ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್ ರಸ್ತೆ ಕಾಮಗಾರಿಗೆ ಚಾಲನೆ

Last Updated 15 ಅಕ್ಟೋಬರ್ 2017, 8:53 IST
ಅಕ್ಷರ ಗಾತ್ರ

ಕೆಜಿಎಫ್‌: ರಸ್ತೆ ವಿಸ್ತೀರ್ಣದ ಅಂಗವಾಗಿ ಲೋಕೋಪಯೋಗಿ ಇಲಾಖೆ ಮತ್ತು ಅಶೋಕನಗರ ನಿವಾಸಿಗಳ ನಡುವೆ ನಡೆಯುತ್ತಿದ್ದ ಕಾನೂನು ಸಮರ ಅಂತ್ಯವಾಗಿದ್ದು, ಆರು ತಿಂಗಳ ನಂತರ ರಸ್ತೆ ವಿಸ್ತರಣೆ ಕಾಮಗಾರಿ ಶುರುವಾಗಿದೆ.

ರಾಬರ್ಟಸನ್‌ಪೇಟೆಯ ಎಂ.ಜಿ.ವೃತ್ತದಿಂದ ಸ್ಕೂಲ್ ಆಫ್ ಮೈನ್ಸ್‌ ವರೆಗೂ ಜೋಡಿ ರಸ್ತೆ ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿತ್ತು. 24 ಮೀಟರ್ ರಸ್ತೆ ವಿಸ್ತೀರ್ಣ ಆಗಬೇಕಾಗಿತ್ತು. ಈ ಸಂಬಂಧ ರಸ್ತೆಯ ಎರಡೂ ಬದಿಗಳ 177 ಅಂಗಡಿ ಮತ್ತು ಮನೆಗಳ ಮಾಲೀಕರಿಗೆ ನೋಟಿಸ್ ಜಾರಿಮಾಡಲಾಗಿತ್ತು.

ಅವರ ಪೈಕಿ ಹದಿನೈದು ಮಂದಿ ಕಟ್ಟಡ ಮಾಲೀಕರು ನ್ಯಾಯಾಲಯದ ಮೆಟ್ಟಿಲು ಹತ್ತಿ ತಡೆಯಾಜ್ಞೆ ತಂದಿದ್ದರು. ಅದನ್ನು ಬಿಟ್ಟು ಉಳಿದ 152 ಕಟ್ಟಡಗಳನ್ನು ತೆರವು ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿ, ಮಾರ್ಚಿ 26 ರಂದು ತೆರವು ಕಾರ್ಯಾಚರಣೆ ನಡೆಸಿದರು.

ಸ್ಕೂಲ್ ಆಫ್ ಮೈನ್ಸ್‌ನಿಂದ ಎಂ.ಜಿ. ವೃತ್ತದವರೆವಿಗೂ 1.82 ಕಿ.ಮೀ ರಸ್ತೆಯನ್ನು ಜೋಡಿ ರಸ್ತೆಯನ್ನಾಗಿ ಮಾಡಲು 2013–14 ರಲ್ಲಿ ಸರ್ಕಾರ ₹ 6.50 ಕೋಟಿ ಮಂಜೂರು ಮಾಡಿತ್ತು. ಮರುವರ್ಷ ಮತ್ತೆ ₹ 3 ಕೋಟಿ ಮಂಜೂರು ಮಾಡಿತ್ತು. ಒಟ್ಟು ₹ 9.50 ಕೋಟಿ ವೆಚ್ಚದಲ್ಲಿ ಪ್ರಾರಂಭವಾದ ಕಾಮಗಾರಿ ಸ್ಕೂಲ್‌ ಆಫ್‌ ಮೈನ್ಸ್‌ನಿಂದ ಅಶೋಕನಗರ ಕಾಲೊನಿ ಗೇಟ್‌ ವರೆಗೆ ಮುಗಿದಿತ್ತು. ನಂತರ ಮೂರು ವರ್ಷ ಲೋಕೋಪಯೋಗಿ ಇಲಾಖೆ ಮತ್ತು ಕಟ್ಟಡ ಮಾಲೀಕರ ನಡುವೆ ಕಾನೂನು ಸಮರ ನಡೆಯಿತು. ಹಲವಾರು ಬಾರಿ ಸಂಧಾನ ಸಭೆಗಳು ನಡೆದವು.

ಹಿಂದಿನ ಜಿಲ್ಲಾಧಿಕಾರಿ ಡಾ.ತ್ರಿಲೋಕಚಂದ್ರ ಅವರೂ ವರ್ತಕರೊಂದಿಗೆ ಸಭೆ ನಡೆಸಿ, ತೆರವಿಗೆ ಸಹಕಾರ ನೀಡಬೇಕು ಎಂದು ಕೋರಿದ್ದರು. ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುವಂತೆ ರಾಜಕೀಯ ಪಕ್ಷಗಳು, ಕನ್ನಡ ಸಂಘಟನೆಗಳು, ದಲಿತ ಸಂಘಟನೆಗಳು ಹೋರಾಟ ನಡೆಸಿದ್ದರು.

ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ನ್ಯಾಯಾಲಯದಲ್ಲಿರುವ ಕಟ್ಟಡಗಳನ್ನು ಬಿಟ್ಟು ಉಳಿದ ಕಟ್ಟಡವನ್ನು ತೆರವು ಮಾಡಬೇಕು ಎಂದು ಸೂಚಿಸಿದ್ದರಿಂದ ತೆರವು ಕಾರ್ಯಾಚರಣೆ ಶುರುವಾಯಿತು. ಬಹುತೇಕ ಕಟ್ಟಡಗಳನ್ನು ತೆರವು ಮಾಡಿಸಿದ ಸಂದರ್ಭದಲ್ಲಿ ಮಾನವ ಹಕ್ಕುಗಳ ಆಯೋಗ ತೆರವು ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಿತು. ಇದರಿಂದಾಗಿ ಕಾಮಗಾರಿ ಆರು ತಿಂಗಳಿಂದ ಸ್ಥಗಿತಗೊಂಡಿತು.

ನಂತರ ಜಿಲ್ಲಾಡಳಿತ ಮತ್ತು ಸ್ಥಳೀಯ ನಾಗರಿಕರ ನಡುವೆ ಅನಧಿಕೃತ ಒಪ್ಪಂದ ನಡೆದು, ಕಾಮಗಾರಿ ಶುರುವಾಗಿದೆ. 'ಒಪ್ಪಂದದ ಪ್ರಕಾರ ಕಾಮಗಾರಿ ನಡೆಸಲು ಲೋಕೋಪಯೋಗಿ ಇಲಾಖೆ ಸಮ್ಮತಿ ನೀಡಿದೆ. ಆದ್ದರಿಂದ ಸಹಕಾರ ನೀಡಲಾಗುತ್ತಿದೆ. ಕಾಮಗಾರಿ ಮುಗಿದ ನಂತರ ನ್ಯಾಯಾಲಯದಲ್ಲಿರುವ ಅರ್ಜಿಯನ್ನು ವಾಪಸ್ ಪಡೆಯಲಾಗುವುದು' ಎಂದು ಸಂತ್ರಸ್ತ ಆನಂದಕೃಷ್ಣನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT