ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿಗೆ ಸಿಕ್ಕ ಆನೆಗಳು...

Last Updated 14 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಶ್ರೀಧರ್ ಎಸ್. ಸಿದ್ದಾಪುರ

**

ವೈಶಾಖದ ಹೂ ಬಿಸಿಲು. ಮೋಡ ರವಿಯೊಡನೆ ಚಕ್ಕಂದಕ್ಕಿಳಿದಿತ್ತು. ಆರ್ದೆ ಮಳೆ ಆಗಷ್ಟೇ ತನ್ನ ಆಗಮನದ ಸೂಚನೆ ನೀಡಿ ಹೋಗಿತ್ತು. ವರ್ಷದ ಮೊದಲ ಮಳೆ ಬಿದ್ದೊಡನೆ ಎದ್ದ ಮಣ್ಣಿನ ಪರಿಮಳ ಗಾಳಿಯಲ್ಲಿ ಬೆರೆತು ಎಲ್ಲಾ ಕಡೆ ತನ್ನ ಸೊಗಸು ಹರಡಿತ್ತು. ಆಗಲೇ ನಮ್ಮಿಬ್ಬರ ಮೋಟಾರ್ ಬೈಕ್ ಕುದುರೆಮುಖದತ್ತ ತಿರುಗಿದ್ದು. ಅಲ್ಲಲ್ಲಿ ಮೊದಲ ಮಳೆಯ ಹೆಜ್ಜೆ ಗುರುತು ಹೂ ಪಕಳೆಗಳಂತೆ ಹರಡಿತ್ತು.

ಭದ್ರೆಯ ಪ್ರೀತಿ ನಮ್ಮ ಕಾದ ದೇಹಕ್ಕೆ ತಂಪನೆರೆಯುತ್ತಿತ್ತು. ಭದ್ರೆಯಲ್ಲಿ ಈಸು ಬಿದ್ದು, ಹೊಟ್ಟೆ ತುಂಬಾ ತಿಂದ ಮುದ್ದೆ ನಿದ್ರೆಗೆ ಆಹ್ವಾನ ನೀಡುತ್ತಿತ್ತು. ಭಗವತಿ ಪ್ರಕೃತಿ ಶಿಬಿರದ ಕತ್ತಲೆಯು ನಮ್ಮಿಬ್ಬರನ್ನು ಆಪೋಷನ ತೆಗೆದುಕೊಳ್ಳಲು ಹೆಚ್ಚು ಸಮಯ ಹಿಡಿಯಲೇ ಇಲ್ಲ. ಬೆಳಿಗ್ಗೆ ಎದ್ದಾಗ ಹಕ್ಕಿಗಳ ಚಿಲಿಪಿಲಿ ಕಿವಿಯನ್ನು ತುಂಬಿಕೊಂಡಿದ್ದವು.

ಬೆಳ್ಳಂಬೆಳಗ್ಗೆ ಶಿಖರದತ್ತ...

ಪಕೃತಿ ಶಿಬಿರದ ಮುಂಜಾವಿನ ಹನಿಗಳ ಮೇಲೆ ಹೆಜ್ಜೆ ಇಟ್ಟಾಗ ಬೆಳಗಿನ ಜಾವ ಐದು ಗಂಟೆ. ಕುದುರೆಮುಖದ ಎರಡನೇ ಅತಿ ಎತ್ತರದ ಶಿಖರ ಗಂಗಡಿ ಕಲ್ಲೆಂಬ ಮಾಯಾಂಗನೆಯನ್ನು ಒಲಿಸಿಕೊಳ್ಳಲು ಸ್ವಲ್ಪ ದೂರ ಪ್ರಯಾಣ. ಸನಿಹದ ಭೂತ ರುದ್ರಾಕ್ಷಿ ಮರದಡಿ ಬೈಕನ್ನಿಟ್ಟು ಹೊರಟೆವು.

ಹಾವು ಹರಿದ ದಾರಿಯಲ್ಲಿ ಗೈಡ್‍ನೊಂದಿಗೆ ಪಯಣ. ಶೋಲಾ ಕಾಡಿಗೆ ಮೂಕವಿಸ್ಮಿತರಾದೆವು, ಸಂಭ್ರಮಿಸುತ್ತಾ ಸಾಗಿದೆವು. ಇಬ್ಬನಿ ಬಿದ್ದ ಕಾರಣದಿಂದಾಗಿ ಹುಲ್ಲು ಹಾಸು ವಿಪರೀತ ಕೀಟಲೆ ಮಾಡುತ್ತಿತ್ತು. ಚಿಟ್ಟೆಗಳೊಂದಿಗೆ, ಜೇಡಗಳೊಂದಿಗೆ ಮಾತನಾಡುತ್ತಾ ಸಣ್ಣ ಸಣ್ಣ ಗುಡ್ಡಗಳನ್ನು ದಾಟಿ ವಿಪರೀತ ಕಡಿದಾದ ಬೆಟ್ಟದೆದುರಿಗಿದ್ದೆವು. ಶಿಖರಾಗ್ರಕ್ಕೆ ಕಾಲಿಡುತ್ತಿದ್ದಂತೆ ಸೂರ್ಯನೂ ಅಲ್ಲಿ ಹಾಜರಿ ಹಾಕಿದ್ದ.

ಶಿಖರದ ಕಲ್ಲು ಎಳೆ ಬಿಸಿಲಿಗೆ ಹೊಳೆಯುತ್ತಿತ್ತು. ಪಶ್ಚಿಮದಲ್ಲಿ ಮೋಡಗಳು ಗುನುಗುತ್ತಿದ್ದವು. ಪೊಲೀಸರ ಸಿಗ್ನಲ್ ಟವರ್ ನಕ್ಸಲ್ ಆರ್ಭಟಕ್ಕೆ ಹೆಬ್ಬಾವಿನಂತೆ ಮಕಾಡೆ ಮಲಗಿತ್ತು. ಅದರೊಳಗಿನ ಬ್ಯಾಟರಿಯನ್ನು ಅವರು ಅಪಹರಿಸಿದ್ದರು. ಶಿಖರದ ನೆತ್ತಿಯ ಸಣ್ಣ ಅಡಗು ತಾಣದಲ್ಲಿ ನಮ್ಮ ಬುತ್ತಿಯಲ್ಲಿದ್ದ ಕೋಡುಬಳೆ, ಚಕ್ಕುಲಿ, ಹಣ್ಣು, ಹೆಸರು ಕಾಳನ್ನು ಹೊಟ್ಟೆಗೆ ವರ್ಗಾಯಿಸಿದೆವು. ಜಗತ್ತನ್ನು ಮರೆಸುವ ಸೌಂದರ್ಯಕ್ಕೆ ನಾವು ಮನಸೋತಿದ್ದೆವು. ನಮ್ಮ ಕ್ಯಾಮೆರಾ ಒಂದರೆಗಳಿಗೆಯೂ ಪುರುಸೊತ್ತಿಲ್ಲದೆ ಅಲ್ಲಿನ ಚಿತ್ರಗಳನ್ನು ಕ್ಲಿಕ್ಕಿಸುತ್ತಿತ್ತು. ದೂರದಲ್ಲಿ ಕಾಣಿಸಿದ ಕಾಡೆಮ್ಮೆ ನಮಗೆ ಪುಳಕವನ್ನುಂಟು ಮಾಡಿತ್ತು. ಹರಿವ ಹಳ್ಳವೊಂದು ಅಮ್ಮ ಒಣಗಲು ಹಾಕಿದ ಸೀರೆಯಂತೆ ತೋರುತ್ತಿತ್ತು. ಲಖ್ಯಾ ಅಣೆಕಟ್ಟು ದೂರದಲ್ಲೆಲ್ಲೋ ಕಾಣುತ್ತಿತ್ತು. ಗಂಗಡಿಕಲ್ಲಿನ ನೆರೆಹೊರೆಯ ಗೆಳೆಯರನ್ನು ಮಾತನಾಡಿಸಲು ಗೆಳೆಯ ನಾಗರಾಜ್ ಶಿಖರವನ್ನಿಳಿದು ಹೊರಟ. ಮುಳ್ಳುಹಂದಿಗಳು ತಮ್ಮ ಇರುವನ್ನು ತೋರಿಸಲು ಅಲ್ಲಲ್ಲಿ ಮುಳ್ಳುದುರಿಸಿದ್ದವು. ಅವೆಲ್ಲಾ ನನ್ನ ಬತ್ತಳಿಕೆಯನ್ನು ಸೇರಿಕೊಂಡವು. ಗಂಗಡಿಕಲ್ಲಿನ ಪೂರ್ವದ ಮುಖ ತೀರಾ ಕಡಿದಾಗಿತ್ತು.

ಮೂಡಿ ಬರುತ್ತಿದ್ದ ಕೆಂಚಣ್ಣನಾದ ಸೂರ್ಯನಿಗೆ ಹಾಯ್ ಹೇಳಿ ಬೆಟ್ಟಕ್ಕೆ ಬಾಯ್ ಹೇಳಲು ತಯಾರಾದೆ. ‘ಎರಡು ದಿನಗಳ ಹಿಂದೆ ಹುಡುಗಿಯೊಬ್ಬಳು ಹುಡುಗಾಟಕ್ಕೆ ಬೆಟ್ಟದಲ್ಲಿ ಜಾರುಬಂಡಿಯಾಡಿ ಹಲ್ಲು ಮುರಿದುಕೊಂಡಿದ್ದಳು!’ ಎಂದ ನಮ್ಮ ಗೈಡ್. ನನಗಂತೂ ಜಾರುಬಂಡಿಯಾಡುವ ಇಷ್ಟವಿಲ್ಲವಾಗಿ ನಿಧಾನಕ್ಕೆ ಇಳಿಯತೊಡಗಿದೆ. ಏನೋ ಸಾಧಿಸಿದ ಹೆಮ್ಮೆಯಿಂದ ಪುಳಕಿತನಾಗಿದ್ದೆ ಅವತ್ತು. ಅಂತಹ ಪುಳಕ ಹಿಮಾಲಯದ ಸನ್ನಿಧಿಯಲ್ಲೂ ನನಗಾಗಿಲ್ಲ! ಫೋಟೊ ತೆಗೆಯುವ ಹುಚ್ಚೊಂದು ಅಂಟಿಕೊಳ್ಳದಿದ್ದರೆ ಆ ಪುಳಕವೊಂದು ನನ್ನಲ್ಲಿ ಮೂಡುತ್ತಿತ್ತೊ ಏನೋ?

ಕಡವೆ ಮೆಂದ ಸುಳಿವು, ಯಾವುದೋ ವಿಚಿತ್ರ ಸುವಾಸನೆಯ ಗಿಡಗಳು ಅಲ್ಲಲ್ಲಿ ಕಾಣಸಿಕ್ಕವು. ಬೆಟ್ಟವಿಳಿದು ಬೈಕ್ ಕಡೆಗೆ ಹೊರಟಾಗ, ಬಿಸಿಲತಾಪಕ್ಕೋ ರಾತ್ರಿಯ ‘ನಶೆ ಸೇವೆಯ’ ಪರಿಣಾವೋ ಎಂಬಂತೆ ಗೈಡ್ ತುಂಬಾ ಹಿಂದುಳಿದು ಬಿಟ್ಟ. ನಿಜವಾದ ಕತೆಯ ಥ್ರಿಲ್ ಪ್ರಾರಂಭವಾಗುವುದು ಇಲ್ಲಿಂದಲೇ.

ಆನೆಗಳೊಂದಿಗೆ ಮುಖಾಮುಖಿ

ನಾನು ನಾಗರಾಜ ರಸ್ತೆ ತಲುಪಿದ್ದೆವು. ಗೈಡ್ ನಮ್ಮ ಹಿಂದೆ ಬರುತ್ತಿದ್ದ. ಯಾವುದೋ ಮರದ ಬುಡದಲ್ಲಿಟ್ಟ ಬೈಕನ್ನು ತೆಗೆಯಲು ಹೋದ. ಆ ಜಾಗ ಸ್ವಲ್ಪ ಎತ್ತರದಲ್ಲಿತ್ತು. ಗೆಳೆಯ ನಾಗರಾಜ್ ನಮ್ಮ ಬೈಕನ್ನು ಜಾಲಿ ರೈಡ್‍ಗೆಂದು ಎತ್ತರದ ದಿಬ್ಬದ ಕಡೆಗೆ ಬಿಟ್ಟುಕೊಂಡು ಹೋದ. ನಡುವಿನ ಇಳಿಜಾರಿನಲ್ಲಿ ನಾನೊಬ್ಬನೇ ನಿಂತಿದ್ದೆ. ಕೆಳ ಭಾಗದಲ್ಲಿ ದಾರಿ ಇಳಿಜಾರಾಗಿತ್ತು. ನಾಗರಾಜ ಎತ್ತರದ ಕಡೆ ಹೊರಟು ಹೋದ. ಆಗಲೇ ತಗ್ಗಿನಿಂದ ಬಂದ ಟಾಟಾ ಸುಮೊ ಒಂದು ನನ್ನನ್ನು ಬಳಸಿ ಮುಂದೆ ಸಾಗಿ ನಿಂತಿತು. ಈ ನೀರವ ಪ್ರದೇಶದಲ್ಲಿ ನಿಂತ ವಾಹನ ನೋಡಿ ಎದೆ ಧಸಕ್ಕೆಂದಿತು.

ಯಾಕೆ ನಿಲ್ಲಿಸಿರಬಹುದು? ಪೊಲೀಸ್ ಅಥವಾ ಫಾರೆಸ್ಟ್ ಡಿಪಾರ್ಟ್‍ಮೆಂಟಿನ ಜನರೇ ಆ ವಾಹನದಲ್ಲಿ ಇರುವವರು ಎಂದೆಲ್ಲಾ ಮನಸ್ಸು ಯೋಚಿಸಹತ್ತಿತು. ವಾಹನದ ನಂಬರ್ ಪ್ಲೇಟ್ ನೋಡಿದೆ. ಹಾಗನಿಸಲಿಲ್ಲ. ಅಷ್ಟರಲ್ಲೇ ವಾಹನ ಹಿಮ್ಮಖ ಚಲನೆ ಪಡೆದುಕೊಂಡು ಎಡಬದಿಗೆ ನನ್ನೆದುರಿಗೆ ಬಂದು ನಿಂತಿತು. ಮತ್ತೂ ಗಾಬರಿಗೊಂಡೆ. ಅದರಿಂದ ವಿಚಿತ್ರ ಮುಖದ, ಗಂಟು ಮೋರೆಯ ಮಧ್ಯವಯಸ್ಕನೊಬ್ಬ ನನ್ನ ಕಡೆಗೆ ಬರಹತ್ತಿದ. ಹತ್ತಿರ ಬಂದವನೇ ‘ಇಲ್ಯಾಕೆ ನಿಂತಿದ್ದೀರಾ, ಸಾರ್?’ ಎಂದ. ‘ಕಾರ್ಕಳಕ್ಕೆ ಹೋಗುವವರೇ? ಬನ್ನಿ ಡ್ರಾಪ್ ಕೊಡುವೆ’ ಎಂದು ಒಂದೇ ಉಸುರಿಗೆ ಹೇಳಿದ.

ನಾನಿಲ್ಲಿ ನಿಂತಿರುವುದು ಅಪರಾಧವೇ? ಇವರಿಗೇನು ತೊಂದರೆ ಎಂದೆಲ್ಲಾ ಯೋಚಿಸತೊಡಗಿದೆ. ‘ಕುದುರೆಮುಖದ ಕಡೆ ಸ್ಮಗ್ಲರ್‌ಗಳ ದೊಡ್ಡ ದಂಡೇ ಇದೆ’ ಎಂದು ನನ್ನವಳು ಹೋಗುವಾಗಲೇ ಹೆದರಿಸಿ ಕಳುಹಿಸಿದ್ದಳು. ವಿಚಿತ್ರವಾಗಿದ್ದ ಆತ ಕಳಕಳಿಯಿಂದಲೇ ಮಾತನಾಡಿಸಿದ್ದ. ಏಕೆ? ಏನಾಯಿತು? ಎಂದು ಕೇಳಿ ನನ್ನ ಸಂಪೂರ್ಣ ವಿವರ ಹೇಳಿದೆ. ಆತನ ಮುಂದಿನ ಮಾತಿಗೆ ನನ್ನ ತಲೆ ಖಾಲಿಯಾಗಿ ಯೋಚನಾರಹಿತನಾದೆ. ‘ಇಷ್ಟು ಹೊತ್ತು ಎರಡು ಸಲಗಗಳು ನಮ್ಮನ್ನು ಅಡ್ಡಗಟ್ಟಿದ್ದವು. ಈ ಇಳಿಜಾರಿನ ಕೊನೆಯಲ್ಲಿವೆ, ಅವು ಮೇಲೆ ಬರುತ್ತಲಿವೆ. ಬೇಗ ಹೊರಡಿ’ ಎಂದು ಅವಸರಿಸಿದ.

ಥ್ರಿಲಿಂಗ್ ಕ್ಲೈಮ್ಯಾಕ್ಸ್

ಕಾಲುಗಳು ಭೂಕಂಪನದ ವೇಳೆ ಅದುರುವಂತೆ ಅದುರಿದವು. ತಲೆ ನಿಸ್ತೇಜಗೊಂಡು ಅವನಿಗೇನು ಹೇಳುವುದೆಂದು ತೋಚದಾಯಿತು. ಎತ್ತರದ ದಿಬ್ಬದ ಕಡೆ ಹೋದ ನಾಗರಾಜ್ ಪತ್ತೆಯಿರಲಿಲ್ಲ. ಇವರೊಂದಿಗೆ ಹೋದರೆ ಆತ ತಪ್ಪಿ ಹೋಗಬಹುದೆಂಬ ಭಯ. ಆದರೂ ಧೈರ್ಯ ಮಾಡಿ ವ್ಯಾನಿನವನಿಗೆ ನೀವು ಹೊರಡಿ ಎಂದೆ. ಆತ ಜೋಕೆ ಎಂದು ಹೇಳಿ ಅವಸರಿಸಿ ಹೊರಟ. ನಾನಿದ್ದ ಜಾಗದಿಂದ ಸ್ವಲ್ಪ ಕೆಳಗೆ ಅನಂತ ಜಿಗ್ಗುಗಳೆಡೆಯಿಂದ ಶಬ್ದ ಕೇಳಿಸತೊಡಗಿತು. ಆನೆಗಳಿಗೆ ಬಲಿಯಾಗುವುದು ಬೇಡವೆಂದು ಅಸಾಧ್ಯ ವೇಗದಿಂದ ಸಣ್ಣ ದಿಬ್ಬದ ಕಡೆಗೆ ಹೆಜ್ಜೆ ಹಾಕಿದೆ. ದಿಬ್ಬ ಹತ್ತಿ ನಿಂತೆ. ದೂರದವರೆಗಿನ ದೃಶ್ಯಾವಳಿಗಳೆಲ್ಲವೂ ಇಲ್ಲಿ ಸ್ಪಷ್ಟವಾಗಿ ಗೋಚರವಾಯಿತು.

ಸುರಂಗದಿಂದೆಂಬಂತೆ ಎರಡು ಸಲಗಗಳು ಫೀಳಿಡುತ್ತಾ ರಸ್ತೆ ಬದಿಯ ಚರಂಡಿಯಿಂದ ಹೊರ ಚಿಮ್ಮಿದವು. ರಸ್ತೆ ದಾಟಿ ನಾವು ಬಿಟ್ಟು ಬಂದ ಪರ್ವತದ ಬುಡದಿಂದ ನಡೆದು ಬಂದ ದಾರಿ ಅನುಸರಿಸಿ ವೇಗವಾಗಿ ಬರತೊಡಗಿದವು. ಅವೆರಡೂ ಸಮರಕ್ಕೆ ಹೊರಟ ಸೈನಿಕರಂತೆ ನಮ್ಮೆಡೆಗೆ ಬರುವುದನ್ನು ನೋಡಿ ಇಂದು ನನ್ನ ಕತೆ ಮುಗಿಯಿತೆಂದು ಎಣಿಸಿದೆ. ಕಾಲುಗಳೆರಡೂ ನಡುಗುತ್ತಿದ್ದವು. ಜೀವ ಬಾಯಿಗೆ ಬಂದಿತ್ತು. ಇಂದು ನಮ್ಮ ಕತೆ ಮುಗಿಯಿತೆಂದು ಮತ್ತೊಮ್ಮೆ ಎಣಿಸಿದೆ. ಬೈಕನ್ನು ತಿರುಗಿಸಿ ನಮ್ಮೆಡೆಗೆ ಹೊರಟಿದ್ದ ಗೈಡ್ ಅವುಗಳ ಕಣ್ಣಿಗೆ ಬಿದ್ದ. ಆನೆಗಳನ್ನು ನೋಡಿದ್ದೇ ಅವನ ನಶೆ ಜರ್‍ರನೆ ಇಳಿಯಿತು. ಅವು ಈಗ ಅವನ ಹಿಂದೆ ಬಿದ್ದವು. ಯಾರೋ ಹೇಳಿಕೊಟ್ಟಂತೆ ಆನೆಗಳು ಮತ್ತು ಗೈಡ್ ನಾನಿದ್ದ ಕಡೆ ಬರತೊಡಗಿದರು. ಗೊಂಬೆಗಳನ್ನು ಯಾರೋ ನಿರ್ದೇಶಿಸಿದಂತೆ ಅವು ಕೆಲಸ ಮಾಡುತ್ತಿದ್ದವು. ಅಷ್ಟೊಂದು ಅನುಭವವಿಲ್ಲದ ಆತ ನನ್ನ ಕಡೆ ಓಡತೊಡಗಿದ. ಆತನೂ ಕಂಗಾಲಾಗಿದ್ದ. ನನ್ನ ಪರಿಸ್ಥಿತಿ ಮತ್ತೂ ಬಿಗಡಾಯಿಸಿತ್ತು. ಆತನೇನಾದರೂ ತಪ್ಪಿಸಿಕೊಂಡೊ ಸಿಕ್ಕಿ ಬಿದ್ದೊ ಸಲಗಗಳು ಅದೇ ದಾರಿ ಹಿಡಿದಿದ್ದರೆ ಈ ಕತೆ ಹೇಳಲು ನಾನಿರುತ್ತಿರಲಿಲ್ಲ.

ಒಲಿದ ಅದೃಷ್ಟ

ಹತ್ತಿರದಲ್ಲೇ ಇದ್ದ ಮುಖ್ಯ ರಸ್ತೆ ಹಿಡಿದು ಬಸ್ಸು ಹತ್ತೋಣವೆಂದರೆ ಕೈಯಲ್ಲಿ ಒಂದು ರೂಪಾಯಿಯೂ ಇರಲಿಲ್ಲ. ಜಾಲಿ ರೈಡ್‍ಗೆಂದು ಹೋದ ನಾಗರಾಜ್‍ನ ಸುಳಿವಿಲ್ಲ. ತಲೆ ಗೊಂದಲದ ಗೂಡಾಗಿತ್ತು. ಏನು ಮಾಡುವುದು. ಮುಂದೇನಾಗುವುದೋ ಎಂದು ಹೆದರಿ, ಚಳಿಯಲ್ಲೂ ಬೆವರುತ್ತಾ ನಿಂತಿದ್ದೆ. ಎದ್ದೆನೋ ಬಿದ್ದೆನೋ ಎಂದು ಬೈಕ್ ಓಡಿಸುತ್ತಿದ್ದ ಗೈಡ್. ಅದೃಷ್ಟವೊಂದೇ ನಮ್ಮ ಪಾಲಿಗಿದ್ದದ್ದು. ಏನೆನ್ನಿಸಿತೋ ಆನೆಗಳಿಗೆ. ಹಠಾತ್ತನೆ ನಿಂತು ದಿಕ್ಕು ಬದಲಿಸಿ ಮತ್ತೊಂದು ಇಳಿಜಾರಿನ ದಾರಿ ಹಿಡಿದು ಹೊರಟವು. ಬಾಯಿಗೆ ಬಂದ ಹೃದಯ ತನ್ನ ಸ್ವಸ್ಥಾನಕ್ಕೆ ಮರಳಿತು! ಎಷ್ಟೋ ಹೊತ್ತು ಅವು ಹೋಗುವುದನ್ನೇ ನೋಡುತ್ತಾ ನಿಂತುಬಿಟ್ಟೆ. ಗೆಳೆಯ ನಾಗರಾಜ ಬಂದು ಕರೆದಾಗಲೇ ಎಚ್ಚರವಾದದ್ದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT