ಸೋಮವಾರ, ಸೆಪ್ಟೆಂಬರ್ 16, 2019
22 °C

ಸಾಲ ಮನ್ನಾ ಹೊರೆ: ರಾಜ್ಯದ ಪರದಾಟ

Published:
Updated:
ಸಾಲ ಮನ್ನಾ ಹೊರೆ: ರಾಜ್ಯದ ಪರದಾಟ

ಬೆಂಗಳೂರು: ರೈತರ ಸಾಲ ಮನ್ನಾದಿಂದ ಬೊಕ್ಕಸಕ್ಕೆ ಉಂಟಾಗಿರುವ ₹ 8,165 ಕೋಟಿ ಹೊರೆ ಹೊಂದಿಸಲು ರಾಜ್ಯ ಸರ್ಕಾರ ತಿಣುಕಾಡುತ್ತಿದೆ!

ಸಂಪನ್ಮೂಲ ಕ್ರೋಡೀಕರಣಕ್ಕೆ ಮೈಸೂರು ಮಿನರಲ್ಸ್‌ (ಎಂಎಂಎಲ್‌) ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗ‌ಳಿಗೆ ಸರ್ಕಾರ ದುಂಬಾಲು ಬಿದ್ದಿದೆ.

ಆ ಸಂಸ್ಥೆಗಳಲ್ಲಿರುವ ಹೂಡಿಕೆ ಹೆಚ್ಚುವರಿ ಮೊತ್ತವನ್ನು ರಾಜ್ಯ ಅಪೆಕ್ಸ್‌ ಬ್ಯಾಂಕಿನಲ್ಲಿ ಠೇವಣಿ ಇಡಲು ನಿಯಮಗಳಲ್ಲಿ ಅವಕಾಶ ಇಲ್ಲ. ಆದರೂ, ಸಾಲ ಮನ್ನಾಕ್ಕೆ ಹಣ ಸರಿತೂಗಿಸುವುದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಷರತ್ತುಗಳಿಂದ ವಿನಾಯಿತಿ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ.

ಅಷ್ಟೇ ಅಲ್ಲ, ಈ ಸಂಸ್ಥೆಗಳು ಬೇರೆ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಮೊತ್ತವನ್ನು ನಿಗದಿತ ಅವಧಿಗೆ ಮೊದಲೇ ಹಿಂಪಡೆದಾಗ ಉಂಟಾಗುವ ನಷ್ಟ (ದಂಡ) ಭರಿಸಲು ತೀರ್ಮಾನಿಸಿದೆ.

ತಮ್ಮಲ್ಲಿರುವ ಹೂಡಿಕೆ ಹೆಚ್ಚುವರಿ ಮೊತ್ತದಲ್ಲಿ ₹ 1,400 ಕೋಟಿ ಅಪೆಕ್ಸ್ ಬ್ಯಾಂಕಿನಲ್ಲಿ ತಕ್ಷಣ ಹೂಡಿಕೆ ಮಾಡಲು ಒಪ್ಪಿಗೆ ನೀಡುವಂತೆ ಆಗಸ್ಟ್‌ 5ರಂದೇ ಮೈಸೂರು ಮಿನರಲ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌ ಪ್ರಸಾದ್‌ ಪತ್ರ ಬರೆದಿದ್ದರು.

ಸಾಲ ಹಣ ತಾತ್ಕಾಲಿಕವಾಗಿ ಸರಿತೂಗಿಸಲು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿರುವ ಹೂಡಿಕೆ ಹೆಚ್ಚುವರಿ ಹಣವನ್ನು ಅಪೆಕ್ಸ್‌ ಬ್ಯಾಂಕಿಗೆ ವರ್ಗಾಯಿಸುವಂತೆ ಮುಖ್ಯಮಂತ್ರಿ ನೀಡಿದ ನಿರ್ದೇಶನದ ಬಗ್ಗೆಯೂ ಆ ಪತ್ರದಲ್ಲಿ ಉಲ್ಲೇಖಿಸಿದ್ದರು.

ಆದರೆ, ಅಪೆಕ್ಸ್‌ ಬ್ಯಾಂಕಿನಲ್ಲಿ ಹಣ ಠೇವಣಿಗೆ ಸಾರ್ವಜನಿಕ ಉದ್ದಿಮೆಗಳ ಇಲಾಖೆ 2012ರಲ್ಲಿ ಹೊರಡಿಸಿದ್ದ ಎರಡು ಸುತ್ತೋಲೆಗಳು ಅಡ್ಡಿ ಆಗಿರುವುದರಿಂದ ಈ ಬಗ್ಗೆ ಸ್ಪಷ್ಠೀಕರಣ ನೀಡುವಂತೆ ಎಂಎಂಎಲ್ ಆಡಳಿತ ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

‘ಈ ಸುತ್ತೋಲೆಗಳ ಪ್ರಕಾರ ಹೂಡಿಕೆ ಹೆಚ್ಚುವರಿ ಹಣ ಠೇವಣಿ ಇಡುವ ಬ್ಯಾಂಕಿನ ನಿವ್ವಳ ಮೌಲ್ಯ ₹ 500 ಕೋಟಿಗೂ ಹೆಚ್ಚು ಇರಬೇಕು. ಎನ್‌ಪಿಎ ಪ್ರಮಾಣ ಶೇ 7ಕ್ಕಿಂತಲೂ ಕಡಿಮೆ ಇರಬೇಕು.

‘ಅಪೆಕ್ಸ್‌ ಬ್ಯಾಂಕಿನ ನಿವ್ವಳ ಮೌಲ್ಯ ₹ 500 ಕೋಟಿ ಇಲ್ಲ. ಅಲ್ಲದೆ, ಇದೊಂದು ಸಹಕಾರಿ ಬ್ಯಾಂಕು ಆಗಿದ್ದು, ಅನುಸೂಚಿತ ವಾಣಿಜ್ಯ ಬ್ಯಾಂಕು ಅಲ್ಲ. ಅಷ್ಟೇ ಅಲ್ಲ, ಈಗಾಗಲೇ ಹೂಡಿಕೆ ಮಾಡಿರುವ ಕಡೆಗಳಿಂದ ನಿಗದಿತ ಅವಧಿಗೂ ಮೊದಲೇ ಹಣ ಹಿಂಪಡೆದರೆ ನಷ್ಟ (ದಂಡ) ಕಟ್ಟ

ಬೇಕಾಗುತ್ತದೆ’ ಎಂದು ಎಂಎಂಎಲ್ ಆಡಳಿತ ನಿರ್ದೇಶಕರು ಪತ್ರದಲ್ಲಿ ಉಲ್ಲೇಖಿಸಿದ್ದರು.

ಈ ಬಗ್ಗೆ ಸ್ಪಷ್ಟ ಸಲಹೆ ನೀಡುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ಆರ್ಥಿಕ ಇಲಾಖೆಯನ್ನು ಕೋರಿದ್ದಾರೆ. ಅಪೆಕ್ಸ್ ಬ್ಯಾಂಕಿನಲ್ಲಿ ಠೇವಣಿ ಇಡುವ ಹಣ ತಾತ್ಕಾಲಿಕವಾಗಿದ್ದು, ಸರ್ಕಾರ ಬಜೆಟ್‌ ಮೂಲಕ ಅಪೆಕ್ಸ್ ಬ್ಯಾಂಕಿಗೆ ಹಣ ಮರು ಪಾವತಿಸಿದಾಗ ಎಂಎಂಎಲ್‌ಗೆ ಹಣ ಹಿಂದಿರುಗಿಸಬಹುದು. ಆದ್ದರಿಂದ, ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಸುತ್ತೋಲೆಗಳಲ್ಲಿರುವ ಷರತ್ತುಗಳಿಗೆ ವಿನಾಯಿತಿ ನೀಡಲಾಗುವುದು. ಸಾಲ ಮನ್ನಾ ಅತಿತುರ್ತು ಯೋಜನೆ. ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸುವಂತೆ ಆರ್ಥಿಕ ಇಲಾಖೆ, ಎಂಎಂಲ್‌ಗೆ ಪತ್ರ ಬರೆದಿದಿದೆ.

ಕಾರ್ಮಿಕ ಸಂಘ ವಿರೋಧ

ಎಂಎಂಎಲ್‌ ನಿಧಿಯನ್ನು ರಾಷ್ಟ್ರೀಕೃತ ಬ್ಯಾಂಕುಗಳಿಂದ ಹಿಂಪಡೆದು ಅಪೆಕ್ಸ್ ಬ್ಯಾಕಿನಲ್ಲಿ ಠೇವಣಿ ಇಡುವ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿ ಸಂಸ್ಥೆಯ ಕಾರ್ಮಿಕ ಸಂಘ, ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ.

‘ಎಂಎಂಎಲ್‌ ಕಠಿಣ ಪರಿಸ್ಥಿತಿ ಎದುರಿಸುತ್ತಿರುವುದರಿಂದ ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಡುವುದು ಸುರಕ್ಷಿತವಲ್ಲ’ ಎಂದೂ ಮನವಿಯಲ್ಲಿ ಸಂಘ ತಿಳಿಸಿದೆ.

Post Comments (+)