ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ತಿಯಲ್ಲಿ ಒಬ್ಬಂಟಿಯಾದ ಗೊಮ್ಮಟ!

Last Updated 15 ಅಕ್ಟೋಬರ್ 2017, 9:06 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಈಗ ಎಲ್ಲೆಲ್ಲೂ ಮುಂದಿನ ವರ್ಷದ ನಡೆಯಲಿರುವ ಶ್ರವಣಬೆಳಗೊಳ ಗೊಮ್ಮಟನ ಮಹಾಮಸ್ತಕಾಭಿಷೇಕದ್ದೇ ಸುದ್ದಿ. ಶ್ರವಣಬೆಳಗೊಳದಷ್ಟೇ ಐತಿಹಾಸಿಕ ಮಹತ್ವ ಹೊಂದಿರುವ ತಾಲ್ಲೂಕಿನ ಬಸ್ತಿ ಹೊಸಕೋಟೆಯ ಶ್ರವಣಪ್ಪನ (ಬಾಹುಬಲಿ ಮೂರ್ತಿ) ಕ್ಷೇತ್ರದ ಬಗ್ಗೆ ಯಾರಿಗೂ ಅಷ್ಟಾಗಿ ಅರಿವಿಲ್ಲ.

ಸಾವಿರಾರು ವರ್ಷಗಳ ಜೈನ ಇತಿಹಾಸವನ್ನು ಕೂಗಿ ಹೇಳುವ ಬಸ್ತಿಯ ಕಲ್ಲುಗಳು ಸರ್ಕಾರಗಳ ನಿರ್ಲಕ್ಷ್ಯದಿಂದ ಮೌನರೂಪ ತಾಳಿವೆ. ಕನ್ನಂಬಾಡಿ ಕಟ್ಟೆಯ ಹಿನ್ನೀರಿನ, ಕಾವೇರಿ ನದಿ ತೀರದಲ್ಲಿರುವ ಈ ಸ್ಥಳ ಪಟ್ಟಣದಿಂದ 30 ಕಿ.ಮೀ ದೂರವಿದೆ. ಮಂಡ್ಯದಿಂದ 60 ಕಿ.ಮಿ ದೂರ. ರಾಜ್ಯದ ನಾಲ್ಕನೇ ಗೊಮ್ಮಟ ಮೂರ್ತಿ ಎಂಬ ಖ್ಯಾತಿಗೆ ಪಾತ್ರವಾದ 18 ಅಡಿ ಎತ್ತರದ ಬಾಹುಬಲಿ ವಿಗ್ರಹವಿರುವ ಈ ಸ್ಥಳ 12 ನೇ ಶತಮಾನದಲ್ಲಿ ಮಾಣಿಕ್ಯದೊಡಲೂರು ಎಂದೇ ಖ್ಯಾತವಾಗಿತ್ತು ಕ್ರಿ.ಶ.12 ನೇ ಶತಮಾನದಲ್ಲಿ ಹೊಯ್ಸಳ ದೊರೆ ವಿಷ್ಣುವರ್ದನನ ದಂಡನಾಯಕ ಪುಣಿಶಮಯ್ಯ ಇಲ್ಲಿ 18 ಅಡಿ ಎತ್ತರದ ಏಕಶಿಲಾ ಬಾಹುಬಲಿ ವಿಗ್ರಹ ಕೆತ್ತಿಸಿದ ಎಂದು ಇತಿಹಾಸ ಪುಟಗಳು ಹೇಳುತ್ತವೆ.

ಈಗ ಇಲ್ಲಿ ಯಾವೊಬ್ಬ ಜೈನಯತಿಗಳೂ ಕಾಣಸಿಗುವದಿಲ್ಲ. ಏಕಶಿಲಾಮೂರ್ತಿಯಾದ ಬಾಹುಬಲಿ ವಿಗ್ರಹ ಹಾಗೂ ಇನ್ನಿತರ ಜಿನವಿಗ್ರಹಗಳು ಅನಾಥವಾಗಿ ಬಿದ್ದಿದ್ದು ಗತಕಾಲವನ್ನು ನೆನಪು ಮಾಡಿಕೊಡುತ್ತವೆ. ಆದರೆ ಕಾಲದ ಗರ್ಭದಲ್ಲಿ ತನ್ನ ಮಹತ್ವವನ್ನು ಕಳೆದುಕೊಂಡಿರುವ ಗೊಮ್ಮಟ ಮೂರ್ತಿ ಮೌನವ್ರತದಲ್ಲಿದ್ದಾನೆ. ಏಕತಾನತೆಯನ್ನು ಅನುಭವಿಸುತ್ತಾ ಮೌನಕ್ಕೆ ಶರಣಾಗಿದ್ದಾನೆ.

ಕನ್ನಂಬಾಡಿ ಕಟ್ಟೆ ನಿರ್ಮಾಣದ ನಂತರ ಇಲ್ಲಿದ್ದ ಗ್ರಾಮ ಸ್ಥಳಾಂತರಗೊಂಡು ಕುರುಬರ ಬಸ್ತಿ ಹಾಗೂ ಹೊಸಕೋಟೆ ಬಸ್ತಿ ಎಂಬ ಹೊಸ ಹೆಸರಿನಲ್ಲಿ ಅನತಿದೂರದಲ್ಲಿ ನಿರ್ಮಿತವಾಗಿದೆ. ಆದರೆ ಈ ಬಸ್ತಿಗೊಮ್ಮಟವಿರುವ ಈ ತಾಣ ಮಾತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಶ್ರವಣಬೆಳಗೊಳದ ಗೊಮ್ಮಟಮೂರ್ತಿಯಂತೆ ಆಕರ್ಷಕ ಕೆತ್ತನೆ ಹೊಂದಿರದಿದ್ದರೂ ನೋಡುಗರನ್ನು ಮೋಡಿ ಮಾಡುವ ಈ ವಿಗ್ರಹ ಕಾಲದ ಪ್ರವಾಹದಲ್ಲಿ ಸಿಕ್ಕಿಕೊಂಡಿದೆ. ಮೂರ್ತಿಯ ರಕ್ಷಣೆಗಾಗಿ ಪೌಳಿ ನಿರ್ಮಿಸಿ ಸಂರಕ್ಷಿಸಲಾಗಿದೆ.

ಮೂರ್ತಿಯ ಸುತ್ತ–ಮುತ್ತ ಜಿನ ವಿಗ್ರಹಗಳನ್ನು ಇಡಲಾಗಿದ್ದು, ಹಲವು ವಿಗ್ರಹಗಳನ್ನು ಹೂಳಲಾಗಿದೆ. ಇನ್ನೂ ಕೆಲವು ಭಿನ್ನವಾಗಿದ್ದರೆ, ಮಂಟಪಗಳು ಶಿಥಿಲವಾಗಿವೆ.
ಶ್ರವಣಬೆಳಗೊಳಕ್ಕೆ ಹೋಗುವ ಯಾತ್ರಾರ್ಥಿಗಳು ಜಿಲ್ಲೆಯ ಮೂಲಕವೇ ಹೋಗುವುದರಿಂದ ಜಿಲ್ಲಾಡಳಿತ ಇತ್ತ ಗಮನಹರಿಸಿ ಈ ಐತಿಹಾಸಕ ತಾಣದ ಅಭಿವೃದ್ಧಿಗೆ ಕ್ರಮ ವಹಿಸಬೇಕು’ ಎಂದು ಸ್ಥಳೀಯರಾದ ಬಸ್ತಿರಂಗಪ್ಪ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT