ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲದ ಮೇಲೆ ಮಲಗಿಸಿ ರೋಗಿಗಳಿಗೆ ಚಿಕಿತ್ಸೆ!

Last Updated 15 ಅಕ್ಟೋಬರ್ 2017, 7:11 IST
ಅಕ್ಷರ ಗಾತ್ರ

ಡಂಬಳ: ಹೋಬಳಿಯ ಕದಾಂಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಾವುದೇ ಮೂಲಸೌಕರ್ಯ ಇಲ್ಲದೇ ಇರುವುರಿಂದ ರೋಗಿಗಳು ಪರದಾಡುವಂತಾಗಿದೆ.
ಡೋಣಿ, ಡೋಣಿತಾಂಡ,ಅತ್ತಿಕಟ್ಟಿ, ದಿಂಡೂರ, ಚುರ್ಚಿಹಾಳ ಸೇರಿ ಸುತ್ತಲಿನ 8ಕ್ಕೂ ಹೆಚ್ಚು ಗ್ರಾಮಗಳ 15ರಿಂದ 16 ಸಾವಿರ ಜನ ಆರೋಗ್ಯ ಸೇವೆಗಳಿಗೆ ಈ ಕೇಂದ್ರವನ್ನೇ ಅವಲಂಬಿಸಿದ್ದಾರೆ. 

ಆಸ್ಪತ್ರೆಯಲ್ಲಿ 11 ಸಿಬ್ಬಂದಿ ಇರಬೇಕಿದ್ದು, ಕೇವಲ 6 ಮಂದಿ ಮಾತ್ರ ಇದ್ದಾರೆ. 6 ಹಾಸಿಗೆಗಳು ಮಾತ್ರ ಇವೆ. ಹೀಗಾಗಿ, ಆಸ್ಪತ್ರೆಗೆ ಒಳರೋಗಿಗಳಾಗಿ ದಾಖಲುಗೊಂಡ ಅನೇಕರು ನೆಲದ ಮೇಲೆ ಮಲಗಿಯೇ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಇದೆ.

‘ಆಸ್ಪತ್ರೆಯಲ್ಲಿ ಇರುವ ಎಲ್ಲ ಹಾಸಿಗೆಗಳು ರೋಗಿಗಳಿಂದ ಭರ್ತಿಯಾದ್ದರಿಂದ ರೋಗಿಗಳನ್ನು ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾವು ಬಡವರು ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಆಗುವುದಿಲ್ಲ. ಮಗಳು ಅಕ್ಕಮ್ಮ ಜ್ವರ, ವಾಂತಿ– ಭೇದಿಯಿಂದ ನರಳುತ್ತಿದ್ದಾಳೆ. ಅವಳು ಮಾತು ಬರದ ಮೂಗಿ’ ಎಂದು ಆಸ್ಪತ್ರೆಗೆ ಮಗಳನ್ನು ದಾಖಲಿಸಿದ್ದ ಡೋಣಿತಾಂಡದ ದೇವಕ್ಕ ಹನಮಪ್ಪ ರಾಠೋಡ ಅಳಲು ತೋಡಿಕೊಂಡರು.

‘ಆಸ್ಪತ್ರೆಯಲ್ಲಿ ಸ್ಟಾಫ್‌ ನರ್ಸ್‌ ಇಲ್ಲ. ಹೀಗಾಗಿ, ಹೆರಿಗೆ ನೋವು ಕಾಣಿಸಿಕೊಂಡರೆ, ಜಿಲ್ಲಾ ಆಸ್ಪತ್ರೆಗೆ ದಾಖಲಾಗಬೇಕು’ ಎಂದು ಗರ್ಭಿಣಿ ಆಫ್ರೀನ್ ನದಾಫ ಅವರು ಆತಂಕ ವ್ಯಕ್ತಪಡಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಕಾರ್ಯನಿರ್ವಹಿಸುತ್ತದೆ. ಆದರೆ, ಆಸ್ಪತ್ರೆ 24x7 ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕು.

ಈ ನಿಟ್ಟಿನಲ್ಲಿ ಅಧಿಕಾರಿ ಗಳು ಸೂಕ್ತ ಕ್ರಮ ಕೈಗೊಳ್ಳಬೇಕು.ಆಸ್ಪತ್ರೆಯಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಆಸ್ಪತ್ರೆಯ ಕೆಲ ವೈದ್ಯರು ಹಣ ನೀಡಿದರೆ ಮಾತ್ರ ಚಿಕಿತ್ಸೆ ನೀಡುತ್ತಾರೆ. ಇಂಥವರ ವಿರುದ್ಧ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳ ಸಂಬಂಧಿಕರು ಆಗ್ರಹಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT