ಸಚಿವ ರೋಷನ್ ಬೇಗ್ ಪ್ರತಿಕೃತಿ ದಹನ

ಭಾನುವಾರ, ಮೇ 26, 2019
31 °C

ಸಚಿವ ರೋಷನ್ ಬೇಗ್ ಪ್ರತಿಕೃತಿ ದಹನ

Published:
Updated:

ಭದ್ರಾವತಿ: ‘ದೇಶದ ಜನರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪದ ಬಳಸಿರುವ ಸಚಿವ ರೋಷನ್ ಬೇಗ್ ಅವರು ದೇಶದ ಜನರ ಕ್ಷಮೆಯಾಚಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ಮುಖಂಡ ಜಿ. ಧರ್ಮಪ್ರಸಾದ್ ಆಗ್ರಹಿಸಿದರು.

ಇಲ್ಲಿನ ನಮೋ ಗ್ರೂಪ್ ಫೌಂಡೇಷನ್ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೋಷನ್ ಬೇಗ್ ಪ್ರತಿಕೃತಿ ದಹಿಸಿದ ಬಳಿಕ ಅವರು ಮಾತನಾಡಿದರು. ‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳ ಕುರಿತು ಸಚಿವರಾಗಿ ಅವಹೇಳನಕಾರಿಯಾಗಿ ಮಾತನಾಡಿರುವುದು ಜನತೆಗೆ ಮಾಡಿರುವ ಅವಮಾನ’ ಎಂದು ಕಿಡಿಕಾರಿದರು.

‘ಮಾತಿನ ಭರದಲ್ಲಿ ಕೆಲವೊಮ್ಮೆ ಸಹಜವಾಗಿ ಕೆಟ್ಟ ಪದಗಳ ಬಳಕೆಯಾಗುತ್ತದೆ ಎಂದು ರೋಷನ್ ಬೇಗ್ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿದ ಸಚಿವ ರಮಾನಾಥ ರೈ ವಿರುದ್ಧವೂ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಪುತ್ತೂರು ಪಿಎಸ್ಐ ವಿರುದ್ಧ ಅವಹೇಳನಕಾರಿ ಪದ ಬಳಸಲಾಗಿದೆ ಎಂಬ ಕಾರಣಕ್ಕೆ ಸಾಮಾಜಿಕ ಹೋರಾಟಗಾರ ಜಗದೀಶ ಕಾರಂತ ವಿರುದ್ಧ ಕ್ರಮ ತೆಗೆದುಕೊಳ್ಳುವ ಸರ್ಕಾರ, ಪ್ರಧಾನಿ ವಿರುದ್ಧ ಅಸಂಬದ್ಧ ಶಬ್ದ ಬಳಸಿದ ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳದೇ ಮೌನಕ್ಕೆ ಶರಣಾಗಿರುವುದು ಖಂಡನೀಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತರ ಮರಿಸ್ವಾಮಿ ಮಾತನಾಡಿ, ‘ಹಿಂದೆಯೂ ಹಲವು ಹಗರಣದಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಸಚಿವರು ತಮ್ಮ ನಾಲಿಗೆ ಮೇಲೆ ಹಿಡಿತವನ್ನು ಇಟ್ಟುಕೊಳ್ಳದೆ ಮಾತನಾಡಿರುವುದು ಅಪರಾಧ’ ಎಂದು ಹೇಳಿದರು.

ಸಚಿವರ ಪ್ರತಿಕೃತಿ ದಹನ ನಡೆಸಿದ ಕಾರ್ಯಕರ್ತರು ಪ್ರಧಾನಿ ಪರವಾಗಿ ಘೋಷಣೆ ಕೂಗಿದರು. ಮುಖಂಡರಾದ ಧರ್ಮೂಜೀ, ಮಲ್ಲಿಕಾರ್ಜುನ, ಐತಾಳ್, ಮೂರ್ತಿ, ಗಿರಿಗೌಡ, ಸತ್ಯ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry