ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯವಾಗುತ್ತಿರುವ ನಂದಿಹಳ್ಳಿ ಕೆರೆ!

Last Updated 15 ಅಕ್ಟೋಬರ್ 2017, 7:28 IST
ಅಕ್ಷರ ಗಾತ್ರ

ಬ್ಯಾಡಗಿ: ತಾಲ್ಲೂಕಿನಲ್ಲಿ ಅತಿಹೆಚ್ಚು ವಿಸ್ತಾರವುಳ್ಳ ಕೆರೆಗಳಲ್ಲಿ ಒಂದಾದ ನಂದಿಹಳ್ಳಿ ಕೆರೆಯು ಅಂದಾಜು 631 ಎಕರೆ ವಿಸ್ತೀರ್ಣವನ್ನು ಹೊಂದಿತ್ತು. ಆದರೆ, ಇಂದು ಸಂಪೂರ್ಣ ಹೂಳು ತುಂಬಿಕೊಂಡು ಸುತ್ತಮುತ್ತಲಿನ ರೈತರಿಂದ ಒತ್ತುವರಿಯಾಗಿ ಕೆರೆಯೇ ಮಾಯವಾಗುವ ಸ್ಥಿತಿಗೆ ಬಂದಿದೆ!

ಈ ಕೆರೆಯು ಸುಮಾರು 17 ವರ್ಷಗಳ ಹಿಂದೆ ಭರ್ತಿಯಾಗಿರುವುದು ಬಿಟ್ಟರೆ ಈ ವರೆಗೂ ತುಂಬಿಲ್ಲ. ಹೀಗಾಗಿ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಅಂದಾಜು 700ಅಡಿಯಷ್ಟು ಆಳಕ್ಕೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರ ಅಳಲು.

25 ಗ್ರಾಮಗಳಿಗೆ ವರದಾನ: ನಂದಿಹಳ್ಳಿ ಕೆರೆ ತುಂಬಿದರೆ ಸುತ್ತಮುತ್ತಲಿನ ಗ್ರಾಮಗಳಾದ ಹಿರೇನಂದಿಹಳ್ಳಿ, ಅಂಗರಗಟ್ಟಿ, ಹೊಸ ಶಿಡೆನೂರು, ಹಳೆ ಶಿಡೆನೂರು, ಮಾಸಣಗಿ, ಕೆರವಡಿ, ಕಳಗೊಂಡ, ಖುರ್ದವೀರಾಪುರ, ತಿಮಕಾಪುರ, ಶಂಕರಿಪುರ, ಮಲ್ಲೂರು, ಖುರ್ದ ಕೊಡಿಹಳ್ಳಿ, ತರೇದಹಳ್ಳಿ, ಗುಮ್ಮನಹಳ್ಳಿ, ಬ್ಯಾಡಗಿ, ಮೋಟೆಬೆನ್ನೂರು, ಕುರುಬಗೊಂಡ, ಹೆಡಿಗ್ಗೊಂಡ, ತಿಪಲಾಪುರ, ಚಿನ್ನಿಕಟ್ಟಿ, ನಾಗಲಾಪುರ ಗ್ರಾಮಗಳ ಅಂತರ್ಜಲಮಟ್ಟ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಕೆರೆಯನ್ನು ನದಿ ನೀರಿನಿಂದ ತುಂಬಿಸಬೇಕು ಎಂಬಹೆಚ್ಚಿದೆ.

‘ಈ ಕೆರೆಗೆ ನದಿಯಿಂದ ನೀರು ತುಂಬಿಸುವಂತೆ ಒತ್ತಾಯಿಸಿ ಈ ಭಾಗದ ಶಾಸಕ ಬಸವರಾಜ ಶಿವಣ್ಣನವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಈ ವರೆಗೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ’ ಎಂದು ಕೆರೆ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜ ಬನ್ನಿಹಟ್ಟಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಮೊದಲ ಹಂತದ ಕೆರೆ ತುಂಬಿಸುವ ಯೋಜನೆ ನನೆಗುದಿಗೆ ಬಿದಿದೆ. ಹೀಗಾಗಿ ಎರಡನೇ ಹಂತದಲ್ಲಿ ಕೆರೆ ತುಂಬಿಸಲಾಗುವುದು ಎಂದು ಶಾಸಕರು ಹೇಳುತ್ತಿದ್ದಾರೆ. ಅವರ ಭರವಸೆ ಸ್ಥಳೀಯರಿಗೆ ಸಮಾಧಾನ ತಂದಿಲ್ಲ’ ಎನ್ನುತ್ತಾರೆ ಹೋರಾಟ ಸಮಿತಿ ಸದಸ್ಯ ಈರಪ್ಪ ಬನ್ನಿಹಟ್ಟಿ. ‘ಸುಮಾರು ವರ್ಷಗಳಿಂದ ಕೆರೆ ತುಂಬದೇ ಇದ್ದುದರಿಂದ ಸುತ್ತಮುತ್ತಲಿನ ರೈತರು ಕೆರೆಯನ್ನು ಒತ್ತುವರಿ ಮಾಡಿದ್ದಾರೆ.

ಈಗಾಗಲೆ ಕೆರೆಯ ಶೇಕಡ 40ರಷ್ಟು ಭಾಗ ಒತ್ತುವರಿಯಾಗಿದ್ದು ಇನ್ನಷ್ಟು ದಿನ ಕಳೆದರೆ ಕೆರೆಯೇ ಇಲ್ಲದಂತಾಗುತ್ತದೆ’ ಎಂಬುದು ಸ್ಥಳೀಯರ ಆತಂಕ. ‘ಕೆರೆ ಸಂಪೂರ್ಣ ಹೂಳಿನಿಂದ ಮುಚ್ಚಿ ಹೋಗಿದೆ. ತಡೆಗೋಡೆ ಅಲ್ಲಲ್ಲಿ ಬಿರುಕು ಬಿಟ್ಟಿದೆ.

ಉಳಿದ ನೀರು ಬಸಿದು ಹೋಗುವ ಹಂತಕ್ಕೆ ತಲುಪಿದೆ. ಕೂಡಲೇ ಕೆರೆ ಒತ್ತುವರಿಯನ್ನು ತೆರವುಗೊಳಿಸಿ ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗಬೇಕಾಗಿದೆ ಸ್ಥಳೀಯರಾದ ಲಿಂಗರಾಜ ಪಡಿಯಣ್ಣನವರ ಎಂದರು.

ಅಷ್ಟೇ ಅಲ್ಲದೇ ಕಳೆದ ಎರಡು ವರ್ಷಗಳ ಹಿಂದೆ ಹೂಳು ತೆಗೆಯುವ ನೆಪದಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು’ ಲಿಂಗರಾಜ ಪಡಿಯಣ್ಣನವರ ಎಂದು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT