ಬರಗಿ ರಸ್ತೆಯಲ್ಲಿ ಭರಪೂರ ಗುಂಡಿ!

ಸೋಮವಾರ, ಮೇ 27, 2019
29 °C

ಬರಗಿ ರಸ್ತೆಯಲ್ಲಿ ಭರಪೂರ ಗುಂಡಿ!

Published:
Updated:

ಗುಂಡ್ಲುಪೇಟೆ: ಈ ರಸ್ತೆಯುದ್ದಕ್ಕೂ ಗುಂಡಿಗಳದ್ದೇ ಸಾಲು. ಯಾವುದು ರಸ್ತೆ, ಯಾವುದು ಗುಂಡಿ ಎಂಬುದನ್ನು ಪತ್ತೆ ಹಚ್ಚುವುದು ಸಾಹಸವೇ ಸರಿ. ಮಳೆಯಾದರೆ ರಸ್ತೆಗೂ, ಕೆರೆಗೂ ವ್ಯತ್ಯಾಸವಿಲ್ಲದಂತೆ ನೀರು ತುಂಬಿಕೊಳ್ಳುತ್ತದೆ. ದ್ವಿಚಕ್ರ ವಾಹನ ಸವಾರರಂತೂ ಸರ್ಕಸ್‌ ನಡೆಸುವುದು ಅನಿವಾರ್ಯ. ಪಟ್ಟಣದಿಂದ 10 ಕಿ.ಮೀ. ದೂರದಲ್ಲಿರುವ ಬರಗಿ ಗ್ರಾಮದ ಮುಖ್ಯರಸ್ತೆಯ ದುಃಸ್ಥಿತಿ ಇದು.

ಬರಗಿ ಗ್ರಾಮ ಕಾಡಂಚಿನ ಅನೇಕ ಗ್ರಾಮಗಳಿಗೆ ಕೊಂಡಿಯಾಗಿದೆ. ಶಿಕ್ಷಣ ಕೇಂದ್ರಗಳು, ಕೃಷಿ, ಸ್ಥಳೀಯ ಸಂಸ್ಥೆಗಳ ಸೇವೆಗಳ ಕಾರಣ ತಾಲ್ಲೂಕಿನಲ್ಲಿ ಪ್ರಮುಖ ಗ್ರಾಮವಾಗಿಯೂ ಗುರುತಿಸಿಕೊಂಡಿದೆ. ಆದರೆ, ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಯ ಭಾಗ್ಯ ಕಂಡಿಲ್ಲ.

ಸಂಪೂರ್ಣ ಹದಗೆಟ್ಟಿರುವ ರಸ್ತೆ ಡಾಂಬರು ಕಾಣದೆ ವರ್ಷಗಳೇ ಕಳೆದಿವೆ. ಗುಂಡಿಗಳನ್ನು ಮುಚ್ಚುವ ಪ್ರಯತ್ನಕ್ಕೂ ಅಧಿಕಾರಿಗಳು ಮುಂದಾಗಿಲ್ಲ. ಗುಂಡಿಗಳನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಅನೇಕ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗಿದ್ದಾರೆ.

ಈ ಭಾಗದಲ್ಲಿ ವಾಹನ ಸಂಚಾರ ಹೆಚ್ಚಿದೆ. ಕಾಡಂಚಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬಸ್‌ಗಳು, ಶಾಲೆಗೆ ತೆರಳುವ ಮಕ್ಕಳು, ರೈತರು, ಉದ್ಯೋಗಸ್ಥರು ನಿತ್ಯ ಓಡಾಡುತ್ತಾರೆ.

ದುಬಾರಿ ಬಾಡಿಗೆ: ಪಟ್ಟಣದಿಂದ ಈ ಗ್ರಾಮಕ್ಕೆ ಬಾಡಿಗೆಗೆ ಬರಲು ವಾಹನ ಮಾಲೀಕರು ಒಪ್ಪುವುದಿಲ್ಲ. ಕೃಷಿ ಮತ್ತಿತರ ಚಟುವಟಿಕೆಗಳಿಗೆ ಪಟ್ಟಣದಿಂದ ಸಾಮಗ್ರಿಗಳನ್ನು ಸಾಗಿಸುವುದಕ್ಕೆ ಇಲ್ಲಿನ ಜನರು ಪರದಾಡುವಂತಾಗಿದೆ.

ರಸ್ತೆ ಸರಿಯಿಲ್ಲದ ಕಾರಣ ಬಾಡಿಗೆ ವಾಹನ ಮಾಲೀಕರು ಅಧಿಕ ಹಣ ಕೇಳುತ್ತಾರೆ. ಇನ್ನು ಕೆಲವರು ಎಷ್ಟು ಹಣಕೊಟ್ಟರೂ ಬರುವುದಿಲ್ಲ ಎನ್ನುತ್ತಾರೆ. ಈ ರಸ್ತೆಯಲ್ಲಿ ಹೋದರೆ ಇಂಧನ ಹೆಚ್ಚು ವ್ಯಯವಾಗುವುದಲ್ಲದೆ, ವಾಹನವೂ ಹಾಳಾಗುತ್ತದೆ ಎನ್ನುವುದು ವಾಹನ ಮಾಲೀಕರ ಲೆಕ್ಕಾಚಾರ.

‘10 ಕಿ.ಮೀ ದೂರಕ್ಕೆ ₹200 ಕೊಡುವುದಾಗಿ ಜನರು ಹೇಳುತ್ತಾರೆ. ಹೋಗಿ ಬರುವ ಖರ್ಚಿಗೇ ಇದು ಸರಿಹೊಂದುತ್ತದೆ. ಸಮಯವೂ ವ್ಯರ್ಥವಾಗುತ್ತದೆ. ಗಾಡಿಯ ಭಾಗಗಳಿಗೂ ಹಾನಿಯಾಗುತ್ತದೆ’ ಎಂದು ಆಟೊ ಚಾಲಕ ಸಿದ್ದರಾಜು ಹೇಳಿದರು.

‘ರಸ್ತೆಯುದ್ದಕ್ಕೂ ಕೃಷಿ ಜಮೀನುಗಳಿವೆ. ಅಲ್ಲಿಂದ ಹರಿದು ಬರುವ ನೀರು ರಸ್ತೆಯ ಗುಂಡಿಗಳಲ್ಲಿ ಶೇಖರಣೆಯಾಗುತ್ತದೆ. ಪರ್ಯಾಯ ಮಾರ್ಗವಿಲ್ಲದ ಕಾರಣ, ಇದೇ ರಸ್ತೆಯಲ್ಲಿ ಸಂಚರಿಸುವುದು ಅನಿವಾರ್ಯ’ ಎನ್ನುತ್ತಾರೆ ಶಿಕ್ಷಕ ರಾಜಗೋಪಾಲ್‌.

‘ಕಾಡಂಚಿನ ಗ್ರಾಮದ ಶಾಲೆಗೆ ದಿನನಿತ್ಯ ಪಟ್ಟಣದಿಂದ ಸ್ಕೂಟರ್‌ನಲ್ಲಿ ಓಡಾಡುತ್ತೇನೆ. ವಾರದಲ್ಲಿ ಎರಡು ಬಾರಿಯಾದರೂ ಟೈರ್‌ ಪಂಕ್ಚರ್ ಆಗುತ್ತದೆ. ಕೆಲವೊಮ್ಮೆ ಗುಂಡಿಗಳನ್ನು ತಪ್ಪಿಸಲು ಹೋಗಿ ಬಿದ್ದಿದ್ದೇನೆ. ಯಾರಾದರೂ ಡ್ರಾಪ್ ಕೇಳಿದರೂ ಕೂರಿಸಿಕೊಳ್ಳಲು ಹಿಂದೇಟು ಹಾಕುವಂತಹ ಪರಿಸ್ಥಿತಿಯನ್ನು ಈ ರಸ್ತೆ ತಂದೊಡ್ಡಿದೆ’ ಎಂದು ಅವರು ಹೇಳಿದರು.

ಉಪಚುನಾವಣೆಯಲ್ಲಿ ಗೆದ್ದ ಎಂ.ಸಿ. ಮೋಹನಕುಮಾರಿ ಅವರು ಸಚಿವರಾದ ನಂತರ ತಾಲ್ಲೂಕಿನ ಅನೇಕ ರಸ್ತೆಗಳಿಗೆ ಅಭಿವೃದ್ಧಿ ಭಾಗ್ಯ ನೀಡಿದ್ದಾರೆ. ಆದರೆ ವರ್ಷಗಳಿಂದ ರಸ್ತೆ ಹದಗೆಟ್ಟು ಜನ ತೊಂದರೆ ಅನುಭವಿಸುತ್ತಿರುವುದು ಯಾರ ಕಣ್ಣಿಗೂ ಬೀಳುತ್ತಿಲ್ಲ. ರಸ್ತೆ ಸರಿಪಡಿಸಲು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಹೊನ್ನಶೆಟ್ಟರಹುಂಡಿ ಗ್ರಾಮದ ನಿವಾಸಿಯೊಬ್ಬರು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry