ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂ ಕೃಷಿಯಲ್ಲಿ ಖುಷಿ ಕಂಡ ರವಿಕುಮಾರ ರಾಂಪೂರೆ

Last Updated 15 ಅಕ್ಟೋಬರ್ 2017, 6:02 IST
ಅಕ್ಷರ ಗಾತ್ರ

ಹುಮನಾಬಾದ್: ತಾಲ್ಲೂಕಿನ ನಂದಗಾಂವ ಗ್ರಾಮದ ರೈತ ರವಿಕುಮಾರ ರಾಂಪೂರೆ ಅವರು ಹೂ ಕೃಷಿಯಲ್ಲಿ ಖುಷಿ ಕಂಡುಕೊಂಡಿದ್ದಾರೆ. ಉತ್ತಮ ಆದಾಯ ಗಳಿಸಿ, ನೆಮ್ಮದಿಯ ಜೀವನ ನಡೆಸಿದ್ದಾರೆ.

ರವಿಕುಮಾರ ಅವರು ತಮ್ಮ ಒಟ್ಟು ಜಮೀನಿನ 10 ಎಕರೆಯಲ್ಲಿ ಕಬ್ಬು, ಇತರೆ ಭೂಮಿಯಲ್ಲಿ ತರಕಾರಿ ಬೆಳೆಯುತ್ತಿದ್ದರು. ಆದರೆ ಸೂಕ್ತ ಬೆಲೆ ಸಿಗದ ಕಾರಣ ಪರ್ಯಾಯ ಮಾರ್ಗ ಕಂಡುಕೊಳ್ಳಲು ಪ್ರಯತ್ನಿಸಿದರು.

ಕಲಬುರ್ಗಿ ಜಿಲ್ಲೆ ಪಟವಾದ ಗ್ರಾಮದಲ್ಲಿ ತಮ್ಮ ಸಂಬಂಧಿಕರ ತೋಟದಲ್ಲಿ ಹೂವಿನ ಬೇಸಾಯ ಮಾಡಿದ್ದನ್ನು ರವಿಕುಮಾರ ಗಮನಿಸಿದರು. ತರಕಾರಿ ಬದಲಿಗೆ 4 ಎಕರೆ ಭೂಮಿಯಲ್ಲಿ ಚಂಡು ಹೂವು, ಸೇವಂತಿ, ಗುಲಾಬಿ, ಸುಗಂಧ ರಾಜಾ ಸೇರಿ ಐದಕ್ಕೂ ಅಧಿಕ ಜಾತಿ ಹೂವಿನ ಗಿಡಗಳನ್ನು ಬೆಳೆಸಲು ಮುಂದಾದರು. ಎರಡು ವರ್ಷಗಳ ಹೂ ಕೃಷಿಯಿಂದ ಖುಷಿಯಾಗಿದ್ದಾರೆ.

‘ಮಳೆಗಾಲದಲ್ಲಿ ಎಲ್ಲ ಹೂವುಗಳ ದರ ಪ್ರತಿ ಕೆಜಿ ಗೆ ₹50–60 ಮಾತ್ರ. ಆಗಾಗ ಬೇಡಿಕೆಗೆ ಅನುಗುಣವಾಗಿ ಕೆಲ ಹೂಗಳ ದರದಲ್ಲಿ ಸ್ವಲ್ಪ ಏರಳಿತ ಆಗುತ್ತದೆ. ಒಟ್ಟಾರೆ ಸರಾಸರಿ ₹ 50 ಕೆಜಿ ಲೆಕ್ಕ ಹಾಕಿದರೂ ನಿತ್ಯ ಕನಿಷ್ಟ 75ರಿಂದ100 ಕೆಜಿ ಹೂವು ಕಟಾವು ಮಾಡಿ ನಿತ್ಯ ಬಸ್‌ ಮೂಲಕ ಕಲಬುರ್ಗಿಗೆ ಸಾಗಿಸುತ್ತೇವೆ’ ಎಂದು ಕೃಷಿಕ ರವಿಕುಮಾರ ರಾಂಪೂರೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿತ್ಯ ₹ 5 ಸಾವಿರದವರೆಗೆ ಹೂವುಗಳನ್ನು ಮಾರುತ್ತೇವೆ. ಹೀಗೆ ತಿಂಗಳಿಗೆ 25 ರಿಂದ 30 ಕ್ವಿಂಟಲ್‌ ಹೂವು ಉತ್ಪನ್ನವಾದರೆ ಪ್ರತಿ ತಿಂಗಳು ₹ 1 ಲಕ್ಷ ಹಣ ಬರುತ್ತದೆ. ಕೀಟ ನಾಶಕ, ಕಳೆ ತೆಗೆಯುವುದು, ರಾಸಾಯನಿಕ ಗೊಬ್ಬರ, ಹೂ ಕೀಳುವ ಕೂಲಿಯಾಳು ಸೇರಿ ತಿಂಗಳಿಗೆ ₹ 25ಸಾವಿರ ಖರ್ಚಾದರೂ ₹75ಸಾವಿರದವರೆಗೆ ಆದಾಯ ಬರುತ್ತದೆ’ ಎಂದು ಅವರು ತಿಳಿಸಿದರು.

‘ತೋಟದಲ್ಲಿ ಕೊಳವೆ ಬಾವಿಯಿದೆ. ಡ್ರಿಪ್‌ ಪದ್ಧತಿಯಿಂದ ಗಿಡಗಳಿಗೆ ನೀರುಣಿಸುತ್ತೇವೆ. ಕೀಟಗಳ ನಿಯಂತ್ರಣಕ್ಕೆ ಕೀಟನಾಶಕ ಔಷಧಿ ಸಿಂಪಡಿಸುತ್ತೇವೆ. ಅಗತ್ಯ ಬಿದ್ದಾಗ ರಸಗೊಬ್ಬರ ನೀಡುತ್ತೇವೆ. ಒಮ್ಮೆ ಅಳವಡಿಸಲಾದ ಗಿಡಗಳು 4ರಿಂದ 5ವರ್ಷ ಹೂವು ಬಿಡುತ್ತವೆ. ಹೀಗಾಗಿ ಪದೆಪದೆ ಗಿಡ ನೆಡುವ ಕಷ್ಟ ಇರುವುದಿಲ್ಲ’ ಎಂದು ಅವರು ವಿವರಿಸಿದರು.

‘ಬೇರೆ ಬೇರೆ ಬೆಳೆಗಳ ಕೃಷಿಗೆ ಹೋಲಿಸಿದರೆ ಹೂ ಕೃಷಿಯಿಂದ ಅಷ್ಟೇನೂ ಹಾನಿಯಿಲ್ಲ. ಹೆಚ್ಚೇನೂ ಸಮಸ್ಯೆಯಿಲ್ಲದೇ ನೆಮ್ಮದಿಯಿಂದ ಹೂ ಕೃಷಿ ನಡೆಸಬಹುದು’ ಎಂದು ಅವರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT