ಸೀಮೆಎಣ್ಣೆ ಬುಡ್ಡಿ ಬೆಳಕಲ್ಲಿ ಬಿತ್ತು ಆರು ಹಲ್ಲು!

7

ಸೀಮೆಎಣ್ಣೆ ಬುಡ್ಡಿ ಬೆಳಕಲ್ಲಿ ಬಿತ್ತು ಆರು ಹಲ್ಲು!

Published:
Updated:
ಸೀಮೆಎಣ್ಣೆ ಬುಡ್ಡಿ ಬೆಳಕಲ್ಲಿ ಬಿತ್ತು ಆರು ಹಲ್ಲು!

ಪ್ರತಿ 22 ನಿಮಿಷಗಳಿಗೊಮ್ಮೆ ನಮ್ಮ ದೇಶದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಜರುಗುತ್ತದೆ. ಇವರ ಪೈಕಿ ಅರ್ಧದಷ್ಟು ಮಹಿಳೆಯರು ಅತ್ಯಾಚಾರಿಗಳಿಂದ ಕೊಲೆಯೂ ಆಗುತ್ತಾರೆ ಎಂಬ ವಾಸ್ತವ ಬೆಚ್ಚಿಬೀಳಿಸುವಂಥದ್ದು. ಪುರಾಣಗಳಿಂದ ಹಿಡಿದು ಆಧುನಿಕ ಕಾಲದವರೆಗೆ ಮಹಿಳೆ ಮೇಲಿನ ಅತ್ಯಾಚಾರ ಸಹಜ ಎಂಬಂತೆ ಬಿಂಬಿಸಲಾಗಿದೆ. ಅತ್ಯಾಚಾರದ ಪ್ರಯತ್ನ ನಡೆಯುವ ಸಂದರ್ಭದಲ್ಲಿ ತನ್ನ ರಕ್ಷಣೆಗಾಗಿ ಮಹಿಳೆ ಅತ್ಯಾಚಾರಿಯನ್ನು ಕೊಲೆ ಮಾಡಿ ತನ್ನ ಮಾನ-ಪ್ರಾಣವನ್ನು ಕಾಪಾಡಿಕೊಳ್ಳುವ ಹಕ್ಕು ಭಾರತ ದಂಡ ಸಂಹಿತೆ ಅಡಿ ಇದೆಯೇ ಎಂಬ ಜಿಜ್ಞಾಸೆಯಿಂದ ಬೆಂಗಳೂರಿನ ಒಂದು ಕಾನೂನು ಕಾಲೇಜು ಏರ್ಪಡಿಸಿದ್ದ ಕಾನೂನು ಕಾರ್ಯಾಗಾರದಲ್ಲಿ ಮಾತನಾಡುವ ಅವಕಾಶ ನನಗೆ ಸಿಕ್ಕಿತ್ತು. ನನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿ ಕಂಡ ಮೊದಲ ಅತ್ಯಾಚಾರದ ಪ್ರಕರಣದ ಕಾನೂನು

ಪ್ರಕ್ರಿಯೆಯನ್ನು ಉದಾಹರಣೆಯಾಗಿ ವಿದ್ಯಾರ್ಥಿಗಳಿಗೆ ವಿವರಿಸಿದೆ. ಆ ಘಟನೆಯನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ...

***

1977ರಲ್ಲಿ ನಡೆದ ಘಟನೆ ಇದು. ಬೆಂಗಳೂರು ಸಮೀಪದ ಹೆಸರಘಟ್ಟ ಕೆರೆಯ ಉತ್ತರಕ್ಕಿರುವ ಡ್ಯಾನಿಷ್ ಫಾರಂ ಹತ್ತಿರ ಒಂಟಿ ಮನೆ ಇತ್ತು. ಸೇನೆಯಲ್ಲಿದ್ದು ಗಾಯಗೊಂಡ ಕಾರಣ ಸೇವೆಯಿಂದ ನಿವೃತ್ತಿಗೊಂಡ ಭೂಪತಿ ಅವರ ಮನೆ ಅದು. ಭೂಪತಿಯವರು ತಮ್ಮ ಇಬ್ಬರು ಹೆಣ್ಣುಮಕ್ಕಳಾದ ಕನಗವಲ್ಲಿ ಮತ್ತು ಪ್ರತಿಮಾರೊಂದಿಗೆ ವಾಸ್ತವ್ಯ ಹೂಡಿದ್ದರು.

ಅದೊಂದು ದಿನ ಇದ್ದಕ್ಕಿದ್ದಂತೆಯೇ ವಿದ್ಯುತ್‌ ಸ್ಥಗಿತಗೊಂಡಿತು. ಭೂಪತಿಯವರು ವಿದ್ಯುತ್‌ ರಿಪೇರಿ ಮಾಡುವ ಚೆಲ್ಲಪ್ಪ ಮತ್ತು ಪಾತಣ್ಣನಿಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದರು. ಗೊತ್ತು ಮಾಡಿದ ದಿನ ಅವರು ರಿಪೇರಿಗೆ ಬರಲೇ ಇಲ್ಲ. ಅನೇಕ ಬಾರಿ ಅವರನ್ನು ಕೇಳಿಕೊಂಡರೂ ಕೆಲಸದವರು ಬರಲಿಲ್ಲ.

ಒಂದು ದಿನ ಭೂಪತಿ ಅವರು ತುರ್ತು ಕೆಲಸದ ನಿಮಿತ್ತ ಹೊರಹೋಗಬೇಕಾಗಿ ಬಂತು. ಅವರು ಕೆಲಸಕ್ಕೆ ಹೋಗುತ್ತಿದ್ದಂತೆಯೇ, ಸಂಜೆ 7.40ಕ್ಕೆ ವಿದ್ಯುತ್‌ ರಿಪೇರಿಗೆ ಎಂದು ಚೆಲ್ಲಪ್ಪ ಮತ್ತು ಪಾತಣ್ಣ ಬಂದರು. ಇಬ್ಬರೂ ರಿಪೇರಿ ಕೆಲಸ ಶುರು ಮಾಡಿದರು. ಅದಾಗಲೇ ಕತ್ತಲಾಗಿದ್ದರಿಂದ ರಿಪೇರಿಗೆ ಅನುಕೂಲ ಆಗಲಿ ಎಂದು ಕನಗ ಸೀಮೆಎಣ್ಣೆ ಬುಡ್ಡಿಯನ್ನು ಹಿಡಿದು ನಿಂತಳು.

ಮನೆಯಲ್ಲಿ ಇದ್ದುದು ಇಬ್ಬರು ಹೆಣ್ಣುಮಕ್ಕಳು ಮಾತ್ರ... ವಿದ್ಯುತ್‌ ಬೇರೆ ಇಲ್ಲ.., ಕಾರ್ಗತ್ತಲು... ಹೇಳಿಕೇಳಿ ಒಂಟಿ ಮನೆ.., ಯುವತಿಯೊಬ್ಬಳು ಸೀಮೆಎಣ್ಣೆ ಬುಡ್ಡಿಯ ಬೆಳಕಿನಲ್ಲಿ ನಿಂತಿದ್ದಾಳೆ... ಇನ್ನು ಕೇಳಬೇಕೇ...? ಚೆಲ್ಲಪ್ಪನ ಮನಸ್ಸು ವಿಚಲಿತವಾಯಿತು. ಸಿಕ್ಕಿದ್ದೇ ಅವಕಾಶ ಎಂದುಕೊಂಡ. ಹೆಣ್ಣುಮಕ್ಕಳು ಕೂಗಿಕೊಂಡರೂ ಅವರ ನೆರವಿಗೆ ಬರಲು ಅಲ್ಲಿ ಯಾರೂ ಇಲ್ಲ ಎಂಬ ಖಾತರಿ ಇತ್ತಲ್ಲ... ಗಬಕ್ಕನೆ ಹೋಗಿ ಕನಗಳನ್ನು ಹಿಡಿದೇ ಬಿಟ್ಟ. ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ... ಕನಗ ಜೋರಾಗಿ ಕೂಗಿಕೊಂಡಳು. ಆಕೆಯ ಅಕ್ಕ ಪ್ರತಿಮಾ, ಸಹಾಯಕ್ಕೆ ಧಾವಿಸಿದಳು. ಆಗ ಅವಳನ್ನು ಹಿಡಿದುಕೊಳ್ಳಲು ಪಾತಣ್ಣ ಬಂದ...

ಅಷ್ಟೇ... ಮಾರನೇ ದಿನ ಇಬ್ಬರೂ ಆಸ್ಪತ್ರೆಯಲ್ಲಿದ್ದರು. ಚೆಲ್ಲಪ್ಪನ ಎದುರುಗಡೆ ಹಲ್ಲುಗಳು ಮುರಿದುಹೋಗಿದ್ದವು! ಬಾಯಿ ಸೊಟ್ಟಗಾಗಿತ್ತು. ಪಾತಣ್ಣನ ಸ್ಥಿತಿ ಇಷ್ಟು ಚಿಂತಾಜನಕ ಆಗದಿದ್ದರೂ ಮೈಕೈಯೆಲ್ಲಾ ಊದಿಕೊಂಡಿದ್ದವು... ಇಬ್ಬರೂ ನೋವಿನಿಂದ ಚೀರಾಡುತ್ತಿದ್ದರು...

***

ಆಗಿದ್ದು ಇಷ್ಟೇ... ಸೇನೆಯಲ್ಲಿದ್ದ ಭೂಪತಿಯವರು ತಮ್ಮ ಇಬ್ಬರೂ ಹೆಣ್ಣುಮಕ್ಕಳಿಗೆ ಕರಾಟೆ, ಜೂಡೊ ಕಲಿಸಿದ್ದರು. ಕನಗಳ ಮೇಲೆ ಚೆಲ್ಲಪ್ಪ ಅತ್ಯಾಚಾರ ಎಸಗಲು ಮುಂದಾದಾಗ ಆಕೆ ಜೋರಾಗಿ ಕೂಗಿಕೊಂಡಳು. ಮೊದಲ ಮಹಡಿಯ ಅಡುಗೆ ಮನೆಯಲ್ಲಿದ್ದ ಅವಳ ಅಕ್ಕ ಪ್ರತಿಮಾ ಅಲ್ಲಿಗೆ ಬರುವಷ್ಟರಲ್ಲಿ ಕನಗ ಚೆಲ್ಲಪ್ಪನ ಮುಖಕ್ಕೆ ರಭಸದಲ್ಲಿ ಒದ್ದಿದ್ದಳು. ಆ ರಭಸಕ್ಕೆ ಚೆಲ್ಲಪ್ಪನ ಹಲ್ಲುಗಳು ಚೆಲ್ಲಾಪಿಲ್ಲಿಯಾದವು. ಕೂಗು ಕೇಳಿ ಪ್ರತಿಮಾ, ತಂಗಿಯ ಬಳಿ ಧಾವಿಸಲು ಮೆಟ್ಟಿಲು ಇಳಿಯುತ್ತಿದ್ದಾಗ ಆಕೆಯನ್ನು ತಡೆಯಲು ಪಾತಣ್ಣ ಮುಂದಾದ. ಆಗ ಪ್ರತಿಮಾ ಆತನನ್ನು ತನ್ನ ಕಡೆ ಎಳೆದುಕೊಂಡು ಅವನ ಕಾಲಿಗೆ ತೊಡರು ಕೊಟ್ಟು ಕೆಳಕ್ಕೆ ಬೀಳಿಸಿದಳು. ಆಕೆಯ ವೇಗ ಎಷ್ಟು ಜೋರಾಗಿತ್ತು ಎಂದರೆ ಪಾತಣ್ಣ ಮೆಟ್ಟಿಲುಗಳಿಂದ ಮೂಟೆಯಂತೆ ಉರುಳಿ ಉರುಳಿ ಕೆಳಕ್ಕೆ ಬಿದ್ದ. ಅಲ್ಲಿಗೇ ಸುಮ್ಮನಾಗದ ಪ್ರತಿಮಾ, ತಂಗಿ ಇದ್ದಲ್ಲಿಗೆ ಧಾವಿಸಿ ಚೆಲ್ಲಪ್ಪನ ಮುಖಕ್ಕೆ ಮತ್ತೆ ಗುದ್ದಿದಳು. ಆಗ ಮತ್ತಷ್ಟು ಹಲ್ಲುಗಳು ಉದುರಿದವು...! ಇಬ್ಬರೂ ಸತ್ತೆವೋ ಬಿದ್ದೆವೋ ಎನ್ನುತ್ತಾ ಅಲ್ಲಿಂದ ಕಾಲ್ಕಿತ್ತರು...

***

ಅವರು ಓಡಿಹೋಗುತ್ತಲೇ ಸಹೋದರಿಯರು ತಮ್ಮ ತಂದೆಗೆ ದೂರವಾಣಿ ಕರೆ ಮಾಡಿ ಕೂಡಲೇ ಬರುವಂತೆ ಹೇಳಿದರು. ಭೂಪತಿ ಅವರು ಗಾಬರಿಯಿಂದ ಮನೆಗೆ ಬಂದರು. ಆ ವೇಳೆಗಾಗಲೇ ಪೊಲೀಸರೂ ಮನೆಗೆ ಬಂದಿದ್ದರು. ಅವರು ನಡೆದ ಘಟನೆಯನ್ನು ಪೊಲೀಸರಿಗೆ ಹಾಗೂ ಅಪ್ಪನಿಗೆ ವಿವರಿಸಿದರು. ಭೂಪತಿ ಅವರಿಗೆ ಆ ಕ್ಷಣದಲ್ಲಿ ದಿಗ್ಭ್ರಮೆಯಾದರೂ ಸೈನಿಕನ ಸ್ವಭಾವದಂತೆ ಬೇಗನೇ ಸಾವರಿಸಿಕೊಂಡು ಹೆಣ್ಣುಮಕ್ಕಳ ಬಗ್ಗೆ ಹೆಮ್ಮೆಯಿಂದ ಬೀಗಿದರು. ಪೊಲೀಸರು ಸಹೋದರಿಯರ ಹೇಳಿಕೆ ಪಡೆದು ಅದನ್ನು ದಾಖಲಿಸಿಕೊಂಡರು. ಚೆಲ್ಲಪ್ಪ ಮತ್ತು ಪಾತಣ್ಣರ ವಿರುದ್ಧ ಅತ್ಯಾಚಾರ ಪ್ರಯತ್ನ ಮತ್ತು ದುಷ್ಪ್ರೇರಣೆ ಕಲಮುಗಳ ಅಡಿ ಪ್ರಕರಣವೊಂದನ್ನು ದಾಖಲಿಸಿಕೊಂಡ ಪೊಲಿಸರು ಸಮರೋಪಾದಿಯಲ್ಲಿ ತನಿಖೆ ಕೈಗೊಂಡರು. ಮತ್ತೆ ಅದೇ ರಾತ್ರಿ ಭೂಪತಿಯ ಮಹಡಿ ಮನೆಯಲ್ಲಿ ಬಿದ್ದಿದ್ದ ಆರು ಹಲ್ಲುಗಳನ್ನು ಮತ್ತು ಮಹಡಿಯ ಮೆಟ್ಟಿಲ ಮೇಲೆ ದೊರಕಿದ ರಕ್ತವನ್ನೂ ಸಾಕ್ಷ್ಯದ ರೂಪವಾಗಿ ಪಡೆದುಕೊಂಡರು.

ಆರೋಪಿಗಳಿಗಾಗಿ ಹುಡುಕಾಟ ಶುರುವಾಯಿತು. ಬೆಂಗಳೂರಿನ ಖಾಸಗಿ ನರ್ಸಿಂಗ್ ಹೋಮ್ ಒಂದರಲ್ಲಿ ಆರೋಪಿಗಳು ಚಿಕಿತ್ಸೆ ಪಡೆ

ಯುತ್ತಿರುವ ವಿಷಯ ಪೊಲೀಸರಿಗೆ ತಿಳಿಯಿತು. ಆದರೆ ಅವರು ಮರದ ಮೇಲಿಂದ ಬಿದ್ದು ಗಾಯಗೊಂಡಿರುವುದಾಗಿ ವೈದ್ಯರಿಗೆ ತಿಳಿಸಿ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅನುಮಾನಗೊಂಡ ಪೊಲೀಸರು ಆಸ್ಪತ್ರೆಗೆ ಹೋದಾಗ ಅವರೇ ಈ ಆರೋಪಿಗಳು ಎಂದು ತಿಳಿಯಿತು.

ಅವರ ದಸ್ತಗಿರಿಯ ನಂತರ ಪೂರ್ಣ ಪ್ರಮಾಣದ ತನಿಖೆಯನ್ನು ಕೆಲವು ವಾರಗಳಲ್ಲಿ ಮುಗಿಸಿ ತನಿಖಾಧಿಕಾರಿಯು ಕ್ರಿಮಿನಲ್ ಕೋರ್ಟಿನಲ್ಲಿ ಅಂತಿಮ ದೋಷಾರೋಪ ವರದಿಯನ್ನು ಸಲ್ಲಿಸಿದರು. ನಂತರ ಪ್ರಕರಣವು ಸೆಷನ್ಸ್ ಕೋರ್ಟಿಗೆ ತಲುಪಿ ಆರೋಪಿಗಳನ್ನು ನ್ಯಾಯಾಧೀಶ ಎಂ.ಎಸ್.ಪಾಟೀಲ್ (ಮುಂದೆ ಹೈಕೋರ್ಟ್ ನ್ಯಾಯಮೂರ್ತಿಗಳಾದವರು) ಅವರ ಮುಂದೆ ಹಾಜರುಪಡಿಸಲಾಯಿತು. ಅವರ ಪರವಾಗಿ ಕರ್ಪಗಂ ಕಾಮತ್ ವಕಾಲತ್ತು ವಹಿಸಿದರು. ಅವರು 1970 ಮತ್ತು 80ರ ದಶಕದಲ್ಲಿ ಕ್ರಿಮಿನಲ್ ವಕೀಲರಾಗಿ ದೊಡ್ಡ ಹೆಸರು ಮಾಡಿದ್ದ ಏಕೈಕ ಮಹಿಳೆಯಾಗಿದ್ದರು. ಅತ್ಯಾಚಾರ ಮತ್ತು ಖೋಟಾ ನೋಟು ಪ್ರಕರಣಗಳಲ್ಲಿ ತುಂಬ ಯಶಸ್ವಿ ವಕೀಲರೆಂಬ ಖ್ಯಾತಿಗೆ ಭಾಜನರಾಗಿದ್ದರು. ಆಗ ನಾನಿನ್ನೂ ಕಿರಿಯ ವಕೀಲನಾಗಿದ್ದೆ. ಸಣ್ಣಪುಟ್ಟ ಪ್ರಕರಣಗಳ ವಿಚಾರಣೆಯನ್ನು ನೋಡಿದ್ದೆನಾದರೂ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಅದುವರೆಗೆ ನೋಡಿಯೇ ಇರಲಿಲ್ಲ. ಈ ಪ್ರಕರಣ ನನ್ನನ್ನು ಬಹುವಾಗಿ ಸೆಳೆಯಿತು. ಕರ್ಪಗಂ ಕಾಮತ್‌ ಅವರಂಥ ವಕೀಲರು ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಪರ ಏನೆಲ್ಲಾ ಕೈಚಳಕ ತೋರಿಸುವವರಿದ್ದಾರೆಂದು ನೋಡುವ ಕಾತುರವೂ ನನಗಿತ್ತು. ನನ್ನೊಳಗಿನ ಈ ತುಡಿತ ಬಲಿಯುತ್ತಿದ್ದಂತೆ ವಿಚಾರಣೆಯ ದಿನ ಬಂದೇ ಬಿಟ್ಟಿತು.

ಆ ದಿನಗಳಲ್ಲಿ ಅತ್ಯಾಚಾರ ಮತ್ತು ಅತ್ಯಾಚಾರ ಪ್ರಯತ್ನದ ಅಪರಾಧಗಳ ವಿಚಾರಣೆ ಬಹಿರಂಗ ನ್ಯಾಯಾಲಯದಲ್ಲಿ ಜರುಗುತ್ತಿದ್ದು ಸಾರ್ವಜನಿಕರು ಅದನ್ನು ವೀಕ್ಷಿಸಬಹುದಾಗಿತ್ತು.

ಪ್ರಕರಣದ ವಿಚಾರಣೆಯ ಪ್ರಾರಂಭದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್‌ ಅವರು ಮೊದಲು ಕನಗ ಹಾಗೂ ನಂತರ ಪ್ರತಿಮಾ ಅವರನ್ನು ವಿಚಾರಣೆಗೆ ಒಳಪಡಿಸಿದರು. ನಡೆದ ಘಟನೆಯನ್ನು ಎಳೆಎಳೆಯಾಗಿ ನ್ಯಾಯಾಧೀಶರ ಮುಂದೆ ಬಿಚ್ಚಿಟ್ಟರು. ವಕೀಲೆ ಕಾಮತ್‌ ಅವರು ಈ ಇಬ್ಬರು ಸಹೋದರಿಯರನ್ನು ಪಾಟಿಸವಾಲಿನಲ್ಲಿ ಸೂಕ್ಷ್ಮಶೋಧನೆಗೆ ಒಳಪಡಿಸಿದರು. ತಮ್ಮ ಅನುಭವ, ಪ್ರತಿಭೆ ಮತ್ತು ಕಾನೂನು ತಿಳಿವಳಿಕೆಯನ್ನು ಪಣಕ್ಕಿಟ್ಟು ಗಂಟೆಗಟ್ಟಲೆ ಪ್ರಶ್ನಿಸಿದರು. ಅವರ ಪ್ರಶ್ನೆಗಳು ಕೆಲವೊಮ್ಮೆ ಶೋಧಕವಾಗಿಯೂ, ಇನ್ನೊಮ್ಮೆ ಕುತೂಹಲಕಾರಿಯಾಗಿಯೂ, ಮತ್ತೊಮ್ಮೆ ಸವಾಲಾಗಿಯೂ, ಮಗದೊಮ್ಮೆ ನಿರ್ದೇಶಿತವಾಗಿಯೂ ಇರುತ್ತಿದ್ದವು. ಅಲ್ಲಿದ್ದ ನನ್ನಂತಹ ಕಿರಿಯ ವಕೀಲರಿಗೆ ವಿಶೇಷವಾದ ಶಿಕ್ಷಣವೇ ಆಗಿತ್ತು. ಈ ಸುದೀರ್ಘವಾದ ವಿಚಾರಣೆಯಿಂದ ಕಾಮತ್‌ ಅವರಿಗೆ ಅಕ್ಕತಂಗಿಯರ ಪಾಟಿಸವಾಲಿನಿಂದ ಎಳ್ಳುಕಾಳಿನಷ್ಟು ಅನುಕೂಲವೂ ಆಗಲಿಲ್ಲ. ಪಾಟಿಸವಾಲನ್ನು ಯಶಸ್ವಿಯಾಗಿ ಎದುರಿಸಿದ ಅವರು ತಮ್ಮ ಮುಖ್ಯ ವಿಚಾರಣೆಯಲ್ಲಿ ಘಟನೆಯ ಬಗ್ಗೆ ನುಡಿದಿದ್ದ ಎಲ್ಲವನ್ನೂ ಸಮರ್ಥಿಸಿಕೊಂಡರು. ಪಾಟಿಸವಾಲನ್ನು ಗಮನಿಸಿಕೊಳುತ್ತಿದ್ದ ನಾನು ಅಪ್ರಜ್ಞಾಪೂರ್ವಕವಾಗಿ ಅಕ್ಕತಂಗಿಯರ ಕುರಿತು ನನ್ನಲ್ಲಿಯೇ ಪ್ರಶಂಸಿಸಿಕೊಂಡೆ.

ಭೂಪತಿಯವರು ನಂತರದಲ್ಲಿ ಸಾಕ್ಷ್ಯ ನುಡಿದರು. ‘ನಾನು ಭಾರತ ಸೇನೆಯ ಸೇವೆಯಲ್ಲಿದ್ದಾಗ ಒಬ್ಬ ಕರಾಟೆ ಪಟುವೂ ಆಗಿದ್ದೆ. ಇಬ್ಬರೂ ಹೆಣ್ಣುಮಕ್ಕಳಿಗೆ ಚಿಕ್ಕಂದಿನಲ್ಲೇ ಕರಾಟೆ ತರಬೇತಿ ಕೊಟ್ಟೆ. ನಂತರ ಅವರು ಆ ಕಲೆಯನ್ನು ಪೂರ್ಣ ಪ್ರಮಾಣಕ್ಕೆ ಬೆಳೆಸಿಕೊಂಡರು. ನನಗೆ ಮತ್ತು ನನ್ನ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆಯಲ್ಲಿ ಇದ್ದ ನಂಬಿಕೆಯಿಂದಲೇ ಒಂಟಿ ಮಹಡಿಮನೆಯನ್ನು ಖರೀದಿಸಿದೆ. ದುರ್ಘಟನೆ ನಡೆದ ದಿನ ಕನಗವಲ್ಲಿ ಫೋನ್ ಮಾಡಿದ ನಂತರ ನಾನು ಮನೆಗೆ ವಾಪಸ್ಸಾಗಿ ವಿಚಾರ ತಿಳಿದುಕೊಂಡಾಗ ಆರೋಪಿಗಳು ಜೀವಸಹಿತ ಉಳಿದು ಓಡಿಹೋದದ್ದನ್ನು ಕೇಳಿ ಆಶ್ಚರ್ಯವಾಯಿತು. ಕಾರಣ ನನ್ನ ಹೆಣ್ಣುಮಕ್ಕಳು ಒಬ್ಬೊಬ್ಬರೂ ಏಕಕಾಲದಲ್ಲಿ ನಾಲ್ಕು ಜನ ಪುರುಷರನ್ನು ಎದುರಿಸಬಲ್ಲಷ್ಟು ಸಮರ್ಥರು’ ಎಂದೆಲ್ಲ ತಿಳಿಸಿದರು.

ವಾದದ ಸಮಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್‌ ಅವರು ಆರೋಪಿಗಳಿಬ್ಬರೂ ಸಮಾನ ಮನಸ್ಸುಳ್ಳವರಾಗಿ ಅತ್ಯಾಚಾರ ಪ್ರಯತ್ನ ಮಾಡಿರುವುದನ್ನು ಸಾಬೀತುಪಡಿಸಲು ವಿಚಾರಣೆಯಲ್ಲಿ ತೇಲಿ ಬಂದಿರುವ ಎಲ್ಲ ಅಂಶಗಳನ್ನು ವಿವರಿಸಿದರು. ಒಂದು ವೇಳೆ ಸಹೋದರಿಯರು ಜೂಡೊ ತರಬೇತಿ ಹೊಂದಿಲ್ಲದೇ ಹೋಗಿದ್ದರೆ ಅಂದು ಏನೆಲ್ಲಾ ಆಗಬಹುದಿತ್ತು ಎಂಬ ಭಯಾನಕ ಪರಿಸ್ಥಿತಿಯನ್ನು ವಿವರಿಸಿದರು. ವಕೀಲೆ ಕಾಮತ್‌ ಅವರು ತಮ್ಮ ಪ್ರತಿವಾದದಲ್ಲಿ ಕನಗವಲ್ಲಿ ಮತ್ತು ಪ್ರತಿಮಾರ ಸಾಕ್ಷ್ಯವನ್ನು ಎಷ್ಟೇ ಪ್ರಯತ್ನಿಸಿದರೂ ಅನುಮಾನಿತಗೊಳಿಸಲಾಗಲಿಲ್ಲ.

ಸಹೋದರಿಯರು ಗೆದ್ದರು. ಅಪರಾಧಿಗಳಿಗೆ ಮೂರೂವರೆ ವರ್ಷಗಳ ಶಿಕ್ಷೆಯಾಯಿತು.ಕೋರ್ಟ್‌ ನೀಡಿದ ತೀರ್ಪನ್ನು ನಾನು ಓದಿದೆ. ಕನಗ ಮತ್ತು ಪ್ರತಿಮಾ ಅವರ ನೆರವಿಗೆ ಬಂದದ್ದು ಭಾರತ ದಂಡ ಸಂಹಿತೆಯ 100ನೇ ಕಲಮು. ಯಾವುದೇ ಮಹಿಳೆ ತನ್ನ ಮೇಲೆ ಅತ್ಯಾಚಾರ ಪ್ರಯತ್ನ ನಡೆದಾಗ ಅತ್ಯಾಚಾರಿಯನ್ನು ಕೊಂದು ಇಲ್ಲವೇ ಅವರ ದೇಹಕ್ಕೆ ಹಾನಿ ಉಂಟುಮಾಡಿ ಶೀಲರಕ್ಷಣೆ ಮಾಡಿಕೊಂಡರೆ ಕಾನೂನು ಅಂಥವರ ನೆರವಿಗೆ ಬರುವ ವಿಚಾರ ಅದರಲ್ಲಿದೆ.ಇದರ ಎಳೆಯನ್ನು ಕಾನೂನು ವಿದ್ಯಾರ್ಥಿಗಳ ಮುಂದೆ ಎತ್ತಿಕೊಂಡ ನಾನು ಜೂಡೊ ಇಲ್ಲವೇ ಕರಾಟೆ ತರಬೇತಿಯ ಬಗ್ಗೆ ವಿವರಿಸಿದೆ. ಹಿಂದೊಮ್ಮೆ ಅತ್ಯಾಚಾರ ಕೆಲವು ದೇಶಗಳಲ್ಲಿ ವ್ಯಾಪಕ

ವಾಗಿತ್ತು. ಆ ದೇಶಗಳಲ್ಲಿ ‘ಜೂಡೊ’ ಎಂಬ ವಿದ್ಯೆಯನ್ನು ಮಹಿಳೆಯರಿಗೆ ಕಲಿಸಲಾಯಿತು. ಇದರಿಂದ ಮಹಿಳೆಯರು ಪ್ರಬಲರಾದರು. ದುಶ್ಯಾಸನ ಪರ್ವ ನಿಂತಿತು ಎಂದೆ. ಜನರ ಮನಸ್ಸಿನಲ್ಲಿ ಅತ್ಯಾಚಾರ ಮನೋಭಾವನೆ ತುಂಬುತ್ತಿರುವ ಸಿನಿಮಾ ರಂಗದ ವಿರುದ್ಧ ಚಳವಳಿ ನಡೆಸಬೇಕಾದ ಅವಶ್ಯಕತೆ ಕುರಿತೂ ತಿಳಿಸಿದೆ. ದಕ್ಷಿಣ ಕೊರಿಯಾದಲ್ಲಿ ಅತ್ಯಾಚಾರಿಗಳಿಗೆ ಶಸ್ತ್ರ ಚಿಕಿತ್ಸೆಯ ಮೂಲಕ ಪುರುಷತ್ವಹರಣ (ಕೆಮಿಕಲ್ ಕ್ಯಾಸ್ಟ್ರೇಷನ್) ಮಾಡುವುದು, ಅಂತಹ ಶಿಕ್ಷೆಯನ್ನು ಭಾರತದಲ್ಲಿ ನಾವೆಲ್ಲ ಬೆಂಬಲಿಸಬೇಕಾದ ಅನಿವಾರ್ಯತೆ ಕುರಿತೂ ವಿವರಿಸಿದೆ. ವಿಷಾದದ ಸಂಗತಿಯೆಂದರೆ ಪ್ರತಿಭಾ ಪಾಟೀಲ್‌ ಅವರು ರಾಷ್ಟ್ರಪತಿಯಾಗದ್ದಾಗ 35 ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೊಳಗಾಗಿದ್ದವರಿಗೆ ಕ್ಷಮಾದಾನ ನೀಡಿದರು. ಅವರ ಪೈಕಿ ಏಳು ಪ್ರಕರಣ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ್ದವು. ಆ ಏಳೂ ಪ್ರಕರಣಗಳಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದವರಿಗೆ ಭೂಪತಿಯಂತಹ ತಂದೆಯಿರಲಿಲ್ಲ ಎಂದಾಗ ಕಾನೂನು ವಿದ್ಯಾರ್ಥಿಗಳ ಮುಖದಲ್ಲಿ ರಾಷ್ಟ್ರಪತಿಯವರ ವಿರುದ್ಧ ಸಾತ್ವಿಕ ಕ್ರೋಧ ಮಡುಗಟ್ಟಿಕೊಂಡದ್ದನ್ನು ಕಂಡೆ.

ಆ ಸಂದರ್ಭದಲ್ಲಿ ನನಗೆ ನೆನಪಾದದ್ದು ಅಮೆರಿಕದ ಆಧುನಿಕ ಲೇಖಕಿ ಆಲಿಸ್ ಸಿಬೋಲ್ಡ್ ಅತ್ಯಾಚಾರದ ಬಗ್ಗೆ ಬರೆಯುತ್ತಾ ಹೆಣ್ಣುಮಕ್ಕಳಿಗೆ ಹೇಳುವ ಒಂದು ಮಾತು - ‘you save yourself or you will remain unsaved’

(ಹೆಸರುಗಳನ್ನು ಬದಲಾಯಿಸಲಾಗಿದೆ) ಲೇಖಕ ಹೈಕೋರ್ಟ್‌ ವಕೀಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry