ಅಮಾನಿ ಬೈರಸಾಗರ ಕೆರೆ ನೀರಿಗಾಗಿ ಗಲಾಟೆ

ಸೋಮವಾರ, ಮೇ 27, 2019
24 °C

ಅಮಾನಿ ಬೈರಸಾಗರ ಕೆರೆ ನೀರಿಗಾಗಿ ಗಲಾಟೆ

Published:
Updated:

ಗುಡಿಬಂಡೆ: ಅಮಾನಿ ಬೈರಸಾಗರ ಕೆರೆ ನೀರನ್ನು ನಮ್ಮ ಕೆರೆಗಳಿಗೆ ಹರಿಸಿ ಎಂದು ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಗ್ರಾಮಸ್ಥರ ಬೇಡಿಕೆಗೆ ಗುಂಡಿಬಂಡೆ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ವಾಟದಹೊಸಹಳ್ಳಿ ಗ್ರಾಮಸ್ಥರು ಪ್ರಭಾರಿ ತಹಶೀಲ್ದಾರ್‌ ಸಿಗ್ಬಾತುಲ್ಲಾ ಅವರಿಗೆ ಕೆರೆಗಳಿಗೆ ನೀರು ಹರಿಸುವಂತೆ ಮನವಿ ಮಾಡಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಶುಕ್ರವಾರ ತಾಲ್ಲೂಕು ಕಚೇರಿಗೆ ಬಂದ ತಾಲ್ಲೂಕಿನ ಹಂಪಸದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ವಾಟದಹೊಸಹಳ್ಳಿ ಕೆರೆಗೆ ನೀರು ಬಿಡಬಾರದು ಎಂದು ಆಕ್ಷೇಪಿಸಿದರು.

ಈ ವೇಳೆ ತಹಶೀಲ್ದಾರ್‌ ರಾಜಿ ಸೂತ್ರ ರೂಪಿಸಲು ಎರಡು ಕಡೆಯ ರೈತರ ಸಭೆ ನಡೆಸಿದರು. ಅದರಲ್ಲಿ ವಾಟದಹೊಸಹಳ್ಳಿಯವರು ನೀರು ಬಿಡಲೇಬೇಕು ಎಂದು ಪಟ್ಟುಹಿಡಿದರು. ‘1939 ರಲ್ಲಿಯೇ ಮೈಸೂರು ಮಹಾರಾಜರು ಗುಡಿಬಂಡೆ ಕೆರೆಗೆ 23 ಅಡಿ ನೀರು ಬಂದ ಕೂಡಲೇ ವಾಟಹೋಸಹಳ್ಳಿ ಕೆರೆಗೆ ನೀರು ಬಿಡಬೇಕು ಎಂದು ಆದೇಶಿಸಿದ್ದರು. ಈವರೆಗೆ ಅದನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಈಗ ಏಕಾಏಕಿ ನೀರು ಬಿಡುವುದಿಲ್ಲ ಎಂದರೆ ಹೇಗೆ’ ಎಂದು ವಾಟಹೋಸಹಳ್ಳಿ ಜನರು ಸಭೆಯಲ್ಲಿ ಪ್ರಶ್ನಿಸಿದರು.

ಅದಕ್ಕೆ ಉತ್ತರಿಸಿದ ಗುಡಿಬಂಡೆ ಜನರು, ‘ಕೆರೆಗೆ ಈ ಹಿಂದೆ ಇದ್ದ ಅಳ ಈಗ ಇಲ್ಲ. ಹೂಳು ತುಂಬಿರುವ ಕಾರಣ ಕೆರೆಯಲ್ಲಿ 23 ಅಡಿ ಕೂಡ ನೀರು ನಿಲ್ಲುತ್ತಿಲ್ಲ. ಜಿಲ್ಲಾಡಳಿತ ಕೂಡ ಕೆರೆ ನೀರನ್ನು ಕೇವಲ ಕುಡಿಯಲು ಉಪಯೋಗಿಸಬೇಕೆಂದು ಆದೇಶಿಸಿದೆ. ಏಕಾಏಕಿ ನೀರು ಬಿಡಿ ಎಂದರೆ ನಾವು ಎಲ್ಲಿಂದ ಬಿಡುವುದು? ನಮ್ಮ ಕೆರೆ ನೀರನ್ನು ನಾವೇ ಕೃಷಿಗೆ ಬಳಸಿಲ್ಲ, ಆ ನೀರಿನಿಂದ ನೀವು ಬೆಳೆ ಬೆಳೆದುಕೊಳ್ಳುತ್ತೀರಾ’ ಎಂದು ಮರು ಪ್ರಶ್ನಿಸಿದರು. ಹೀಗೆ ಸುಮಾರು 5 ಗಂಟೆಗಳ ಮಾತಿನ ಚಕಮಕಿ, ಗದ್ದಲ ನಡೆಯಿತು. ಕೊನೆಗೆ ಒಂದು ತೀರ್ಮಾನಕ್ಕೆ ಬಾರದೆ ಸಭೆ ವಿಫಲಗೊಂಡಿತು.

ಬಳಿಕ ಮಾತನಾಡಿದ ತಹಶೀಲ್ದಾರ್, ‘ಸೋಮವಾರ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಈ ವಿಚಾರ ಕುರಿತು ಚರ್ಚಿಸಿ ಮೇಲಾಧಿಕಾರಿಗಳ ಆದೇಶದಂತೆ ಕ್ರಮಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.

‘ಸೋಮವಾರ ಕೆರೆಯ ಅರ್ಧ ಅಡಿ ನೀರು ನಮಗೆ ಹರಿಸಬೇಕು. ಒಂದೊಮ್ಮೆ ಬಿಡದಿದ್ದರೆ ನಾವು ಗುಡಿಬಂಡೆ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ, ಜಿಲ್ಲಾಧಿಕಾರಿಗಳು ನೀರು ಬಿಡಿಸುವವರೆಗೂ ಉಗ್ರ ಹೋರಾಟ ಮಾಡುತ್ತೇವೆ’ ಎಂದು ವಾಟದಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಲಪ್ಪ ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry