ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ– ಪಾಕಿಸ್ತಾನ ಮುಖಾಮುಖಿ ಇಂದು

ಮಿಂಚು ಹರಿಸುವ ವಿಶ್ವಾಸದಲ್ಲಿ ಮನ್‌ಪ್ರೀತ್ ಬಳಗ
Last Updated 14 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಢಾಕಾ: ಮೊದಲ ಎರಡು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಭಾರತ ತಂಡ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಸವಾಲು ಎದುರಿಸಲಿದೆ.

ಜಪಾನ್ ಹಾಗೂ ಬಾಂಗ್ಲಾದೇಶದ ಎದುರು ಜಯಿಸಿರುವ ಭಾರತ ತಂಡವು ಅಪಾರ ವಿಶ್ವಾಸದಲ್ಲಿದೆ. ಮನ್‌ಪ್ರೀತ್ ಸಿಂಗ್‌ ಬಳಗ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಜಪಾನ್ ತಂಡವನ್ನು 5–1 ಗೋಲುಗಳಲ್ಲಿ ಮಣಿಸಿತ್ತು. ಎರಡನೇ ಪಂದ್ಯದಲ್ಲಿ ಶುಕ್ರವಾರ 7–0ಯಲ್ಲಿ ಬಾಂಗ್ಲಾದೇಶ ವಿರುದ್ಧ ಜಯಿಸಿತ್ತು. ಆದರೆ ಪಾಕ್ ಎದುರಿನ ಪಂದ್ಯ ಭಾರತಕ್ಕೆ ಕಠಿಣ ಸವಾಲಾಗಲಿದೆ.

ಪಾಕ್ ಬಳಗ ಹಿಂದಿನ ಪಂದ್ಯಗಳಲ್ಲಿ ಮಿಶ್ರಫಲ ಅನುಭವಿಸಿದೆ. ಬಾಂಗ್ಲಾದೇಶದ ಎದುರು 7–0 ಗೋಲುಗಳಲ್ಲಿ ಗೆದ್ದಿತ್ತು. ಜಪಾನ್ ವಿರುದ್ಧದ ಪಂದ್ಯದಲ್ಲಿ 2–2ರಲ್ಲಿ ಡ್ರಾ ಮಾಡಿಕೊಂಡಿತ್ತು. ಭಾರತ ತಂಡ ‘ಎ’ ಗುಂಪಿನಲ್ಲಿ ಆರು ಪಾಯಿಂಟ್ಸ್‌ಗಳಿಂದ ಮೊದಲ ಸ್ಥಾನದಲ್ಲಿದೆ.

ಪಾಕ್‌ ನಾಲ್ಕು ಪಾಯಿಂಟ್ಸ್‌ಗಳಿಂದ ಎರಡನೇ ಸ್ಥಾನದಲ್ಲಿದೆ. ನೂತನ ಕೋಚ್ ಶೊರ್ಡ್‌ ಮ್ಯಾರಿಜ್ ಮಾರ್ಗದರ್ಶನದಲ್ಲಿ ಪಳಗಿರುವ ಭಾರತ ತಂಡ ನಾಕೌಟ್ ಹಂತ ತಲುಪುವುದು ಬಹುತೇಕ ಖಚಿತವಾಗಿದೆ.

ಮೊದಲ ಎರಡು ಪಂದ್ಯಗಳಲ್ಲಿ ಭಾರತ ತಂಡ ಗೋಲುಗಳ ಮಳೆ ಸುರಿಸಿತ್ತು. ವಿಭಿನ್ನ ತಂತ್ರಗಳ ಬಳಕೆಯಿಂದ ಮೆಚ್ಚುಗೆಯನ್ನೂ ಗಳಿಸಿದೆ. ಆದರೆ ಮ್ಯಾರಿಜ್‌ ‘ಭಾರತ ತಂಡದ ಆಟ ನನಗೆ ಪೂರ್ಣಪ್ರಮಾಣದ ತೃಪ್ತಿ ತಂದಿಲ್ಲ. ಕೆಲವು ವಿಭಾಗಗಳಲ್ಲಿ ತಿದ್ದಿಕೊಂಡು ಆಡಬೇಕಿದೆ’ ಎಂದಿದ್ದಾರೆ.

ಹಿಂದಿನ ಎರಡು ಎದುರಾಳಿಗಳಿಗೆ ಹೋಲಿಸಿದರೆ ಪಾಕಿಸ್ತಾನ ಬಲಿಷ್ಠವಾದ ತಂಡ. ಆದ್ದರಿಂದ ಕೋಚ್ ಮ್ಯಾರಿಜ್ ಅವರಿಗೆ ಇದು ಮೊದಲ ಅಗ್ನಿಪರೀಕ್ಷೆ.

ಭಾರತ ತಂಡ ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲಿನಲ್ಲಿ ಪರಿವರ್ತಿಸುವಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ 13 ಪೆನಾಲ್ಟಿ ಕಾರ್ನರ್ ಅವಕಾಶಗಳು ಸಿಕ್ಕಿದ್ದವು. ಇದರಲ್ಲಿ ಕೇವಲ ಎರಡು ಮಾತ್ರ ಗೋಲುಗಳಾಗಿದ್ದವು. ಲಂಡನ್‌ನಲ್ಲಿ ನಡೆದಿದ್ದ ಹಾಕಿ ವಿಶ್ವ ಲೀಗ್ ಸೆಮಿಫೈನಲ್‌ ಟೂರ್ನಿಯಲ್ಲಿ ಭಾರತ ತಂಡವು 6–1 ರಿಂದ ಪಾಕ್ ತಂಡವನ್ನು ಮಣಿಸಿತ್ತು.

ಆನಂತರ ಈಗ ಮುಖಾಮುಖಿಯಾಗಲಿವೆ. ನಾಲ್ಕು ಬಾರಿ ವಿಶ್ವಕಪ್ ಹಾಗೂ ಮೂರು ಬಾರಿ ಏಷ್ಯಾ ಕಪ್ ಗೆದ್ದುಕೊಂಡಿರುವ ಪಾಕಿಸ್ತಾನ ತಂಡ ಇತ್ತೀಚಿನ ಕೆಟ್ಟ ಆಟದಿಂದಾಗಿ ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನಕ್ಕೆ ಕುಸಿದಿದೆ. ಪಾಕ್ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಆತ್ಯವಶ್ಯಕವಾಗಿದೆ.

‘ಎ’ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿರುವ ಜಪಾನ್ ತಂಡ ಬಾಂಗ್ಲಾದೇಶ ಎದುರು ಜಯಿಸಿದರೆ ಪಾಕ್ ತಂಡವು ಸಂಕಷ್ಟಕ್ಕೆ ಸಿಲುಕಲಿದೆ.

ಎರಡು ಪಂದ್ಯಗಳಲ್ಲಿ ಭಾರತಕ್ಕೆ ಗೋಲು ತಂದುಕೊಟ್ಟಿರುವ ಹರ್ಮನ್‌ ಪ್ರೀತ್ ಸಿಂಗ್‌, ಎಸ್‌.ವಿ ಸುನಿಲ್, ಗುರ್ಜಂತ್ ಸಿಂಗ್‌, ಆಕಾಶ್‌ದೀಪ್ ಸಿಂಗ್‌, ಲಲಿತ್ ಉಪಾಧ್ಯಾಯ, ಅಮಿತ್ ರೋಹಿದಾಸ್‌, ರಮಣದೀಪ್ ಸಿಂಗ್‌ ಅವರ ಮೇಲೆ ಭಾರತ ಹೆಚ್ಚು ಭರವಸೆ ಇರಿಸಿದೆ.

ಪಂದ್ಯದ ಸಮಯ: ಸಂಜೆ 5.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT