ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂದೇ ಮಾತರಂ: ರಾಷ್ಟ್ರೀಯವಾದದ ಇತಿಮಿತಿ– ಆಭಾಸ

Last Updated 14 ಅಕ್ಟೋಬರ್ 2017, 20:22 IST
ಅಕ್ಷರ ಗಾತ್ರ

ಬಂಕಿಮಚಂದ್ರ ಚಟ್ಟೋಪಾಧ್ಯಾಯ (1838-94) ಹತ್ತೊಂಬತ್ತನೆಯ ಶತಮಾನದ ಒಬ್ಬ ಖ್ಯಾತ ಬಂಗಾಳಿ ಲೇಖಕ. ಆ ದಿನಗಳ ಹಿಂದುಸ್ತಾನದಲ್ಲಿ ಪ್ರತ್ಯಕ್ಷ ಯಾ ಪರೋಕ್ಷ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯದ ಬಂಗಾಳ ಪ್ರಾಂತ್ಯದ ಸರ್ಕಾರದಲ್ಲಿ ಒಬ್ಬ ಹಿರಿಯ ಮುತ್ಸದ್ದಿಯೂ ಆಗಿದ್ದರು. ಇವರ ಕತೆ. ಕಾದಂಬರಿ ಮತ್ತು ಕವನಗಳು ಬಂಗಾಲಿಯಲ್ಲಿ ಮಾತ್ರವಲ್ಲ, ಹಿಂದುಸ್ತಾನದ ಇತರ ಭಾಷೆಗಳಲ್ಲೂ ಜನಪ್ರಿಯವಾಗಿದ್ದವು.

ನಾನು ಸಣ್ಣವನಾಗಿದ್ದಾಗ ಬಂಕಿಮಚಂದ್ರ, ಶರತ್ಚಂದ್ರರ ಕತೆ ಕಾದಂಬರಿಗಳನ್ನು ಪ್ರಾಯಶಃ ಗಳಗನಾಥರ ಕನ್ನಡ ಅನುವಾದಗಳಲ್ಲಿ ಓದಿದ ನೆನಪು. ಇವುಗಳಲ್ಲಿ 1870ರ ದಶಕಲ್ಲಿ ಬರೆದು 1881ರಲ್ಲಿ ಪ್ರಕಟಗೊಂಡ ಬಂಕಿಮಚಂದ್ರರ ಕಾದಂಬರಿ ‘ಆನಂದಮಠ’ ಅತ್ಯಂತ ಜನಪ್ರಿಯವಾಗಿತ್ತು.

ಪುಸ್ತಕ ಓದುವ ಅಭ್ಯಾಸ ಉಳಿಸಿಕೊಂಡಿರುವರಲ್ಲಿ ಆ ಕಾಲದ ಜನಪ್ರಿಯತೆ ಪ್ರಾಯಶಃ ಈಗಲೂ ಇರಬಹುದು. ಕಾದಂಬರಿಯ  ರಾಜಕೀಯ ಮತ್ತು ಸಾಂಸ್ಕೃತಿಕ ತತ್ವ ಸಿದ್ಧಾಂತಗಳು ಈಗಲೂ ಭಾರತವನ್ನು ಕಾಡುತ್ತಿರುವ ಕೆಲವು ಮೂಲಭೂತ ಸಮಸ್ಯೆಗಳಿಗೆ ಅನ್ವಯಿಸುತ್ತವೆ.  ‘ಆನಂದಮಠ’ ಕಾದಂಬರಿಯ ಕಥಾವಸ್ತುವಿನ ಕಾಲ ಹದಿನೆಂಟನೆಯ ಶತಮಾನದ ಉತ್ತರಾರ್ಧ.

1757ರ ಪ್ಲಾಸಿ ಕದನದಲ್ಲಿ ಬಂಗಾಳದ ನವಾಬ ಸಿರಾಜುದ್ದೌಲನ ಪತನದ ನಂತರ ಇಡೀ ಪ್ರಾಂತ್ಯದಲ್ಲಿ ಉಂಟಾದ ತಳಮಳದಲ್ಲಿ ಸನ್ಯಾಸಿ ದಂಗೆಯೊಂದು ಸ್ಫೋಟಿಸಿತು. ಇದನ್ನು ಒಂದು ಬಗೆಯ ಚರಿತ್ರಕಾರರು ಫಕೀರ್-ಸನ್ಯಾಸಿ ದಂಗೆ ಎಂದು ಈ ದಿನಗಳಲ್ಲಿ ರೂಪಿಸುತ್ತಾರೆ. ಈ ದಂಗೆಯ ಕಾರಣಗಳು ಮತ್ತು ಅದು ದಮನಗೊಂಡ ನಂತರ ಉದ್ಭವಿಸಿದ ರಾಜಕೀಯ ಮತ್ತು ಸಾಮಾಜಿಕ ಪರಿಣಾಮಗಳ ಹಿನ್ನೆಲೆಯಲ್ಲಿ ಈ ಕಾದಂಬರಿ ರೂಪುಗೊಂಡಿದೆ. ಈ ಸಣ್ಣಲೇಖನದಲ್ಲಿ ಅಂತಹ ಗಹನ ವಿಷಯಗಳನ್ನು ಚರ್ಚಿಸುವ ಅಗತ್ಯವಿಲ್ಲ, ಅಂತಹ ಚರ್ಚೆ ಮಾಡಲು ಬೇಕಾದ ವಿಶೇಷ ಪಾಂಡಿತ್ಯವೂ ನನಗಿಲ್ಲ.

‘ಆನಂದಮಠ’ ಕಾದಂಬರಿಯ ಕೇಂದ್ರಬಿಂದುವಾಗಿರುವ ಕವನ ‘ವಂದೇಮಾತರಂ’ನ ಅರ್ಥ ಮತ್ತು ಉದ್ದಿಶ್ಯ ಮತ್ತು  ಅದರಲ್ಲಿ ಸುಪ್ತವಾಗಿಯಾದರೂ ಮೊದಲಿನಿಂದಲೂ ಸರ್ವಜನವಿದಿತವಾಗಿದ್ದ ಮತ್ತು ಈಗಲೂ ಆಗಿರುವ ಭಾರತದ ರಾಷ್ಟ್ರೀಯತೆಗೆ ಸಂಬಂಧಿಸಿದ ಕೆಲವು ವಿಚಾರಗಳು, ಅಭಿಮತಗಳು, ಮತ್ತು ಅವುಗಳ ವರ್ತಮಾನ ಪ್ರಸ್ತುತತೆ ಈ ಟಿಪ್ಪಣಿಯ ಉದ್ದೇಶ.

ಆ ಕಾದಂಬರಿಯ ಕೇಂದ್ರೀಕೃತ ಅಂಗವಾಗಿರುವ ‘ವಂದೇ ಮಾತರಂ’ ಸ್ವತಂತ್ರ ಭಾರತದ ‘ರಾಷ್ಟ್ರೀಯ ಹಾಡು’ (National Song) ಎಂದು ಸಾಂವಿಧಾನಿಕವಾಗಿ ಮನ್ನಣೆ ಪಡೆದಿದೆ. ಇದರ ಜೊತೆಯಲ್ಲಿಯೇ 1911ರಲ್ಲಿ ರಚಿತವಾದ ಮತ್ತು ಅದೇ ವರ್ಷದ ಡಿಸೆಂಬರ್‌ನಲ್ಲಿ ಕೋಲ್ಕತ್ತದಲ್ಲಿ ಜರುಗಿದ್ದ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿ ಹಾಡಲಾದ ಕವಿಗುರು ರವೀಂದ್ರನಾಥ ಠಾಕೂರ (1861–1941) ವಿರಚಿತ ‘ಜನಗಣಮನ’ ಸ್ವತಂತ್ರ ಭಾರತದ ‘ರಾಷ್ಟ್ರಗೀತೆ’ (NationalAnthem) ಎಂದು ಸಾಂವಿಧಾನಿಕ  ಮಾನ್ಯತೆ ಪಡೆದಿದೆ. ಅರ್ಥಾತ್, ಭಾರತದಲ್ಲಿ ಒಂದು ರಾಷ್ಟ್ರಗೀತೆ (ಜನಗಣಮನ), ಮತ್ತೊಂದು ರಾಷ್ಟ್ರದ ಹಾಡು (ವಂದೇಮಾತರಂ) ಇದೆ. ಒಂದಕ್ಕೆ ಸಾಂವಿಧಾನಿಕ ಮಾನ್ಯತೆ ಇದೆ. ಮತ್ತೊಂದಕ್ಕೆ ಅಂಥ ಮಾನ್ಯತೆ ಇಲ್ಲ ಎಂದು ಇದೇ ವರ್ಷ ಫೆಬ್ರುವರಿಯಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಆದರೆ ಸಂವಿಧಾನ ಸಭೆ
ಯಲ್ಲೇ ‘ವಂದೇಮಾತರಂ’ಗೆ ರಾಷ್ಟ್ರೀಯ ಹಾಡಿನ ಸ್ಥಾನ ನೀಡಬೇಕು ಎಂದು ಸ್ವತಃ ರಾಜೇಂದ್ರ ಪ್ರಸಾದ್ ಅವರು ಹೇಳಿದ್ದರು ಎಂಬ ಅಂಶವನ್ನು ಮರೆಯಲು ಸಾಧ್ಯವಿಲ್ಲ(Constituent Assembly of India, Vol. XII, 24-1-1950).

ರಾಷ್ಟ್ರಗೀತೆ ಮತ್ತು ರಾಷ್ಟ್ರದ ಹಾಡು (Anthem and Song), ಇವೆರಡರ ನಡುವಣ ವ್ಯತ್ಯಾಸ ಏನು? ಬಿಡಿ, ಧನ್ಯ ಧನ್ಯ ಭಾರತ ದೇಶವಾಸಿಗಳ ಉಕ್ಕಿ ಹರಿಯುತ್ತಿರುವ ರಾಷ್ಟ್ರಪ್ರೇಮಕ್ಕೆ ಮಿತಿಯೇ ಇಲ್ಲದಿರುವಾಗ ಇಂತಹ ಕೆಲಸಕ್ಕೆ ಬಾರದ ಗೊಡ್ಡು ಪಾಠ ಪಾಂಡಿತ್ಯಗಳ ಡುಕುರುಂಕರಣಗಳನ್ನು ಚರ್ಚಿಸಬೇಕೇ?

ಸರ್ಕಾರಿ ಕಾರ್ಯಕ್ರಮಗಳು ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆಯ ಕಾರ್ಯಕ್ರಮಗಳ ಕೊನೆಯಲ್ಲಿ ‘ಜನಗಣಮನ’ ಹಾಡುವುದು ಪದ್ಧತಿ. ಅದಲ್ಲದೆ ಸ್ವಾತಂತ್ರ್ಯಪೂರ್ವ ದಿನಗಳಿಂದ ತೊಡಗಿ ಇಂದಿಗೂ ಕಾಂಗ್ರೆಸ್ ಪಕ್ಷದ ಸಮ್ಮೇಳನಗಳಲ್ಲಿ ‘ವಂದೇಮಾತರಂ’ ಹಾಡಲಾಗುತ್ತದೆ.  ಕೆಲವೊಮ್ಮೆ ಸರ್ಕಾರಿ ಕಾರ್ಯಕ್ರಮಗಳ ಕೊನೆಯಲ್ಲೂ ‘ವಂದೇಮಾತರಂ’ ಹಾಡುವ ರಿವಾಜು ಮುಂದುವರೆದಿದೆ. ಈಗ ಹಾಡುವುದು ಅದರ ಮೊದಲ ಎರಡು ಚರಣಗಳನ್ನು ಮಾತ್ರ. ಇದಿಷ್ಟು ಕಾದಂಬರಿಯ ಮತ್ತು ಹಾಡಿನ ಸಂದರ್ಭಪೂರ್ವ ಪ್ರಸಂಗಗಳ ಹಿನ್ನೆಲೆ.

ಭಾರತದ ಸ್ವಾತಂತ್ರ್ಯ ಆಂದೋಲನದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಪಕ್ಷ, ಇದಕ್ಕೂ ಮೀರಿ ಸ್ವತಃ ಗಾಂಧೀಜಿ ಸಹ ‘ವಂದೇಮಾತರಂ’ ಅನ್ನು ಬಹಳ ಮೆಚ್ಚಿಕೊಂಡಿದ್ದರು. ಕಾಂಗ್ರೆಸ್ ಜನ್ಮತಳೆದ ದಿನಗಳಿಂದ ‘ವಂದೇಮಾತರಂ’ ಗೀತೆಯನ್ನು ಕಾಂಗ್ರೆಸ್ ಸಮ್ಮೇಳನಗಳಲ್ಲಿ ಹಾಡಲಾಗುತ್ತಿದೆ. ಇದಲ್ಲದೆ ಭಾರತ ಸ್ವತಂತ್ರವಾದ ನಂತರ ಸಂವಿಧಾನವನ್ನು ರೂಪಿಸುತ್ತಿದ್ದ ಸಭೆಯ (Constitutional Assembly) ಅನೇಕ ಸದಸ್ಯರು ಸಹ ‘ವಂದೇಮಾತರಂ’ ರಾಷ್ಟ್ರಗೀತೆಯಾಗಬೇಕೆಂದು ಒತ್ತಾಯಿಸಿದ್ದರು. ಅದರೂ ಅದಕ್ಕೆ ರಾಷ್ಟ್ರಗೀತೆಯ ಮಾನ್ಯತೆ ನೀಡುವುದಕ್ಕೆ ಎಲ್ಲರ ಒಪ್ಪಿಗೆ ಸಿಗಲಿಲ್ಲ. ಸಂವಿಧಾನ ಸಭೆಯ ಪೂರ್ಣ ಕಾರ್ಯಕಲಾಪಗಳು ಈ ದಿನಗಳಲ್ಲಿ ಅಂತರ್ಜಾಲದಲ್ಲೂ ಲಭ್ಯ. ಕುತೂಹಲವಿದ್ದವರು ಓದಬಹುದು.

‘ವಂದೇಮಾತರಂ’ಗೆ ರಾಷ್ಟ್ರಗೀತೆಯ ಮಾನ್ಯತೆ ದೊರಕದಿದ್ದಕ್ಕೆ ಹಲವು ಕಾರಣಗಳಿದ್ದವು. ಅವುಗಳಲ್ಲಿ ಮುಖ್ಯವಾದದ್ದು ಹಾಡಿನ ಪದಪದಗಳಲ್ಲೂ, ಅಕ್ಷರಕ್ಷರಗಳಲ್ಲೂ ಹೊಡೆದಂತೆ ಎದ್ದು ಕಾಣುತ್ತಿರುವ ಮತ್ತು ಹಾಡಿನ ಅಂತರಾಳದಲ್ಲೂ ರಾರಾಜಿಸುತ್ತಿರುವ ಮೂರ್ತಿಪೂಜೆಯ ತತ್ವ ಮತ್ತು ಮೂರ್ತಿಪೂಜೆಯ ವೈಭವೀಕರಣ. ಇದು ಹೊಸ ವಿಚಾರವೇನೂ ಅಲ್ಲ.

ಈಗಲೂ, ಬಂಗಾಳದಲ್ಲಿ ಮತ್ತು ಬಂಗಾಳಿ ಪದ್ಧತಿಯನ್ನು ಅನುಸರಿಸುವ ದುರ್ಗಾಪೂಜಾ ಮಹೋತ್ಸವಗಳಲ್ಲಿ ಭಾರತಮಾತೆಯನ್ನು ವಂದಿಸುವ ಈ ಹಾಡು ಇಡೀ ಭಾರತ ದೇಶವನ್ನೇ ಮೂರ್ತೀಕರಿಸುತ್ತದೆ. ದೇಶದ ಭೌಗೋಳಿಕ, ಪ್ರಾಕೃತಿಕ ಸಂಪತ್ತು, ಗಿಡಮರಗಳು, ನದಿ ಸರೋವರಗಳು, ಬೀಸುವ ಗಾಳಿ, ಸುರಿಯುವ ಮಳೆ, ಒಟ್ಟಿನಲ್ಲಿ ಭಾರತದ ನೆಲಕ್ಕೆ ಸಂಬಂಧಿಸಿದ ಎಲ್ಲವನ್ನೂ ಮೂರ್ತೀಕರಿಸುತ್ತದೆ.

ಇಷ್ಟಾಗಿಯೂ ಈ ಹಾಡಿನಲ್ಲಿ ವಂದಿಸುವ ‘ಮಾತೆ’ ಆ ದಿನಗಳಲ್ಲಿ ಬಹಳ ವಿಶಾಲವಾಗಿದ್ದ ಬಂಗಾಳದ ಪ್ರತೀಕವೋ ಅಥವಾ ಅ ದಿನಗಳ ಬ್ರಿಟಿಷ್ ಚಕ್ರಾಧಿಪತ್ಯದ ಮುಕುಟದ ಕಿರೀಟದಲ್ಲಿನ ಅಮೂಲ್ಯ ರತ್ನವೆನಿಸಿಕೊಂಡಿದ್ದ ಭಾರತದ ಪ್ರತೀಕವೋ? ಈ ಬಗ್ಗೆ ಸ್ವಲ್ಪ ಅಸ್ಪಷ್ಟತೆ ಇದೆ.

ಭಾರತವೆಂಬ ಅಮೂರ್ತ ಕಲ್ಪನೆಯನ್ನು, ಅಷ್ಟಭುಜಗಳನ್ನು ಹೊಂದಿ ವಿವಿಧ ಶಸ್ತ್ರಗಳನ್ನು ಕೈಯಲ್ಲಿ ಹಿಡಿದು, ಸಿಂಹವೊಂದರ ಮೇಲೆ ಕುಳಿತು ರಕ್ಕಸನನ್ನು ಕೊಲ್ಲುತ್ತಿದ್ದ ಮಹಿಳೆಯೊಬ್ಬಳ ದೈಹಿಕ ಸ್ವರೂಪ ಧರಿಸಿರುವ ಭಾರತಮಾತೆಯಾಗಿ ಮೂರ್ತೀಕರಿಸಿರುವುದು ಪ್ರಾಯಶಃ ಈ ನಾಡಿನ ಬಹುಸಂಖ್ಯಾತ ಹಿಂದೂ ಸಂಪ್ರದಾಯಸ್ಥರಿಗೆ ಉಚಿತ ಮತ್ತು ಸ್ವಾಭಾವಿಕ ಅನ್ನಿಸಬಹುದು. ಆದರೆ ದೇಶ ವಿಭಜನೆಯ ನಂತರವೂ ಅಲ್ಪಸಂಖ್ಯಾತ
ರಾಗಿ ಭಾರತದಲ್ಲಿಯೇ ಉಳಿಯಲು ನಿರ್ಧರಿಸಿದ್ದ ಕೋಟ್ಯಂತರ ಮುಸ್ಲಿಂ ಸಂಪ್ರದಾಯಸ್ಥರು ಮೂರ್ತಿಪೂಜೆಯ ವಿರೋಧಿಗಳಾಗಿದ್ದರಿಂದ ಮತ್ತು ವಿಭಜನಾ ನಂತರದ ಪರಿಸ್ಥಿತಿ ಅತಿ ಸೂಕ್ಷ್ಮ ಮತ್ತು ಜಟಿಲವಾಗಿದ್ದುದನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನ ಸಭೆ ‘ವಂದೇಮಾತರಂ’ಗೆ ರಾಷ್ಟ್ರಗೀತೆಯ ಮಾನ್ಯತೆ ಕೊಡಲಿಲ್ಲ. ಬದಲಾಗಿ ಹಾಡಿನ ಜನಪ್ರಿಯತೆ, ದೇಶಪ್ರೇಮವನ್ನು ಉದ್ದೀಪಿಸುವ ಶಕ್ತಿಯನ್ನು ಗಮನಿಸಿ  ‘ರಾಷ್ಟ್ರದ ಹಾಡು’ ಅನ್ನುವ ‘ಸಮಾನ ಮಾನ್ಯತೆ’ ಕೊಡಲು ಒಪ್ಪಿಕೊಂಡಿತು.

ಮೂಲಭೂತ ಪ್ರಶ್ನೆಯೊಂದರ ಬಗ್ಗೆ ಖಡಾಖಂಡಿತ ನಿರ್ಧಾರ ತೆಗೆದುಕೊಳ್ಳದೆ, ಕೋಲು ಮುರಿಯಬಾರದು ಹಾವು ಸಾಯಬಾರದು ಅನ್ನುವ ದ್ವಿಮುಖೀ ಪ್ರವೃತ್ತಿ ಭಾರತೀಯರೆಲ್ಲರಿಗೂ ಸುಪರಿಚಿತ ಜಾಯಮಾನ. ಇಂತಹ ಅಸ್ಪಷ್ಟತೆಯೇ ಈಗಲೂ ‘ವಂದೇಮಾತರಂ’ ರಾಷ್ಟ್ರಗೀತೆಯಾಗಬೇಕು ಎಂದು ಆಗಾಗ ಮರುಕಳಿಸುತ್ತಿರುವ ಕೂಗಿಗೆ ಕುಮ್ಮಕ್ಕು ಕೊಡುತ್ತದೆ. ದೇಶಪ್ರೇಮದ ಉದ್ವೇಗಗಳನ್ನು ಬದಿಗಿಟ್ಟು ಈ ವಿಚಾರವನ್ನು ಕೂಲಂಕಷವಾಗಿ ಪರೀಕ್ಷಿಸಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ.

‘ವಂದೇಮಾತರಂ’ ಆಗಲೂ ರಾಷ್ಟ್ರಗೀತೆಯಾಗುವ ಅಥವಾ ರಾಷ್ಟ್ರದ ಹಾಡಾಗುವ ಅರ್ಹತೆ ಇದ್ದ ಗೀತೆಯಾಗಿರಲಿಲ್ಲ. ಏಕೆಂದರೆ ಭಾರತವೆಂಬ ಪರಿಕಲ್ಪನೆಗೂ ‘ವಂದೇಮಾತರಂ’ನ ‘ಭಾರತ ಮಾತೆ’ಗೂ ಏನೇನೂ ಸಂಬಂಧವಿಲ್ಲ. ಈ  ಹಾಡು ಒಂದು ರೀತಿಯ ಸಂಕುಚಿತ ಬಂಗಾಳಿ ಉಪರಾಷ್ಟ್ರೀಯವಾದದ ಉಗ್ರ ದನಿ.

ಹಾಡಿನ ಅದ್ಭುತ ಭಾವುಕತೆ, ಸಂಸ್ಕೃತಭೂಯಿಷ್ಟ ಭಾಷೆ, ಲಯಮಾಧುರ್ಯ, ಮಾತೃಭಕ್ತಿ ಮತ್ತು ದೇಶಭಕ್ತಿಗಳ ಸಮ್ಮಿಲನದ ಜಾದು ಕೇಳುಗರನ್ನು ಮತ್ತು ಹಾಡುವವರನ್ನು ವಶೀಕರಿಸುತ್ತದೆ. ಇಂತಹ ಮಾಟಕ್ಕೆ ಮರುಳಾಗದೆ ಹಾಡನ್ನು, ಅದರಲ್ಲೂ ಕೆಳಗೆ ಉಲ್ಲೇಖಿಸಿರುವ ಹಾಡಿನ ಮೂರನೆಯ ಚರಣವನ್ನು ವಿವೇಚಿಸಿದರೆ ಹಾಡು ವಂದಿಸುವ ‘ಮಾತೆ’ ಭಾರತ ಮಾತೆ ಅಲ್ಲ, ಬದಲಾಗಿ ಆ ದಿನಗಳಲ್ಲಿ ಬಹಳ ವಿಶಾಲವಾಗಿದ್ದ ಮತ್ತು ಬಂಗ ಭಾಷಿಗಳ ಕಲ್ಪನೆಯಲ್ಲಿ ಮತ್ತು ಆಕಾಂಕ್ಷೆಗಳಲ್ಲಿ ಇನ್ನೂ ವಿಶಾಲವಾಗಬೇಕಾಗಿದ್ದ ಬಂಗಾಳ ಮಾತೆ ಅನ್ನುವುದು ಸ್ಪಷ್ಟವಾಗುತ್ತದೆ.

‘ಸಪ್ತಕೋಟಿ ಕಂಠ ಕಲಕಲ ನಿನಾದ ಕರಾಲೆ
ದ್ವಿಸಪ್ತಕೋಟಿ  ಭುಜೈಧೃತ ಖರಕರವಾಲೆ
ಕಾ ಬೋಲೇ ಮಾ ತುಮಿ ಅಬಲೆ
ಬಹುಬಲ ಧಾರಿಣೀಂ
ನಮಾಮಿ ತಾರಿಣೀಂ
ರಿಪುದಳವಾರಿಣೀಂ ಮಾತರಂ’

ಈ ಚರಣದ ಮೂರನೆಯ ಸಾಲು ಮಾತ್ರ ಬಂಗಾಳಿ ಭಾಷೆಯಲ್ಲಿದೆ. ಮಿಕ್ಕ ಸಾಲುಗಳನ್ನು ಚೂರು ಪಾರು ಸಂಸ್ಕೃತ ತಿಳಿದವರೂ ಅರ್ಥ ಮಾಡಿಕೊಳ್ಳಬಹುದು. ಅದರ ಮುಕ್ತ ಅನುವಾದ ಹೀಗಿದೆ:

‘ನಿನ್ನ ಆರಾಧಕರ ಏಳು ಕೋಟಿ ಕಂಠಗಳ ದನಿಗಳು ಚೀತ್ಕರಿಸುತ್ತಿರುವಾಗ ಮತ್ತು ಹದಿನಾಲ್ಕು ಕೋಟಿ ಕೈಗಳಲ್ಲಿ ಖಡ್ಗಗಳು ಝಳಪಿಸುವಾಗ ಯಾರು ತಾಯೀ ನಿನ್ನನ್ನು ಅಬಲೆ ಎಂದು ಹೇಳಬಲ್ಲರು! ಇಂತಹ ಪರಮಶಕ್ತಿಯನ್ನು ಧರಿಸಿ ಶತ್ರುಗಳನ್ನು ಧ್ವಂಸಿಸುವ ಪರಾಶಕ್ತಿ ಪರಾಕ್ರಮಿ ದೇವಿಗೆ ವಂದನೆಗಳು!’

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ನಾನು ‘ವಂದೇಮಾತರಂ’ ಅನ್ನು ಪರಿಚಯಿಸಿಕೊಂಡಾಗ ನನ್ನ ವಯಸ್ಸು ಪ್ರಾಯಶಃ ಒಂಬತ್ತು-ಹತ್ತರ ಸುಮಾರು ಇದ್ದಿರಬಹುದು. ಆ ದಿನಗಳಲ್ಲಿ ಮನೆಯಲ್ಲಿದ್ದ ‘ಆನಂದಮಠ’ದ ಕನ್ನಡ ಅನುವಾದವನ್ನು ಓದಿ ಪುಳಕಿತನಾಗಿದ್ದೆ. ಅದರಲ್ಲೂ ಹಾಡಿನ ಭಾಷೆ ಪ್ರತಿಮೆಗಳು ಅರ್ಥವಾಗದಿದ್ದರೂ ಅದ್ಭುತ ಪ್ರಾಸಗಳೆಂದುಕೊಂಡಿದ್ದ ‘ಧಾರಿಣೀಂ. ತಾರಿಣೀಂ, ವಾರಿಣೀಂ’ ಇಂತಹ ಪದಪುಂಜಗಳನ್ನು ವಿಶೇಷ ಉದ್ವೇಗದಿಂದ ಅರಚಿಕೊಂಡು ಓದುತ್ತಿದ್ದ ನೆನಪು. ಅಂದಿನ ನೆನಪುಗಳು ಸ್ವಾಭಾವಿಕವಾಗಿಯೇ ಮಾಸಿದ ನೆನಪುಗಳು. ಆದರೆ ಇವು ಸುಳ್ಳು ನೆನಪುಗಳಲ್ಲ. ಆದರೆ ಆ ಸಣ್ಣ ವಯಸ್ಸಿನಲ್ಲೂ ಮೇಲೆ ಉಲ್ಲೇಖಿಸಿರುವ ಸಾಲುಗಳಲ್ಲಿನ ಕೆಲವು ಅಂಕೆಸಂಖ್ಯೆಗಳು ನನ್ನನ್ನು ಗೊಂದಲಕ್ಕೀಡುಮಾಡಿದ್ದವು.

ಈ ಏಳುಕೋಟಿ ಕಂಠಗಳು, ಈ ಶಸ್ತ್ರಸಜ್ಜಿತ ಹದಿನಾಲ್ಕು ಕೋಟಿ ಕೈಗಳು ಯಾರವು? ಅಂದಿನ ದಿನಗಳಲ್ಲಿ ಜನಗಣತಿ ಪ್ರಕ್ರಿಯೆಯ ಬಗ್ಗೆ ಏನೇನೂ ತಿಳಿವಳಿಕೆ ಇಲ್ಲದಿದ್ದರೂ ಭಾರತದ ಜನಸಂಖ್ಯೆ ಏಳು ಕೋಟಿ ಅಂತ ನಂಬಲು ಅಸಾಧ್ಯವಾಗಿತ್ತು. ಏಕೆಂದರೆ ನಾನು ದ. ರಾ. ಬೇಂದ್ರೆಯವರ ‘ಮಕ್ಕಳಿವರೇನಮ್ಮ ಮೂವತ್ತಮೂರು ಕೋಟಿ’ ಕವನವನ್ನೂ ಓದಿಕೊಂಡಿದ್ದೆ.

‘ವಂದೇಮಾತರಂ’ಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೆ. ಆ ವಯಸ್ಸಿನಲ್ಲಿ ಇವೆಲ್ಲಾ ಜಾಸ್ತಿ ಕಾಡದ, ಬೇಗನೆ ಮರೆತುಹೋದ ಸಣ್ಣಪುಟ್ಟ ಅನುಮಾನಗಳು ಮಾತ್ರ. 1962ನೇ ಇಸ್ವಿಯಲ್ಲಿ ಗುವಾಹತಿ ವಿಶ್ವವಿದ್ಯಾನಿಲಯದಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರ ಅದರಲ್ಲೂ 1967-68ರಿಂದ ಅಸ್ಸಾಂ ಮತ್ತು ಈಶಾನ್ಯ ಭಾರತದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳ ಬಗ್ಗೆ ಓದಲು ಮತ್ತು ಬರೆಯಲಾರಂಭಿಸಿದಾಗ ಮಾತೃಭಾಷೆ, ಆಡುಮಾತು, ಜನಗಣತಿ, ಇವುಗಳ ಒಳಸಂಬಂಧ ಒಳಜಗಳಗಳ ಬಗ್ಗೆ ಸ್ವಲ್ಪ ಜ್ಞಾತನಾದೆ.

ಭಾರತದ ಜನಗಣತಿಯ ಪ್ರಕ್ರಿಯೆ 1871ರಲ್ಲಿ ಆರಂಭವಾದರೂ ನಿಯತವಾಗಿ ಹತ್ತು ವರ್ಷಗಳಿಗೊಮ್ಮೆ ಗಣತಿ ನಡೆಸುವ ಪ್ರಕ್ರಿಯೆ 1881ರಲ್ಲಿ ಆರಂಭವಾಯಿತು. ಸ್ವಾತಂತ್ರ್ಯಪೂರ್ವ ದಿನಗಳಿಂದ ಇಂದಿನ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪ್ರತಿ ದಶಕದ ಮೊದಲನೆಯ ವರುಷದಲ್ಲಿ ಜನಗಣತಿ ಮತ್ತು ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಹಲವಾರು ಮಾಹಿತಿಗಳ ಸಂಗ್ರಹ ನಡೆಯುತ್ತಿದೆ. ಎರಡನೇ ಮಹಾಯುದ್ಧದ ಕಾರಣ 1941ರಲ್ಲಿ ಮಾತ್ರ ಜನಗಣತಿ ನಡೆಯಲಿಲ್ಲ.

1881ರ ಜನಗಣತಿಯಲ್ಲಿ ಭಾರತದ ಜನಸಂಖ್ಯೆ 22,06,54,245. ಆಗಿನ ಬಂಗಾಳದ ಜನಸಂಖ್ಯೆ 6,36,95,801 ಅಂದರೆ ಸರಿಸುಮಾರು ಏಳು ಕೋಟಿ. ಅರ್ಥಾತ್ ಜನಗಣತಿಯ ಮೊದಲ ದಿನಗಳಲ್ಲೇ ಬಂಗಾಳದ ಜನಸಂಖ್ಯೆ ಸುಮಾರು ಏಳು ಕೋಟಿ. ಕಾಕತಾಳೀಯವಾಗಿ ಅದೇ ಸಮಯದಲ್ಲಿ ‘ಆನಂದಮಠ’ ಪ್ರಕಟವಾಯಿತು. ಅದರಲ್ಲಿರುವ ಹಾಡು  ‘ವಂದೇಮಾತರಂ’ನ ಕಲ್ಪನೆಯಲ್ಲಿ, ಅದಕ್ಕೂ ಮೀರಿ ಅ ಹಾಡಿನ ಆರಾಧಕರ ಕಲ್ಪನೆಯಲ್ಲಿ ಈ ಏಳು ಕೋಟಿ ಭಾರತ ವಾಸಿಗಳ ಜನಸಂಖ್ಯೆ. ಎಲ್ಲಿ ಏಳು ಕೋಟಿ ಬಂಗ ಭಾಷಿಗಳು, ಎಲ್ಲಿ ಇಪ್ಪತ್ತೆರಡು ಕೋಟಿ ಭಾರತವಾಸಿಗಳು.

ಕತೆ ಮತ್ತು ಹಾಡಿನ ಸ್ಫೂರ್ತಿ ಬಂಗಾಳ ಪ್ರಾಂತ್ಯಕ್ಕೆ ಸೀಮಿತವಾಗಿದ್ದ ಸನ್ಯಾಸಿ ದಂಗೆ. ಆ ಹಿನ್ನೆಲೆಯಲ್ಲಿ ನೋಡಿದರೆ ಈ ಸಂಖ್ಯೆಯಲ್ಲಿ ಯಾವ ರೀತಿಯ ಆಭಾಸಗಳೂ ಕಾಣುವುದಿಲ್ಲ. ಕಾದಂಬರಿಯಲ್ಲಿನ ಮುಸಲ್ಮಾನ ವಿರೋಧೀ ಸಿದ್ಧಾಂತಗಳೂ ವಿಶೇಷ ಸಮಸ್ಯಾತ್ಮಕವಲ್ಲ. ಸಮಸ್ಯೆ ಇರುವುದು ಹಾಡಿಗೆ ದೊರೆತಿರುವ ಮಾನ್ಯತೆಯಲ್ಲಿ.

ಈ ಮಾನ್ಯತೆ ಭವಿಷ್ಯದಲ್ಲಿ ಬೇರೆ ಬೇರೆ ಕಿಂಡಿ ಬಾಗಿಲುಗಳನ್ನು ತೆರೆದು ಕೆಲವಾರು ದಶಕಗಳಿಂದ ಇತ್ಯರ್ಥವಾಗಿರುವ ಜಾತಿ, ಧರ್ಮ, ಆಚಾರ ವ್ಯವಹಾರಗಳಿಗೆ ಸಂಬಂಧಿಸಿದ ವಿಚಾರಗಳನ್ನು ತಲೆತಿರುವು ಮಾಡಿ ಈ ಮೂಲಕ ಭಾರತದ ವೈವಿಧ್ಯವನ್ನೇ ಧ್ವಂಸ ಮಾಡಬಹುದು.

ಇಷ್ಟಪಟ್ಟವರು ಮನೆಯೊಳಗೇ ಹಾಡಿಕೊಳ್ಳಲಿ; ಆದರೆ ಹಾಡಿಗೆ ಸಾಂವಿಧಾನಿಕ ಮಾನ್ಯತೆ ಬೇಕು ಎಂಬುದು ಅಪಾಯಕಾರಿ. ಇಷ್ಟಕ್ಕೂ ಭಾರತಕ್ಕೆ ಒಂದು ರಾಷ್ಟ್ರಗೀತೆ ಇದೆ. ಮತ್ತೊಂದು ರಾಷ್ಟ್ರದ ಹಾಡಿನ ಅಗತ್ಯವಾದರೂ ಏನು?

[ಈ ಪ್ರಬಂಧದ ಕೆಲವು ಅಂಶಗಳನ್ನು ನನ್ನ Sovereignty struggles in northeast India: Where are they going -(ಆರನೆಯ ಅರಬಾಂ ಸಮರೇಂದ್ರ ಸ್ಮಾರಕ ಉಪನ್ಯಾಸ-10 ಜೂನ್ 2011, ಇಂಫಾಲ) ಪ್ರಬಂಧದಿಂದ ಅಳವಡಿಸಿಕೊಂಡಿದ್ದೇನೆ.]

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT