ಅರ್ಚಕನ ಮನವಿ ಫಲಿಸಿದ್ದಿದ್ದರೆ...

ಮಂಗಳವಾರ, ಜೂನ್ 18, 2019
26 °C

ಅರ್ಚಕನ ಮನವಿ ಫಲಿಸಿದ್ದಿದ್ದರೆ...

Published:
Updated:
ಅರ್ಚಕನ ಮನವಿ ಫಲಿಸಿದ್ದಿದ್ದರೆ...

ಬೆಂಗಳೂರು: ‘ಕಾಲುವೆಗೆ ಹಾಕಿರುವ ಸ್ಲ್ಯಾಬ್‌ಗಳನ್ನು ದುರಸ್ತಿಗೊಳಿಸುವಂತೆ ಅರ್ಚಕ ವಾಸುದೇವ ಭಟ್‌ ಅವರು ಸ್ಥಳೀಯ ಪಾಲಿಕೆ ಸದಸ್ಯರಿಗೆ ಮನವಿ ಮಾಡುತ್ತಿದ್ದರು. ಆದರೆ, ದುರಸ್ತಿಗೊಳಿಸಿರಲಿಲ್ಲ. ಆ ಸ್ಲ್ಯಾಬ್‌ಗಳೇ ಅವರನ್ನು ಬಲಿಪಡೆದವು.’

‘ಮನೆ ಖಾಲಿ ಮಾಡುತ್ತೇವೆ. ಮುಂಗಡವಾಗಿ ನೀಡಿರುವ ₹25 ಸಾವಿರ ವಾಪಸ್‌ ಕೊಡಿ ಎಂದು ಮೂರು ತಿಂಗಳ ಹಿಂದೆಯೇ ಮನೆಯ ಮಾಲೀಕರಿಗೆ ಹೇಳಿದ್ದೆವು. ಅವರು ಮುಂಗಡ ಕೊಟ್ಟಿದ್ದರೆ ಮನೆ ಖಾಲಿ ಮಾಡಿಕೊಂಡು ಹೋಗುತ್ತಿದ್ದವು. ಈ ಅನಾಹುತ ಸಂಭವಿಸುತ್ತಿರಲಿಲ್ಲ.’

ಕುರುಬರಹಳ್ಳಿಯ 17ನೇ ಅಡ್ಡರಸ್ತೆಯಲ್ಲಿರುವ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ನಿಂಗಮ್ಮ ಅವರ ಪತಿ ಶಿವದೊಡ್ಡಯ್ಯ ಹಾಗೂ ಇದೇ ಬಡಾವಣೆಯ ವರಸಿದ್ಧಿ ವಿನಾಯಕ ಹಾಗೂ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಬಳಿ ಕಾಲುವೆಯಲ್ಲಿ ಕೊಚ್ಚಿ ಹೋದ ಅರ್ಚಕ ವಾಸುದೇವ ಭಟ್‌ ಸಂಬಂಧಿ ಶ್ರೀಕಾಂತ್‌ ಅವರ ನೋವಿನ ನುಡಿಗಳಿವು.

‘ನನಗೆ ಶೋಭಾ, ಮೀನಾಕ್ಷಿ, ಪುಷ್ಪಾ ಎಂಬ ಹೆಣ್ಣು ಮಕ್ಕಳಿದ್ದಾರೆ. ದೊಡ್ಡ ಮಗಳು ಶೋಭಾ ಗಾರ್ಮೆಂಟ್ಸ್‌ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಹೋಗಿದ್ದಳು. ಎರಡನೇ ಮಗಳು ಮೀನಾಕ್ಷಿ, ಅವಳ ಮಕ್ಕಳಾದ ಅಭಿಷೇಕ್‌, ವರ್ಷಿಣಿ ಹಾಗೂ ಕೊನೆಯ ಮಗಳು ಪುಷ್ಪಾ ಮತ್ತು ಹೆಂಡತಿ ನಿಂಗಮ್ಮ ಮನೆಯಲ್ಲಿದ್ದೆವು. ಸಂಜೆ 7 ಗಂಟೆ ಸುಮಾರಿಗೆ ರಾಜಕಾಲುವೆಯ ನೀರು ಮನೆಗೆ ನುಗ್ಗಿತ್ತು. ಕೂಡಲೇ ಎಲ್ಲರೂ ಮನೆಯಿಂದ ಹೊರಗೆ ಬರಲು ಮುಂದಾದೆವು. ನಾನು ಮೊಮ್ಮಕ್ಕಳನ್ನು ಎತ್ತಿಕೊಂಡಿದ್ದೆ. ಆದರೆ, ನೀರಿನ ರಭಸಕ್ಕೆ ನಿಂಗಮ್ಮ, ಪುಷ್ಪಾ ಕೊಚ್ಚಿ ಹೋದರು’ ಎಂದು ಶಿವದೊಡ್ಡಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಂಡತಿ, ಮಗಳು ನೀರುಪಾಲಾಗುತ್ತಿದ್ದಂತೆ ಸಹಾಯಕ್ಕೆ ಬರುವಂತೆ ನೆರೆಹೊರೆಯವರನ್ನು ಕೂಗಿದೆವು. ಆದರೆ, ಎಲ್ಲರೂ ತಮ್ಮ ಜೀವ ಉಳಿಸಿಕೊಳ್ಳುವ ಧಾವಂತದಲ್ಲಿದ್ದರು’ ಎಂದರು.

‘ಮನೆ ಬದಲಾಯಿಸಿ ಬೇರೆಡೆ ಹೋಗಲು ನಿರ್ಧರಿಸಿದ್ದೆವು. ಮನೆ ಮಾಲೀಕರಾದ ಷಣ್ಮುಗಪ್ಪ, ಸುಶೀಲಮ್ಮ ಅವರಿಗೆ ಮುಂಗಡ ನೀಡುವಂತೆ ಮನವಿ ಮಾಡಿದ್ದೆವು. ಮತ್ತೊಬ್ಬರು ಬಾಡಿಗೆಗೆ ಬಂದರೆ, ಅವರು ನೀಡುವ ಮುಂಗಡ ಹಣವನ್ನೇ ನಿಮಗೆ ಕೊಡುತ್ತೇವೆ ಎಂದಿದ್ದರು. ಹೀಗಾಗಿ, ಇಲ್ಲೇ ಇದ್ದೆವು’ ಎಂದು ಹೇಳಿದರು.

ಮನೆ ಮಾಲೀಕರೊಂದಿಗೆ ಜಗಳ

ಮುಂಗಡ ಹಣ ಪಾವತಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಶಿವದೊಡ್ಡಯ್ಯ ಹಾಗೂ ಷಣ್ಮುಗಪ್ಪ ಅವರ ಕಡೆಯವರ ನಡುವೆ ವಾಗ್ವಾದ ನಡೆಯಿತು. ‘ಮುಂಗಡ ಹಣ ಕೊಟ್ಟಿದ್ದರೆ ಈ ಅನಾಹುತವೇ ನಡೆಯುತ್ತಿರಲಿಲ್ಲ. ನಿಮ್ಮಿಂದಲೇ ಈ ದುರ್ಘಟನೆ ನಡೆದಿದೆ’ ಎಂದು ಶಿವದೊಡ್ಡಯ್ಯ ಕಡೆಯವರು ದೂರಿದರು. ‘ಆದಷ್ಟು ಬೇಗ ಮುಂಗಡ ಹಣ ಪಾವತಿಸುತ್ತೇನೆ’ ಎಂದು ಷಣ್ಮುಗಪ್ಪ ಹೇಳಿದರು. ಗಲಾಟೆ ತಾರಕಕ್ಕೆ ಏರುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಮನೆ ಕುಸಿತ

ಕುರುಬರಹಳ್ಳಿಯ 17ನೇ ಅಡ್ಡರಸ್ತೆಯಲ್ಲೇ ತಿರುಪತಿ ಎಂಬುವರ ಮನೆ ಕುಸಿದಿದೆ. ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಆಗಿದೆ.

‘ನಾವು ಗಂಗಾವತಿ ತಾಲ್ಲೂಕಿನವರು. ಆರು ತಿಂಗಳ ಹಿಂದೆ ಇಲ್ಲಿಗೆ ಬಂದೆವು. ನಾನು, ನನ್ನ ಹೆಂಡತಿ ಕೂಲಿ ಕೆಲಸ ಮಾಡುತ್ತೇವೆ. ಶುಕ್ರವಾರ ಇಬ್ಬರೂ ಕೆಲಸಕ್ಕೆ ಹೋಗಿ ಬಂದಿದ್ದೆವು. ಈ ವೇಳೆಗಾಗಲೇ ಮನೆಗೆ ನೀರು ನುಗ್ಗಿದ್ದರಿಂದ ಗೋಡೆ ಕುಸಿದಿತ್ತು. ಟ್ರಂಕ್‌ನಲ್ಲಿ ₹10 ಸಾವಿರ ಇಟ್ಟಿದ್ದೆವು. ಆ ಟ್ರಂಕ್‌ ನೀರಿನಲ್ಲಿ ಕೊಚ್ಚಿ ಹೋಗಿದೆ. ಬಟ್ಟೆಗಳೂ ಹಾಳಾಗಿವೆ’ ಎಂದು ತಿರುಪತಿ ಅಳಲು ತೋಡಿಕೊಂಡರು.

ಗೃಹೋಪಯೋಗಿ ವಸ್ತುಗಳಿಗೆ ಹಾನಿ:

ಕುರುಬರಹಳ್ಳಿಯ 17, 18, 19 ಅಡ್ಡರಸ್ತೆ, 21, 22, 23ನೇ ಮುಖ್ಯರಸ್ತೆಗಳ ಹತ್ತಾರು ಮನೆಗಳಿಗೆ ನೀರು ನುಗ್ಗಿತ್ತು. 8–10 ಅಡಿ ನೀರು ನಿಂತಿದ್ದರಿಂದ ಮನೆಗಳಲ್ಲಿದ್ದ ವಸ್ತುಗಳಿಗೆ ಹಾನಿ ಉಂಟಾಗಿದೆ.

‘ಮನೆಯಲ್ಲಿ 8 ಅಡಿ ನೀರು ನಿಂತಿತ್ತು. ಟಿ.ವಿ, ರೆಫ್ರಿಜರೇಟರ್‌, ಮಿಕ್ಸಿ, ವಾಷಿಂಗ್‌ ಮೆಷಿನ್‌ ಹಾಳಾಗಿವೆ. ದಿನಸಿ ವಸ್ತುಗಳು ನೀರುಪಾಲಾಗಿವೆ. ರಾತ್ರಿಯಿಂದ ಊಟ–ತಿಂಡಿಗಾಗಿ ಪಡಿಪಾಟಲು ಅನುಭವಿಸುವಂತಾಗಿದೆ’ ಎಂದು ಇಲ್ಲಿನ ಜೆ.ಸಿ.ನಗರದ 23ನೇ ಮುಖ್ಯರಸ್ತೆಯ ಪುಟ್ಟಣ್ಣ–ರಾಜಮ್ಮ ದಂಪತಿ ಅಳಲುತೋಡಿಕೊಂಡರು.

‘ರಾಜಕಾಲುವೆಯಲ್ಲಿ ಸುಮಾರು 10 ಅಡಿಯಷ್ಟು ಹೂಳು ತುಂಬಿಕೊಂಡಿದೆ. ಹೂಳು ತೆಗೆದಿದ್ದರೆ ನೀರು ಸರಾಗವಾಗಿ ಹರಿದು ಹೋಗುತ್ತಿತ್ತು. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ’ ಎಂದು ಮಂಜುನಾಥ್‌ ದೂರಿದರು.

‘ಮನೆಯಲ್ಲಿ ನಾನೊಬ್ಬನೇ ಇದ್ದೆ. ದಿಢೀರನೇ ನೀರು ನುಗ್ಗಿತ್ತು. ಏನು ಮಾಡಬೇಕು ಎಂಬುದು ತೋಚಲಿಲ್ಲ. ಕಂಪ್ಯೂಟರ್‌, ಟಿ.ವಿ, ರೆಫ್ರಿಜರೇಟರ್‌ ಹಾನಿಗೊಂಡಿವೆ’ ಎಂದು ಪ್ರಥಮ ಬಿ.ಕಾಂ ವಿದ್ಯಾರ್ಥಿ ಬೋಲೆನಾಥ್‌ ತಿಳಿಸಿದರು.

ಕಾರ್ಯಾಚರಣೆಗೆ ಸಿಬ್ಬಂದಿ ತೊಡಕು

ಶುಕ್ರವಾರ ರಾತ್ರಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ವಾಸುದೇವ ಭಟ್‌ ಅವರ ಪತ್ತೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡದ 12 ಮಂದಿ ಶೋಧ ಕಾರ್ಯ ನಡೆಸಿದ್ದರು. ಆದರೆ, ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ನಿಂಗಮ್ಮ ಹಾಗೂ ಪುಷ್ಪಾ ಅವರ ಶೋಧ ಕಾರ್ಯವನ್ನು ನಡೆಸಿರಲಿಲ್ಲ. ಸಿಬ್ಬಂದಿ ಕೊರತೆಯಿಂದಾಗಿ ಶೋಧ ಕಾರ್ಯ ನಡೆಸಿರಲಿಲ್ಲ. ಇವರ ಶೋಧ ಕಾರ್ಯವನ್ನು ಶನಿವಾರ ಬೆಳಿಗ್ಗೆಯಿಂದ ನಡೆಸಲಾಯಿತು.

‘ನಿಂಗಮ್ಮ ಹಾಗೂ ಪುಷ್ಪಾ ಅವರಿಗಾಗಿ ಎನ್‌ಡಿಆರ್‌ಎಫ್‌ನ ಎರಡು ತಂಡಗಳು ಬೆಳಿಗ್ಗೆಯಿಂದ ಸಂಜೆ 7ರವರೆಗೂ ಶೋಧ ಕಾರ್ಯ ನಡೆಸಿದವು. ಆದರೆ, ಈವರೆಗೂ ಪತ್ತೆಯಾಗಿಲ್ಲ. ಶೋಧ ಕಾರ್ಯಕ್ಕೆ ಹೆಲಿಕಾಪ್ಟರ್‌ ಬಳಸುವ ಕುರಿತು ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರ ಜತೆ ಮಾತುಕತೆ ನಡೆಸಿದೆವು. ಪ್ರತಿಕೂಲ ಹವಾಮಾನ ಇರುವುದರಿಂದ ಹೆಲಿಕಾಪ್ಟರ್‌ ಬಳಕೆ ಮಾಡಲಿಲ್ಲ’ ಎಂದು ಮೇಯರ್‌ ಆರ್‌.ಸಂಪತ್‌ ರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊಚ್ಚಿ ಹೋಗಿದ್ದ ಆಟೊ, ಬೈಕ್‌

ಕುರುಬರಹಳ್ಳಿಯ ಶಿವದೊಡ್ಡಯ್ಯ ಮನೆ ಬಳಿ ವಾಸವಾಗಿದ್ದ ಗುರುಬಸವ ಅವರ ದ್ವಿಚಕ್ರವಾಹನ ಹಾಗೂ ರಾಜಕಾಲುವೆಯ ಸೇತುವೆ ಮೇಲೆ ನಿಲ್ಲಿಸಿದ್ದ ವಿನಾಯಕ ಎಂಬುವರ ಆಟೊ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಹುಡುಕಾಟದ ನಂತರ ಎರಡೂ ವಾಹನಗಳು ಸಿಕ್ಕಿವೆ. ಬೈಕ್‌ ಹಾಗೂ ಆಟೊ ಸಂಪೂರ್ಣವಾಗಿ ಜಖಂಗೊಂಡಿವೆ.

‘ಮನೆಗೆ ನೀರು ನುಗ್ಗುತ್ತಿದ್ದಂತೆ ಮೂವರು ಮಕ್ಕಳನ್ನು ಎತ್ತಿಕೊಂಡು ಎತ್ತರದ ಪ್ರದೇಶಕ್ಕೆ ಓಡಿ ಬಂದೆ. ಈ ವೇಳೆ ಬೈಕ್‌ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಕಾವೇರಿನಗರದ ಪೈಪ್‌ಲೈನ್‌ ಬಳಿ ಬೆಳಿಗ್ಗೆ ಪತ್ತೆಯಾಯಿತು. ಬೈಕನ್ನು ಏಳು ತಿಂಗಳ ಹಿಂದೆ ಖರೀದಿಸಿದ್ದೆ’ ಎಂದು ಗುರುಬಸವ ತಿಳಿಸಿದರು.

‘ನಾಲ್ಕು ವರ್ಷಗಳ ಹಿಂದೆ ಖರೀದಿಸಿದ್ದ ಆಟೊವನ್ನು ತಮ್ಮ ಬಾಲರಾಜ್‌ ಓಡಿಸುತ್ತಿದ್ದ. ಸಂಜೆ ಕೆಲಸ ಮುಗಿಸಿದ್ದ ಆತ, ಆಟೊವನ್ನು ಸೇತುವೆ ಮೇಲೆ ನಿಲ್ಲಿಸಿದ್ದ. ಆರ್‌.ಸಿ ಬುಕ್‌, ವಿಮೆ, ಚಾಲನಾ ಪರವಾನಗಿ ಸೇರಿ ಎಲ್ಲ ಮೂಲ ದಾಖಲೆಗಳು ಆಟೊದಲ್ಲೇ ಇದ್ದವು. ಅವು ನೀರಿನಲ್ಲಿ ಕೊಚ್ಚಿ ಹೋಗಿವೆ’ ಎಂದು ವಿನಾಯಕ ಅಳಲು ತೋಡಿಕೊಂಡರು.

‘ನ.10ರಂದು ಮದುವೆ ಇತ್ತು’

‘ಕುರುಬರಹಳ್ಳಿಯ 18ನೇ ಅಡ್ಡರಸ್ತೆಯಲ್ಲಿ ಮನೆ ಗೋಡೆ ಕುಸಿದು ಮೃತಪಟ್ಟ ಶಂಕರಪ್ಪ ಹಾಗೂ ಕಮಲಮ್ಮ ದಂಪತಿಗೆ ಮೂರು ಜನ ಮಕ್ಕಳು. ಹಿರಿಯ ಪುತ್ರಿ ಭವಾನಿ ಅವರಿಗೆ ಮದುವೆಯಾಗಿದೆ. ದ್ವಿತೀಯ ಪುತ್ರಿ ವಾಣಿ ಅವರಿಗೆ ವಾರದ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು. ನವೆಂಬರ್‌ 10ರಂದು ಅವರ ಮದುವೆ ಇತ್ತು. ಮಗ ಗಿರೀಶ್‌ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಶಂಕರಪ್ಪ ಗಾರೆ ಕೆಲಸ ಮಾಡುತ್ತಿದ್ದರು’ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ತಿಳಿಸಿದರು.

‘ಕಾಲುವೆಯ ನೀರು ಮನೆಗೆ ನುಗ್ಗಿತ್ತು. ನೀರನ್ನು ಹೊರಗೆ ಹಾಕುವ ಕೆಲಸದಲ್ಲಿ ಮನೆ ಸದಸ್ಯರು ನಿರತರಾಗಿದ್ದರು. ಈ ವೇಳೆ ಕಾಲುವೆಯ ಕಡೆಯಿಂದ ರಭಸವಾಗಿ ಬಂದಿದ್ದರಿಂದ ಗೋಡೆ ಕುಸಿದಿದೆ. ಅದರಡಿ ಶಂಕರಪ್ಪ ಹಾಗೂ ಕಮಲಮ್ಮ ಸಿಲುಕಿದ್ದರು. ಅವರನ್ನು ರಕ್ಷಿಸಲು ಗಿರೀಶ್‌ ಮುಂದಾಗಿದ್ದ. ಆದರೆ, ಸಾಧ್ಯವಾಗಲಿಲ್ಲ’ ಎಂದು ವಿವರಿಸಿದರು.

‘ದಂಪತಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನವರು. 30 ವರ್ಷಗಳಿಂದ ಇಲ್ಲಿ ವಾಸವಾಗಿದ್ದರು. ದಂಪತಿಯ ಶವಗಳನ್ನು ಮುಳಬಾಗಿಲಿಗೆ ಕೊಂಡೊಯ್ಯಲಾಗಿದೆ’ ಎಂದರು.

ಅರ್ಚಕ ವಾಸುದೇವ ಭಟ್‌ ಶವ ಪತ್ತೆ

ಕುರುಬರಹಳ್ಳಿಯ ಎಸ್‌.ವಿ.ಕೆ ಬಡಾವಣೆಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ವಾಸುದೇವ ಭಟ್‌ ಅವರ ಶವ ಕಾವೇರಿ ನಗರದಲ್ಲಿ ಪತ್ತೆಯಾಗಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್‌) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡದ (ಎಸ್‌ಡಿಆರ್‌ಎಫ್‌) 12 ಮಂದಿ ವಾಸುದೇವ ಅವರಿಗಾಗಿ ರಾತ್ರಿಯಿಂದ ಶೋಧ ಕಾರ್ಯ ನಡೆಸಿದ್ದರು. ಬೆಳಿಗ್ಗೆ ಅವರ ಶವ ದೊರೆಯಿತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ವಾಸುದೇವ ಅವರ ಮನೆಯಲ್ಲಿ ಶೋಕ ಮಡುಗಟ್ಟಿತ್ತು. ಕುಟುಂಬದ ಸದಸ್ಯರು ಕಂಬನಿ ಮಿಡಿದರು. ದೊಡ್ಡಬಳ್ಳಾಪುರದವರಾದ ಅವರು 11 ವರ್ಷಗಳಿಂದ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ತಾಯಿ ರಾಧಾ, ಪತ್ನಿ ರೂಪಾ, ಪುತ್ರ ಅನಂತಕೃಷ್ಣ ಪ್ರಣೀತ್‌ (5), ಪುತ್ರಿ ಪ್ರೇರಣಾ (2) ಇದ್ದಾರೆ. ಅವರ ತಮ್ಮ ರಾಘವ್‌ ಅಮೆರಿಕದಲ್ಲಿ ಅರ್ಚಕರಾಗಿದ್ದಾರೆ.

‘ವಾಸಣ್ಣ ಶುಕ್ರವಾರ ಸಂಜೆ 6 ಗಂಟೆಗೆ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿದ್ದರು. ಈ ವೇಳೆಗೆ ಜೋರು ಮಳೆ ಬಂತು. ನೀರು ದೇವಸ್ಥಾನದ ಆವರಣದಲ್ಲಿ ಸಂಗ್ರಹಗೊಂಡಿತ್ತು. ಈ ವೇಳೆ ಮನೆಗೆ ಹೋದ ಅವರು ವಾಪಸ್‌ ಬಂದರು. ಪೈಪ್‌ನಲ್ಲಿ ಕಸ ಕಟ್ಟಿಕೊಂಡಿದ್ದ ಕಸವನ್ನು ಕೋಲಿನ ಸಹಾಯದಿಂದ ಹೊರತೆಗೆಯುತ್ತಿದ್ದರು. ಈ ವೇಳೆ, ಅವರು ನಿಂತಿದ್ದ ಜಾಗದಲ್ಲಿ ಹಾಕಿದ್ದ ಸ್ಲ್ಯಾಬ್‌ಗಳು ಕುಸಿದು ಬಿದ್ದವು. ಅವರು ನೀರಿನಲ್ಲಿ ಕೊಚ್ಚಿ ಹೋದರು. ಇದನ್ನು ನೋಡಿ ಆತಂಕದಿಂದ ಜೋರಾಗಿ ಕೂಗಿದೆ. ಆದರೆ, ಯಾರಿಗೂ ಸರಿಯಾಗಿ ಕೇಳಿಸಲಿಲ್ಲ’ ಎಂದು ದೇವಸ್ಥಾನದಲ್ಲಿ ಹೂವು ಮಾರುವ ಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಸುದೇವ ಅವರ ತಮ್ಮ ರಾಘವ್‌ ಅಮೆರಿಕದಿಂದ ಭಾನುವಾರ ಬೆಳಿಗ್ಗೆ ಬರಲಿದ್ದಾರೆ. ಬಳಿಕ ಅಂತ್ಯಕ್ರಿಯೆ ನಡೆಸುತ್ತೇವೆ’ ಎಂದು ವಾಸುದೇವ ಅವರ ಅಕ್ಕನ ಗಂಡ ಶ್ರೀಕಾಂತ್‌ ಹೇಳಿದರು.

ಸ್ಥಳೀಯರ ಆಕ್ರೋಶ:

‘ಕಾಲುವೆಯ ಸ್ಲ್ಯಾಬ್‌ಗಳನ್ನು ಸರಿಪಡಿಸುವಂತೆ ಪಾಲಿಕೆ ಸದಸ್ಯ ಶಿವರಾಜ್‌ ಅವರಿಗೆ ಮನವಿ ಸಲ್ಲಿಸಿದ್ದೆವು. ಆದರೆ, ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕಾಲುವೆಗೆ ಕಾಂಕ್ರೀಟ್‌ ತಡೆಗೋಡೆ ಇಲ್ಲ. ಕಳಪೆ ಕಾಮಗಾರಿಯಿಂದಾಗಿ ಕಾಲುವೆಯು ಅಲ್ಲಲ್ಲಿ ಕುಸಿದಿದೆ’ ಎಂದು ಸ್ಥಳೀಯ ನಿವಾಸಿ ರವಿರಾಜ್‌ ದೂರಿದರು.

ಮೃತರ ಮನೆಗಳಿಗೆ ಮುಖ್ಯಮಂತ್ರಿ ಭೇಟಿ

ಮಳೆ ಅನಾಹುತದಿಂದ ಮೃತಪಟ್ಟ ಶಂಕರಪ್ಪ, ಕಮಲಮ್ಮ, ವಾಸುದೇವ ಹಾಗೂ ನೀರಿನಲ್ಲಿ ಕೊಚ್ಚಿ ಹೋದ ನಿಂಗಮ್ಮ ಮತ್ತು ಪುಷ್ಪಾ ಅವರ ಅವರ ಮನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

‘ಮಳೆ ಅನಾಹುತದಿಂದ ಮೃತಪಟ್ಟ ಕುಟುಂಬದವರ ಒಬ್ಬ ಸದಸ್ಯರಿಗೆ ಸರ್ಕಾರಿ ಕೆಲಸ ಹಾಗೂ ತಲಾ ₹5 ಲಕ್ಷ ಪರಿಹಾರ ನೀಡುತ್ತೇವೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ರಾಜ್ಯದಲ್ಲಿ ಈ ವರ್ಷ ಉತ್ತಮ ಮಳೆಯಾಗಿದ್ದು, ಬರ ನಿವಾರಣೆ ಆಗಿದೆ. ಆದರೆ, ಮಳೆಯಿಂದಾಗಿ ಕೆಲವರು ಪ್ರಾಣ ಕಳೆದುಕೊಂಡದ್ದು ದುರದೃಷ್ಟಕರ ಸಂಗತಿ’ ಎಂದರು.

ಜೆಡಿಎಸ್‌ನಿಂದ ಪರಿಹಾರ: ‘ಮಳೆಯಿಂದಾಗಿ ಮೃತಪಟ್ಟವರಿಗೆ ಜೆಡಿಎಸ್‌ ಪಕ್ಷದ ವತಿಯಿಂದ ತಲಾ ₹1 ಲಕ್ಷ ಪರಿಹಾರ ನೀಡುತ್ತೇವೆ’ ಎಂದು ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ತಿಳಿಸಿದರು.

‘ನಗರದಲ್ಲಿ ಶುಕ್ರವಾರ ರಾತ್ರಿ ಬಿದ್ದ ಭಾರಿ ಮಳೆಯಿಂದ ಈ ಅನಾಹುತ ಸಂಭವಿಸಿದೆ. ಈ ಹಿಂದೆ ಇಂತಹ ಮಳೆಯನ್ನು ನಾನು ಕಂಡಿರಲಿಲ್ಲ. ನಿರೀಕ್ಷೆಗಿಂತ ಅಧಿಕ ಮಳೆಯಾಗಿದೆ. ಮೃತರ ಕುಟುಂಬದ ಸದಸ್ಯರಿಗೆ ಕೆಲಸ ಕೊಡಬೇಕು’ ಎಂದು ಎಚ್‌.ಡಿ.ದೇವೇಗೌಡ ಒತ್ತಾಯಿಸಿದರು.

‘ವೆಂಕಟೇಶ್ವರ ದೇವಸ್ಥಾನದ ಬಳಿ ಪಾದಚಾರಿ ಮಾರ್ಗ ಕುಸಿದಿದೆ. ಕಾಲುವೆಯ ಕಾಮಗಾರಿ ಕಳಪೆಯಾಗಿಲ್ಲ’ ಎಂದರು.

‘ಸಾವಿನಲ್ಲಿ ರಾಜಕೀಯ ಮಾಡಬಾರದು. ಬಿಜೆಪಿಯವರು ಈ ವಿಷಯದಲ್ಲಿ ಭಾರಿ ಮಾತನಾಡುತ್ತಿದ್ದಾರೆ. ಅವರೇನೂ ಸತ್ಯಹರಿಶ್ಚಂದ್ರರಲ್ಲ. ಎಲ್ಲರೂ ಒಂದೇ’ ಎಂದು ಕಿಡಿಕಾರಿದರು.

ಬಿಜೆಪಿಯಿಂದಲೂ ಪರಿಹಾರ: ಮೃತರ ಕುಟುಂಬದ ಸದಸ್ಯರಿಗೆ ತಲಾ ₹1 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ ತಲಾ ₹50 ಸಾವಿರ ಪರಿಹಾರವನ್ನು ಬಿಜೆಪಿ ವತಿಯಿಂದ ನೀಡಲಾಯಿತು.

‘ರಾಜಕಾಲುವೆ ಹಾಗೂ ಚರಂಡಿಗಳ ಹೂಳು ತೆಗೆದಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಸರ್ಕಾರವು ಜನರ ಪಾಲಿಗೆ ಬದುಕಿದ್ದೂ ಸತ್ತಂತಾಗಿದೆ. ಬಿಬಿಎಂಪಿ ಕಮಿಷನ್‌ ಏಜೆಂಟ್‌ ಆಗಿದೆ. ಕಪ್ಪುಪಟ್ಟಿಯಲ್ಲಿ ಸೇರಿರುವ ಗುತ್ತಿಗೆದಾರರಿಗೆ ರಾಜಕಾಲುವೆಗಳ ನಿರ್ಮಾಣ ಕಾಮಗಾರಿಗಳನ್ನು ನೀಡಲಾಗಿದೆ. ಶೇ 25ರಷ್ಟು ಹೆಚ್ಚುವರಿಯಾಗಿ ಹಣ ಕೊಟ್ಟು ಲೂಟಿ ಮಾಡುವುದರಲ್ಲಿ ಬಿಬಿಎಂಪಿ ನಿರತವಾಗಿದೆ’ ಎಂದು ಯಡಿಯೂರಪ್ಪ ಆರೋಪಿಸಿದರು.

‘ಮೃತರ ಕುಟುಂಬಗಳಿಗೆ ಪರಿಹಾರದ ಜತೆಗೆ ಉದ್ಯೋಗವನ್ನೂ ನೀಡಿ, ಅವರು ನೆಮ್ಮದಿಯಾಗಿ ಬದುಕುವ ವ್ಯವಸ್ಥೆ ಮಾಡಬೇಕು. ಹಾಳಾಗಿರುವ ಮನೆಗಳನ್ನು ಕೆಡವಿ, ಹೊಸದಾಗಿ ಕಟ್ಟಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ಈ ವೇಳೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಶಾಸಕ ಆರ್‌.ಅಶೋಕ ಇದ್ದರು.

ಎರಡು ಪುನರ್ವಸತಿ ಕೇಂದ್ರ ಆರಂಭ

‘ಕುರುಬರಹಳ್ಳಿಯಲ್ಲಿ ಮನೆ ಕಳೆದುಕೊಂಡಿರುವ ಹಾಗೂ ಮನೆಗಳಿಗೆ ನೀರು ನುಗ್ಗಿ ತೊಂದರೆ ಅನುಭವಿಸುತ್ತಿರುವ ಸಂತ್ರಸ್ತರಿಗಾಗಿ ಎರಡು ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ’ ಎಂದು ಪಾಲಿಕೆ ಸದಸ್ಯ ಶಿವರಾಜ್‌ ತಿಳಿಸಿದರು.

‘ಕಂದಾಯ ಅಧಿಕಾರಿಗಳು ಸಂತ್ರಸ್ತರ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಅವರಿಗೆ ಬಟ್ಟೆ, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.

‘ಬಿಬಿಎಂಪಿ ನಿರ್ಲಕ್ಷ್ಯವೇ ಅನಾಹುತಕ್ಕೆ ಕಾರಣ’

‘ನಗರದಲ್ಲಿ ಸಂಭವಿಸುತ್ತಿರುವ ಮಳೆ ಅನಾಹುತಗಳಿಗೆ ಬಿಬಿಎಂಪಿಯ ನಿರ್ಲಕ್ಷ್ಯವೇ ಕಾರಣ’ ಎಂದು ಸೋಷಿಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) (ಎಸ್‌ಯುಸಿಐ) ಆರೋಪಿಸಿದೆ.

‘ಮಳೆಗಾಲಕ್ಕೂ ಮುನ್ನವೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದರೆ ಈ ಅನಾಹುತಗಳನ್ನು ತಡೆಯಲು ಸಾಧ್ಯವಿತ್ತು. ಆದರೆ, ಬಿಬಿಎಂಪಿ ಹಾಗೂ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ಅಮಾಯಕ ಜೀವಗಳು ಪ್ರಾಣ ಬಿಡುವಂತಾಗಿದೆ. ಸರ್ಕಾರವು ಮೃತರ ಕುಟುಂಬದವರಿಗೆ ಅಲ್ಪ ಮೊತ್ತದ ಪರಿಹಾರ ನೀಡಿ ಜವಾಬ್ದಾರಿಯಿಂದ ನುಣಿಚಿಕೊಳ್ಳುತ್ತಿದೆ. ಹತ್ತಾರು ಜೀವಗಳು ಬಲಿಯಾದರೂ ಬಿಬಿಎಂಪಿಯು ಸಮಗ್ರ ಕಾರ್ಯ ಯೋಜನೆಯನ್ನು ಸಿದ್ಧಪಡಿಸಿಲ್ಲ’ ಎಂದು ಎಸ್‌ಯುಸಿಐ ಜಿಲ್ಲಾ ಸಮಿತಿಯ ಕಾರ್ಯದರ್ಶಿ ವಿ.ಜ್ಞಾನಮೂರ್ತಿ ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.

ನಾಯಂಡಹಳ್ಳಿ ಬಳಿ ಮಹಿಳೆ ರಕ್ಷಣೆ

ಮೈಸೂರು ರಸ್ತೆಯ ನಾಯಂಡಹಳ್ಳಿ ಮೆಟ್ರೊ ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ನೀರಿನಲ್ಲಿ ಮುಳುಗಡೆಯಾಗುತ್ತಿದ್ದ ಮಹಿಳೆಯೊಬ್ಬರನ್ನು ನಾಲ್ವರು ರಕ್ಷಣೆ ಮಾಡಿದ್ದಾರೆ.

ಮಹಿಳೆಯು ಕಾರನ್ನು ಓಡಿಸಿಕೊಂಡು ಮೆಟ್ರೊ ನಿಲ್ದಾಣದ ಬಳಿ ಬಂದಿದ್ದರು. ಈ ವೇಳೆ ಆ ಪ್ರದೇಶ ಜಲಾವೃತಗೊಂಡಿತ್ತು. ಕಾರು ಮುಳುಗಡೆ ಆಗುವುದನ್ನು ಅರಿತ ಅವರು, ನೆರವಿಗಾಗಿ ಕೂಗಿದ್ದಾರೆ. ಅಲ್ಲೇ ಇದ್ದ ನಾಲ್ವರು, ಕಾರಿನ ಬಾಗಿಲು ತೆಗೆದು ಮಹಿಳೆಯನ್ನು ರಕ್ಷಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry