ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಉತ್ಪನ್ನಗಳಿಗೆ ಶೂನ್ಯಕರ: ಪ್ರಸನ್ನ ಆಗ್ರಹ

Last Updated 14 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ಹಾಗೂ ಕೈ ಉತ್ಪನ್ನಗಳನ್ನು ಕರಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ರಂಗಕರ್ಮಿ ಪ್ರಸನ್ನ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಿಡುಮಾಮಿಡಿ ಮಠದಲ್ಲಿ ಶನಿವಾರ ಆರಂಭವಾಯಿತು.

‘ಕೃಷಿ, ಕರಕುಶಲ ಉತ್ಪನ್ನಗಳಿಗೆ ತೆರಿಗೆ ವಿಧಿಸುತ್ತಿರುವುದು ಇದೇ ಮೊದಲು. ಸ್ವಾತಂತ್ರ್ಯಪೂರ್ವದಲ್ಲೂ ಈ ಪದ್ಧತಿ ಇರಲಿಲ್ಲ. ಇದರಿಂದ ಸಣ್ಣ ರೈತರು, ಕೈ ಕಸಬುದಾರರು ಹಾಗೂ ಬಡವರು ನಷ್ಟ ಅನುಭವಿಸುತ್ತಿದ್ದಾರೆ. ಈಗಾಗಲೇ ಸಂಕಷ್ಟದಲ್ಲಿರುವ ಗ್ರಾಮೀಣ ಉತ್ಪಾದನೆ ತೆರಿಗೆಯಿಂದ ಇನ್ನಷ್ಟು ನಲುಗುತ್ತಿದೆ’ ಎಂದು ಪ್ರಸನ್ನ ಹೇಳಿದರು.

‘ಬಡವರ ಮಾರುಕಟ್ಟೆ, ದೇಸಿ ವಸ್ತುಗಳಿಗೆ ಸಹಕಾರ ಸಿಕ್ಕರೆ ಮಾತ್ರ ಗ್ರಾಮೀಣ ಜನ ಬದುಕು ಕಟ್ಟಿಕೊಳ್ಳಲು ಸಾಧ್ಯ. ಅಂತಹವರ ಉತ್ಪನ್ನಗಳಿಗೆ ತೆರಿಗೆ ವಿಧಿಸಿರುವ ಸರ್ಕಾರ ಬಡವರನ್ನು ಭಿಕ್ಷುಕರು ಹಾಗೂ ಸಾಲಗಾರರನ್ನಾಗಿ ಮಾಡುತ್ತಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಮಡಕೆ, ಕುಡಿಕೆ, ಚಪ್ಪಲಿ, ಖಾದಿ ಬಟ್ಟೆ, ಕೈಮಗ್ಗ ಉತ್ಪನ್ನ, ಕಂಬಳಿ ಉತ್ಪನ್ನಗಳಿಗೂ ಸರಕು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲಾಗಿದೆ. ಕೇಂದ್ರ ಸರ್ಕಾರದ ಈ ಕ್ರಮ ಅಮಾನವೀಯ. ದೊಡ್ಡ ಹೂಡಿಕೆದಾರರ ಮುಂದೆ ರೈತರು, ಗುಡಿಕೈಗಾರಿಕೆಗಳ ಶ್ರಮಿಕರು ನಿಲ್ಲಲು ಸಾಧ್ಯವಿಲ್ಲ. ಕೂಡಲೇ ಇವುಗಳನ್ನು ಶೂನ್ಯ ಕರ ವ್ಯಾಪ್ತಿಗೆ ತರಬೇಕು’ ಎಂದು ಆಗ್ರಹಿಸಿದರು.

ಸ್ವಾತಂತ್ರ್ಯಹೋರಾಟಗಾರ ಎಚ್.ಎಸ್ ದೊರೆಸ್ವಾಮಿ, ‘ಕೈ ಉತ್ಪನ್ನಗಳಿಗೆ ಸುಂಕ ವಿಧಿಸಿರುವುದು ಸರಿಯಲ್ಲ. ದೇಶದ ಆರ್ಥಿಕ ನೀತಿ ಹದಗೆಟ್ಟಿದೆ. ಸ್ವಾತಂತ್ರ್ಯಪೂರ್ವದಲ್ಲೂ ಕೈ ಉತ್ಪನ್ನಗಳಿಗೆ ಕರ ವಿಧಿಸಿರಲಿಲ್ಲ. ಮೇಕ್ ಇನ್ ಇಂಡಿಯಾ ಹೆಸರಿನಲ್ಲಿ ಬಂಡವಾಳಶಾಹಿಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ದೈತ್ಯ ಯಂತ್ರಗಳು ಬಂದ ಬಳಿಕ ಕೈಮಗ್ಗ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಗ್ರಾಮೀಣ ಜನ ಬೀದಿಪಾಲಾಗುತ್ತಿದ್ದಾರೆ’ ಎಂದು ಕಿಡಿಕಾರಿದರು.

ವೀರಭದ್ರ ಚನ್ನಮಲ್ಲ ಸ್ವಾಮೀಜಿ, ‘ಇಂಡಿಯಾ ಪಾಶ್ವಾತ್ಯ ನಾಗರಿಕತೆಯನ್ನು ಆಧರಿಸಿದೆ. ಭಾರತ ದೇಸಿ ಸಂಸ್ಕೃತಿಯನ್ನು ಅನುಸರಿಸುತ್ತಿದೆ. ಆಳುವ ಸರ್ಕಾರದ ಯೋಜನೆ ಮತ್ತು ಯೋಚನೆಗಳು ಗ್ರಾಮ ಕೇಂದ್ರಿತವಾಗಿರಬೇಕು’ ಎಂದರು.

**

ನಮಗೆ ನ್ಯಾಯ ಸಿಗುವವರೆಗೂ ಸತ್ಯಾಗ್ರಹವನ್ನು ಮುಂದುವರೆಸುತ್ತೇವೆ
-ಪ್ರಸನ್ನ, ರಂಗಕರ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT