ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಿಯ ಜನರ ಮುಖದಲ್ಲಿ ಮೂಡಿದ ಸಂತಸ

Last Updated 15 ಅಕ್ಟೋಬರ್ 2017, 9:20 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ಅಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿತ್ತು. ದಶಕದ ಹೋರಾಟದ ಕನಸು ಇಂದು ಈಡೇರಿದೆ ಎಂಬುದನ್ನು ಮನಗಂಡು ಸಂಭ್ರಮಿಸಲು ಅಲ್ಲಿ ಎಲ್ಲರೂ ಸೇರಿದಂತಿತ್ತು, ತಾಲ್ಲೂಕಿನ ಅರಣ್ಯದಲ್ಲಿರುವ ಎಲ್ಲ ಹಾಡಿಯ ಬಹುತೇಕ ಜನರು ಅಲ್ಲಿ ನೆರೆದಿದ್ದರು. ಪಟ್ಟಣದ ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಬುಡಕಟ್ಟು ಜನರಿಗೆ ಸಮುದಾಯ ಹಕ್ಕುಪತ್ರಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯವಿದು.

ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ 16 ಹಾಡಿಗಳ ನಿವಾಸಿಗಳಿಗೆ ಸಮುದಾಯ ಹಕ್ಕುಪತ್ರಗಳನ್ನು ಶನಿವಾರ ವಿತರಿಸಿ ಮಾತನಾಡಿದ ಶಾಸಕ ಕೆ.ವೆಂಕಟೇಶ್, ಅರಣ್ಯದಂಚಿನಲ್ಲಿರುವ ಬುಡಕಟ್ಟು ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದಾಗಿ ಉತ್ತಮ ಮನೆಗಳೇ ಕುಸಿಯುತ್ತಿರುವುದು ಕಂಡು ಬರುತ್ತಿದ್ದು, ಗುಡಿಸಲು ವಾಸಿಗಳ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಲು ಅಸಾಧ್ಯ ಎಂದರು.

ತಾಲ್ಲೂಕಿನಲ್ಲಿ ಬುಡಕಟ್ಟು ಜನರ ಸುದೀರ್ಘ ಹೋರಾಟದ ಫಲವಾಗಿ ಹಕ್ಕುಪತ್ರಗಳನ್ನು ಪಡೆಯುವಂತಾಗಿದೆ. 2008-09ರಲ್ಲಿ ವೈಯುಕ್ತಿಕ ಹಕ್ಕುಗಳಿಗಾಗಿ 1,113 ಮಂದಿ ಅರ್ಜಿ ಸಲ್ಲಿಸಿ 165 ಜನ ಹಕ್ಕುಪತ್ರ ಪಡೆದಿದ್ದಾರೆ. 2013-14ರಲ್ಲಿ 1,390ಜನ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿರುವುದರಿಂದ ಗಿರಿಜನರು ಹಾಡಿಯ ಸಮಸ್ಯೆಗಳನ್ನು ನಿವೇದಿಸಿಕೊಳ್ಳುವಂತೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ರಾಮು ಮಾತನಾಡಿ, ಅರಣ್ಯದಂಚಿನಲ್ಲಿರುವ ಜನರಿಗೆ ಇನ್ನೂ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್‌ ದೊರೆಯದ ಕಾರಣ ಹಲವಾರು ಸರ್ಕಾರಿ ಮೂಲ ಸೌಕರ್ಯಗಳಿಂದ ವಂಚಿತರಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಅವರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ತಿಳಿಸಿದರು.

ಕೆಲವು ಕಾಣದ ಕೈಗಳು ಗಿರಿಜನರನ್ನು ಬಳಸಿಕೊಂಡು ಅರಣ್ಯ ಉತ್ಪನ್ನಗಳ ನಾಶ ಮಾಡುತ್ತಿದ್ದು ತಕ್ಷಣ ಅರಣ್ಯ ಇಲಾಖೆ ಎಚ್ಚೆತ್ತು ಇದಕ್ಕೆ ಕಡಿವಾಣ ಹಾಕಬೇಕಿದೆ. ಮುಖ್ಯವಾಗಿ ಕಾಡಂಚಿನಲ್ಲಿ ವಾಸಿಸುವ ಜನರಿಗೆ ಕುಡಿಯುವ ನೀರು, ರಸ್ತೆ, ಬೀದಿ ದೀಪ ಮುಂತಾದ ಸೌಲಭ್ಯಗಳು ಇನ್ನೂ ಮರೀಚಿಕೆಯಾಗಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಆದಿವಾಸಿ ಮುಖಂಡರಾದ ಜಾನಕಮ್ಮ ಮಾತನಾಡಿ, ಸರ್ಕಾರ ಬುಡಕಟ್ಟು ಜನಾಂಗಕ್ಕೆ ಕೇವಲ ಸಮುದಾಯ ಹಕ್ಕುಪತ್ರಗಳನ್ನು ನೀಡಿದರೆ ಸಾಲದು ವೈಯಕ್ತಿಕ ಹಕ್ಕು ಪತ್ರಗಳನ್ನು ನೀಡಿ ಅವರ ಜೀವನೋಪಾಯಕ್ಕೆ ಅನುವು ಮಾಡಿಕೊಡಬೇಕೆಂದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಯೋಜನ ಸಮನ್ವಯಾಧಿಕಾರಿ ಶಿವಕುಮಾರ್, ಡಿಸಿಎಫ್ ಶೌಕತ್ ಹುಸೇನ್, ಆರ್ಎಫ್ಒ ಗಿರೀಶ್, ಆದಿವಾಸಿ ಮುಖಂಡ ಜಯಪ್ಪ, ಲಿಂಗಾಪುರ ಹಾಡಿಯ ಬುಡಕಟ್ಟು ಸಮಾಜದ ಮುಖಂಡರಾದ ಬಸಪ್ಪ, ಮುತ್ತ ಮಾತನಾಡಿದರು. ಈ ಸಂದರ್ಭದಲ್ಲಿ 16 ಹಾಡಿಗಳ ನಿವಾಸಿಗಳಿಗೆ ಸಮುದಾಯ ಹಕ್ಕುಪತ್ರಗಳನ್ನು ಶಾಸಕ ಕೆ.ವೆಂಕಟೇಶ್ ವಿತರಿಸಿದರು.

ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ಕೆ.ಆರ್.ನಿರೂಪಾ, ಸದಸ್ಯರಾದ ಮಲ್ಲಿಕಾರ್ಜುನ್, ಶ್ರೀನಿವಾಸ್, ಗ್ರಾ.ಪಂ. ಅಧ್ಯಕ್ಷೆ ಲಲಿತಾ, ಮಂಗಳಗೌರಮ್ಮ, ಉಪವಿಭಾಗಾಧಿಕಾರಿ ನಿತೀಶ್, ತಹಶೀಲ್ದಾರ್ ಜೆ.ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಪ್ಪ, ಬಿಸಿಎಂ ತಾಲ್ಲೂಕು ಅಧಿಕಾರಿ ಮೋಹನ್‌ಕುಮಾರ್, ಸಮಾಜಕಲ್ಯಾಣ ಇಲಾಖೆಯ ಸಿಬ್ಬಂದಿ ವಿಶ್ವನಾಥ್, ಕೀರ್ತಿಕುಮಾರ್, ಮೋಹನ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT