ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಹಳ್ಳ ಪ್ರವಾಹಕ್ಕೆ ಕೊಚ್ಚಿ ಹೋದ ಬೆಳೆ

Last Updated 15 ಅಕ್ಟೋಬರ್ 2017, 9:02 IST
ಅಕ್ಷರ ಗಾತ್ರ

ಕೊಪ್ಪಳ: ಕೊಪ್ಪಳದಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ಶುಕ್ರವಾರ ತಡರಾತ್ರಿ ಪೂರ್ತಿ ಸುರಿದ ಚಿತ್ತ ಮಳೆಗೆ  ಇಲ್ಲಿನ ಕೆರೆ, ಕಾಲುವೆಗಳು ತುಂಬಿ ಹರಿಯುತ್ತಿವೆ. ಈಗಾಗಲೇ ಭರ್ತಿಯಾಗಿರುವ ಹಿರೇಹಳ್ಳ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದ್ದರಿಂದ ಶನಿವಾರ ಎಲ್ಲ 6 ಬಾಗಿಲುಗಳ ಮೂಲಕ ನೀರನ್ನು ಹರಿಬಿಡಲಾಯಿತು.

ಇದರಿಂದ ಹಿರೇಹಳ್ಳ ಮೈದುಂಬಿ ಹರಿಯುತ್ತಿದೆ. ಹಳ್ಳ ಹರಿಯುವ ತಾಲ್ಲೂಕಿನ ಕಿನ್ನಾಳ, ಚಿಲವಾಡಗಿ, ಓಜಿನಹಳ್ಳಿ, ಕೋಳೂರು, ಹಿರೇಸಿಂದೋಗಿ, ಚಿಕ್ಕಸಿಂದೋಗಿ, ಬೂದಿಹಾಳ, ಬೇಳೂರು ಗ್ರಾಮಗಳಲ್ಲಿ ಹಳ್ಳದ ಪಕ್ಕದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣ ವಾಗಿದೆ. ರಭಸದಿಂದ ಹರಿಯುತ್ತಿರುವ ಹಳ್ಳದ ನೀರು ಹೊಲಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

ಹೊಲಗಳಲ್ಲಿ ಬೆಳೆಯಲಾಗಿದ್ದ, ಮಕ್ಕೆಜೋಳ, ಸಜ್ಜೆ, ಜೋಳ, ಈರುಳ್ಳಿ, ಮೆಣಸಿನ ಕಾಯಿ, ತೊಗರಿ, ಸೂರ್ಯಕಾಂತಿ ಮತ್ತು ಗಲಾಟೆ ಹೂವಿನ ಬೆಳೆಗಳು ನೀರಿನಲ್ಲಿ ಮುಳುಗಿವೆ. ನೀರಿನ ಸೆಳೆತಕ್ಕೆ ಬಹಳಷ್ಟು ಪ್ರಮಾಣದ ಬೆಳೆಗಳು ಕೊಚ್ಚಿ ಹೋಗಿವೆ. ಇನ್ನೂ ಕೆಲ ಬೆಳೆಗಳು ಜಲಾವೃತ್ತಗೊಂಡು ಕೊಳೆಯುತ್ತಿವೆ.

‘ರಾತ್ರಿ ಪೂರ್ತಿ ಸುರಿದ ಮಳೆಯಿಂದಾಗಿ ಹಳ್ಳಕ್ಕೆ ನೀರು ಬಿಡಲಾಗಿದೆ. ಇನ್ನೂ ಕೇವಲ ನಾಲ್ಕು ದಿನ ಕಳೆದಿದ್ದರೆ ಬೆಳೆ ಕೈಗೆ ಬರುತ್ತಿತ್ತು. ಆದರೆ ಶನಿವಾರ ಹಳ್ಳಕ್ಕೆ ನೀರು ಬಿಟ್ಟಿದ್ದರಿಂದ ಬೆಳೆಯಲ್ಲ ಕೊಚ್ಚಿಕೊಂಡು ಹೋಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ನೀರು ಸ್ವಲ್ಪ ಬಂದಾಗಲೇ ಬೆಳಿಗ್ಗೆ ಆಳುಗಳನ್ನು ಕರೆಸಿ ಅರ್ಧ ಎಕರೆಯಷ್ಟು ಬೆಳೆ ರಕ್ಷಿಸಲಾಗಿದೆ. ಇನ್ನೂ ನಾಲ್ಕೂವರೆ ಎಕರೆಯಷ್ಟು ಬೆಳೆ ನೀರುಪಾಲಾಗಿದೆ. ಲಕ್ಷಗಟ್ಟಲೇ ಖರ್ಚುಮಾಡಿ ಈರುಳ್ಳಿ ಬೆಳೆಲಾಗಿತ್ತು. ಆದರೆ ಮಳೆ ಎಲ್ಲವನ್ನೂ ಕಿತ್ತುಕೊಂಡಿದೆ’ ಎಂದು ಚಿಕ್ಕ ಸಿಂದೋಗಿ ಗ್ರಾಮದ ರೈತ ಸಿದ್ದಪ್ಪ ಭೂತಣ್ಣನವರ ತಮ್ಮ ಅಳಲನ್ನು ತೋಡಿಕೊಂಡರು.

ನಗರದಲ್ಲಿ ಸುರಿದ ಮಳೆಗೆ ರಾಜಕಾಲುವೆ ತುಂಬಿಹರಿದು ಬಸ್‌ನಿಲ್ದಾಣದ ಎದುರು ಮುಖ್ಯ ರಸ್ತೆಯಲ್ಲಿ ನೀರು ನಿಂತು ಕೆಲ ಕಾಲ ಸಂಚಾರ ಅಸ್ತವ್ಯಸ್ಥ ಗೊಂಡಿತು. ಈ ಮಳೆಯಿಂದಾಗಿ ಇಲ್ಲಿನ ಕೆಲ ರಸ್ತೆಗಳು ಕೊಚ್ಚೆಗುಂಡಿಯಾಗಿದ್ದವು. ಶನಿವಾರವು ಸಹ ನಗರದಲ್ಲಿ ಉತ್ತಮ ಮಳೆಯಾಗಿದೆ.

ತಾಲ್ಲೂಕಿನ ಗಬ್ಬೂರು ಕೆರೆ ಭರ್ತಿಯಾಗಿದ್ದು, ಕೋಡಿ ಬಿದ್ದಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೆಲ ಮನೆಗಳು ಕುಸಿದು ಬಿದ್ದಿವೆ. ಯಾವುದೇ ಪ್ರಾಣ ಹಾನಿ ಆದ ಬಗ್ಗೆ ವರದಿಯಾಗಿಲ್ಲ.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT