ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ಬಲ: ಬ್ಲ್ಯಾಕ್‌ಕ್ಯಾಪ್ಸ್‌ ಛಲ

Last Updated 15 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಎರಡು ವಾರಗಳ ಹಿಂದೆ ನ್ಯೂಜಿಲೆಂಡ್‌ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ಹೊಸ ಪ್ರಯೋಗವೊಂದಕ್ಕೆ ನಾಂದಿ ಹಾಡಿತು. ಭಾರತ ವಿರುದ್ಧ ಈ ತಿಂಗಳ 22ರಂದು ಆರಂಭವಾಗಲಿರುವ ಏಕದಿನ ಸರಣಿಗೆ ಸಮಿತಿ ಪ್ರಕಟಿಸಿದ ತಂಡದಲ್ಲಿ ಇದ್ದದ್ದು ಒಂಬತ್ತು ಮಂದಿ ಮಾತ್ರ! ವಿಷಯ ತಿಳಿದು ‘ಇದೇನು, ಒಂಬತ್ತು ಆಟಗಾರರ ತಂಡ ಕ್ರಿಕೆಟ್ ಆಡಲು ಸಾಧ್ಯವೇ’ ಎಂದು ಪ್ರಶ್ನೆ ಕೇಳಿದವರೂ ಇದ್ದಾರೆ.

ಆದರೆ ಆಯ್ಕೆ ಸಮಿತಿಯ ಮನಸ್ಸಿನಲ್ಲಿದ್ದದ್ದು 15 ಮಂದಿಯ ತಂಡವೇ. ಒಂಬತ್ತು ಮಂದಿಯನ್ನು ಅಲ್ಲಿ ಆಯ್ಕೆ ಮಾಡಿದ್ದ ಸಮಿತಿಯವರು ಉಳಿದವರನ್ನು ಭಾರತದಲ್ಲೇ ಆರಿಸುವ ಲೆಕ್ಕಾಚಾರ ಹಾಕಿದ್ದರು. ಯಾಕೆಂದರೆ ನ್ಯೂಜಿಲೆಂಡ್‌ನ ಪ್ರಮುಖ ಆಟಗಾರರು ಇಲ್ಲಿ ‘ಎ’ ಸರಣಿಯಲ್ಲಿ ಆಡುತ್ತಿದ್ದಾರೆ. ‘ಎ’ ಸರಣಿಯುದ್ದಕ್ಕೂ ಕಳಪೆ ಆಟ ಆಡಿದವರನ್ನೇ ಬಳಸಿಕೊಂಡು ‘ಬಲಿಷ್ಠ’ ತಂಡ ಕಟ್ಟಲು ಅವರು ಮುಂದಾಗಿದ್ದಾರೆ.

ವಿಶ್ವ ಕ್ರಿಕೆಟ್‌ನ ಕಪ್ಪು ಕುದುರೆಗಳು ಎಂದು ಕರೆಸಿಕೊಳ್ಳುವ ನ್ಯೂಜಿಲೆಂಡ್‌ ಪ್ರಬುದ್ಧ ಆಟಗಾರರನ್ನು ಹೊಂದಿರುವ ತಂಡ. ಒಂದು ದಶಕದ ಹಿಂದೆ ಚುರುಕಿನ ಫೀಲ್ಡಿಂಗ್‌ಗೆ ಹೆಸರು ಮಾಡಿದ್ದ ತಂಡ. ಆದರೆ ವಿಶ್ವಕಪ್‌, ಚಾಂಪಿಯನ್ಸ್ ಟ್ರೋಫಿಯಂಥ ಪ್ರಮುಖ ಟೂರ್ನಿಗಳಲ್ಲಿ ದುರದೃಷ್ಟವನ್ನು ಸದಾ ಬೆನ್ನಿಗೆ ಕಟ್ಟಿಕೊಂಡ ತಂಡ. ಹೀಗಾಗಿ ಇಲ್ಲಿಯ ವರೆಗೆ ಚಾಂಪಿಯನ್ಸ್ ಟ್ರೋಫಿ ಹೊರತುಪಡಿಸಿ ಪ್ರಮುಖ ಪ್ರಶಸ್ತಿಗಳನ್ನು ಎತ್ತಿ ಹಿಡಿಯಲು ಅವರಿಗೆ ಸಾಧ್ಯವಾಗಲೇ ಇಲ್ಲ. ಕಳೆದ ವಿಶ್ವಕಪ್‌ನಲ್ಲೂ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲೂ ತಂಡದ ದುರದೃಷ್ಟ ಸರಣಿ ಮುಂದುವರಿದಿತ್ತು.

ಇಂಥ ತಂಡ ಇದೀಗ ಭಾರತದ ನೆಲದಲ್ಲಿ ಏಕದಿನ ಮತ್ತು ಟಿ–20 ಕ್ರಿಕೆಟ್ ಆಡಲು ಸಿದ್ಧವಾಗಿದೆ. ಈ ವರ್ಷ ಎರಡೂ ಮಾದರಿಗಳಲ್ಲಿ ಉತ್ತಮ ಸಾಧನೆ ಮಾಡಿರುವ ತಂಡ ಗೆಲುವಿನ ನಾಗಾಲೋಟದಲ್ಲಿರುವ ಭಾರತಕ್ಕೆ ಸವಾಲೊಡ್ಡಲಿದೆ. ಕಪ್ಪು ಕುದುರೆಗಳನ್ನು ಕಟ್ಟಿ ಹಾಕುವುದು ಈಗಿನ ಸ್ಥಿತಿಯಲ್ಲಿ ಭಾರತಕ್ಕೆ ಅತಿ ಸುಲಭ ಎಂಬುದು ಸಾಮಾನ್ಯ ಗ್ರಹಿಕೆ. ಆದರೆ ದಿಢೀರ್ ಪುಟಿದೇಳುವ ಗುಣವಿರುವ ನ್ಯೂಜಿಲೆಂಡ್ ತಂಡ ಕೊಹ್ಲಿ ಪಡೆಗೆ ಸುಲಭ ತುತ್ತಾಗುವುದೇ ಎಂಬ ಪ್ರಶ್ನೆಗೆ ಉತ್ತರ ಅಂಗಣದಲ್ಲೇ ಸಿಗಬೇಕಿದೆ.

ಸಾಧನೆಯಲ್ಲಿ ಭಾರತವೇ ಮೇಲು

ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಭಾರತಕ್ಕಿಂತ ಒಂದೆರಡು ವರ್ಷ ಮೊದಲೇ ಪದಾರ್ಪಣೆ ಮಾಡಿರುವ ನ್ಯೂಜಿಲೆಂಡ್‌ ಸಾಧನೆಯಲ್ಲಿ ಭಾರತಕ್ಕಿಂತ ಹಿಂದುಳಿದಿದೆ. ಏಕದಿನ ವಿಶ್ವಕಪ್‌ನಲ್ಲಿ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದ ತಂಡ ಸದ್ಯ ರನ್ನರ್ ಅಪ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ಟಿ–20 ವಿಶ್ವಕಪ್‌ನಲ್ಲಂತೂ ಫೈನಲ್ ಪ್ರವೇಶಿಸುವುದಕ್ಕೂ ತಂಡಕ್ಕೆ ಸಾಧ್ಯವಾಗಲಿಲ್ಲ. 2007 ಮತ್ತು 2016ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದೇ ತಂಡದ ಗರಿಷ್ಠ ಸಾಧನೆ.

ಆದರೆ ಭಾರತ ಏಕದಿನ ಕ್ರಿಕೆಟ್‌ನಲ್ಲಿ ಎರಡು ಬಾರಿ ವಿಶ್ವಕಪ್ ಎತ್ತಿ ಹಿಡಿದಿದೆ. ಟಿ–20 ವಿಶ್ವಕಪ್‌ ಟೂರ್ನಿಯಲ್ಲೂ ಒಂದು ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.

ಏಕದಿನ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್‌ಗಿಂತ ಭಾರತ 200 ಪಂದ್ಯಗಳನ್ನು ಹೆಚ್ಚು ಆಡಿದೆ. ಗೆಲುವಿನಲ್ಲೂ ಭಾರತ ಮಾಡಿದ ಸಾಧನೆ ಅಪಾರ. ಟಿ–20ಯಲ್ಲಿ ನ್ಯೂಜಿಲೆಂಡ್ ತಂಡ ಭಾರತಕ್ಕಿಂತ ಹೆಚ್ಚು ಪಂದ್ಯ ಆಡಿದ್ದರೂ ಜಯದ ಲೆಕ್ಕಾಚಾರದಲ್ಲಿ ಭಾರತವೇ ಮುಂದೆ ಇದೆ. ಈ ವರೆಗೆ 50 ಪಂದ್ಯಗಳನ್ನು ಭಾರತ ಗೆದ್ದಿದ್ದು ನ್ಯೂಜಿಲೆಂಡ್‌ಗೆ ಈ ಸಾಧನೆ ಮಾಡಲು ಇನ್ನು ಒಂದು ಜಯದ ಅಗತ್ಯವಿದೆ.

ವರ್ಷದ ಸಾಧನೆಯಲ್ಲಿ ಸಮಬಲ

ಈ ವರ್ಷ ಉಭಯ ತಂಡಗಳೂ ಅಮೋಘ ಸಾಧನೆ ಮಾಡಿವೆ. ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಮೇಲುಗೈ ಸಾಧಿಸಿ ಭಾರತ ಮೆರೆಯುತ್ತಿದ್ದರೆ, ನ್ಯೂಜಿಲೆಂಡ್‌ ತಂಡ ಬಲಿಷ್ಠ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾವನ್ನು ಮಣಿಸಿದ ನಂತರ ಐರ್ಲೆಂಡ್ ವಿರುದ್ಧ 190 ರನ್‌ಗಳ ಜಯ ದಾಖಲಿಸಿದೆ. ಆದರೆ ಬಾಂಗ್ಲಾದೇಶದಲ್ಲಿ ಆತಿಥೇಯರ ಮುಂದೆ ಮಂಡಿಯೂರಿದ್ದು ಈ ತಂಡ ತನ್ನ ಅನಿಶ್ಚಿತ ಗುಣವನ್ನು ಮತ್ತೊಮ್ಮೆ ಸಾರಿ ಹೇಳಿದೆ. ಟಿ–20ಯ ಸರಣಿಯಲ್ಲಿ ಬಾಂಗ್ಲಾದೇಶವನ್ನು ಮಣಿಸಿರುವ ತಂಡ ದಕ್ಷಿಣ ಆಫ್ರಿಕಾ ಎದುರಿನ ಏಕೈಕ ಪಂದ್ಯವನ್ನು ಸೋತಿದೆ.

ಭಾರತ ಈ ವರ್ಷ ಒಟ್ಟು 23 ಏಕದಿನ ಪಂದ್ಯಗಳನ್ನು ಆಡಿದ್ದು 17ರಲ್ಲಿ ಗೆದ್ದಿದೆ. ಐದು ಸೋಲು ಕಂಡಿದೆ. ಟಿ–20ಯಲ್ಲಿ ಏಳು ಪಂದ್ಯಗಳನ್ನು ಆಡಿದ್ದು ನಾಲ್ಕರಲ್ಲಿ ಜಯ ಗಳಿಸಿದೆ (ಆಸ್ಟ್ರೇಲಿಯಾ ಎದುರಿನ ಎರಡನೇ ಪಂದ್ಯದ ವರೆಗೆ). ವಿದೇಶಿ ನೆಲದಲ್ಲೂ ಒಳಗೊಂಡಂತೆ ನಿರಂತರ ಒಬ್ಬತ್ತು ಏಕದಿನ ಪಂದ್ಯಗಳನ್ನು ಗೆದ್ದ ಸಾಧನೆಯನ್ನೂ ಮಾಡಿರುವ ತಂಡ ಸದ್ಯ ಕಟ್ಟಿಹಾಕಲಾಗದ ಕುದುರೆ.

ಸಮರ್ಥ ಆಟಗಾರರ ಹುಡುಕಾಟ

ಸ್ಫೋಟಕ ಬ್ಯಾಟ್ಸ್‌ಮನ್‌ ಬ್ರೆಂಡನ್ ಮೆಕ್ಲಮ್‌ ರಾಜೀನಾಮೆಯ ನಂತರ ಎರಡು ವರ್ಷಗಳಿಂದ ನ್ಯೂಜಿಲೆಂಡ್‌ ತಂಡವನ್ನು ಮೂರೂ ಮಾದರಿಯಲ್ಲಿ ಕೇನ್‌ ವಿಲಿಯಮ್ಸನ್‌ ಮುನ್ನಡೆಸುತ್ತಿದ್ದಾರೆ. ಆದರೆ ಸಮರ್ಥ ಆಟಗಾರರನ್ನು ಒಳಗೊಂಡ ತಂಡವನ್ನು ಸಿದ್ಧಗೊಳಿಸುವ ಕಾರ್ಯ ಕೋಚ್‌ ಮೈಕ್‌ ಹೆಸನ್‌ ಅವರಿಗೆ ಇನ್ನೂ ತಲೆನೋವಾಗಿಯೇ ಉಳಿದಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ನೀಲ್ ಬ್ರೂಮ್‌ ಮತ್ತು ಬ್ಯಾಟಿಂಗ್ ಆಲ್‌ರೌಂಡರ್‌ ಜಿಮ್ಮಿ ನೀಶಮ್ ಅವರನ್ನು ಭಾರತ ಪ್ರವಾಸದ ತಂಡದಿಂದ ಕೈಬಿಡಲಾಗಿದೆ. ಮತ್ತೊಬ್ಬ ಆಲ್‌ರೌಂಡರ್‌ ಕೋರಿ ಆ್ಯಂಡರ್ಸನ್‌ ಬೆನ್ನು ಮೂಳೆ ನೋವಿನಿಂದ ಬಳಲುತ್ತಿದ್ದಾರೆ.

ಲೂಕ್ ರಾಂಕಿ ಮತ್ತು ಜೀತನ್ ಪಟೇಲ್‌ ಅವರ ನಿವೃತ್ತಿ, ಮಿಚೆಲ್ ಮೆಕ್‌ಲೆನಾಗನ್‌ ದೇಶಿ ಕ್ರಿಕೆಟ್ ಕಡೆಗೆ ಗಮನ ಕೇಂದ್ರೀಕರಿಸಿರುವುದು ಇತ್ಯಾದಿ ಬೆಳವಣಿಗೆ ತಂಡದ ಗಾಯಕ್ಕೆ ಬರೆ ಎಳೆದಿದೆ. ಭಾರತ ‘ಎ‘ ವಿರುದ್ಧ ಆಡಿದ ತಂಡದಲ್ಲಿ ಯಾರೂ ಗಮನಾರ್ಹ ಸಾಧನೆ ತೋರದ ಕಾರಣ ಪ್ರತಿಭೆಗಳನ್ನು ಹೆಕ್ಕುವುದು ನ್ಯೂಜಿಲೆಂಡ್‌ಗೆ ಕಠಿಣ ಸವಾಲಾಗಿದೆ.

ಇತ್ತ ಭಾರತ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದೆ. ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಹಾರ್ದಿಕ್ ಪಾಂಡ್ಯ ಅವರಂಥ ಹೊಸ ಪ್ರತಿಭೆಗಳಿಗೆ ಸಾಣೆ ಹಿಡಿದಿರುವ ತಂಡದ ಬೆಂಚ್‌ ಬಲವೂ ಅಮೋಘವಾಗಿದೆ. ಇಂಥ ತಂಡವನ್ನು ಎದುರಿಸಿ ಸೆಟೆದು ನಿಲ್ಲಲು ನ್ಯೂಜಿಲೆಂಡ್‌ಗೆ ಸಾಧ್ಯವೇ ಎಂಬುದು ಕುತೂಹಲದ ಪ್ರಶ್ನೆ.

ವಿಕೆಟ್ ಕಾಯುವವರು ಯಾರು?

ಲೂಕ್‌ ರಾಂಕಿ ಅನುಪಸ್ಥಿತಿಯಲ್ಲಿ ವಿಕೆಟ್ ಕಾಯುವ ಜವಾಬ್ದಾರಿ ಯಾರಿಗೆ ವಹಿಸಬೇಕು ಎಂಬ ಗೊಂದಲದಲ್ಲಿದೆ ನ್ಯೂಜಿಲೆಂಡ್ ತಂಡ. ಕೋಚ್‌ ಮುಂದೆ ಈಗ ಇರುವ ಏಕೈಕ ಆಯ್ಕೆ ಎಂದರೆ ಟಾಮ್ ಲಥಾಮ್‌. ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ಅವರು ಈಗಾಗಲೇ ಎಂಟು ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಮಾಡಿದ್ದಾರೆ. ಆದರೆ ಈ ಜವಾಬ್ದಾರಿಯಿಂದ ಅವರ ಬ್ಯಾಟಿಂಗ್ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಆತಂಕವೂ ತಂಡಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT