ಸೋಮವಾರ, ಸೆಪ್ಟೆಂಬರ್ 16, 2019
22 °C

ಭಾನುವಾರ, 15–10–1967

Published:
Updated:

ಉತ್ತರ ಪ್ರದೇಶ: ಏಳು ಮಂದಿ ಸಚಿವರ ರಾಜೀನಾಮೆ ಇಂದು

ಲಖನೌ, ಅ. 14–
ಉತ್ತರ ಪ್ರದೇಶದ ಸಂಯುಕ್ತ, ವಿಧಾಯಕ ದಳ ಸರ್ಕಾರದಲ್ಲಿನ ಕಮ್ಯುನಿಸ್ಟ್‌ ಮತ್ತು ಸಂಯುಕ್ತ ಸೋಷಲಿಸ್ಟ್‌ ಪಕ್ಷಗಳ ಏಳು ಮಂದಿ ಸಚಿವರು ತಮ್ಮ ರಾಜೀನಾಮೆ ನೀಡಲಿದ್ದಾರೆ.

ಇಂದು ರಾತ್ರಿ ಇಲ್ಲಿ ನಡೆದ ಎರಡೂ ಪಕ್ಷಗಳ ಉನ್ನತ ನಾಯಕರ ಜಂಟಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಈ ಸಭೆಯಲ್ಲಿ ಎರಡೂ ಪಕ್ಷಗಳ ಬಹುತೇಕ ಎಲ್ಲ ಸಚಿವರೂ ಹಾಜರಿದ್ದರು.

ಡಾ।। ಲೋಹಿಯಾ ನಿಧನದ ಬಗ್ಗೆ ತನಿಖೆಗೆ ಒತ್ತಾಯ

ನವದೆಹಲಿ, ಅ. 14–
ತಮ್ಮ ಪಕ್ಷದ ನಾಯಕ ಡಾ।। ರಾಮಮನೋಹರ ಲೋಹಿಯಾ ಅವರ ನಿಧನದ ಬಗ್ಗೆ ತನಿಖೆಯೊಂದನ್ನು ನಡೆಸಬೇಕೆಂದು ತಾವು ಅಪೇಕ್ಷಿಸುವುದಾಗಿ ಎಸ್‌.ಎಸ್‌.ಪಿ. ನಾಯಕ ಶ್ರೀ ಮಧು ಲಿಮಯೆ ಅವರು ಇಂದು ಇಲ್ಲಿ ತಿಳಿಸಿದರು.

ತಾವು ತನಿಖೆ ನಡೆಸಬೇಕೆಂದು ಕೇಳುತ್ತಿರುವುದು ಯಾರ ಬಗೆಗೂ ದುರುದ್ದೇಶದಿಂದ ಕೂಡಿದುದಲ್ಲ. ಆದರೆ ಮುಖ್ಯವಾಗಿ, ನಮ್ಮ ಆಸ್ಪತ್ರೆಗಳಲ್ಲಿ ಹಾಗೂ ಆರೋಗ್ಯ ಸೇವೆಗಳಲ್ಲಿ ಲೋಪದೋಷಗಳನ್ನು ನಿವಾರಿಸಲು ಹಾಗೂ ಅವುಗಳ ಮಟ್ಟ ಹೆಚ್ಚಿಸುವ ದೃಷ್ಟಿಯಿಂದ ನಾನು ಆ ರೀತಿ ಕೇಳುತ್ತಿದ್ದೇನೆ ಎಂದೂ ಅವರು ಹೇಳಿದರು.

ಪಕ್ಷಾಂತರದ ಪ್ರಶ್ನೆ: ರಾಷ್ಟ್ರೀಯ ಒಟ್ಟು ಅಭಿಪ್ರಾಯ ಅಗತ್ಯ ಎಂದು ಶ್ರೀ ರೆಡ್ಡಿ

ನವದೆಹಲಿ, ಅ. 14–
ಶಾಸನ ಸಭೆಗಳಲ್ಲಿ ನಡೆಯುವ ಪಕ್ಷಾಂತರದ ಸಮಸ್ಯೆಯನ್ನು ಕುರಿತು ರಾಷ್ಟ್ರೀಯ ಒಟ್ಟಭಿಪ್ರಾಯ ರೂಪಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಲೋಕಸಭಾಧ್ಯಕ್ಷ ಶ್ರೀ ಎನ್‌. ಸಂಜೀವರೆಡ್ಡಿ ಇಂದು ಹೇಳಿದರು.

ಬೆಳೆಯುತ್ತಿರುವ ಈ ಭಯಂಕರ ಜಾಡ್ಯವನ್ನು ಸಕಾಲದಲ್ಲಿ ನಿಲ್ಲಿಸದಿದ್ದರೆ, ಅದು ಆಡಳಿತವನ್ನು ಅಸ್ಥಿರಗೊಳಿಸುವುದರಲ್ಲಿ ಪರಿಣಮಿಸುವುದು ಮತ್ತು ರಾಷ್ಟ್ರದ ರಾಜಕೀಯವನ್ನು ವಿಡಂಬನೆಯ ಮಟ್ಟಕ್ಕಿಳಿಸಿ, ಪ್ರಜಾಪ್ರಭುತ್ವದಲ್ಲಿ ಜನತೆಗಿರುವ ವಿಶ್ವಾಸವನ್ನು ನಾಶಗೊಳಿಸುತ್ತದೆ ಎಂದು ಶ್ರೀ ರೆಡ್ಡಿ ಹೇಳಿದರು.

ಇಂದಿನಿಂದ ರಾಜ್ಯದ ಬಹು ಭಾಗದಲ್ಲಿ ಪಾನನಿರೋಧ ರದ್ದು

ಬೆಂಗಳೂರು, ಅ. 14–
ರಾಜ್ಯದ ಬಹು ಭಾಗದಲ್ಲಿ ಪಾನನಿರೋಧವು ನಾಳೆಯಿಂದ ರದ್ದಾಗುವುದು.

1948ರಲ್ಲಿ ಆರಂಭವಾಗಿ ವಿವಿಧ ಘಟ್ಟಗಳಲ್ಲಿ ಬೆಂಗಳೂರು, ರಾಯಚೂರು ಮತ್ತು ಗುಲ್ಬರ್ಗ ಮೂರು ಜಿಲ್ಲೆಗಳು ಹೊರತು ರಾಜ್ಯಾದ್ಯಂತ ಆವರಿಸಿದ ಪಾನನಿರೋಧವು ಹತ್ತು ತಾಲ್ಲೂಕುಗಳನ್ನು ಬಿಟ್ಟು ಉಳಿದ ಭಾಗಗಳಲ್ಲೆಲ್ಲಾ ಅಕ್ಟೋಬರ್‌ 15 ರಿಂದ ರದ್ದಾಗಲಿದೆ.

ಹೆಂಡ ಮತ್ತು ಸಾರಾಯಿ ಮಾರಾಟದ ಹಕ್ಕಿನ ಹರಾಜು ಇನ್ನೂ ನಡೆಯಬೇಕಾಗಿದ್ದು ಈ ತಿಂಗಳ ಅಂತ್ಯ ಮತ್ತು ನವೆಂಬರ್‌ನ ಆದಿಭಾಗದಲ್ಲಿ ನಡೆಯಲಿದೆ. ಹೆಂಡ ಮತ್ತು ಸಾರಾಯಿಯನ್ನು 1968ರ ಜನವರಿ 1 ರಿಂದ ಮಾರಲಾಗುವುದು.

Post Comments (+)