ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತನಾಡುವ ಪ್ರಧಾನಿ, ಜಯ್ ಷಾ ಬಗ್ಗೆ ಸುಮ್ಮನಿರುವುದೇಕೆ?

Last Updated 14 ಅಕ್ಟೋಬರ್ 2017, 16:33 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಪುತ್ರ ಜಯ್ ಷಾ ಅವ್ಯವಹಾರಗಳ ಬಗ್ಗೆ ಆರೋಪ ಕೇಳಿ ಬಂದಾಗ ವಾದ್ರಾ ಭೂ ಅವ್ಯವಹಾರ ಜತೆ ಈ ಪ್ರಕರಣವನ್ನು ಹೋಲಿಸಲಾಗುತ್ತಿದೆ. ಎರಡೂ ಪ್ರಕರಣಗಳು ವ್ಯತ್ಯಸ್ತವಾಗಿದ್ದರೂ ಜಯ್ ಷಾ ಪ್ರಕರಣದ ಬಗ್ಗೆ ಪ್ರಧಾನಿ ಮೋದಿಯವರ ನಿಲುವನ್ನು ಪ್ರಶ್ನಿಸಿ ಪತ್ರಕರ್ತ ಕರಣ್ ಥಾಪರ್ ದಿ ಟ್ರಿಬ್ಯೂನ್‍ನಲ್ಲಿ ಬರೆದ ಲೇಖನ ಇಲ್ಲಿದೆ.

ಹಲವು ವರ್ಷಗಳ ಹಿಂದೆ ಪ್ರಧಾನಿಯವರ ಪ್ರಚಾರ ಭಾಷಣ ಮತ್ತು ರ್ಯಾಲಿಯಲ್ಲಿ ದೇಶಕ್ಕೆ ಸಂಬಂಧಿಸಿದ ಮಾತುಗಳು ಬರುತ್ತಿದ್ದವು. ಅಷ್ಟೇ ಅಲ್ಲದೆ ಪ್ರಭಾವಿ ರಾಜಕಾರಣಿಗಳ ಸಂಬಂಧಿಕರು ಯಾವ ರೀತಿಯಲ್ಲಿ ಸಿರಿವಂತರಾಗುತ್ತಿದ್ದಾರೆ ಎಂಬ ವಿಷಯವೂ ಅಲ್ಲಿರುತ್ತಿತ್ತು. ಇದೆಲ್ಲವೂ ಭಾರತೀಯರಿಗೆ ಗೊತ್ತಿದ್ದರೂ ಇದರ ಬಗ್ಗೆ ನೇರ, ದಿಟ್ಟ ಹಾಗೂ ನಿರರ್ಗಳವಾಗಿ ಮಾತನಾಡಿದ ಮೊದಲ ರಾಜಕಾರಣಿ ಎಂದರೆ ನರೇಂದ್ರ ಮೋದಿ.

2013 ಆಗಸ್ಟ್ ನಲ್ಲಿ ಬುಜ್‍ನಲ್ಲಿ ಮಾತನಾಡಿದ ಮೋದಿ ಹೀಗಂದಿದ್ದರು:
ಸಹೋದರ- ಸೋದರಳಿಯರ ಸ್ವಜನ ಪಕ್ಷಪಾತಗಳು ಹಳೇ ಧಾರವಾಹಿಗಳಲ್ಲಿ ಕಾಣಸಿಗುತ್ತಿತ್ತು. ಆಮೇಲೆ ಅದರಲ್ಲಿಯೂ ಬದಲಾವಣೆ ಬಂತು. ಭ್ರಷ್ಟಾಚಾರದಲ್ಲಿ ಮಾವ ಮತ್ತು ಅಳಿಯನ ಧಾರವಾಹಿ ಆಯ್ತು.ಈಗ ಅದು ಅತ್ತೆ, ಸೊಸೆ ಮತ್ತು ಅಳಿಯನತ್ತ ಮುಂದುವರಿದಿದೆ,.

ಇದಾಗಿ 25 ತಿಂಗಳ ನಂತರ ಅಂದರೆ 2015 ಸೆಪ್ಟೆಂಬರ್ ‍ನಲ್ಲಿ ಸಾನ್ ಜೋಸ್‍ನಲ್ಲಿ ಮೋದಿಯವರ ಮಾತು ಹೀಗಿತ್ತು.

ನಮ್ಮ ದೇಶದಲ್ಲಿ ರಾಜಕಾರಣಿಗಳ ಮೇಲೆ ಬೇಗನೆ ಆರೋಪಗಳು ಸುತ್ತಿಕೊಳ್ಳುತ್ತವೆ. ಒಬ್ಬ ₹50 ಕೋಟಿ ಹಗರಣ ಮಾಡಿದರೆ ಮತ್ತೊಬ್ಬ ₹100 ಕೋಟಿ, ಅವರ ಮಗ  ₹250 ಕೋಟಿ ಆದರೆ ಮಗಳು ₹500 ಕೋಟಿ, ಅಳಿಯ ₹1000 ಕೋಟಿ ಹಗರಣ ಮಾಡಿದ,ಸಂಬಂಧಿಯೊಬ್ಬರು ಗುತ್ತಿಗೆ ಪಡೆದುಕೊಂಡರು. ಇಂಥಾ ಸುದ್ದಿಗಳೆಲ್ಲಾ ನಿಮಗೆ ಕೇಳಲು ಸಿಗುತ್ತಲೇ ಇರುತ್ತವೆ ಅಲ್ಲವೇ? ನನ್ನ ದೇಶದ ನಾಗರಿಕರೇ, ನಾನೀಗ ನಿಮ್ಮ ನಡುವೆ ನಿಂತಿದ್ದೇನೆ. ನನ್ನ ಮೇಲೆ ಯಾವುದಾದರೂ ಆರೋಪವಿದೆಯೇ?

ಮೋದಿ ಈ ಮಾತುಗಳನ್ನಾಡುತ್ತಿದ್ದ ವೇಳೆ ರಾಬರ್ಟ್ ವಾದ್ರಾ ಸುದ್ದಿಯಲ್ಲಿದ್ದರು. ವಾದ್ರಾ ಅವರ ಕಂಪನಿ ಕೇವಲ 6 ವರ್ಷಗಳಲ್ಲಿ ₹50 ಲಕ್ಷ ದಿಂದ ₹300 ಕೋಟಿ ಲಾಭಗಳಿಸಿದ್ದು ಅವ್ಯವಹಾರ ಮೂಲಕ ಎಂದು ದಿ ಹಿಂದೂ ಮತ್ತು ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಗಳು ಸರಣಿ ವರದಿ ಮಾಡಿದ್ದವು.  2007 ಫೆಬ್ರವರಿಯಲ್ಲಿ ಮನೇಸರ್‍‍ನಲ್ಲಿ ವಾದ್ರಾ ಅವರ ಸ್ಕೈಲೈಟ್  ಹಾಸ್ಪಿಟಾಲಿಟಿ 3.5 ಎಕರೆ ಭೂಮಿ ಖರೀದಿಸಿದಾಗ ಅವ್ಯವಹಾರದ ಕೂಗು ಗಟ್ಟಿಯಾಗಿತ್ತು .ವರದಿಗಳ ಪ್ರಕಾರ ವಾದ್ರಾ ಅವರು ಆ ಭೂಮಿ ಖರೀದಿಸಿದ 24 ಗಂಟೆಗಳಲ್ಲಿ ಆ ಭೂಮಿಯನ್ನು ಆತನ ಹೆಸರಿಗೆ ಮಾರ್ಪಾಡು ಮಾಡಲಾಗಿತ್ತು. 6 ವಾರಗಳ ನಂತರ ಹರ್ಯಾಣ ಸರ್ಕಾರ ಆ ಭೂಮಿಯನ್ನು ವಾಣಿಜ್ಯೋದ್ಯಮಕ್ಕೆ ಬಳಸಲು ಅನುಮತಿ ನೀಡಿದ್ದೇ, ಆ ಭೂಮಿಯ ಬೆಲೆ ಧುತ್ತನೆ ಏರಿಕೆಯಾಯಿತು. 65 ದಿನಗಳ ನಂತರ ವಾದ್ರಾ ಅವರು ಖರೀದಿಸಿದ ಆ ಭೂಮಿಯನ್ನು ಡಿಎಲ್‍ಎಫ್ ಕಂಪೆನಿಗೆ ₹50 ಕೋಟಿಗೆ ಮಾರಲಾಗಿತ್ತು. ಅಂದರೆ ಇಲ್ಲಿ ಸಿಕ್ಕಿದ ಲಾಭ ಶೇ.770!

ಸ್ಕೈಲೈಟ್ ಹಾಸ್ಪಿಟಾಲಿಟಿ ಆ  ಭೂಮಿಯನ್ನು ಖರೀದಿಸಿದಾಗ ಅದರ ಕ್ರಯ ಇದ್ದದ್ದು ₹1 ಲಕ್ಷ ಮತ್ತು ಭೂಮಿ ಖರೀದಿ ಮಾಡಿದ ನೈಜ ಬೆಲೆಗಿಂತ ಹೆಚ್ಚಿನ ಬೆಲೆ ಪಾವತಿ ಮಾಡಿರುವುದಾಗಿ ದಾಖಲೆಗಳಲ್ಲಿ ತೋರಿಸಲಾಗಿತ್ತು. ಅಂದರೆ ಆ ಭೂಮಿಯನ್ನು ವಾದ್ರಾ ಅವರು ಖರೀದಿಸಿ ನಂತರ ತಮಗೆ ಮಾರುತ್ತಾರೆ. ಇದರಿಂದ ಇಬ್ಬರಿಗೂ ಲಾಭವಿದೆ ಎಂದು ಗೊತ್ತಿದ್ದೇ ಡಿಎಲ್‍ಎಫ್ ಮುಂಗಡ ಹಣ ನೀಡಿದೆ ಎಂದು ಮಾಧ್ಯಮಗಳು ಶಂಕೆ ವ್ಯಕ್ತ ಪಡಿಸಿದ್ದವು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅದೊಂದು ಮೈತ್ರಿಯುತ ಒಪ್ಪಂದವಾಗಿತ್ತು.

ವಾದ್ರಾ ಮತ್ತು ಡಿಎಲ್‌ಎಫ್ ನಿರ್ಮಾಣ ಸಂಸ್ಥೆ ನಡುವೆ ನಡೆದಿರುವ ಭೂ ವ್ಯವಹಾರಗಳಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ರೈತರಿಂದ ಅತ್ಯಂತ ಕಡಿಮೆ ಬೆಲೆಗೆ ನೂರಾರು ಎಕರೆ ಭೂಮಿಯನ್ನು ಖರೀದಿಸಿದ್ದ ವಾದ್ರಾ, ಡಿಎಲ್‌ಎಫ್ ನಿರ್ಮಾಣ ಸಂಸ್ಥೆಗೆ ದುಬಾರಿ ಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ನೋಂದಣಿ ಇಲಾಖೆಯ ಮಹಾ ನಿರ್ದೇಶಕರಾಗಿದ್ದ ಐಎಎಸ್ ಅಧಿಕಾರಿ ಅಶೋಕ್ ಖೆಮ್ಕಾ ಆರೋಪ ಮಾಡಿದ್ದರು. ಈ ಆರೋಪ ಕೇಳಿ ಬಂದ ಕೂಡಲೇ ರಾತ್ರೋರಾತ್ರಿ ಖೇಮ್ಕಾ ಅವರನ್ನು ಎತ್ತಂಗಡಿ ಮಾಡಲಾಗಿತ್ತು.

ಅಮಿತ್ ಷಾ ಅವರ ಪುತ್ರ  ಜಯ್ ಅಮಿತ್‌ಬಾಯ್‌ ಷಾ ಅವರ ಅಕ್ರಮ ವ್ಯವಹಾರಗಳ ಬಗ್ಗೆ ಎನ್‍ಡಿಟಿವಿ ಮತ್ತು ದಿವೈರ್ ಸುದ್ದಿ ಮಾಡಿದಾಗ ಹೆಚ್ಚಿನ ಜನರು ಈ ಪ್ರಕರಣವನ್ನು ವಾದ್ರಾ ಭೂ ಅವ್ಯವಹಾರ ಪ್ರಕರಣದೊಂದಿಗೆ ಹೋಲಿಸಿದ್ದರು. ಆದರೆ ವಾದ್ರಾ ಪ್ರಕರಣದಂತೆ ಇದು ಮೊಕದ್ದಮೆಯ ವಿಚಾರವಾಗುವ ಬದಲು ಜಯ್ ಷಾ ಮೇಲೆ ಮಾನಹಾನಿ ಎಂಬ ಕೂಗು ಕೇಳಿ ಬಂದಿದೆ.

ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್‌ ಶಾ ಪುತ್ರ ಜಯ್‌ ಅಮಿತ್‌ಬಾಯ್‌ ಶಾ ಅವರ ಕಂಪೆನಿಯ ಆದಾಯ ಒಂದು ವರ್ಷದಲ್ಲೇ ₹ 50 ಸಾವಿರದಿಂದ ₹ 80 ಕೋಟಿಗೆ ಏರಿಕೆಯಾಗಿದೆ’ ಎಂದು ‘ದಿ ವೈರ್‌’ ಸುದ್ದಿತಾಣ ವರದಿ ಮಾಡಿತ್ತು. ಈ ವರದಿಯ  ಬೆನ್ನಲ್ಲೇ ಕಂಪೆನಿಯ ಸಾಲದ ಪ್ರಮಾಣದಲ್ಲೂ ಗಣನೀಯ ಏರಿಕೆ ಕಂಡು ಬಂದಿದೆ ಎಂದಿತ್ತು ಎನ್‍ಡಿವಿ ವರದಿ.

ದಿ ವೈರ್ ವರದಿಯ ಪ್ರಕಾರ, 2013–14ನೇ ಸಾಲಿನಲ್ಲಿ ₹ 1.3 ಕೋಟಿ ಸಾಲ ಪಡೆದಿರುವುದಾಗಿ ಷಾ ಅವರ ಕಂಪೆನಿ ಹೇಳಿಕೊಂಡಿತ್ತು. ಆದರೆ, ಮುಂದಿನ ವರ್ಷ ಅದು ₹ 53.4 ಕೋಟಿ ಸಾಲ ಪಡೆದಿರುವುದಾಗಿ ಹೇಳಿತ್ತು. ಅಂದರೆ, ಒಂದು ವರ್ಷದ ಅವಧಿಯಲ್ಲಿ ಕಂಪೆನಿ ಪಡೆದ ಸಾಲದ ಪ್ರಮಾಣದಲ್ಲಿ ಶೇಕಡ 4,000ದಷ್ಟು ಏರಿಕೆಯಾದಂತಾಗಿದೆ.

ಈ ಪೈಕಿ, 2015ರಲ್ಲಿ ಕೆಐಎಫ್‌ಎಸ್ ಹಣಕಾಸು ಸೇವೆಗಳ ಕಂಪೆನಿಯಿಂದ (ಬ್ಯಾಂಕೇತರ ಹಣಕಾಸು ಸಂಸ್ಥೆ) ₹ 15.76 ಕೋಟಿ ಸುರಕ್ಷಿತವಲ್ಲದ (ಅನ್‌ಸೆಕ್ಯೂರ್ಡ್) ಸಾಲ ಪಡೆದಿರುವುದಾಗಿ ‘ಟೆಂಪಲ್ ಎಂಟರ್‌ಪ್ರೈಸಸ್’ ಕಂಪೆನಿ ಹೇಳಿಕೊಂಡಿದೆ. ಆದರೆ, ಕೆಐಎಫ್‌ಎಸ್ ನೀಡಿದ ಮಾಹಿತಿ ಪ್ರಕಾರ ಆ ವರ್ಷ ನೀಡಲಾಗಿರುವ  ಸುರಕ್ಷಿತವಲ್ಲದ ಸಾಲದ ಮೊತ್ತ ₹ 1.16 ಲಕ್ಷ. ಹಾಗಾದರೆ, ಷಾ ಒಡೆತನದ ಕಂಪೆನಿ ಸುಳ್ಳು ದಾಖಲೆ ನೀಡಿತೇ ಎಂಬ ಪ್ರಶ್ನೆ ಮೂಡಿದೆ ಎಂದು ವರದಿಯಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆ.

[related]

ಇಷ್ಟೆಲ್ಲಾ ವಿದ್ಯಮಾನಗಳು ನಡೆಯುತ್ತಿರುವಾಗ ಸಾಮಾನ್ಯ ಪ್ರಜೆಯ ಮನಸ್ಸಿನಲ್ಲಿಯೂ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ.

* ಜಯ್ ಷಾ ಪ್ರಕರಣವು ವಾದ್ರಾ ಪ್ರಕರಣದಂತೇ ಇರುವುದಾದರೆ ಪ್ರಧಾನಿಯವರು 2013ರಲ್ಲಿ ಮತ್ತು 2015ರಲ್ಲಿ ಆಡಿದ  ಮಾತುಗಳು ಈ ಪ್ರಕರಣಕ್ಕೆ ಅನ್ವಯಿಸುದಿಲ್ಲವೇ?
* ಸ್ವಜನ ಪಕ್ಷಪಾತ ಬಗ್ಗೆ ಹೇಳುವಾಗ ಈ ಪ್ರಕರಣವೂ ಅದಕ್ಕೆ ಉದಾಹರಣೆಯಾಗಿಲ್ಲವೆ?
* ವಾದ್ರಾ ಅವರ ವ್ಯವಹಾರಗಳಲ್ಲುಂಟಾದ ಪ್ರಗತಿಗೆ ಆತನ ಅತ್ತೆ ಕಾಂಗ್ರೆಸ್ ಅಧ್ಯಕ್ಷೆಯಾಗಿರುವುದೇ ಕಾರಣ ಎಂದಾದರೆ ಜಯ್ ಷಾ ಅವರ ವ್ಯವಹಾರದಲ್ಲಿನ ಪ್ರಗತಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಸ್ಥಾನಮಾನವೂ ಕಾರಣವಾಗುವುದಿಲ್ಲವೇ?

*ವಾದ್ರಾ ಪ್ರಕರಣದಲ್ಲಿ ಇಲ್ಲಿಯವರೆಗೆ ದೋಷಿ ಯಾರೆಂದು ಸಾಬೀತಾಗಿಲ್ಲ. ಆದರೂ ಮಾಧ್ಯಮಗಳು ಸಂದೇಹ ವ್ಯಕ್ತಪಡಿಸುತ್ತಲೇ ಇವೆ. ಅದೇ ರೀತಿಯಲ್ಲಿಯೇ ಜಯ್ ಷಾ ಪ್ರಕರಣವನ್ನು ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಅದರ ಪರಿಣಾಮ ಏನಾಗುತ್ತಿದೆ? ಈ ರೀತಿ ಪ್ರಶ್ನಿಸುವುದೂ ತಪ್ಪೇ ?

*ಪ್ರಧಾನಿ ಕಚೇರಿಯಲ್ಲಿರುವವರಿಗೆ ವಾದ್ರಾ ಬಗ್ಗೆ ಹೇಳಲು ಸುಮಾರು ವಿಷಯಗಳಿವೆ. ಆದರೆ ಷಾ ವಿಷಯದ ಬಗ್ಗೆ ಎಲ್ಲರೂ ಮೌನವಾಗಿದ್ದಾರೆ. ಅಂದಹಾಗೆ ಇಲ್ಲಿಯವರೆಗೆ ಸಿಕ್ಕಾಪಟ್ಟೆ ಮಾತನಾಡುತ್ತಿದ್ದ ಪ್ರಧಾನಿಗೆ ಈ ವಿಷಯದ ಬಗ್ಗೆ ಏನೂ ಹೇಳಲಿಕ್ಕೆ ಇರುವುದಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT