ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂ ಬೇಕೇ ಹೂ

Last Updated 15 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

–ಸುಕೃತ ಎಸ್‌.

ನನ್ನ ಜೀವನದ ಬಗ್ಗೆ ಏನ್‌ ಹೇಳ್ಲಿ ತಾಯಿ. ದೇವರು ಕೊಟ್ಟ ಜೀವ. ಇರೋ ತನಕ ಬದುಕಬೇಕು. ಅವನು ಬದುಕು ಅಂದ ಮೇಲೆ ಒಲ್ಲೆ ಅಂತ ಹೆಂಗೆ ಅನ್ನೊದು? ಕಷ್ಟನೋ ಸುಖನೋ ನಡೀತಾ ಇರೋದು. ನನ್ನ ಹುಟ್ಟೂರು ತಮಿಳುನಾಡಿನ ಸೇಲಂ. ಅಲ್ಲಿಂದ, ಇಲ್ಲಿಗೆ ಬಂದ್ವಿ. ಹೂವು ಮಾರಿಕೊಂಡು ಜೀವನ ಸಾಗಿಸ್ತಾ ಇದಿವಿ.

ಶಾಲೆ ಹೆಂಗಿದೆ ಅಂತ ನೋಡ್ಲಿಲ್ಲ. ಸಣ್ಣ ವಯಸ್ಸಿಗೆ ಮದುವೆ ಮಾಡಿದ್ರು. ಆಮೇಲೆ ಒಂದ್ರ ಹಿಂದೆ ಒಂದು ಅಂತ ಮೂರು ಮಕ್ಕಳಾದ್ವು. ನಮ್ಮ ಊರಲ್ಲಿ ಕೂಲಿ ಕೆಲಸ ಮಾಡ್ಕೊಂಡು ಇದ್ವಿ. ದಿನಕ್ಕೆ 50–100 ರೂಪಾಯಿ ಸಿಗ್ತಾ ಇತ್ತು. ಹಿಂಗೆ ದಿನ ಕಳಿತಾ ಇತ್ತು. ಒಂದು ದಿನ ಬೆಂಗಳೂರಿನಲ್ಲೇ ಇದ್ದ ನನ್ನ ತಂದೆಯ ತಂಗಿ, ‘ಅಲ್ಲಿಗೆ ಬಂದು ಬಿಡು ಎಲ್ಲಾದ್ರು ಕೆಲಸ ಹುಡುಕಿಕೊಂಡು ಜೀವನ ಮಾಡ್ಬೋದು ಅಂ‌ದ್ರು’. ನನ್ನ ಗಂಡ ಬೇರೆ ಕುಡುಕ. ದುಡಿದದ್ದೇಲ್ಲಾ ಕುಡಿಯಕೇ ಬೇಕಿತ್ತು. ಹಾಗಾಗಿ, ಇಡೀ ಸಂಸಾರ ಕಟ್ಟಿಕೊಂಡು ಇಲ್ಲಿಗೆ ಬಂದೆ ತಾಯಿ.

ಇಲ್ಲಿಗೆ ಬಂದೆ, ಹೂ ಮಾರೋ ಕೆಲಸ ಶುರು ಮಾಡಿದೆ. ಮೊದಲು ನಾನೇ ಹೂ ಕಟ್ಟಿ ಮನೆಮನೆಗೆ ಮಾರೋಕೆ ಹೋಗ್ತಿದ್ದೆ. ಮಕ್ಕಳು ಬೇರೆ ಸಣ್ಣವು. ಅವರನ್ನ ಚೆನ್ನಾಗಿ ಓದಿಸಬೇಕು ಅನ್ನೋದು ನನ್ನ ಆಸೆ. ವ್ಯಾಪಾರ ಸ್ವಲ್ಪ ಕೈಗೂಡ್ತು. ನಮ್ಮದೇ ಸ್ವಂತ ಅಂಗಡಿ ಹಾಕಿದ್ವಿ. ಈಗ ಗಂಡನೂ ಸ್ವಲ್ಪ ಸಹಾಯ ಮಾಡ್ತವ್ರೆ.

ಹೂವು ವ್ಯಾಪಾರ ಕಷ್ಟಕಣಮ್ಮ. ರಾತ್ರಿ 12 ಗಂಟೆಗೆ ತಮಿಳುನಾಡಿನಿಂದ ತಾಜಾ ಹೂವು ಬರುತ್ತೆ. ಅದನ್ನ ತಂದು ಹೂವು ಕಟ್ಟೊರಿಗೆ ಕೊಡಬೇಕು. ಇಷ್ಟಲ್ಲಾ ಆಗೋ ಹೊತ್ಗೆ ಮಧ್ಯ ರಾತ್ರಿ 2 ಆಗುತ್ತೆ. ಮತ್ತೆ ಬೆಳಗ್ಗೆ 4ಕ್ಕೆ ಎದ್ದು ನಮ್ಮ ಕೆಲಸ ಶುರು. 5 ಕೆ.ಜಿ ಹೂವು ಕಟ್ಟಿದ್ರೆ, ಹೂ ಕಟ್ಟೋರಿಗೆ 400 ರೂಪಾಯಿ ಕೊಡಬೇಕು. ನಾವೇ ಕಟ್ಟಿದ್ರೆ ಸ್ವಲ್ಪ ಜಾಸ್ತಿ ಉಳಿಯತ್ತೆ. ಜಾಸ್ತಿ ಕಟ್ಟೋಕೆ ಆಗಲ್ಲ. ದಿನಕ್ಕೆ ಐದು ಸಾವಿರ ದುಡುದ್ರೂ, ನಮಗೆ ಅಂತ ಉಳಿಯೋದು 400 ರೂಪಾಯಿ ಅಷ್ಟೇ.

ಹೋದ ತಿಂಗಳು ನನಗೆ ಗರ್ಭಕೋಶದ ಆಪರೇಷನ್ ಆಯ್ತು. ಒಂದು ತಿಂಗಳು ಆಗಿತ್ತು ಅಂಗಡಿ ಮುಚ್ಚಿದ್ವಿ. ಒಂದುವರೆ ಲಕ್ಷ ರೂಪಾಯಿ ಖರ್ಚು ಆಯ್ತು ತಾಯಿ. ನೋಡಿ, ಬಡವರಿಗೆ ಕಷ್ಟ ಜಾಸ್ತಿ.

ಇಲ್ಲಿಗೆ ಬಂದು ಸುಮಾರು 15 ವರ್ಷ ಆದ್ವು. ಬಂದಾಗ ಮಾನ ಮುಚ್ಕೊಳೋಕೆ ಸರಿಯಾದ ಬಟ್ಟೇನೂ ಇರಲಿಲ್ಲ. ಹೆಂಗೆಂಗೋ ಜೀವನ ಸಾಗ್ತಾ ಇಲ್ಲಿಗೆ ಬಂದು ನಿಂತಿದೆ. ದೀಪಾವಳಿ ಹಬ್ಬ ಬೇರೆ ಬಂತು. ಇನ್ನೂ ವ್ಯಾಪಾರ ಚುರುಕು ಆಗಿಲ್ಲ. ಒಂದೇ ಸಮನೆ ಮಳೆ ಬೇರೆ ಬರ್ತಾ ಇದೆ. ಹೂವೂಗಳೂ ಉಳಿಯಲ್ಲ. ಜನ ಕೂಡ ಬರಲ್ಲ.

ನಮ್ಮ ಜೀವನ ಮಾತ್ರ ಹಾಗೂ ಹೀಗೂ ಸಾಗ್ತಾನೇ ಇರುತ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT