ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೆ ಮಹಾದೇವಿ ಗಡಿಪಾರಿಗೆ ಆಗ್ರಹ

Last Updated 15 ಅಕ್ಟೋಬರ್ 2017, 5:46 IST
ಅಕ್ಷರ ಗಾತ್ರ

ಬಳ್ಳಾರಿ:‘ ಹಾನಗಲ್ಲು ಕುಮಾರ ಶಿವಯೋಗಿಗಳ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಮಾತೆ ಮಹಾದೇವಿ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು’ ಎಂದು ಶ್ರೀಪುಟ್ಟರಾಜ ಕವಿಗವಾಯಿಗಳ ಸೇವಾ ಸಂಘದ ಅಧ್ಯಕ್ಷ ಬಂಡ್ರಾಳ್‌ ಮೃತ್ಯುಂಜಯಸ್ವಾಮಿ ಆಗ್ರಹಿಸಿದರು.

‘ಚಿತ್ರದುರ್ಗದಲ್ಲಿ ಅ.6ರಂದು ಮಾತನಾಡಿರುವ ಮಾತೆ ಮಹಾದೇವಿ, ಮುರುಘಾಮಠದ ಪೀಠಾಧಿಪತಿಯಾಗುವ ಅವಕಾಶ ದೊರಕದೇ ಇದ್ದುದರಿಂದ ಕುಮಾರ ಶಿವಯೋಗಿಗಳು 104ರಲ್ಲಿ ವೀರಶೈವ ಮಹಾಸಭಾವನ್ನು ಸ್ಥಾಪಿಸಿ ಸಮಾಜದಲ್ಲಿ ಗೊಂದಲ ಮೂಡಿಸಿದರು. ಈಗಿನ ವೀರಶೈವ ಲಿಂಗಾಯತ ಬಿಕ್ಕಟ್ಟಿಗೂ ಅವರೇ ಕಾರಣ ಎಂದಿರುವುದು ಸರಿಯಲ್ಲ’ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಮುರುಘಾಮಠದ ಪೀಠಾಧಿಪತಿ ಆಯ್ಕೆ ವೇಳೆ ಜಯದೇವ ಶ್ರೀಗಳ ಜೊತೆಗೆ ಸ್ಪರ್ಧೆಯಲ್ಲಿದ್ದ ಕುಮಾರ ಶಿವಯೋಗಿಗಳು ಬೇಸರಗೊಂಡು ಲಿಂಗಾಯತಕ್ಕೆ ಸಂಬಂಧವಿಲ್ಲದ ವೀರಶೈವ ಪದ ಇಟ್ಟುಕೊಂಡು ಮಹಾಸಭಾ ಸ್ಥಾಪಿಸಿದರು. ಅದರ ಹಿಂದೆ ಒಳ್ಳೆಯ ಉದ್ದೇಶ ಇರಲಿಲ್ಲ ಎಂದಿರುವ ಮಹಾದೇವಿ ಅವರ ಬುದ್ಧಿಭ್ರಮಣೆಯಾಗಿದೆ. ರಾಜ್ಯ ಸರ್ಕಾರ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು’ ಎಂದು ಆಗ್ರಹಿಸಿದರು.

‘ಶಿವಯೋಗಿಗಳು ವೀರಶೈವ ವಿದ್ಯಾವರ್ಧಕ ಸಂಘ, ಬಸವೇಶ್ವರ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ ಎಲ್ಲ ಸಮುದಾಯಗಳ ಏಳ್ಗೆಗಾಗಿ ದುಡಿದರು. ಗದುಗಿನಲ್ಲಿ ವೀರೇಶ್ವರ ಪುಣ್ಯಾಶ್ರಮ ಸ್ಥಾಪಿಸಿ ಲಕ್ಷಾಂತರ ಅಂಧರಿಗೆ ನೆರವಾದರು. ಅವರು ಎಂದಿಗೂ ಯಾವುದೇ ಪೀಠದ ಅಧ್ಯಕ್ಷರಾಗುವ ಆಸೆ ಹೊಂದರಲಿಲ್ಲ’ ಎಂದು ಪ್ರತಿಪಾದಿಸಿದರು.
ಸಂಘದ ಮುಖಂಡರಾದ ಎಚ್‌.ಎಂ.ಅಮರೇಶ, ಶಿವಲಿಂಗಯ್ಯಶಾಸ್ತ್ರಿ, ಕೆ.ಶ್ರೀರಾಮುಲು, ಕೆಅಶೋಕ್‌, ಬಾಬುಲಾಲ್‌, ಮೇಟಿ ಪೊಂಪನಗೌಡ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT