ಬುಧವಾರ, ಸೆಪ್ಟೆಂಬರ್ 18, 2019
22 °C

ನಗರದಲ್ಲಿ ಮತ್ತೆ ಭಾರಿ ಮಳೆ

Published:
Updated:
ನಗರದಲ್ಲಿ ಮತ್ತೆ ಭಾರಿ ಮಳೆ

ಬೆಂಗಳೂರು: ಶುಕ್ರವಾರ ಭಾರಿ ಅನಾಹುತ ಸೃಷ್ಟಿಸಿದ ಮಳೆಯು ಶನಿವಾರ ರಾತ್ರಿಯೂ ನಗರದ ಹಲವೆಡೆ ಸುರಿದಿದೆ.

ರಾಜಾಜಿನಗರ, ವಿಜಯನಗರ, ಹೊಸಕೆರೆಹಳ್ಳಿ, ಕೆಂಗೇರಿ, ರಾಜರಾಜೇಶ್ವರಿನಗರ, ಅಶೋಕನಗರ, ಕೋರಮಂಗಲ, ಮಡಿವಾಳ, ಎಲೆಕ್ಟ್ರಾನಿಕ್‌ ಸಿಟಿ, ಬೊಮ್ಮನಹಳ್ಳಿ, ಎಚ್.ಎಸ್‌.ಆರ್‌ ಲೇಔಟ್‌, ಬಿ.ಟಿ.ಎಂ ಲೇಔಟ್‌, ಎಂ.ಜಿ.ರಸ್ತೆ, ಶಿವಾಜಿನಗರ ಹಾಗೂ ಸುತ್ತಮುತ್ತ ಭಾರಿ ಮಳೆಯಾಯಿತು.

ಶಿವಾನಂದ ವೃತ್ತದ ರೈಲ್ವೆ ಕೆಳಸೇತುವೆ, ಓಕಳಿಪುರ ಸೇತುವೆ, ಮೆಜೆಸ್ಟಿಕ್‌ ರೈಲ್ವೆ ಕೆಳ ಸೇತುವೆಗಳಲ್ಲಿ 3 ಅಡಿಯಷ್ಟು ನೀರು ಹರಿಯಿತು. ಕೆಲ ಸವಾರರು ಅದರಲ್ಲೇ ವಾಹನಗಳನ್ನು ಓಡಿಸಿಕೊಂಡು ಹೋದರು. ಹಲವು ವಾಹನಗಳ ಎಂಜಿನ್‌ನಲ್ಲಿ ನೀರು ಹೋಗಿ ಅವುಗಳು ರಸ್ತೆ ಮಧ್ಯೆಯೇ ಕೆಟ್ಟು ನಿಂತವು.

ಕೋರಮಂಗಲ, ನೃಪತುಂಗ ರಸ್ತೆ, ಹಳೇ ಮದ್ರಾಸ್‌ ರಸ್ತೆ, ರಾಜಾಜಿನಗರ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ, ಯಶವಂತಪುರ, ಹೊಸೂರು ರಸ್ತೆಯ ಡೈರಿ ವೃತ್ತ, ಲಾಲ್‌ಬಾಗ್‌ ಮುಖ್ಯರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿತ್ತು.

ಅಧಿಕಾರಿ ವಿರುದ್ಧ ಕ್ರಮ ಆಗಿಲ್ಲ ಏಕೆ: ಎಚ್.ಡಿ.ಕೆ

‘ಮಳೆಯಿಂದ ಬೆಂಗಳೂರಿನಲ್ಲಿ ಆಗಿರುವ ಅನಾಹುತಕ್ಕೆ ಈತನಕ ಒಬ್ಬ ಅಧಿಕಾರಿ ವಿರುದ್ಧ ಕ್ರಮ ಆಗಿಲ್ಲ ಏಕೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ಬೆಂಗಳೂರಿನ ಈ ಸ್ಥಿತಿಗೆ ರಾಜಕೀಯ ‌ಪಕ್ಷಗಳು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾರಣ.‌ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ.‌ ಹಣದ ಆಸೆಗೆ ಜನರ ಜೀವನದೊಂದಿಗೆ ಚೆಲ್ಲಾಟವಾಡಬಾರದು’ ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಕೋಟಿ ಕೋಟಿ ಖರ್ಚು ಮಾಡಿದ್ದರೂ ಬೆಂಗಳೂರಿನ ಅಭಿವೃದ್ಧಿ ಮರೀಚಿಕೆಯಾಗಿದೆ. ಆಸ್ಪತ್ರೆಗೆ ಬಂದು ನನ್ನ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಔದಾರ್ಯವನ್ನು ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಜನತೆಯತ್ತಲೂ ತೋರಬೇಕು’ ಎಂದಿದ್ದಾರೆ.

ಮಳೆ ವರದಿ ಕೇಳಿದ ಹೈಕಮಾಂಡ್‌

ಭಾರಿ ಮಳೆಯಿಂದ ನಗರದಲ್ಲಿ ಉಂಟಾಗಿರುವ ಹಾನಿ ಮತ್ತು ಸಾವು ನೋವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತೆಗೆದುಕೊಂಡ ಪರಿಹಾರ ಕ್ರಮಗಳ ಕುರಿತು ತಕ್ಷಣ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ನೀಡಿದೆ.

ನಗರದಲ್ಲಿರುವ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಶನಿವಾರ ದೂರವಾಣಿ ಮೂಲಕ ಸಂಪರ್ಕಿಸಿದ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ, ‘ಮಳೆ ಸಂದರ್ಭದಲ್ಲಿ ಮುನ್ನೆಚ್ಚರಿಕೆಯಾಗಿ ಸರ್ಕಾರ ತೆಗೆದುಕೊಂಡ ಕ್ರಮಗಳೇನು ಮತ್ತು ಜನರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಏನೆಲ್ಲ ಮಾಡಬಹುದು’ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಜೊತೆ ವೇಣುಗೋಪಾಲ್‌ ಮಾತುಕತೆ ನಡೆಸಿದ್ದು, ಶನಿವಾರ ರಾತ್ರಿಯೇ ರಾಹುಲ್‌ಗೆ ವರದಿ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Post Comments (+)