ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಕಡು ಭ್ರಷ್ಟ: ಮೋಹನದಾಸ್‌ ಪೈ

ಸ್ಟೂಡೆಂಟ್‌ ಕೌನ್ಸಿಲ್‌ ಆಯೋಜಿಸಿದ್ದ ‘ಐಡಿಯಾ ಕನ್‌ಕ್ಲೇವ್‌ ಫಾರ್‌ ಬೆಟರ್‌ ಬೆಂಗಳೂರು’
Last Updated 14 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ವಾರ್ಷಿಕ ₹10,000 ಕೋಟಿ ಬಜೆಟ್‌ ಹೊಂದಿದ್ದರೂ ನಗರದಲ್ಲಿ ಸರಿಯಾದ ಮೂಲಸೌಕರ್ಯ ಅಭಿವೃದ್ಧಿಪಡಿಸಲು ವಿಫಲವಾಗಿದ್ದು, ಅತ್ಯಂತ ಕಡು ಭ್ರಷ್ಟ ಸಂಸ್ಥೆ ಎನಿಸಿದೆ’ ಎಂದು ಮಣಿಪಾಲ್‌ ಗ್ಲೋಬಲ್‌ ಎಜುಕೇಷನ್‌ ಅಧ್ಯಕ್ಷ ಮೋಹನದಾಸ್‌ ಪೈ ಟೀಕಿಸಿದರು.

ನಗರದಲ್ಲಿ ಶನಿವಾರ ಐಐಎಸ್‌ಸಿ ಸ್ಟೂಡೆಂಟ್‌ ಕೌನ್ಸಿಲ್‌ ಆಯೋಜಿಸಿದ್ದ ‘ಐಡಿಯಾ ಕನ್‌ಕ್ಲೇವ್‌ ಫಾರ್‌ ಬೆಟರ್‌ ಬೆಂಗಳೂರು’ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಯುವಜನರಿಗೆ ಭ್ರಷ್ಟ ವ್ಯವಸ್ಥೆಯ ವಿರುದ್ಧ ಆಕ್ರೋಶ ಹುಟ್ಟಬೇಕು. ನಮ್ಮ ತೆರಿಗೆ ಹಣವನ್ನು ಏಕೆ ದುರ್ಬಳಕೆ ಮಾಡುತ್ತಿದ್ದೀರೆಂದು ಪ್ರಶ್ನಿಸಬೇಕು. ಎಲ್ಲಿವರೆಗೂ ಯುವಜನರು ಸಿಡಿದೇಳುವುದಿಲ್ಲವೋ ಅಲ್ಲಿವರೆಗೆ ವ್ಯವಸ್ಥೆ ಹಿಗೆಯೇ ಇರುತ್ತದೆ. ಯುವಜನರು ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು’ ಎಂದು ಸಲಹೆ ನೀಡಿದರು.

'ನಗರದಲ್ಲಿ ಸಂಚಾರ ದಟ್ಟಣೆ ಮುಕ್ತಗೊಳಿಸಲು, ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು, ಶುದ್ಧ ಕುಡಿಯುವ ನೀರು ಪೂರೈಸಲು ಹಾಗೂ ವ್ಯವಸ್ಥಿತ ಚರಂಡಿ ವ್ಯವಸ್ಥೆ ಹೊಂದಲು ಯೋಜನೆಗಳು ರೂಪುಗೊಳ್ಳಬೇಕು. ಆದರೆ, ಹಣ ಹೇಗೆ ಕೊಳ್ಳೆ ಹೊಡೆಯಬಹುದೆನ್ನುವುದರ ಮೇಲೆ ಯೋಜನೆಗಳು ರೂಪುಗೊಳ್ಳುತ್ತಿವೆ. ಪಾಲಿಕೆಗೆ ಆಯ್ಕೆಯಾಗುವ ಸದಸ್ಯರಲ್ಲಿ 100ಕ್ಕೂ ಹೆಚ್ಚು ಮಂದಿ ರಿಯಲ್‌ ಎಸ್ಟೇಟ್‌ ವ್ಯವಹಾರಸ್ಥರಾಗಿರುತ್ತಾರೆ. ಇವರಿಂದ ನಗರದ ಅಭಿವೃದ್ಧಿ ಹೇಗೆ ನಿರೀಕ್ಷಿಸುವುದು’ ಎಂದು ವಿಷಾದಿಸಿದರು.

‘ಬೆಂಗಳೂರು ನಗರ ಸಾಮರ್ಥ್ಯ ಮೀರಿ ಬೆಳೆದಿದೆ. ಸಿಂಗಪುರ ನಗರದ ಎರಡುಪಟ್ಟು ಜನಸಂಖ್ಯೆ ಹೊಂದಿದೆ. ‘ನಮ್ಮ ಮೆಟ್ರೊ’ ದಿನಕ್ಕೆ 3ರಿಂದ 4 ಲಕ್ಷ ಪ್ರಯಾಣಿಕರನ್ನು ಸಾಗಿಸುತ್ತಿದೆ ಎಂದೂ ಬೀಗುತ್ತಿದ್ದೇವೆ. ಈಗಾಗಲೇ ಮೂರು ವರ್ಷ ತಡವಾಗಿರುವ ಮೆಟ್ರೊ ಯೋಜನೆಯಲ್ಲಿ ಇನ್ನೂ ಮೂರು ಬೋಗಿಗಳ ರೈಲುಗಳೇ ಸಂಚರಿಸುತ್ತಿವೆ. ಹೆಚ್ಚುವರಿ ಮೂರು ಬೋಗಿ ಜೋಡಣೆಗೆ ಮೀನಮೇಷ ನಡೆಯುತ್ತಿದೆ. ಪ್ರತಿ ದಿನ 50ರಿಂದ 60 ಲಕ್ಷ ಜನರಿಗೆ ಪ್ರಯಾಣ ಸೌಲಭ್ಯ ಒದಗಿಸಬೇಕಾದರೆ ಕನಿಷ್ಠ 10ರಿಂದ 15 ಬೋಗಿಗಳ ರೈಲು ಸಂಚರಿಸಬೇಕಿತ್ತು. ಆದರೆ, ಇಂಥ ಸವಲತ್ತು ಒದಗಿಸುವಂತೆ ನಮ್ಮ ಮೆಟ್ರೊ ನಿಲ್ದಾಣಗಳನ್ನು ರೂಪಿಸಿಲ್ಲ’ ಎಂದು ದೂರಿದರು.

‘ಪ್ರತಿ ನಾಗರಿಕರ ರಕ್ಷಣೆ ಸರ್ಕಾರದ ಜವಾಬ್ದಾರಿ. ಆದರೆ, ಇತ್ತೀಚೆಗೆ ಪತ್ರಕರ್ತೆ ಗೌರಿ ಲಂಕೇಶ್‌ ಬರ್ಬರ ಹತ್ಯೆಯಾಗಿದ್ದನ್ನು ನೋಡಿದರೆ ರಕ್ಷಣೆ ಎಲ್ಲಿದೆ? ಎನ್ನುವಂತಾಗಿದೆ. ಜನರಿಗೆ ರಕ್ಷಣೆ ಕೊಡಬೇಕಾದ, ಸಂಚಾರ ದಟ್ಟಣೆ ನಿಯಂತ್ರಿಸಬೇಕಾದ ಪೊಲೀಸರಲ್ಲಿ ಶೇ 30ರಷ್ಟು ಸಿಬ್ಬಂದಿಯನ್ನು ಗಣ್ಯರ ಭದ್ರತಾ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ಮೊದಲು ಈ ವ್ಯವಸ್ಥೆ ತಪ್ಪಬೇಕು. ಎಲ್ಲ ನಾಗರಿಕರಿಗೂ ಸಮಾನ ರಕ್ಷಣೆ ಸಿಗಬೇಕು’ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಡಾ.ಶ್ರೀನಿವಾಸ್‌ ಮಾತನಾಡಿ, ‘ನಗರದಲ್ಲಿ ಮೂಲನಿವಾಸಿಗಳು ಕಡಿಮೆ ಇದ್ದಾರೆ. ಹೊರಗಿನಿಂದ ಬಂದವರೇ ಹೆಚ್ಚಿದ್ದಾರೆ. ವಿದ್ಯಾವಂತರ ಸಂಖ್ಯೆ ಹೆಚ್ಚಿದಷ್ಟೂ ನೈರ್ಮಲ್ಯ ಮರೆಯಾಗುತ್ತಿದೆ. ಕಸವಿಲೇವಾರಿ ವೈಜ್ಞಾನಿಕವಾಗಿ ನಡೆಯದೆ ‘ಗಾರ್ಡನ್‌ ಸಿಟಿ’ ಹೆಸರು ಹೋಗಿ ‘ಗಾರ್ಬೆಜ್‌ ಸಿಟಿ’ಯ ಅಪಖ್ಯಾತಿ ಗಳಿಸುತ್ತಿದೆ’ ಎಂದರು

ಐಐಎಸ್‌ಸಿ ಸ್ಟೂಡೆಂಟ್‌ ಕೌನ್ಸಿಲ್‌ ಸಲಹೆಗಾರ ಡಾ.ಸತೀಶ್‌ ವಾಸು ಕೈಲಾಶ್‌ ಮಾತನಾಡಿ, ‘ಹೆಚ್ಚುತ್ತಿರುವ ಮಾಲಿನ್ಯ ಮತ್ತು ಒತ್ತಡದ ಬದುಕಿನಿಂದ ಮುಕ್ತವಾಗಲು ಸರಳ ಜೀವನ ಶೈಲಿ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT