇ ಏಕೆ ಬರೆಯಬೇಕು? ಕಾರಣ ಅದು ಬದುಕಿನ ವಿರೋಧಾಭಾಸ, ಅದದರ ಪ್ರಾಸ. ನೇರವಾದರೆ ಶರೀರ ನಗ್ನ, ನಗ್ನತೆಯು ಕವಿತೆಗಿಂತ ಭಿನ್ನ. ಬೆತ್ತಲೆಂದರೆ ಏನು? ಬಣ್ಣಿಸುವುದು ಕಣ್ಣು ಕಾಣುವುದನ್ನ.

*

ಕವಿತೆ ಹುಟ್ಟಬೇಕು ಥಟ್ಟನೆ ಅಜ್ಞಾತದ ಕೋಣೆಯೊಳಗಿಂದ. ಚಿಕ್ಕಂದಿನಿಂದ ತಿಂದು ಬಂದದ್ದೆಲ್ಲ ಅಲ್ಲಿಲ್ಲಿ ಇಣುಕಿ ಸರಿಯುಂಟೇನೆಂದು ಹುಡುಕುವುದು ವ್ಯರ್ಥಾಲಾಪ, ಮೀರಿದ ಸೆಳವೊಂದು ಕೊಚ್ಚಿ ಕೊಲ್ಲುವ ಘಳಿಗೆಯಲ್ಲೊಂದು ಮೊಳೆತ ಬೀಜ ನಿರುಕಿಸುವುದು ತಲೆಯೆತ್ತಿ, ಹೇಳುತ್ತ.

ನಾನು ಕವಿತೆ ಬರೆಯುವುದೆನ್ನುವುದೆಂಥ ಸುಳ್ಳು. ಕವಿಯೊಬ್ಬ ಸಾಧನವೆಂಬುದನ್ನು ಕುಮಾರವ್ಯಾಸರಾದಿಯಾಗಿ ನುಡಿದವರು ಪ್ರಾಜ್ಞರನೇಕ. ಬಹಳ ಸಲ ಕಾಲ ಕಳೆದ ಮೇಲೆ ನಮಗೇ ತೋರುವುದು ನಾ ಬರೆದೆನೇನಿದನೆಂಬ ಸಂದೇಹ.

ಕವಿತೆ ನಿಂತಿಲ್ಲ. ಅದರದು ಚಿರಂತನ ಹಸಿವು, ಹರಿವು. ಆದರೀ ಕವಿ ಇರುವುದಾದರೂ ಎಲ್ಲಿ, ನದಿ ಹರಿವಿನಲ್ಲಿ ಕೊಚ್ಚಿ ಅಥವಾ ಬಹುಕಾಲವಿವನಗ್ನಿಪರ್ವತದಂತೆ ಸಿಡಿವವರೆಗೂ ಶಾಂತ. ಅವನು ಹೇಳುವುದೇನು? ಆದಿಯೆ? ನಡುವಣ ಹರಿವೆ? ಅಂತ್ಯವೆ?

ಕೊನೆಯ ನುಡಿಯನ್ನು ಈಗಾಗಲೇ ಬರೆಯಲಾಗಿದೆ ಎನ್ನುತ್ತಾರೆ. ಕವಿತೆಯೊಂದು ಮಂದಿರ, ಗುಡಿಯಲ್ಲವದು ಎನ್ನುವರು ಅವರು. ಎಷ್ಟು ನಂಬಿಕೆಗಳೋ ಅಷ್ಟು ಮೂರ್ತಿಗಳು ಎಂದಂತೆ ಮನಸಿಗೆ ಕುವೆಂಪು. ನಾನೂ ಗುಡಿಯ ಕಲ್ಪನೆಯಲ್ಲಿ ಅರಗಿ ಹೋಗಬೇಕಿತ್ತು, ಈ ಧ್ಯಾನದೊಳಗೆ. ಬದುಕಿಸಿದ್ದು ಎಣ್ಣೆ ತೀರದ ಬತ್ತಿ; ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ ಎಂಬ ಯಾವತ್ತೂ ಎದೆ ಕುಹರವ ಕೊರೆಯುತ್ತಿರಬೇಕಾದ ಕಳವಳದ ಅಭಿವ್ಯಕ್ತಿ.

ನೀರು ಕೆಳಗಿಳಿದು ಇಳಿದು ಕೊಳಗಳು ಬರಿದಾಗುತ್ತವೆ. ಆದರೆ ಕವಿತೆಯ ಒಳಾಯವು ಕೊಳದ ಸ್ವರೂಪಕ್ಕೆ ವಿರುದ್ಧವಾಗಿದೆ, ಕಟ್ಟುಪಾಡುಗಳ  ಕಳಚಿಕೊಳ್ಳುತ್ತ ಆಳಕ್ಕಿಳಿಯುವುದರಲ್ಲಿ. ಅದದರ ದ್ವಂದ್ವ, ಅದದರ ಧರ್ಮ. ಆದ್ದರಿಂದಲೇ ಅಡಿಗರು ಬರೆದದ್ದು ಒಂದೇ ಕವಿತೆ, ಎಲ್ಲ ಕವಿ ಬರೆಯುವುದೂ ಒಂದೇ, ಕೇವಲ ಒಂದೇ ಕವಿತೆಯಂತೆ. ಯಾರಂದಿರಲೀ ಮಾತನ್ನು, ಎಲ್ಲೋ ಒಳಸುಳಿಯೊಂದರಲ್ಲಿ ಏಕತ್ರವಾಗುವ ಭಾವವೆಂಥ ಸಾರ್ವತ್ರಿಕ ಸತ್ಯ!

ಪದಪದ ಸೇರಿ ಆಗುವುದೊಂದು ಕವಿತೆ; ಯಾವ ಪದಕ್ಯಾವುದೋ ಪದವಲ್ಲ. ಹಾಳೆಯಲಿ ಬಿಡಿ ಬಿಡಿ ಬರೆದ ಮಾತಿಗೆ ಸ್ವಂತ ಮತಿಯಿಲ್ಲ. ಆದರೆ ಅದಕ್ಕದೇ ಗೆಳೆಯ, ಶತ್ರು. ಗೆಳೆಯನೆಂದರೆ ಕಾಡುವುದು, ಶತ್ರುವೆಂದರೆ ಕಾದಾಡುವುದು. ಎರಡೂ ಒಂದೇ. ಅದಕ್ಕೇನು? ಪದಗಳು ಬರೆಯುವಾಗ ಮಾತ್ರವೇ ಒಂದೊಂದಾಗಿ ಮೂಡುವವು, ಹಾಳೆಯ ಮೇಲೆ ಅರ್ಥ ಘಟಕಗಳಾಗಿ, ಪದಹತಿಯ ಆರ್ತತೆಯ ಗಾನವಾಗಿ, ನೋವಾಗಿ

*

ಕಾಲವನ್ನು ಕೊಲ್ಲುತ್ತಲೇ, ಅದನ್ನು ವಿಸ್ತರಿಸುತ್ತಲೇ  ಬಂದಿದೆ ಕಾವ್ಯ. ಚಿತ್ರಗಳವು ನಿಶ್ಚಲ ನಿಲ್ಲುತ್ತಲೇ ಸಾಗುತ್ತಿರುತ್ತವೆ. ಉದ್ದಕ್ಕೂ ಭಾರ ಹೆಚ್ಚಿಸಿಕೊಳ್ಳುತ್ತ ಅಥವಾ ಸ್ವಯಂ ನಿರಸನಗೊಳ್ಳುತ್ತ, ಮತ್ತೆ ಮೈದುಂಬಿಕೊಳ್ಳುತ್ತ. ಕಳೆದದ್ದ ಮತ್ತೊಂದು ರೂಪಾಂತರದಲ್ಲಿ ಸಂಚಯಿಸಿಕೊಳ್ಳುತ್ತ. ಅದರಿಂದಲೇ ಕಾವ್ಯದ ಪದಪದದಲ್ಲೂ ಪರಹಿಂಸೆಯ ಗಾಯ. ಯಾರು ಸಲಹುವರಿದನು, ಆದಿಕೇಶವನೋ, ಪುರಂದರ ವಿಠಲನೋ, ಈ ರೂಪದ ನರ ನಾನೋ...!

ಕೊನೆಗೂ ನಾನು ತಲುಪಿದ್ದೇನೆ ದಡವನ್ನೆಂಬ ನಂಬಿಕೆಗಿಲ್ಲಿ ಅವಕಾಶವಿಲ್ಲ. ಅನುಭವವನ್ನಿಡೀ ಅಕ್ಷರ ಹಿಡಿದಿಡಬಹುದೆ? ಅದರಿಂದಲೇ ಅಷ್ಟು ಖಾಲಿಸೈಟುಗಳುಂಟು ಪ್ರತಿಯೊಬ್ಬರದ್ದೂ ಕವಿತೆಯೊಳಗೆ, ಕಟ್ಟಿಕೊಳ್ಳಲು ತಮ್ಮ ಗುಟ್ಟುಗಳನ್ನು. ಆದ್ದರಿಂದಲೇ ಅಲ್ಲಿನೆಲ್ಲರ ಆಕಾಶ ಜರಡಿಯಂತಿದೆ, ಸೋರುವುದನ್ನು ಕಾಯುವುದಿದು.

ಕಾವ್ಯಪ್ರಜ್ಞೆಯು ಆಕಾಶದಂಥದ್ದು. ಆದರೂ ಕವಿತೆ ನಿಜಕ್ಕೂ ಆಕಾಶದ ವಸ್ತುವಲ್ಲ. ಅದು ಆಳದ ಪಾತಾಳದ ನರಳುವಾತ್ಮಗಳ ಕೂಗು. ಕವಿಯದರ ಪಾತಕಿ. ಅಪನಂಬಿಕೆಯ ವಿಶ್ವದಲ್ಲಿ ಸದಾ ಬದುಕುವವನು, ನರಳುವವನು. ನರಳುವಿಕೆಯೆಂಬುದು ಅನೂಚಾನ ನಡೆದು ಬಂದಿದ್ದು. ಇಂದು ಎಂದೆಂದಿಗೂ ಬದಲಾಗುವುದರಿಂದ ಇಂದಿನ ಕವಿತೆಯೆಂಬುದು ಇಲ್ಲ ಎಂಬ ಶಂಕೆಯು ಅದರಿಂದಲೇ. ಹಾಗಾಗಿ ಕವಿಯಾತ್ಮವೂ ಅವನ ಮನಸಂತೆ ಕಗ್ಗತ್ತಲಿನ ವಿಶ್ವ.

ಅಲ್ಲಿ ಆಗೀಗ ಮಿನುಗುವವು ಒಂದೊಂದು ಚಿಕ್ಕೆ, ಅಥವಾ ಯಾರೋ ಮರುಕಪಟ್ಟು ಹಚ್ಚಿದ ಹಣತೆ. ಕವಿತೆ ನಡೆಯುತ್ತದೆ. ಆದರದು ನಾಳೆ ಇಡಲಿರುವ ದಿಕ್ಕು ಯಾವುದೆಂದು ಹೇಳುವುದು? ಈಗಿರುವುದರಿಂದ ಒಂದು ಹೆಜ್ಜೆ ಮುಂದಿಟ್ಟರೂ ಅದು ಕತ್ತಲ ಕೂಪ. ಕೆಲವರನ್ನುವರು ಅದು ಮುಂಜಾವಿನ ಮೊದಲಿನ ಕತ್ತಲು ಎಂದು; ನನಗೆ ನಂಬಿಕೆಯಿಲ್ಲ, ಹಾಗೆ ನಡೆದವರಿಲ್ಲ.

(ರೊಮೇನಿಯಾದ ಕವಿ ಪಾಲ್ ಸಿಲಾನ್‌ನ ಬರಹವನ್ನು ಸ್ಥೂಲವಾಗಿ ಅನುಸರಿಸಿದ್ದು. From ‘Microliths’ By Paul Celan Translated By Pierre Joris)

Post Comments (+)