ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜುಕೊಳದ ಚಿನ್ನದ ಮೀನುಗಳು

Last Updated 15 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಭೋಪಾಲ್‌ನಲ್ಲಿ ಇತ್ತೀಚೆಗಷ್ಟೇ ನಡೆದ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಮಹಿಳೆಯರ ತಂಡ ಗಮನಾರ್ಹ ಸಾಧನೆ ಮಾಡಿದೆ.

ರಾಜ್ಯ ಮಹಿಳೆಯರ ಸಾಲಿನ ಪದಕಗಳ ಪಟ್ಟಿಯಲ್ಲಿ ವಿ. ಮಾಳವಿಕಾ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಎರಡು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು (ವೈಯಕ್ತಿಕ ವಿಭಾಗ) ಜಯಿಸಿರುವ ಈ ಆಟಗಾರ್ತಿ ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದರೂ ತಮ್ಮ ದೇಶಕ್ಕಾಗಿ ಪದಕ ಗೆದ್ದುಕೊಡುವ ಹಂಬಲ ಹೊಂದಿದ್ದಾರೆ.

ತಂಡದಲ್ಲಿದ್ದ  ಅತಿ ಕಿರಿಯ ಆಟಗಾರ್ತಿ ಖುಷಿ ದಿನೇಶ್‌ (14 ವರ್ಷ) ಈ ಬಾರಿಯ ಕೂಟದಲ್ಲಿ ಪ್ರಮುಖ ಆಕರ್ಷಣೆ ಎನಿಸಿದ್ದರು. ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದಲ್ಲಿ ಕಲಿಯುತ್ತಿರುವ ಈಕೆಯ ಸಾಧನೆ ಮುಂಬರುವ ಯುವ ಈಜುಪಟುಗಳಿಗೆ ಮಾದರಿಯಾಗಿದೆ. ತನಗಿಂತ ಹಿರಿಯ ಸ್ಪರ್ಧಿಗಳೊಂದಿಗೆ ಪ್ರಬಲ ಪೈಪೋಟಿ ಒಡ್ಡುವ ಮೂಲಕ ಖುಷಿ ಒಂದು ಚಿನ್ನ ಹಾಗೂ ಎರಡು ಕಂಚು ಜಯಿಸಿದ್ದಾರೆ.

ದಾಮಿನಿ ಕೆ. ಗೌಡ, ಸುವಾನ ಸಿ. ಭಾಸ್ಕರ್‌, ಸಲೋನಿ ದಲಾಲ್, ಹರ್ಷಿತಾ ಜಯರಾಮ್ ಕೂಡ ಕರ್ನಾಟಕದ ವಿಜಯಪತಾಕೆಯನ್ನು ಹಾರಿಸಿದ್ದಾರೆ. ಮುಂದೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಬೆಳಗುವ ಭರವಸೆ ಮೂಡಿಸಿದ್ದಾರೆ. ಆದರೆ ಇಂದು ವಿದ್ಯಾಭ್ಯಾಸದ ಒತ್ತಡ, ದುಬಾರಿ ವೆಚ್ಚ ಮತ್ತಿತರ ಕಾರಣಗಳಿಗೆ ಮಹಿಳಾ ವಿಭಾಗದಲ್ಲಿ ಈಜುಪಟುಗಳು ಹೆಚ್ಚು ಕಾಲ ಮುಂದುವರಿಯುತ್ತಿಲ್ಲ.  ಆದರೆ ದೇಶಕ್ಕೆ ಪದಕ ತಂದುಕೊಡುವ ಸಾಮರ್ಥ್ಯವಿರುವ ಮಹಿಳಾ ಈಜುಪಟುಗಳು ಇರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯ.

ದುಬಾರಿ ಕ್ರೀಡೆ: ಈ ಆಟಗಾರ್ತಿಯರ ಸಾಧನೆಗೆ ಬಹುಮುಖ್ಯ ಅಡತಡೆ ಎಂದರೆ ದುಬಾರಿ ಈಜು ಉಡುಗೆ. ‘ಒಂದು ಈಜು ಉಡುಗೆಗಾಗಿ ₹ 20ರಿಂದ 25 ಸಾವಿರ ಖರ್ಚು ಮಾಡಬೇಕು. ಅದನ್ನು ಐದಾರು ಬಾರಿ ಮಾತ್ರ ಬಳಸಲು ಸಾಧ್ಯ. ನಾವು ನಮ್ಮ ಸ್ವಂತ ಖರ್ಚಿನಲ್ಲಿ ಈಜುಡುಗೆ ಕೊಳ್ಳಬೇಕು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಿಗೆ ಹೋಗಬೇಕಾದರೆ ಸರ್ಕಾರದ ಕಡೆಯಿಂದ ರೈಲು ದರ ನೀಡುತ್ತಾರೆ. ಕೆಲವೊಮ್ಮೆ ಅದು ನಮ್ಮ ಕೈ ತಲುಪುವುದೇ ಇಲ್ಲ’ ಎಂದು ಖುಷಿ ದಿನೇಶ್ ತಮ್ಮ ಅಳಲು ತೋಡಿಕೊಂಡರು.

‘ಕ್ರೀಡಾ ಕೋಟಾದಲ್ಲಿ ಒಳ್ಳೆಯ ಕಾಲೇಜಿನಲ್ಲಿ ಸೀಟು, ವಿದ್ಯಾರ್ಥಿ ವೇತನ, ಇಲ್ಲವೇ ರೈಲ್ವೇಸ್ ಹಾಗೂ ಇತರೆಡೆ ಸರ್ಕಾರಿ ನೌಕರಿ ಸಿಕ್ಕ ತಕ್ಷಣ ಈಜುಪಟುಗಳು ಕ್ರೀಡೆಯನ್ನು ಮುಂದುವರಿಸುತ್ತಿಲ್ಲ. ಇದರಿಂದ ಪುರುಷ ಸ್ಪರ್ಧಿಗಳೂ ಹೊರತಾಗಿಲ್ಲ’ ಎನ್ನುತ್ತಾರೆ ಖುಷಿ.

ಶಿಕ್ಷಣ–ಕ್ರೀಡೆ: ‘ಕ್ರೀಡೆಯಲ್ಲಿ ಸಾಧನೆ ಮಾಡುವ ಜತೆಗೆ ವಿದ್ಯಾಭ್ಯಾಸದ ಕಡೆಗೂ ಗಮನ ನೀಡಲೇಬೇಕು. ಕೆಲವರು ಎರಡನ್ನೂ ನಿಭಾಯಿಸಲು ಸಾಧ್ಯವಾಗದೇ ಈಜನ್ನು ಅರ್ಧದಲ್ಲಿಯೇ ಮೊಟಕುಗೊಳಿಸುತ್ತಾರೆ. ಕಾಲೇಜು ಆಡಳಿತ ಮಂಡಳಿಯ ನೆರವು ಸಿಗದಿದ್ದರೆ ಕಷ್ಟ’ ಎನ್ನುವುದು ಕೋಚ್ ನಿಹಾರ್ ಅಮೀನ್ ಅವರ ಮಾತುಗಳು.

ಈ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಮಹಿಳೆಯರ ತಂಡ ಐದು ಚಿನ್ನ, ಏಳು ಬೆಳ್ಳಿ ಹಾಗೂ ಆರು ಕಂಚಿನ ಪದಕ ಗೆದ್ದುಕೊಂಡಿದೆ. ಪುರುಷ ಸ್ಪರ್ಧಿಗಳೂ ಸೇರಿ ಒಟ್ಟು ಒಂಬತ್ತು ಚಿನ್ನದ ಪದಕಗಳಿಂದ ರಾಜ್ಯ ತಂಡ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT