ಭಾನುವಾರ, ಸೆಪ್ಟೆಂಬರ್ 15, 2019
23 °C

ಭಾರಿ ಮಳೆ: ಬೆಳೆ ಹಾನಿ, 25 ಮನೆ ಕುಸಿತ

Published:
Updated:
ಭಾರಿ ಮಳೆ: ಬೆಳೆ ಹಾನಿ, 25 ಮನೆ ಕುಸಿತ

ಅಮೀನಗಡ: ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮುಂಗಾರಿನಲ್ಲಿ ಬಿತ್ತಿದ್ದ ಮಳೆಗಳಿಗೆ ಹಾನಿ ಉಂಟಾಗಿದೆ. ಹೋಬಳಿಯಲ್ಲಿ ಸುಮಾರು 25 ಮನೆಗಳು ಕುಸಿದಿವೆ. ಹಲವು ಗ್ರಾಮಗಳಲ್ಲಿ ರಸ್ತೆಗಳು ಹಾಳಾಗಿವೆ. ಗುಂಡಿಗಳಲ್ಲಿ ನೀರು ನಿಂತಿದ್ದು ಸವಾರರಿಗೆ ತುಂಬಾ ಪ್ರಯಾಸವಾಗಿದೆ.

ಸಮೀಪದ ತಳ್ಳಿಕೇರಿಯಲ್ಲಿ 3, ಗೊರಜನಾಳದಲ್ಲಿ 6, ಕುಣಿಬೆಂಚಿ, ಸೂಳೇಬಾವಿಯಲ್ಲಿ 3 ಮನೆಗಳು ಕುಸಿದಿವೆ. ರಕ್ಕಸಗಿ ಹಾಗೂ ಅಮೀನಗಡ ಪಟ್ಟಣದಲ್ಲಿ 5 ಮನೆಗಳಿಗೆ ಹಾನಿಯಾಗಿದೆ. ಅಮೀನಗಡ ಪಟ್ಟಣದಲ್ಲಿ ಐದು ಮನೆಗಳಲ್ಲಿ ಕೈಮಗ್ಗ ಸರ್ತಳಕ್ಕೆ ನೀರು ನುಗ್ಗಿ ಸಾಕಷ್ಟು ಹಾನಿ ಸಂಭವಿಸಿದೆ. ಸ್ಥಳಕ್ಕೆ ಭೇಟಿ ನೀಡಿದ ಉಪತಹಶೀಲ್ದಾರ್ ಎಸ್.ವಿ.ಕುಂದರಗಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಜಾತ ತತ್ರಾಣಿ ಪರಿಶೀಲಿಸಿದರು.

‘ಬಹುತೇಕ ಮನೆಗಳುಕಪ್ಪು ಮಣ್ಣಿನಿಂದ ನಿರ್ಮಿತವಾಗಿವೆ. ಮಳೆಯಿಂದಾಗಿ ಕೆಲ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ, ಪರಿಹಾರ ನೀಡಬೇಕು’ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸುಮಾರು ಐದು ವರ್ಷಗಳಿಂದ ಆವರಿಸಿದ್ದ ಅನಾವೃಷ್ಟಿಯಿಂದಾಗಿ ರೈತರು ಕಂಗಾಲಾಗಿದ್ದರು. ಆದರೆ ಈ ಮಳೆ ಸಂತಸ ತಂದಿದೆಯಾದರೂ ಅತಿವೃಷ್ಟಿಯ ಲಕ್ಷಣ ಗೋಚರಿಸುತ್ತಿದೆ. ಕಳೆದ ಮುಂಗಾರಿನಲ್ಲಿ ಅಲ್ಪಸ್ವಲ್ಪ ಬಿದ್ದ ಮಳೆಯಿಂದ ರೈತರು ಈರುಳ್ಳಿ, ಶೇಂಗಾ, ಸೂರ್ಯಕಾಂತಿ ಹತ್ತಿ ಬಿತ್ತಿದ್ದು ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿದ್ದರು. ಆದರೆ ಕಳೆದ 15 ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಮುಂಗಾರು ಪೈರು ಅತಿಯಾದ ತೇವಾಂಶದಿಂದ ಕಳೆಗುಂದುವ ಸಾಧ್ಯತೆಯಿದೆ. ಕಳೆದೊಂದು ವಾರದಿಂದ ಕೆಲವೆಡೆ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ.

ನೀರಾವರಿ ಬೆಳೆಗೆ ಆಪತ್ತು: ತೇವಾಂಶ ಹೆಚ್ಚಳದಿಂದ ಮುಂಗಾರು ಹಂಗಾಮಿನಲ್ಲಿ ನೀರಾವರಿ ಮೂಲಕ ಬಿತ್ತನೆ ಮಾಡಿದ್ದ ಉಳ್ಳಾಗಡ್ಡಿ, (ಈರುಳ್ಳಿ), ಶೇಂಗಾ, ಸೂರ್ಯಕಾಂತಿ, ಸಜ್ಜೆ, ಹತ್ತಿ ಇಳುವರಿ ಕುಂಠಿತವಾಗಿದೆ. ಸದ್ಯ ಹಿಂಗಾರಿನ ಗೋದಿ, ಕಡಲೆ, ಜೋಳ, ಮೆಕ್ಕೆ ಜೋಳ ಬಿತ್ತನೆಗೆ ಮಳೆ ಅಡ್ಡಿ ಉಂಟು ಮಾಡಿದೆ. ಇದರಿಂದ ಕೈರವಾಡಗಿ, ಇಲ್ಯಾಳ, ಹಿರೇಮಳಗಾವಿ, ಚಿಕ್ಕಮಳಗಾವಿ, ನಿಂಬಲಗುಂದಿ, ರಾಮಥಾಳ, ಬೇನಾಳ, ರಕ್ಕಸಗಿ ಸೇರಿದಂತೆ ಬಹುತೇಕ ಗ್ರಾಮದ ರೈತರಿಗೆ ಬಿತ್ತನೆ ಅಸಾಧ್ಯವಾಗಿದೆ.

‘ಕಳೆದ ನಾಲ್ಕು ವರ್ಷದಾಗ ಇಂಥ ಮಳಿನ ನೋಡಿದ್ದಿಲ್ರೀ. ಬಿತ್ತಾಕ ಬಿಡವಲ್ದ್ರೀ. ಹಿಂಗ್ ಇನ್ನೊಂದು ವಾರ್ ಮಳೆಯಾತಂದ್ರ ತಂಪ್ ಹೆಚ್ಚಾಗಿ ಮುಂಗಾರನ್ಯಾಗ ಬಿತ್ತಿದ ಬಳೆ ಹಾಳಾಗಿ ಹೋಗೆತ್ರೀ. ಸಾಲಾ ಮಾಡಿ ಬಿತ್ತಿವ್ರಿ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ರೈತ ಇಮಾಮಸಾಬ್ ಮುಜಾವರ.

ಮಳೆಯಿಂದ ಭಾಗಶಃ ಮತ್ತು ಸಂಪೂರ್ಣ ಬಿದ್ದ ಮನೆಗಳ ಸಮೀಕ್ಷೆ ಹಾಗೂ ಬೆಳೆ ಹಾನಿ ಕುರಿತು ಜಂಟಿಯಾಗಿ ಸಮಿಕ್ಷೆ ನಡೆಸಿ ವರದಿ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಪತಹಶೀಲ್ದಾರ್ ಎಸ್.ವಿ.ಕುಂದರಗಿ ತಿಳಿಸಿದ್ದಾರೆ.

Post Comments (+)