ಡಿಸಿ ಮನೆಯೆದುರು ಯುವಕನ ಶವವಿಟ್ಟು ಪ್ರತಿಭಟನೆ

ಮಂಗಳವಾರ, ಜೂನ್ 25, 2019
23 °C

ಡಿಸಿ ಮನೆಯೆದುರು ಯುವಕನ ಶವವಿಟ್ಟು ಪ್ರತಿಭಟನೆ

Published:
Updated:
ಡಿಸಿ ಮನೆಯೆದುರು ಯುವಕನ ಶವವಿಟ್ಟು ಪ್ರತಿಭಟನೆ

ವಿಜಯಪುರ: ನಗರದಲ್ಲಿನ ಜಿಲ್ಲಾಧಿಕಾರಿ ನಿವಾಸದ ಮುಂಭಾಗ, ಮೃತಪಟ್ಟ ಯುವಕನ ಶವವಿಟ್ಟು ವಿವಿಧ ಬಡಾವಣೆಯ ನಾಗರಿಕರು ಶನಿವಾರ ಪ್ರತಿಭಟಿಸಿದರು.

ಶಂಕಿತ ಡೆಂಗಿಯಿಂದಲೇ ಯುವಕ ಮೃತಪಟ್ಟಿದ್ದಾನೆ ಎಂದು ದೂರಿದ ಬಾಟ ಕಾಲೊನಿಯ ನಿವಾಸಿಗಳು, ಶವದೊಂದಿಗೆ ಜಿಲ್ಲಾಧಿಕಾರಿ ನಿವಾಸದ ಮುಂಭಾಗ ಜಮಾಯಿಸಿ ಧರಣಿ ಕೂತರು.

‘ಡೆಂಗಿ ಜ್ವರದಿಂದ ಬಳಲುತ್ತಿದ್ದ ಯುವಕ ರೋಹನ್ ಬಾಗಡೆಯನ್ನು ಸೊಲ್ಲಾಪುರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಆತ ಸ್ಪಂದಿಸದೆ ಶುಕ್ರವಾರ ತಡ ರಾತ್ರಿ ಮೃತಪಟ್ಟಿದ್ದಾನೆ. ಸಾವು ಸಂಭವಿಸಿದರೂ, ಸ್ಥಳೀಯ ಪಾಲಿಕೆ ಆಡಳಿತ, ಆರೋಗ್ಯ ಇಲಾಖೆ ಡೆಂಗಿ, ಮಲೇರಿಯಾ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

‘ಬಾಟ ನಗರ ದರ್ಗಾದಲ್ಲಿ ಎರಡ್ಮೂರು ತಿಂಗಳಿನಿಂದ ಡೆಂಗಿ, ಮಲೇರಿಯಾ ಕಾಣಿಸಿಕೊಂಡಿದೆ. 60ಕ್ಕೂ ಹೆಚ್ಚು ಜನರು ಶಂಕೆಯಿಂದ ಬಳಲುತ್ತಿದ್ದು, ಏಳೆಂಟು ಮಂದಿ ಈಗಾಗಲೇ ಬಲಿಯಾಗಿದ್ದಾರೆ. ಇಷ್ಟಾದರೂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ. ಸಾವಿನ ಕಾರಣ ಪತ್ತೆ ಹಚ್ಚುತ್ತಿಲ್ಲ’ ಎಂದು ಕಿಡಿಕಾರಿದರು.

‘ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆಯವರು ಸ್ಲಂ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿಲ್ಲ. ಡೆಂಗಿ, ಮಲೇರಿಯಾ ಜ್ವರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ. ಇದರಿಂದ ಈ ಕಾಲೊನಿಯಲ್ಲಿ ಸಾವು ನಡೆಯುವುದು ಹೆಚ್ಚಿದೆ’ ಎಂದು ಮುಖಂಡ ಅಕ್ರಂ ಮಾಶ್ಯಾಳಕರ ದೂರಿದರು.

ಚುನಾವಣಾ ತಹಶೀಲ್ದಾರ್ ವಿಜಯ ಕಡಕಬಾವಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಆರೋಗ್ಯ ಇಲಾಖೆಗೆ ತಕ್ಷಣವೇ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ನಿರ್ಮಲಾ ಹೊಸಮನಿ, ಚಂದ್ರು ಆಲಮೇಲ, ಸಿದ್ದಲಿಂಗಯ್ಯ ಹಿರೇಮಠ, ಮೀನಾಕ್ಷಿ ಕಾಲೇಬಾಗ, ಇಂದುಬಾಯಿ ರಾಠೋಡ, ಶೋಭಾ ಗಾಯಕವಾಡ, ರಾಕೇಶ ಬಾಟುಂಗೆ, ಜ್ವಾನಿ ಬಾಗಡೆ, ಶನ್ನು ಬಾಗಡೆ ಪ್ರತಿಭಟನೆಯಲ್ಲಿ ಕಣ್ಣೀರಿಟ್ಟರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry