ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಮಿನರಲ್ಸ್‌ ಏನು ವಿದೇಶಿ ಕಂಪೆನಿಯೇ: ಸಿಎಂ ಸಿದ್ದರಾಮಯ್ಯ

Last Updated 15 ಅಕ್ಟೋಬರ್ 2017, 11:05 IST
ಅಕ್ಷರ ಗಾತ್ರ

ಮೈಸೂರು: ‘ಆರ್ಥಿಕ ವ್ಯವಸ್ಥೆ ಬಗ್ಗೆ ಯಡಿಯೂರಪ್ಪಗೆ ಕನಿಷ್ಠ ಜ್ಞಾನವೂ ಇಲ್ಲ. ಹಣಕಾಸಿನ ವ್ಯವಸ್ಥೆ ಬಗ್ಗೆ ಅವರೇನು ಮಾತನಾಡುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಭಾನುವಾರ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ರೈತರ ಸಾಲಮನ್ನಾ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರಲಿಲ್ಲ. ಹೀಗಾಗಿ, ಮೈಸೂರು ಮಿನರಲ್ಸ್‌ ಲಿಮಿಟೆಡ್‌ನಲ್ಲಿನ (ಎಂಎಂಎಲ್‌) ಸುಮಾರು ₹1 ಸಾವಿರ ಕೋಟಿಯನ್ನು ಅಪೆಕ್ಸ್‌ ಬ್ಯಾಂಕ್‌ಗೆ ಠೇವಣಿ ಇಡಲು ನಿರ್ದೇಶನ ನೀಡಲಾಗಿದೆ. ಅದರಲ್ಲೇನು ತಪ್ಪಿದೆ? ಎಂಎಂಎಲ್‌ ಏನು ವಿದೇಶಿ ಕಂಪೆನಿಯೇ? ಅಲ್ಲಿರುವುದೂ ಸರ್ಕಾರದ್ದೇ ಹಣ’ ಎಂದು ಸಮಜಾಯಿಷಿ ನೀಡಿದರು.

‘ಎಂಎಂಎಲ್‌ನಲ್ಲಿ ಇರುವುದು ಹೂಡಿಕೆದಾರರ ಹಣವಲ್ಲ. ಸರ್ಕಾರ ಹಾಕಿರುವ ಬಂಡವಾಳವದು. ಮುಂದಿನ ಬಜೆಟ್‌ನಲ್ಲಿ ಹಣ ಹಿಂದಿರುಗಿಸುತ್ತೇವೆ. ಇದೊಂದು ಸಾಮಾನ್ಯ ಪ್ರಕ್ರಿಯೆ. ಯಡಿಯೂರಪ್ಪ ಹಣಕಾಸು ಸಚಿವರಾಗಿದ್ದವರು. ಆದರೆ, ಈ ಬಗ್ಗೆ ಅವರಿಗೆ ಯಾವುದೇ ವಿಚಾರ ಗೊತ್ತಿಲ್ಲ’ ಎಂದರು.

‘ರಾಜ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. 10 ವರ್ಷ ದೇಶದ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ನುಡಿದರು.

ಬಿಜೆಪಿ ಪರಿವರ್ತನಾ ರ‍್ಯಾಲಿ ಕುರಿತು ವ್ಯಂಗ್ಯವಾಡಿದ ಅವರು, ‘ಬಿಜೆಪಿ ಪಾಲಿಗೆ ಸಮಾಜ ಒಡೆಯುವುದೇ ಪರಿವರ್ತನೆ. ಜಾತಿಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ. ಧರ್ಮಧರ್ಮಗಳ ನಡುವೆ ದ್ವೇಷ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ತಳಸಮುದಾಯ, ರೈತರು, ಮಹಿಳೆಯರ ಬಗ್ಗೆ ಕಾಳಜಿ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT