ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಜ್ಯ, ತ್ಯಾಜ್ಯಮುಕ್ತ ಗ್ರಾಮ ಮಾಡಿ

Last Updated 15 ಅಕ್ಟೋಬರ್ 2017, 9:31 IST
ಅಕ್ಷರ ಗಾತ್ರ

ಮಾಗಡಿ: ಹಿರಿಯ ನಾಗರಿಕರು ಜ್ಞಾನಶಕ್ತಿ ಬಳಸಿ ಊರನ್ನು ವ್ಯಾಜ್ಯ ಮತ್ತು ತ್ಯಾಜ್ಯಮುಕ್ತ ಗ್ರಾಮ ಮಾಡಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಮಹದೇವ.ಕೆ.ತಿಳಿಸಿದರು. ಹಿರಿಯ ನಾಗರಿಕರ ದಿನಾಚರಣೆ ಮತ್ತು ಲೋಕ ಅದಾಲತ್‌, ಮಧ್ಯಸ್ಥಿಕೆಗಾರಿಕೆ ಹಾಗೂ ಸಂಧಾನಗಾರಿಕೆ ಕುರಿತು ಕಾನೂನು ಅರಿವು–ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಹಿರಿಯರನ್ನು ಕಡೆಗಣಿಸದೆ ಅವರ ಆಶೋತ್ತರಗಳಿಗೆ ಸ್ಪಂದಿಸಬೇಕು. ಹಿರಿಯರು ಅಪ್ರಯೋಜಕರಲ್ಲ, ನಮಗಾಗಿ ತ್ಯಾಗ ಮಾಡಿರುವ ಗುರುಗಳು ಎಂದು ಗೌರವಿಸಬೇಕು’ ಎಂದು ತಿಳಿಸಿದರು. ಪ್ರಧಾನ ಸಿವಿಲ್‌ ನ್ಯಾಯಾಧೀಶ ಮಹಾವೀರ್‌.ಎಂ.ಕರೆಣ್ಣವರ ಮಾತನಾಡಿ, ‘ಕೊಡ ನೀರಿಗಾಗಿ ಹೊಡೆದಾಡಿಕೊಂಡು ನ್ಯಾಯಾಲಯಕ್ಕೆ ಹತ್ತಾರು ವರ್ಷಗಳ ಕಾಲ ಅಲೆಯಬೇಡಿ, ಬಿ.ಆರ್‌.ಅಂಬೇಡ್ಕರ್‌ ಹಿರಿಯರ ಅನುಭವವನ್ನು ಕ್ರೋಡೀಕರಿಸಿ, ಅವರ ಅನುಭವದ ಮೂಸೆಯಲ್ಲಿ ಕಾನೂನುಗಳನ್ನು ರಚಿಸಿದರು’ ಎಂದರು.

ಮಕ್ಕಳಿಗೆ ನೈತಿಕತೆ, ವಿವೇಕ, ವೈಜ್ಞಾನಿಕ ವಿಚಾರಗಳ ಜೊತೆಗೆ, ಪೌಷ್ಟಿಕ ಆಹಾರ ನೀಡಿದರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಸಂಪ್ರದಾಯ, ವಾಡಿಕೆಯ ಸಾಮಾನ್ಯ ಜ್ಞಾನವೇ ಕಾನೂನು ಎಂಬುದನ್ನು ಪ್ರತಿಯೊಬ್ಬರು ಮನವರಿಕೆ ಮಾಡಿಕೊಳ್ಳಬೇಕಿದೆ ಎಂದು ವಿವರಿಸಿದರು.

ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಲ್‌.ನಂಜಯ್ಯ ಮಾತನಾಡಿ, ಸಮಾಜದ ಅಭ್ಯುದಯಕ್ಕೆ ಹಿರಿಯರ ಅನುಭವ ತೀರಾ ಅಗತ್ಯವಾಗಿದೆ, ಅಂಬೇಡ್ಕರ್‌ ಬರೆದಿರುವ ಕಾನೂನುಗಳು ಅನುಷ್ಠಾನಗೊಳ್ಳಬೇಕು, ಸರ್ವರು ಸೌಹಾರ್ದದಿಂದ ಕೂಡಿಬಾಳುವ ಮೂಲಕ ಭವ್ಯ ಭಾರತದ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದರು.

ವಕೀಲ ಎಂ.ಎಸ್‌.ಸಿದ್ದಲಿಂಗಪ್ಪ, ಮಧ್ಯಸ್ಥಿಕೆ ಮತ್ತು ಸಂಧಾನಗಾರಿಕೆ, ವಕೀಲ ಕೆ.ಎಸ್‌.ಪ್ರಕಾಶ್‌, ಹಿರಿಯ ನಾಗರಿಕರ ಹಕ್ಕುಗಳು, ವಕೀಲ ಎಲ್‌.ನರಸಿಂಹಮೂರ್ತಿ ಉಪನ್ಯಾಸ ನೀಡಿದರು.

ಒಂದನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ ಲತಾ, ಎರಡನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ ರೇಖಾ.ಎಚ್‌.ಸಿ, ಸರ್ಕಾರಿ ಅಭಿಯೋಜಕಿಯರಾದ ಯಶೋಧ. ಎಚ್‌.ಆರ್‌, ಎನ್‌.ಶಾರದಾ, ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶ್ರೀನಿವಾಸ್‌, ಉಪಾಧ್ಯಕ್ಷ ದೇವರಾಜೇಗೌಡ, ಕಾರ್ಯದರ್ಶಿ, ಎಂ.ನಾಗೇಶ್‌, ವಕೀಲರಾದ ಎಚ್‌.ನಾರಾಯಣ ಸ್ವಾಮಿ, ಹೇಮಮಾಲಿನಿ, ರವಿಕಲ, ಹಿರಿಯ ನಾಗರೀಕರ ಸಂಘದ ಲಕ್ಷ್ಮೀನರಸಿಂಹಯ್ಯ, ಕೆಂಚನರಸಯ್ಯ, ಕೆ.ಎಸ್‌.ಹನುಮೇಗೌಡ, ತಿಮ್ಮಯ್ಯ, ನಾರಾಯಣಪ್ಪ ನಾಯಕ, ಯಲ್ಲಯ್ಯ ಬೋವಿ, ಹೊಸಪೇಟೆ ರಂಗಪ್ಪ, ತಿರುಮಲೆ ರಂಗಹನುಮಯ್ಯ, ಶಂಭುದೇವನಹಳ್ಳಿ ಶಿವಣ್ಣ ಹಾಗೂ ಹಿರಿಯ ನಾಗರಿಕರು ಇದ್ದರು.
ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ತಾಲ್ಲೂಕು ನಿವೃತ್ತ ಸರ್ಕಾರಿ ನೌಕರರ ಸಂಘ, ವಕೀಲರ ಸಂಘ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT