ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತುದಾರರ ಖಾತೆಗೆ ತೆರಿಗೆ ಮರುಪಾವತಿ

Last Updated 14 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ರಫ್ತುದಾರರ ತೆರಿಗೆ ಮರು ಪಾವತಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಅವರು ಕಸ್ಟಮ್ಸ್‌ ಇಲಾಖೆಗೆ ನೀಡಿದ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಲು  ನಿರ್ಧರಿಸಿದೆ.

ರಫ್ತುದಾರರು ಜಿಎಸ್‌ಟಿ ನೋಂದಣಿ ಅರ್ಜಿಯಲ್ಲಿ ನಮೂದಿಸಿರುವ ಬ್ಯಾಂಕ್‌ ಖಾತೆಗೆ ಬದಲು, ಕಸ್ಟಮ್ಸ್‌ ಇಲಾಖೆಯಲ್ಲಿ ನಮೂದಿಸಿದ ಬ್ಯಾಂಕ್‌ ಖಾತೆಗೆ ಮಾತ್ರ ತೆರಿಗೆ ಮರು ಪಾವತಿ ಮಾಡುವುದಾಗಿ ಸರ್ಕಾರ ಸ್ಪಷ್ಟಪಡಿಸಿದೆ.

ಕಸ್ಟಮ್ಸ್‌ ಇಲಾಖೆಯಲ್ಲಿ ನೀಡಿದ ಬ್ಯಾಂಕ್‌ ಖಾತೆ ವಿವರಕ್ಕೂ, ಜಿಎಸ್‌ಟಿ ಅರ್ಜಿಯಲ್ಲಿ ಭರ್ತಿ ಮಾಡಿದ ಖಾತೆ ವಿವರಕ್ಕೂ ತಾಳೆಯಾಗದೇ ಇರುವ ಸಾಧ್ಯತೆ ಇದೆ. ರಫ್ತು ಸರಕುಗಳಿಗೆ ಸಮಗ್ರ ಜಿಎಸ್‌ಟಿ (ಐಜಿಎಸ್‌ಟಿ) ರೂಪದಲ್ಲಿ ಪಾವತಿಸಿದ್ದ ತೆರಿಗೆಯಲ್ಲಿನ ಮರು ಪಾವತಿಯನ್ನು ಕಸ್ಟಮ್ಸ್‌ ಇಲಾಖೆಗೆ ನೀಡಿದ ಬ್ಯಾಂಕ್‌ ಖಾತೆಗೆ ಮಾತ್ರ ಪಾವತಿಸಲಾಗುವುದು ಎಂದು ಅಬಕಾರಿ ಮತ್ತು ಸೀಮಾಸುಂಕ ಕೇಂದ್ರೀಯ ಮಂಡಳಿಯು (ಸಿಬಿಇಸಿ) ತಿಳಿಸಿದೆ.

ರಫ್ತುದಾರರು ಜಿಎಸ್‌ಟಿ ನೋಂದಣಿ ಅರ್ಜಿಯಲ್ಲಿ ನಮೂದಿಸಿದ ಬ್ಯಾಂಕ್‌ ಖಾತೆಯನ್ನು ಕಸ್ಟಮ್ಸ್‌ ಇಲಾಖೆಗೆ ನೀಡಲು ಅಥವಾ ಕಸ್ಟಮ್ಸ್‌ ಇಲಾಖೆಗೆ ನೀಡಿದ್ದ ಖಾತೆ ವಿವರವನ್ನು ಜಿಎಸ್‌ಟಿ ನೋಂದಣಿ ಅರ್ಜಿಯಲ್ಲಿ ಭರ್ತಿ ಮಾಡಬೇಕು ಎಂದು ‘ಸಿಬಿಇಸಿ’ ಸಲಹೆ ನೀಡಿದೆ. ಇದರಿಂದ ರಫ್ತುದಾರರಿಗೆ ಸುಲಲಿತವಾಗಿ ತೆರಿಗೆ ಮರುಪಾವತಿಯಾಗಲಿದೆ.

ಜುಲೈ – ಆಗಸ್ಟ್‌ ಅವಧಿಯಲ್ಲಿ ₹ 67 ಸಾವಿರ ಕೋಟಿ ‘ಐಜಿಎಸ್‌ಟಿ’ ಸಂಗ್ರಹವಾಗಿದೆ. ಇದರಲ್ಲಿ ರಫ್ತುದಾರರಿಗೆ ₹ 5 ರಿಂದ 10 ಸಾವಿರ ಕೋಟಿ ಮರಳಿಸಬೇಕಾಗಿದೆ. ತೆರಿಗೆ ಮರುಪಾವತಿ ಪಡೆಯಲು ರಫ್ತುದಾರರು ಜಿಎಸ್‌ಟಿಆರ್‌–1ರಲ್ಲಿ 6ಎ ಮಾಹಿತಿ ಭರ್ತಿ ಮಾಡಬೇಕು. ಜಿಎಸ್‌ಟಿ ವ್ಯವಸ್ಥೆಯಲ್ಲಿ ತೆರಿಗೆ ಪಾವತಿಸುವುದಕ್ಕೆ ಯಾರೊಬ್ಬರಿಗೂ ಯಾವುದೇ ಬಗೆಯ ವಿನಾಯ್ತಿ ಇರುವುದಿಲ್ಲ.

ಈ ಕಾರಣಕ್ಕೆ ರಫ್ತುದಾರರು ಸರಕುಗಳನ್ನು ರಫ್ತು ಮಾಡಿದ ನಂತರವೇ ತೆರಿಗೆ ಮರು ಪಾವತಿ ಪಡೆಯಬಹುದು. ಇದರಿಂದ ವಹಿವಾಟು ನಡೆಸಲು ರಫ್ತುದಾರರ ಬಳಿ ಕಡಿಮೆ ಪ್ರಮಾಣದಲ್ಲಿ ನಗದು ಇರಲಿದೆ. ಈ ಸಮಸ್ಯೆ ದೂರ ಮಾಡಲು ಜಿಎಸ್‌ಟಿ ಮಂಡಳಿಯು ಪರಿಹಾರ ಕಂಡುಕೊಂಡಿದೆ. ಇದರ ಅನ್ವಯ, ರಫ್ತುದಾರರು ಮಾರ್ಚ್‌ 31ರವರೆಗೆ ಸಮಗ್ರ ಜಿಎಸ್‌ಟಿ ಪಾವತಿಸುವಂತಿಲ್ಲ.

ರಾಜ್ಯಗಳಿಗೆ ಶೀಘ್ರ ₹ 9,000 ಕೋಟಿ
ಜಿಎಸ್‌ಟಿಯಿಂದ ರಾಜ್ಯಗಳಿಗೆ ಆಗಿರುವ ತೆರಿಗೆ ನಷ್ಟ ಭರ್ತಿ ಮಾಡಿಕೊಡಲು ಕೇಂದ್ರ ಸರ್ಕಾರ ಈ ತಿಂಗಳಲ್ಲಿ ₹ 9,000 ಕೋಟಿಗಳನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ತಮಗೆ ಬರಬೇಕಾದ ‘ಪರಿಹಾರ ಸೆಸ್‌’ ವಿತರಿಸಲು ಕೇಂದ್ರವು ವಿಳಂಬ ಮಾಡುತ್ತಿದೆ ಎಂದು ರಾಜ್ಯಗಳು ದೂರುತ್ತಿವೆ.

ಜಿಎಸ್‌ಟಿ ಜಾರಿಗೆ ಬಂದ ಮೊದಲ ಐದು ವರ್ಷಗಳವರೆಗೆ ರಾಜ್ಯಗಳ ತೆರಿಗೆ ನಷ್ಟಭರ್ತಿ ಮಾಡಿಕೊಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಇದೇ ಉದ್ದೇಶಕ್ಕೆ ಸೆಸ್‌ ವಿಧಿಸಲಾಗುತ್ತಿದೆ. ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಸರ್ಕಾರವು ಸೆಸ್‌ ರೂಪದಲ್ಲಿ ₹ 15 ಸಾವಿರ ಕೋಟಿಗಳನ್ನು ಸಂಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT