ಸೋಮವಾರ, ಸೆಪ್ಟೆಂಬರ್ 16, 2019
24 °C

ವಕೀಲರಿಗೆ ಕರ್ತವ್ಯ ಪ್ರಜ್ಞೆ ಮುಖ್ಯ’

Published:
Updated:

ಧಾರವಾಡ: ‘ವೈಯಕ್ತಿಕ ಹಕ್ಕು ಹಾಗೂ ಘನತೆ ವಿಷಯದಲ್ಲಿ ಸಮಾಜದ ಹಿತ ಹಾಗೂ ದೂರದೃಷ್ಟಿಯಿಂದ ವಾದ ಮಂಡಿಸಬೇಕಾದ್ದು ವಕೀಲರ ಆದ್ಯ ಕರ್ತವ್ಯ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವಕೀರ್ತಿ ಸಿಂಗ್‌ ಅಭಿಪ್ರಾಯಪಟ್ಟರು.

ಕರ್ನಾಟಕ ವಿಶ್ವವಿದ್ಯಾಲಯದ ಸರ್‌ ಸಿದ್ದಪ್ಪ ಕಾನೂನು ಕಾಲೇಜು ಆಯೋಜಿಸಿರುವ ಎರಡು ದಿನಗಳ ಸಿ.ಎಸ್‌.ಜವಳಿ ಸ್ಮಾರಕ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಕುಲಪತಿ ಡಾ.ಪ್ರಮೋದ ಗಾಯಿ ಮಾತನಾಡಿ, ‘ಸಮಾಜದಲ್ಲಿನ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ. ವಕೀಲ ವೃತ್ತಿಯ ಹೊಸ್ತಿಲಲ್ಲಿರುವ ಯುವ ಸಮುದಾಯಕ್ಕೆ ಇಂಥ ಅಣಕು ನ್ಯಾಯಾಲಯಗಳು ಭವಿಷ್ಯದ ದೃಷ್ಟಿಯಿಂದ ನೆರವಾಗಲಿವೆ’ ಎಂದು ಹೇಳಿದರು.

ಕ್ವಾರ್ಟರ್‌ ಫೈನಲ್‌ಗೆ ರಾಜ್ಯದ ಏಳು ತಂಡ: ‘ಅಪಕೃತ್ಯ ಕಾನೂನು(ಟಾರ್ಟ್‌ ಲಾ)– ವೈದ್ಯಕೀಯ ವೃತ್ತಿಯ ಕರ್ತವ್ಯಗಳು ಹಾಗೂ ನಷ್ಟಭರ್ತಿ’ ಎಂಬ ವಿಷಯ ಕುರಿತು ನಡೆದ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ರಾಜ್ಯದ ಏಳು ತಂಡಗಳೊಂದಿಗೆ ಒಟ್ಟು 12 ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿವೆ.

ಬೆಂಗಳೂರಿನ ಯೂನಿವರ್ಸಿಟಿ ಕಾನೂನು ಕಾಲೇಜು, ಬಿಎಂಎಸ್‌, ಸಿಎಂಆರ್‌, ಎಂ.ಎಸ್‌.ರಾಮಯ್ಯ, ಮೈಸೂರಿನ ಜೆಎಸ್‌ಎಸ್‌ ಕಾನೂನು ಕಾಲೇಜು, ಉಡುಪಿಯ ವೈಕುಂಠ ಬಾಳಿಗಾ ಕಾಲೇಜು, ಶಿರಸಿಯ ಎಂವಿಎಸ್‌ ಕಾನೂನು ಕಾಲೇಜು ಮುಂದಿನ ಸುತ್ತು ಪ್ರವೇಶಿಸಿವೆ. ಇವರೊಂದಿಗೆ ಪಂಜಾಬ್‌, ಕೇರಳ, ತಮಿಳುನಾಡು, ಚಂಡಿಗಡದ ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿವೆ.

Post Comments (+)