ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧುಮ್ಮಿಕ್ಕುವ ಕಿರು ಜಲಪಾತಗಳು...

Last Updated 15 ಅಕ್ಟೋಬರ್ 2017, 5:15 IST
ಅಕ್ಷರ ಗಾತ್ರ

ಅಮೀನಗಡ ಸಮೀಪದ ಸಿದ್ಧನಕೊಳ್ಳ ಹಾಗೂ ದಮ್ಮೂರ ಜಲಪಾತಗಳು ಮೈತುಂಬಿ ಹರಿಯುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿವೆ. ಬರಗಾಲ ಕಾರಣದಿಂದ ಜೀವ ಸೆಲೆಯನ್ನು ಕಳೆದುಕೊಂಡಿದ್ದ ಕಿರು ಜಲಪಾತಗಳು ಈ ಬಾರಿ ನಿರಂತರವಾಗಿ ಸುರಿದ ವರ್ಷ ಧಾರೆಯಿಂದ ಭರ್ತಿಯಾಗಿ ಮೋಹಕವಾಗಿ ಕಂಗೊಳಿಸುತ್ತಿವೆ.

ಸುಮಾರು ವರ್ಷಗಳಿಂದ ಮಳೆ ಯಿಲ್ಲದೆ ಕಂಗಾಲಾಗಿದ್ದ ಜನತೆಗೆ ಹರ್ಷವನ್ನುಂಟು ಮಾಡಿದೆ. ಪ್ರವಾಸಿಗರು ಹಾಗೂ ಜಿಲ್ಲೆಯ ಜನ ತಂಡೋಪತಂಡವಾಗಿ ಆಗಮಿಸು ತ್ತಿದ್ದು, ಜಲಪಾತದ ಜಲಧಾರೆಯಲ್ಲಿ ಮಿಂದು ಉಲ್ಲಾಸಪಡುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಹಳ್ಳ, ಕೆರೆ, ನದಿಗಳು ತುಂಬಿ ಹರಿಯುತ್ತಿವೆ. ದಮ್ಮೂರಿನ ಬೆಟ್ಟದ ಮೇಲಿರುವ ದಮ್ಮೂರು ದಿಡಗಿನ ಜಲಪಾತದ ಸೌಂದರ್ಯ ಸವಿಯುವುದೇ ಅದೃಷ್ಟ. ದಮ್ಮೂರಿನಲ್ಲಿ ದಿಡಗಿನ ಬಸವೇಶ್ವರ ದೇವಸ್ಥಾನವಿದೆ. ಈ ದೇವಾಲಯದ ಬಳಿ ಬೃಹದಾಕಾರದ ಆಲದ ಮರವಿದೆ.

ಬೆಟ್ಟಕ್ಕೆ ಹೊಂದಿಕೊಂಡಿರುವ ಆಲದಮರದಿಂದ ನೀರು ಸುರಿಯುತ್ತಿರುವುದು ಜಲಪಾತದಂತೆ ಕಂಡುಬರುತ್ತದೆ. ಜುಳು ಜುಳು ನೀರಿನ ಕಲರವ ಪ್ರವಾಸಿಗರ ಮನ ತಣಿಸುತ್ತದೆ.
ಸಿದ್ಧನಕೊಳ್ಳದಲ್ಲಿ ಬೆಟ್ಟದ ಮೇಲಿಂದ ಧುಮ್ಮಿಕ್ಕುವ ಜಲಧಾರೆಯಲ್ಲಿ ಯುವಕರು ನಲಿದಾಡುವ ದೃಶ್ಯ ಸಾಮಾನ್ಯವಾಗಿರುತ್ತದೆ.

ಇಲ್ಲಿನ ಇನ್ನೊಂದು ವಿಶೇಷ ವೆಂದರೆ, ಸಿದ್ಧನಕೊಳ್ಳ ನೀರಿನಲ್ಲಿ ಕುಣಿದಾಡಿದ ನಂತರ ಹಸಿವು ನೀಗಿಸಿಕೊಳ್ಳಲು ದಾಸೋಹಮಠದಲ್ಲಿ ಪ್ರಸಾದ ವ್ಯವಸ್ಥೆ ಇರುತ್ತದೆ. ಇನ್ನು ಸುತ್ತಮುತ್ತಲಿನ ಜನತೆ ಬುತ್ತಿ ಕಟ್ಟಿಕೊಂಡು ಬಂದು ಸ್ನಾನ ಪೂರೈಸಿ ಊಟಮಾಡಿಕೊಂಡು ಸಾಯಂಕಾಲ ವರೆಗೆ ಇದ್ದು ಪ್ರಕೃತಿಯನ್ನು ಸವಿದು ತೆರಳುತ್ತಾರೆ.

‘ಬತ್ತಿ ಹೋಗಿದ್ದ ಸಣ್ಣ ಪುಟ್ಟ ಜಲಪಾತಗಳು ಸಂಭ್ರಮದಿಂದ ನಳನಳಿಸುತ್ತಿವೆ. ಪ್ರಕೃತಿ ಪ್ರೇಮಿಗಳಿಗೆ ಸಂತಸ ಉಂಟುಮಾಡಿದೆ. ಐತಿಹಾಸಿಕ ಐಹೊಳೆಯಿಂದ 4 ಕಿ.ಮೀ. ದೂರದಲ್ಲಿ ಸಿದ್ಧನಕೊಳ್ಳ ಮತ್ತು 8 ಕಿ.ಮೀ. ದೂರದಲ್ಲಿ ದಮ್ಮೂರ ಇದೆ. ಇಲ್ಲಿಗೆ ಬರುವ ರಸ್ತೆ ಅಭಿವೃದ್ಧಿಪಡಿಸಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತದೆ’ ಎನ್ನುತ್ತಾರೆ ಛಾಯಾಗ್ರಾಹಕ ಶಂಕರ ಮಂಡಿ.
‌ಶಿ.ಗು.ಹಿರೇಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT