ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18ರವರೆಗೆ ಮಳೆ ಮುಂದುವರಿಕೆ: ಹವಾಮಾನ ಇಲಾಖೆ ಮುನ್ಸೂಚನೆ

Last Updated 14 ಅಕ್ಟೋಬರ್ 2017, 20:18 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ 18ರವರೆಗೆ ಮೋಡ ಕವಿದ ವಾತಾವರಣ, ಗುಡುಗು ಸಹಿತ ಮಳೆ ಮುಂದುವರಿಯುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

‘ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದ ಕೆಲವು ಭಾಗಗಳಲ್ಲಿ ಮೇಲ್ಮೈ ಸುಳಿಗಾಳಿ ಪ್ರಭಾವದಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಎಂಡಿಸಿ) ವಿಜ್ಞಾನಿ ಎಸ್‌.ಎಸ್‌.ಎಂ. ಗವಾಸ್ಕರ್‌ ತಿಳಿಸಿದರು.

‘ಮೂರ್ನಾಲ್ಕು ವರ್ಷಗಳಿಂದ ಮುಂಗಾರು ದುರ್ಬಲವಾಗಿತ್ತು. ಹಾಗಾಗಿ ಈ ಪ್ರಮಾಣದಲ್ಲಿ ಮಳೆಯಾಗಿರಲಿಲ್ಲ. ಅಂಕಿಅಂಶಗಳ ಪ್ರಕಾರ ಅಕ್ಟೋಬರ್‌ 1ರಿಂದ ಹಿಂಗಾರುಪ್ರಾರಂಭವಾಗುತ್ತದೆ. ಆದರೆ, ನೈಜವಾಗಿ ಅಕ್ಟೋಬರ್‌ 15ಕ್ಕೆ ಮುಂಗಾರು ಕ್ಷೀಣಿಸುತ್ತದೆ. ಆದರೆ, ಮಳೆ ಮಾರುತಗಳನ್ನು ಹೊತ್ತು ತರುವ ನೈರುತ್ಯದ ಗಾಳಿ ಇನ್ನೂ ಪ್ರಬಲವಾಗಿರುವುದರಿಂದ 18ರವರೆಗೆ ಮುಂಗಾರು ಮುಂದುವರಿಯುತ್ತದೆ.’

‘ನಂತರ ರಾಜ್ಯದಲ್ಲಿ ಹಿಂಗಾರು ಅವಧಿಯ ಮಳೆ ಪ್ರಾರಂಭವಾಗುತ್ತದೆ. ಹಿಂಗಾರು ಪ್ರಭಾವ ದಕ್ಷಿಣ ಭಾರತದ ಚೆನ್ನೈ, ಕರ್ನಾಟಕ, ಆಂಧ್ರಪ್ರದೇಶಗಳಲ್ಲಿ ಹೆಚ್ಚಿರುತ್ತದೆ. ರಾಜ್ಯದಲ್ಲಿ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗುತ್ತದೆ’ ಎಂದು ವಿವರಿಸಿದರು.

ಈ ಬಾರಿ ರಾಜ್ಯದಲ್ಲಿ ಮುಂಗಾರು ವಾಡಿಕೆಗಿಂತ ಅಧಿಕವಾಗಿದೆ. ಹಾಗೆಯೇ ಹಿಂಗಾರು ಸಹ ವಾಡಿಕೆಗಿಂತ ಹೆಚ್ಚಾಗಲಿದೆ ಎನ್ನುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

174 ಪ್ರವಾಹ ಪೀಡಿತ ಪ್ರದೇಶಗಳು: ‘ನಗರದಲ್ಲಿ 174 ಪ್ರದೇಶಗಳನ್ನು ಪ್ರವಾಹ ಪೀಡಿತ ಎಂದು ಗುರುತಿಸಲಾಗಿದೆ. ಎಲ್ಲಿ ಮಳೆ ಹಾನಿ ಹೆಚ್ಚಾಗುತ್ತದೆ ಎಂದು ಕಂದಾಯ ಅಧಿಕಾರಿಗಳು ನೀಡುವ ಮಾಹಿತಿ ಆಧರಿಸಿ ಸ್ಥಳಗಳನ್ನು ಗುರುತಿಸಲಾಗುತ್ತದೆ. ಈ ಬಾರಿ ಮಳೆಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಬಹುದು’ ಎಂದು ಮಾಹಿತಿ ನೀಡಿದರು.

‘ಪ್ರವಾಹ ಪ್ರದೇಶಗಳ ಮಳೆ ಮುನ್ಸೂಚನೆ, ಎಷ್ಟು ಮಳೆಯಾಗುತ್ತಿದೆ ಎನ್ನುವ ಆ ಕ್ಷಣದ ಮಾಹಿತಿಗಳನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ನಮ್ಮ ಕೇಂದ್ರದಿಂದ ನಿರಂತರವಾಗಿ ಸಂದೇಶ ಕಳುಹಿಸಲಾಗುತ್ತದೆ. ಆ ಮಾಹಿತಿಯನ್ನು ಆಧರಿಸಿ ಅವರು ತಕ್ಷಣ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ’ ಎಂದರು.

ಸಂಚಾರ ದಟ್ಟಣೆ: ಶನಿವಾರ ಬೆಳಿಗ್ಗೆ ಒಂದು ತಾಸು ಸುರಿದ ಮಳೆಗೆ ನಗರದ ಕಾವೇರಿ ಜಂಕ್ಷನ್‌, ಶಿವಾನಂದ ಸರ್ಕಲ್‌, ಮಿನರ್ವ, ಜೆ.ಸಿ.ರಸ್ತೆ, ಟಿನ್‌ ಫ್ಯಾಕ್ಟರಿ, ಮ್ಯೂಸಿಯಂ ರಸ್ತೆ, ಗುರುಗುಂಟೆ ಪಾಳ್ಯ ಜಂಕ್ಷನ್‌, ಗೂಡ್‌ಶೆಡ್‌ ರಸ್ತೆಗಳಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಯಿತು. 

ಆಡುಗೋಡಿಯ ಸೋಮೇಶ್ವರ ದೇವಸ್ಥಾನ ರಸ್ತೆಯ ಮೈಕ್ರೊಲ್ಯಾಂಡ್‌ ಜಂಕ್ಷನ್‌ ಬಳಿ ಹಾಗೂ ಕೆ.ಸಿ. ಜನರಲ್‌ ಆಸ್ಪತ್ರೆ ಒಳಭಾಗದಲ್ಲಿ ಮರ ಬಿದ್ದಿದೆ. ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದರು.

ಶುಕ್ರವಾರದಿಂದ ಮಳೆಯ ಬೆಳವಣಿಗೆಗಳು

* ಸಂಜೆ 5.30ಕ್ಕೆ ಮಳೆ ಪ್ರಾರಂಭ

* ರಾತ್ರಿ 7 ಗಂಟೆವರೆಗೆ ಸತತ ಮಳೆ

* ರಾಜಾಜಿನಗರ, ಕುರುಬರಹಳ್ಳಿ ಸುತ್ತಮುತ್ತಲ ಪ್ರದೇಶಗಳು ಜಲಾವೃತ

* 4 ಕಡೆ ಮನೆಗಳ ಗೋಡೆ ಕುಸಿತ

* ನವರಂಗ್‌ ಬಳಿ ಸುಮಾರು 50 ವಾಹನಗಳು ಜಲಾವೃತ

* 3 ಸಾವು, ಇಬ್ಬರು ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ

* ನಾಯಂಡಹಳ್ಳಿ ಬಳಿ ರಸ್ತೆಯಲ್ಲಿ ಸುಮಾರು 5 ಅಡಿ ನಿಂತಿದ್ದ ನೀರಿನಲ್ಲಿ ಮುಳುಗುತ್ತಿದ್ದ ಕಾರಿನಲ್ಲಿದ್ದ ಮಹಿಳೆಯ ರಕ್ಷಣೆ

* ಶನಿವಾರ ಬೆಳಿಗ್ಗೆ 11.30ಕ್ಕೆ ಮತ್ತೆ ಮಳೆ

* ಬೆಳಿಗ್ಗೆ 10ಕ್ಕೆ ಮೃತರ ಮತ್ತು ಕೊಚ್ಚಿ ಹೋದವರ ಮನೆಗೆ ಮುಖ್ಯಮಂತ್ರಿ ಭೇಟಿ

* ಐದಾರು ಸ್ಥಳಗಳಲ್ಲಿ ಸಂಚಾರ ದಟ್ಟಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT