ಗುರುವಾರ , ಸೆಪ್ಟೆಂಬರ್ 19, 2019
26 °C
ನಿರಾಪೇಕ್ಷಣಾ ಪತ್ರ ಕಡ್ಡಾಯ

ಅಂತರ್ಜಲ ಬಳಕೆಗೆ ಇನ್ನು ಮುಂದೆ ಶುಲ್ಕ

Published:
Updated:
ಅಂತರ್ಜಲ ಬಳಕೆಗೆ ಇನ್ನು ಮುಂದೆ ಶುಲ್ಕ

ನವದೆಹಲಿ: ಮಿತಿ ಮೀರಿದ ಅಂತರ್ಜಲ ಬಳಕೆಯ ಮೇಲೆ ನಿಯಂತ್ರಣ ಹೇರಲು ಹೊರಟಿರುವ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ರಚಿಸಲು ಮುಂದಾಗಿದೆ. ಅಂತರ್ಜಲ ಬಳಕೆಯ ಮೇಲೆ ಶುಲ್ಕ ವಿಧಿಸಲು ನಿರ್ಧರಿಸಿದೆ.

ಅದರ ಅನ್ವಯ ಹೊಸ ಹಾಗೂ ಹಳೆಯ ಉದ್ಯಮ, ಕೈಗಾರಿಕೆ, ಗಣಿಗಾರಿಕೆ, ಮೂಲಸೌಕರ್ಯ ಯೋಜನೆಗಳು ಅಂತರ್ಜಲ ಬಳಕೆಗೆ ನಿರಾಕ್ಷೇಪಣ ಪತ್ರ ಪಡೆಯುವುದು ಕಡ್ಡಾಯ. ಆದರೆ, ಗೃಹಬಳಕೆ, ಕೃಷಿ ವಲಯ ನಿರಪೇಕ್ಷಣಾ ಪತ್ರ ಪಡೆಯಬೇಕಿಲ್ಲ.

ಅಂತರ್ಜಲ ಬಳಕೆಯನ್ನು ನಿಯಂತ್ರಿಸಲು ನೀರಿನ ಬಳಕೆಯ ಪ್ರಮಾಣದ ಮೇಲೆ ಶುಲ್ಕ ವಿಧಿಸಲು ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಮುಂದಾಗಿದೆ. ಪ್ರತಿ ಸಾವಿರ ಲೀಟರ್ ಅಂತರ್ಜಲಕ್ಕೆ ₹1ರಿಂದ ₹6 ಶುಲ್ಕ ಪಾವತಿಸಬೇಕಾಗುತ್ತದೆ. ಪ್ರದೇಶ ಮತ್ತು ಬಳಕೆದಾರರಿಗೆ ಅನುಗುಣವಾಗಿ ಈ ಶುಲ್ಕ ಬದಲಾಗುತ್ತದೆ. ಈ ಹಣ ರಾಜ್ಯ ಸರ್ಕಾರದ ಖಜಾನೆಗೆ ಸೇರುತ್ತದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಸೂಚನೆಯ ಮೇರೆಗೆ ಈ ಮಾರ್ಗಸೂಚಿ ರೂಪಿಸಲಾಗಿದೆ. ಶೀಘ್ರ ಎಲ್ಲ ರಾಜ್ಯಗಳಿಗೂ ಕರಡು ಮಾರ್ಗಸೂಚಿ ಕಳಿಸಿ ಅಭಿಪ್ರಾಯ ಪಡೆಯಲಾಗುವುದು ಎಂದು ಜಲಸಂಪನ್ಮೂಲ ಸಚಿವಾಲಯದ ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಅಂತರ್ಜಲ ಭಾರಿ ಕುಸಿತ ಕಂಡಿರುವ ಪ್ರದೇಶಗಳಲ್ಲಿ ನಿರಾಕ್ಷೇಪಣ ಪತ್ರ ನೀಡದಂತೆ ಸೂಚಿಸಲಾಗಿದೆ. ಸರ್ಕಾರಿ ಯೋಜನೆಗಳಿಗೂ ನಿರಾಕ್ಷೇಪಣ ಪತ್ರ ಕಡ್ಡಾಯ. ಆದರೆ, ನೀರು ಸರಬರಾಜುನಂತಹ ಅವಶ್ಯಕ ಯೋಜನೆಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

Post Comments (+)