ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಏರಿಕೆಗೆ ಆಧಾರವೇನು?

‘ಜಾತಿ ಜನಗಣತಿ’ಯನ್ನು ನಡೆಸಲು ತೋರಿಸಿದ ಉಮೇದನ್ನು ಅದರ ವಿವರ ಪ್ರಕಟಿಸಲು ಸರ್ಕಾರ ಏಕೆ ತೋರಿಸುತ್ತಿಲ್ಲ?
Last Updated 15 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‘ಮೀಸಲಾತಿ ಏರಿಕೆಯ ದಾರಿ ಸುಲಭವೇ?’ ಎಂಬ ಲೇಖನದಲ್ಲಿ (ಪ್ರ.ವಾ., ಸಂಗತ, ಅ. 10) ಎಸ್‌. ಗಣೇಶನ್‌ ಅವರು, ‘ಮೀಸಲಾತಿ ಪ್ರಮಾಣವನ್ನು ಶೇ 50 ರಿಂದ ಶೇ 70ಕ್ಕೆ ಏರಿಸಲು ತಮಿಳುನಾಡು ಸರ್ಕಾರ ಹಿಂದೆ ಮಾಡಿದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶಕ್ತರೇ’ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಮೀಸಲಾತಿ ಪ್ರಮಾಣವನ್ನು ಏರಿಸುವ ಮುಖ್ಯಮಂತ್ರಿಗಳ ಹೇಳಿಕೆಗೆ ಎರಡು ವರ್ಷಗಳ ಹಿಂದೆ ನಡೆಸಿದ, ಆದರೆ ಇಂದಿಗೂ ಅದರ ವಿವರಗಳನ್ನು  ಅಧಿಕೃತವಾಗಿ ಪ್ರಕಟಿಸದ ‘ಜಾತಿ ಜನಗಣತಿ’ಯಿಂದ (ಕರ್ನಾಟಕ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ) ಪಡೆದ ಮಾಹಿತಿಗಳೇ ಪ್ರೇರಣೆ ಎಂದೂ ಲೇಖಕರು ಹೇಳಿದ್ದಾರೆ.

ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ಜನಸಂಖ್ಯೆಯಲ್ಲಿ ಅವರ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ಒದಗಿಸಬೇಕೆಂದು ಸಂವಿಧಾನದಲ್ಲಿಯೇ ಹೇಳಲಾಗಿದೆ. ಆದ್ದರಿಂದ ಅವರಿಗೆ ಮೀಸಲಾತಿಯಲ್ಲಿ ಅದೇ ಪ್ರಮಾಣದಲ್ಲಿ ಏರಿಕೆ ಮಾಡುವುದು ಅನಿವಾರ್ಯ. ಆದರೆ ಹಿಂದುಳಿದ ವರ್ಗಗಳ ಪಟ್ಟಿಗೆ ಒಂದು ಜಾತಿಯನ್ನು ಸೇರಿಸಲು ಆ ಜಾತಿಯವರ ಸಾಮಾಜಿಕ, ಶೈಕ್ಷಣಿಕ ಮಟ್ಟ ಹಾಗೂ ಅವರು ಸರ್ಕಾರಿ ಹುದ್ದೆಗಳಲ್ಲಿ ಪಡೆದಿರುವ ಪ್ರಾತಿನಿಧ್ಯದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ತುಲನೆ ಮಾಡಬೇಕಾದ ಅವಶ್ಯಕತೆ ಇದೆ.

ನಮ್ಮಲ್ಲಿ ಈಗ ಜಾರಿಯಲ್ಲಿರುವ ಹಿಂದುಳಿದವರ ಮೀಸಲಾತಿಗೆ, 1989ರಲ್ಲಿ ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿ ಸಲ್ಲಿಸಿದ್ದ ವರದಿಯೇ ಆಧಾರ. ಸರ್ಕಾರವು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿವಿಧ ಜಾತಿಗಳ ವಿದ್ಯಾರ್ಥಿಗಳು ಎಸ್‌.ಎಸ್‌.ಎಲ್‌.ಸಿ., ಪಿ.ಯು.ಸಿ. ಪರೀಕ್ಷೆಗಳಲ್ಲಿ ತೇರ್ಗಡೆಯಾದ ಪ್ರಮಾಣ ಹಾಗೂ ವಿವಿಧ ವೃತ್ತಿಪರ ಕೋರ್ಸುಗಳಲ್ಲಿ ಮತ್ತು ಸರ್ಕಾರದಲ್ಲಿ ವಿವಿಧ ಹುದ್ದೆಗಳಲ್ಲಿ ಪಡೆದಿರುವ ಪ್ರಾತಿನಿಧ್ಯದ ಬಗ್ಗೆ ಮಾಹಿತಿ ಪಡೆದು ಈ ಜಾತಿಗಳು ಹಿಂದುಳಿದವರ ಪಟ್ಟಿಯಲ್ಲಿ ಇರಬೇಕೇ ಬೇಡವೇ ಎಂಬುದನ್ನು ನಿರ್ಧರಿಸಬೇಕೆಂದು ವರದಿ ಹೇಳಿತ್ತು. ನಮ್ಮಲ್ಲಿ 1994ರಿಂದ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಒಂದು ಕಾಯಂ ಆಯೋಗವೇ ಇದೆ. ಆದರೆ ಈ ಆಯೋಗವು ಚಿನ್ನಪ್ಪರೆಡ್ಡಿ ಆಯೋಗ ಹೇಳಿದಂತೆ ಮಾಹಿತಿ ಸಂಗ್ರಹಿಸಿ, ಪ್ರಕಟಿಸಿದಂತೆ ಕಾಣುವುದಿಲ್ಲ. ಇದಕ್ಕೆ ಕಾರಣವೇನು ಎಂದು ಜನಪರ ಹೋರಾಟಗಾರರು ಯಾರೂ ಕೇಳಿದಂತಿಲ್ಲ.

ಆದರೆ ಕಳೆದ ವರ್ಷ ಹಿಂದುಳಿದವರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ ರಾಜ್ಯದ ಶಾಸನಸಭೆಯ ಸಮಿತಿ, ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳು ಸಿಗದಿದ್ದಲ್ಲಿ, ಹಿಂದಿನಂತೆ ಆ ಹುದ್ದೆಗಳನ್ನು ಸಾಮಾನ್ಯ ವರ್ಗದವರಿಗೆ ವರ್ಗಾಯಿಸಬಾರದು. ಬದಲಿಗೆ ಅವುಗಳನ್ನು ಬ್ಯಾಕ್‌ಲಾಗ್‌ ಎಂದು ವರ್ಗೀಕರಿಸು
ವಂತೆ ಸೂಚಿಸಿತ್ತು ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆದರೆ ಈ ವರದಿಯಲ್ಲಿ ಯಾವ ಯಾವ ಹುದ್ದೆಗಳಿಗೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಸಿಗುತ್ತಿಲ್ಲ ಮತ್ತು ಅದಕ್ಕೆ ಕಾರಣಗಳೇನು ಎಂಬುದನ್ನು ತಿಳಿಸಿರಲಿಲ್ಲ.

ಇಂದಿಗೆ ಸರಿಯಾಗಿ 45 ವರ್ಷಗಳ ಹಿಂದೆ ದೇವರಾಜ ಅರಸು ನೇತೃತ್ವದ ಸರ್ಕಾರ, ಹಿಂದುಳಿದವರ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಿ, ವರದಿಯನ್ನು ನೀಡಲು ನೇಮಿಸಿದ್ದ ಹಾವನೂರ ಆಯೋಗ ತನ್ನ ವರದಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯ ಜೊತೆಗೆ ಈ ವರ್ಗಗಳಿಗೆ ಮೀಸಲಾತಿಯ ಅಗತ್ಯದ ಬಗ್ಗೆ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಿತು. ಇದರಿಂದಾಗಿ ಈ ವರ್ಗಗಳ ಶೈಕ್ಷಣಿಕ ಸಾಧನೆಯ ಬಗ್ಗೆ ಮತ್ತು ಸರ್ಕಾರಿ ಹುದ್ದೆಗಳಲ್ಲಿ ಇವರ ಪ್ರಾತಿನಿಧ್ಯದ ಬಗ್ಗೆ ನಿರಂತರವಾಗಿ ಮಾಹಿತಿ ಸಂಗ್ರಹಿಸಿ ಅದನ್ನು ಪ್ರಕಟಿಸುವ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸಬೇಕಿತ್ತು. ನಮ್ಮ ಚಿಂತನಶೀಲರಂತೂ ಸಾಮಾಜಿಕ ನ್ಯಾಯಕ್ಕೆ ಜಾತಿವಾರು ‍ಪ್ರಾತಿನಿಧ್ಯವೇ ಮುಖ್ಯ ಮಾನದಂಡ ಎಂದು ವಾದಿಸುತ್ತಾ ಬಂದಿದ್ದಾರೆ. ಆದರೂ ಇಂತಹ ಪ್ರಾತಿನಿಧ್ಯದ ಬಗ್ಗೆ ನಿಖರವಾದ ಮಾಹಿತಿಗಳನ್ನು ಕಾಲಕಾಲಕ್ಕೆ ಸಂಗ್ರಹಿಸಿ ಪ್ರಕಟಿಸಬೇಕೆಂಬ ಒತ್ತಾಯ ಇವರಿಂದ ಬಂದಿಲ್ಲ.

1985 ರಲ್ಲಿ ನೇಮಕವಾದ ವೆಂಕಟಸ್ವಾಮಿ ಆಯೋಗವು ಹಾವನೂರ ಆಯೋಗಕ್ಕಿಂತ ವ್ಯಾಪಕವಾದ ಸಮೀಕ್ಷೆ ನಡೆಸಿ, ಪಡೆದ ಮಾಹಿತಿಗಳನ್ನು ಆಧರಿಸಿ ಹಿಂದುಳಿದ ವರ್ಗಗಳ ಪಟ್ಟಿಯಿಂದ ಒಕ್ಕಲಿಗ ಸಮುದಾಯವನ್ನು ಹೊರಗಿಡಬೇಕೆಂದು ಶಿಫಾರಸು ಮಾಡಿತ್ತು. ಇದಕ್ಕೆ ವಿರುದ್ಧವಾಗಿ ಆ ಸಮುದಾಯದಿಂದ ದೊಡ್ಡ ಆಂದೋಲನ ನಡೆದು ಆ ಶಿಫಾರಸು ಜಾರಿಗೆ ಬರಲಿಲ್ಲ. ಈಗ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ನಡೆಸಿದ ‘ಜಾತಿ ಜನಗಣತಿ’ಯ ವರದಿಯಲ್ಲಿ ಪ್ರಸ್ತಾಪಿಸಿರುವ ಶಿಫಾರಸುಗಳಿಗೂ ಇದೇ ಗತಿಯಾಗಬಹುದು. ಆದ್ದರಿಂದಲೇ ಈ ಸರ್ಕಾರ ‘ಜಾತಿ ಜನಗಣತಿ’ಯನ್ನು ನಡೆಸುವಲ್ಲಿ ತೋರಿಸಿದ ಉಮೇದನ್ನು ಅದರ ಫಲಿತಾಂಶ ಪ್ರಕಟಿಸುವಲ್ಲಿ ತೋರಿಸುತ್ತಿಲ್ಲ. ಆದರೆ ಏಕಾಏಕಿ ಮೀಸಲಾತಿಯ ಪ್ರಮಾಣವನ್ನು ಏರಿಸುವ ಹೇಳಿಕೆಯನ್ನು ನೀಡಿ ತಾನು ಸಾಮಾಜಿಕ ನ್ಯಾಯದ ಪರ ಎಂದು ಬಿಂಬಿಸಲು ಮುಂದಾಗಿದೆ.

ಎಲ್ಲರ ಗಮನಕ್ಕೂ ಬಂದಿರುವ ಒಂದು ಸಂಗತಿಯನ್ನು ಹೇಳಬಹುದು. ಅದೆಂದರೆ ಮುಂದುವರಿದ ಜಾತಿಗಳವರು ಎರಡು ಪೀಳಿಗೆಗಳಿಂದ ಅನುಸರಿಸುತ್ತಾ ಬಂದಿರುವ ಕುಟುಂಬ ಯೋಜನೆಯಿಂದಾಗಿ, ಅವರಲ್ಲಿ ಮದುವೆಯ ವಯಸ್ಸಿನ ಏರಿಕೆಯಿಂದಾಗಿ ಹಾಗೂ ಉದ್ಯೋಗಗಳಿಗಾಗಿ ಹೊರ ರಾಜ್ಯಗಳಿಗೆ ಮತ್ತು ಹೊರ ದೇಶಗಳಿಗೆ ವಲಸೆ ಹೋಗುತ್ತಿರುವುದರಿಂದಾಗಿ ಈ ಸಮುದಾಯಗಳಲ್ಲಿ ಯುವಜನರ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದೆ. ಇದರಿಂದಾಗಿಯೇ ಇಂದು ಶಿಕ್ಷಣ ಮತ್ತು ಸರ್ಕಾರಿ ಹುದ್ದೆಗಳ ಕ್ಷೇತ್ರಗಳಲ್ಲಿ ಸಾಮಾನ್ಯ ವರ್ಗದವರ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತಿದೆ. ಇದರ ಲಾಭ ಇತರ ವರ್ಗದವರಿಗೆ ಸಿಗುತ್ತಿದೆ ಎಂಬುದು ಎಲ್ಲರ ಗಮನಕ್ಕೂ ಬರುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಮೀಸಲಾತಿಯ ಪ್ರಮಾಣ ಹೆಚ್ಚಿಸಿದರೆ, ಸರ್ಕಾರ ನಡೆಸುವವರು ತಮ್ಮ ವೈಫಲ್ಯವನ್ನು ಜಾಹೀರುಗೊಳಿಸಿದಂತಾಗುವುದಿಲ್ಲವೇ?

ಗಿರೀಶ ವಿ. ವಾಘ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT