ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಿನಿಂದ ನಿಂತಿರುವ ಕ್ಯಾಟ್‌ಫಿಶ್ ಲಾರಿ!

Last Updated 15 ಅಕ್ಟೋಬರ್ 2017, 6:53 IST
ಅಕ್ಷರ ಗಾತ್ರ

ಜಗಳೂರು: ಆಫ್ರಿಕನ್‌ ಕ್ಯಾಟ್‌ಫಿಶ್‌ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಲಾರಿಯೊಂದನ್ನು ಇಲ್ಲಿನ ಪೊಲೀಸರು ವಶಕ್ಕೆ ಪಡೆದು ಒಂದು ತಿಂಗಳಾಯಿತು. ಆದರೆ, ಕಾನೂನಿನ ಗೊಂದಲಗಳ ಕಾರಣ ಲಾರಿ ಮತ್ತು ಮೀನುಗಳಿಗೆ ಇನ್ನೂ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ.

ತಮಿಳುನಾಡಿನ ಕೃಷ್ಣಗಿರಿಯ ಉತ್ತರಪ್ರದೇಶದ ಅಲಹಾಬಾದ್‌ಗೆ ಮೀನುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ತಾಲ್ಲೂಕಿನ ದೊಣೆಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೆ.15ರಂದು ಜಗಳೂರು ಪೊಲೀಸರು ವಶಕ್ಕೆ ಪಡೆದಿದ್ದರು. ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ಲಾರಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಲಾರಿ ಮತ್ತು ಮೀನುಗಳನ್ನು ವಶಕ್ಕೆ ಪಡೆದು ತಹಶೀಲ್ದಾರ್‌ ಸುಪರ್ದಿಗೆ ಒಪ್ಪಿಸಲಾಗಿತ್ತು. ಲಾರಿ ಮಾಲೀಕರು ಅರ್ಜಿ ಸಲ್ಲಿಸಿದ ಕಾರಣ ತಹಶೀಲ್ದಾರ್‌ ಶ್ರೀಧರಮೂರ್ತಿ ಅವರು ಮೀನು ಮತ್ತು ಲಾರಿ ಬಿಡುಗಡೆಗೆ ಆದೇಶ ನೀಡಿದ್ದರು.

ಆದರೆ, ಸ್ಥಳೀಯ ಪೊಲೀಸರು ಮೀನು ಹೊತ್ತ ಲಾರಿಯನ್ನು ಬಿಡುಗಡೆ ಮಾಡಿರಲಿಲ್ಲ. ನಂತರ ಮಾಲೀಕರು ಇಲ್ಲಿನ ಜೆ.ಎಂ.ಎಫ್‌.ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿ ಪರಿಶೀಲಿಸಿದ ನ್ಯಾಯಾಲಯವು ಲಾರಿಯ ಬಿಡುಗಡೆಗೆ ಆದೇಶಿಸಿತ್ತು. ಆದರೆ ಮತ್ತೆ ನಿರಾಕರಿಸಿದ ಪೊಲೀಸರು, ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ, ತಡೆಯಾಜ್ಞೆ ಪಡೆದುಕೊಂಡರು.

‘ಮುಂದಿನ ಕ್ರಮ ಏನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ನಿಷೇಧಿತ ಮೀನನ್ನು ಕೊಲ್ಲಬೇಕೇ ಅಥವಾ ಲಾರಿಯನ್ನು ಮಾತ್ರ ಬಿಡುಗಡೆ ಮಾಡಲು ಅವಕಾಶವಿದಯೇ ಎಂಬ ಪ್ರಶ್ನೆ ಎದುರಾಗಿದೆ’ ಎನ್ನುತ್ತಾರೆ ಲಾರಿ ಮಾಲೀಕರ ಪರ ವಕೀಲ ಬಿ.ಪಂಪಣ್ಣ.

ಒಂದು ತಿಂಗಳಿನಿಂದ ಪ್ರತಿ ದಿನ ನೀರನ್ನು ಬದಲಾಯಿಸಿ ಮೀನುಗಳನ್ನು ಕಾಪಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಸಾಕಷ್ಟು ಮೀನುಗಳು ಸತ್ತಿರುವ ಅನುಮಾನವಿದೆ. ತ್ಯಾಜ್ಯ ನೀರನ್ನು ಪಟ್ಟಣದ ಮಧ್ಯಭಾಗದಲ್ಲಿರುವ ಚರಂಡಿಗೆ ಅಥವಾ ಬಯಲು ಪ್ರದೇಶದಲ್ಲಿ ಚೆಲ್ಲುತ್ತಿರುವ ಕಾರಣ ಸಾಂಕ್ರಾಮಿಕ ರೋಗದ ಆತಂಕ ಎದುರಾಗಿದೆ.

ಡಿ. ಶ್ರೀನಿವಾಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT