ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯ ‘ಆಟ’ ಮುಗಿಸಿದ ಕಪಾಲಿ

ಇತಿಹಾಸ ಸೇರಿದ ಸಿನಿಮಾ ಸಂಸ್ಕೃತಿಯ ಜಾಗೃತ ಸ್ಥಳ
Last Updated 14 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಏಷ್ಯಾದಲ್ಲಿಯೇ ಅತಿದೊಡ್ಡ ಏಕಪರದೆ ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ನಗರದ ಸುಬೇದಾರ್‌ ಛತ್ರಂ ರಸ್ತೆಯಲ್ಲಿನ ‘ಕಪಾಲಿ’ ಚಿತ್ರಮಂದಿರದಲ್ಲಿ ಚಿತ್ರಪ್ರದರ್ಶನ ಸ್ಥಗಿತಗೊಂಡಿದೆ. ಪ್ರತಿ ಶುಕ್ರವಾರ ಕಿಕ್ಕಿರಿದ ಜನಸಂದಣಿ, ಅಷ್ಟೆತ್ತರದ ಕಟೌಟ್‌ಗಳು, ಹಾರ ತುರಾಯಿಗಳು, ಪಟಾಕಿಗಳ ಸದ್ದು, ಸಿನಿಪ್ರಿಯರ ಜಯಘೋಷಗಳಿಂದ ಕಂಗೊಳಿಸುತ್ತಿದ್ದ ಸ್ಥಳ, ಈ ಶುಕ್ರವಾರ (ಅ.13) ಭಣಗುಡುತ್ತಿತ್ತು.

ಗುರುವಾರ ರಾತ್ರಿ ಪ್ರದರ್ಶನಗೊಂಡ ’ಹುಲಿರಾಯ’ ಚಿತ್ರವೇ ಇಲ್ಲಿ ಪ್ರದರ್ಶನಗೊಂಡ ಕೊನೆಯ ಸಿನಿಮಾ. ಕನ್ನಡ ಚಿತ್ರರಂಗದ ಹಲವು ಮೊದಲುಗಳಿಗೆ ಸಾಕ್ಷಿಯಾಗಿದ್ದ ‘ಕಪಾಲಿ’ ಇನ್ನು ಕೆಲವೇ ದಿನಗಳಲ್ಲಿ ನೆಲಸಮಗೊಳ್ಳಲಿದೆ. ಅಸಂಖ್ಯ ಸಿನಿಮಾಗಳ ಗೆಲುವು ಸೋಲುಗಳಿಗೆ ವೇದಿಕೆಯಾಗಿದ್ದ ಈ ಜಾಗದಲ್ಲಿ ಬೃಹತ್‌ ಮಾಲ್‌ ನಿರ್ಮಾಣಗೊಳ್ಳಲಿದೆ.

1968ರಲ್ಲಿ ಕಾರ್ಯಾರಂಭ ಮಾಡಿದ್ದ ಈ ಚಿತ್ರಮಂದಿರವನ್ನು ಅಂದಿನ ಕೇಂದ್ರ ಹಣಕಾಸು ಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಉದ್ಘಾಟಿಸಿದ್ದರು. ಜಗತ್ತಿನ ಮೂರನೇ ಅತಿದೊಡ್ಡ ಚಿತ್ರಮಂದಿರ ಎಂಬ ಖ್ಯಾತಿಗೂ ಪಾತ್ರವಾಗಿದ್ದ ‘ಕಪಾಲಿ’ಯಲ್ಲಿ 1,465 ಆಸನಗಳಿದ್ದವು. ನಂತರ ಅದನ್ನು 1,112ಕ್ಕೆ ಇಳಿಸಲಾಯಿತು.

ಹಂಚಿಕೆದಾರ ಜಯಣ್ಣ ಈ ಚಿತ್ರಮಂದಿರವನ್ನು ಐದು ವರ್ಷಗಳ ಮಟ್ಟಿಗೆ ಗುತ್ತಿಗೆ ಪಡೆದುಕೊಂಡಿದ್ದರು. ಈಗ ಆ ಗುತ್ತಿಗೆಯ ಅವಧಿ ಮುಗಿದಿದ್ದು, ಸದ್ಯವೇ ಕಟ್ಟಡ ನೆಲಸಮಗೊಳಿಸುವ ಕೆಲಸ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಸಿನಿಮಾ ಸಂಸ್ಕೃತಿಯ ಪ್ರಮುಖ ಕೊಂಡಿಯೊಂದು ವಾಸ್ತವ ಜಗತ್ತಿನಿಂದ ಕಳಚಿಕೊಂಡು ಇತಿಹಾಸ ಸೇರಿಕೊಳ್ಳುತ್ತಿದೆ.

44,184 ಚದರ ಅಡಿ ಜಾಗದಲ್ಲಿ ವ್ಯಾಪಿಸಿದ್ದ ಈ ಚಿತ್ರಮಂದಿರದ ಜಾಗವನ್ನು ಮಾಲೀಕರಾದ ದಾಸಪ್ಪ ಸಹೋದರರು, ಬೆಳಗಾವಿಯ ಉದ್ಯಮಿಯೊಬ್ಬರಿಗೆ ಮಾರಾಟ ಮಾಡಿದ್ದರು. 

ಹಲವು ದಾಖಲೆಗಳಿಗೆ ಸಾಕ್ಷಿಯಾದ ಚಿತ್ರಮಂದಿರ

ಕಪಾಲಿ ಚಿತ್ರಮಂದಿರ ಕನ್ನಡ ಚಿತ್ರರಂಗದ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. 1968ರಲ್ಲಿಯೇ ಬಿಡುಗಡೆಯಾದ ಡಾ. ರಾಜ್‌ಕುಮಾರ್‌ ಅಭಿನಯದ ‘ಮಣ್ಣಿನ ಮಗ' ಈ ಚಿತ್ರಮಂದಿರದಲ್ಲಿ ತೆರೆಕಂಡು ಶತದಿನೋತ್ಸವ ಕಂಡಿತ್ತು. ಚಿತ್ರಮಂದಿರಗಳ ಮುಂದೆ ನಟರ ಬೃಹತ್‌ ಕೌಟೌಟ್‌ ನಿಲ್ಲಿಸುವ ಪದ್ಧತಿ ಮೊದಲು ಶುರುವಾಗಿದ್ದೂ ‘ಕಪಾಲಿ’ ಚಿತ್ರಮಂದಿರದಲ್ಲಿಯೇ. ಶಿವರಾಜ್‌ಕುಮಾರ್‌ ನಾಯಕನಾಗಿ ನಟಿಸಿದ್ದ ‘ಓಂ’ ಸಿನಿಮಾ,  ಈ ಚಿತ್ರಮಂದಿರದಲ್ಲಿ 30 ಬಾರಿ ಬಿಡುಗಡೆಗೊಂಡು ದಾಖಲೆ ನಿರ್ಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT