ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಟಿಸಿಎಲ್‌ ಅಧಿಕಾರಿಗಳ ಜೇಷ್ಠತಾ ಪಟ್ಟಿ ಎರಡು ವಾರಗಳಲ್ಲಿ ಸಿದ್ಧಪಡಿಸಿ: ಸುಪ್ರೀಂ ಕೋರ್ಟ್‌

Last Updated 14 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಎರಡು ವಾರಗಳೊಳಗಾಗಿ ಸಿಬ್ಬಂದಿಯ ಸೇವಾ ಹಿರಿತನದ ಪಟ್ಟಿಯನ್ನು ಸಿದ್ಧಪಡಿಸುವಂತೆ ಕರ್ನಾಟಕ ವಿದ್ಯುಚ್ಛಕ್ತಿ ಪ್ರಸರಣ ನಿಗಮ (ಕೆಪಿಟಿಸಿಎಲ್)ಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.

‘ಸುಪ್ರೀಂ’ ಆದೇಶ ನೀಡಿದ್ದರೂ ಕ್ರಮ ಕೈಗೊಳ್ಳದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಕ್ರಮಕ್ಕೆ ಆದೇಶಿಸಬೇಕು ಎಂದು ಕೋರಿ ಕೆಪಿಟಿಸಿಎಲ್‌ ಸಾಮಾನ್ಯ ವರ್ಗದ ನೌಕರರ ಸಂಘದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆದರ್ಶ ಕುಮಾರ ಗೋಯೆಲ್‌ ಹಾಗೂ ಯು.ಯು. ಲಲಿತ್‌ ಅವರನ್ನು ಒಳಗೊಂಡ ಪೀಠ ಈ ಸೂಚನೆ ನೀಡಿದೆ.

‘ಪಟ್ಟಿ ಸಿದ್ಧಪಡಿಸುವಂತೆ ಸಂಸ್ಥೆಗೆ ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್ ಧವನ್ ಮನವಿ ಮಾಡಿದರಾದರೂ, ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ನಡೆಸಿ ಈಗಾಗಲೇ ಈ ಕುರಿತು ಆದೇಶ ನೀಡಲಾಗಿದ್ದು, ಮತ್ತೊಮ್ಮೆ ನಿರ್ದೇಶನ ನೀಡುವ ಅಗತ್ಯವಿಲ್ಲ ಎಂದು ಪೀಠ ತಿಳಿಸಿತು.

ಕೋರ್ಟ್‌ ನೀಡಿರುವ ಗಡುವು ಪೂರ್ಣಗೊಳ್ಳುವ ಮೊದಲೇ ಯಾವುದಾದರೂ ಇಲಾಖೆಗಳು ಜ್ಯೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಿದ್ದಲ್ಲಿ, ಅದನ್ನು ಪ್ರಕಟಿಸಬಹುದು ಎಂದು ಈಗಾಗಲೇ ನೀಡಲಾಗಿರುವ ಆದೇಶವನ್ನು ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು ಎರಡು ವಾರಗಳಲ್ಲಿ ಪಾಲಿಸಬೇಕು ಎಂದು ನ್ಯಾಯಮೂರ್ತಿ ಗೋಯೆಲ್‌ ಹೇಳಿದರು.

ಬಡ್ತಿಯಲ್ಲಿ ಮೀಸಲಾತಿ ವಿಧಾನ ಅನುಸರಿಸಲು ರೂಪಿಸಿರುವ ಕಾಯ್ದೆಯನ್ನು ರದ್ದುಪಡಿಸಿ, ಸಿಬ್ಬಂದಿಗೆ ಬಡ್ತಿ ನೀಡುವ ನಿಟ್ಟಿನಲ್ಲಿ ಮೂರು ತಿಂಗಳೊಳಗೆ ಸೇವಾ ಹಿರಿತನದ (ಜೇಷ್ಠತಾ) ಪಟ್ಟಿ ಸಿದ್ಧಪಡಿಸಬೇಕು ಎಂದು ಕಳೆದ ಫೆಬ್ರುವರಿ 9ರಂದೇ ಹೊರಡಿಸಿರುವ ಆದೇಶವನ್ನು ಡಿಸೆಂಬರ್‌ 31ರೊಳಗೆ ಪಾಲಿಸಬೇಕು ಎಂದು ನ್ಯಾಯಪೀಠವು ಕಳೆದ ಸೆಪ್ಟೆಂಬರ್‌ 8ರಂದು ಸರ್ಕಾರಕ್ಕೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT