ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಧಾರ್‌’ ತರದ ಅಭ್ಯರ್ಥಿಗಳಿಗೆ ಪರೀಕ್ಷೆಗೆ ನಿರಾಕರಣೆ

Last Updated 14 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಧಾರವಾಡ: ಕರ್ನಾಟಕ ಲೋಕಸೇವಾ ಆಯೋಗವು ಶನಿವಾರ ನಡೆಸಿದ ಮುರಾರ್ಜಿ ವಸತಿ ಶಾಲೆ ಶಿಕ್ಷಕ ಹುದ್ದೆ ಹಾಗೂ ಎನ್‌ಇಟಿ ಪರೀಕ್ಷೆಗೆ ‘ಆಧಾರ್‌’ ಗುರುತಿನ ಚೀಟಿ ತಂದಿಲ್ಲ ಎನ್ನುವ ಕಾರಣಕ್ಕೆ 25ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ. ಇದರಿಂದ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ವಸತಿ ಶಾಲೆಯ ಶಿಕ್ಷಕ ಹುದ್ದೆಯ ಪರೀಕ್ಷೆಗೆ ಆಧಾರ್‌ ಅಥವಾ ಮತದಾರರ ಗುರುತಿನ ಚೀಟಿ ತರುವುದನ್ನು ಕಡ್ಡಾಯಗೊಳಿಸಲಾಗಿತ್ತು. ಹೀಗಾಗಿ ಮತದಾರರ ಗುರುತಿನ ಚೀಟಿಯನ್ನು ಹಲವರು ತಂದಿದ್ದರೂ, ‘ಆಧಾರ್’ ಗುರುತಿನ ಚೀಟಿ ತಂದಿಲ್ಲ ಎಂದು ಹೇಳಿ ಕೆ.ಇ.ಬೋರ್ಡ್ಸ್‌ ಶಿಕ್ಷಣ ಸಂಸ್ಥೆಯಲ್ಲಿ ಅಭ್ಯರ್ಥಿಗಳಿಗೆ ಪ್ರವೇಶ ನಿರಾಕರಿಸಲಾಯಿತು.

ಈ ಕುರಿತು ಪ್ರತಿಕ್ರಿಯಿಸಿದ ಅಭ್ಯರ್ಥಿಯೊಬ್ಬರು, ’ಪ್ರವೇಶ ಪತ್ರದಲ್ಲಿ ಮತದಾರರ ಗುರುತಿನ ಚೀಟಿ ತೋರಿಸಬಹುದು ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ, ಆಧಾರ್‌ ತರುವುದು ಕಡ್ಡಾಯ ಎಂದು ಪಟ್ಟುಹಿಡಿದ ಪರೀಕ್ಷಾ ಮೇಲ್ವಿಚಾರಕರಿಗೆ ಎಷ್ಟೇ ಮನವಿ ಮಾಡಿದರೂ ಫಲ ನೀಡಲಿಲ್ಲ‘ ಎಂದು ಬೇಸರ ವ್ಯಕ್ತಪಡಿಸಿದರು.

‘ಲೋಕಸೇವಾ ಆಯೋಗದ ಕಾರ್ಯದರ್ಶಿ ಎನ್‌. ಪ್ರಸನ್ನಕುಮಾರ್‌ ಹಾಗೂ ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ಅವರನ್ನು ಸಂಪರ್ಕಿಸಿ ಪ್ರವೇಶ ಕೊಡಿಸುವಂತೆ ಮನವಿ ಮಾಡಿಕೊಂಡೆವು. ಅವರು ಕರೆ ಮಾಡಿ ತಿಳಿಸಿದರೂ, ಪರೀಕ್ಷೆಗೆ ಅವಕಾಶ ನೀಡಲಿಲ್ಲ’ ಎಂದು ಹೇಳಿದರು.

‘ಇದೇ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿದ್ದ ಕೇಂದ್ರಗಳಲ್ಲಿ ಮತದಾರರ ಗುರುತಿನ ಚೀಟಿ ನೋಡಿ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗಿತ್ತು. ಕಾಲೇಜು ವಿಭಾಗ ಕೇಂದ್ರದಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಿಲ್ಲ. ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ ಎಂಬ ಕಾರಣಕ್ಕೆ ಅಭ್ಯರ್ಥಿಗಳ ಪರೀಕ್ಷಾ ಪ್ರವೇಶ ಪತ್ರಗಳನ್ನು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಹಿಡಿದುಕೊಂಡ ಪ್ರಾಚಾರ್ಯರು, ಎಫ್‌ಐಆರ್‌ ದಾಖಲಿಸುವ ಬೆದರಿಕೆಯನ್ನೂ ಒಡ್ಡಿದರು’ ಎಂದು ದೂರಿದರು.

ಪರೀಕ್ಷೆಯ ಮೇಲ್ವಿಚಾರಕರಾಗಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಪ್ರತಿಕ್ರಿಯೆಗೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT