ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲು ಮರೆಸಿದ ಮೊದಲ ಗೋಲು

ಫಿಫಾ ಜೂನಿಯರ್ ವಿಶ್ವಕಪ್‌ನಲ್ಲಿ ಭಾರತ ತಂಡ ಪ್ರತಿನಿಧಿಸಿದ್ದ ಸಂಜೀವ್ ಹೆಮ್ಮೆಯ ನುಡಿ
Last Updated 15 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಅದು ಅದೃಷ್ಟದ ಕ್ಷಣ.  ನಾನು ಮಾಡಿದ ಕಾರ್ನರ್‌ ಕಿಕ್‌ನಲ್ಲಿ ನುಗ್ಗಿ ಬಂದ ಚೆಂಡನ್ನು  ಜಿಕ್ಸನ್‌ ಹೆಡರ್‌ ಮೂಲಕ ಗೋಲು ಗಳಿಸಿದ್ದ.  ನಮ್ಮ ಯೋಜನೆಯು ಫಲ ನೀಡಿತ್ತು. ಆ ಕ್ಷಣವನ್ನು ಮರೆಯಲು ಸಾಧ್ಯವೇ ಇಲ್ಲ. ಐತಿಹಾಸಿಕ ಗೋಲು ದಾಖಲಿಸುವಲ್ಲಿ ಭಾಗಿಯಾಗಿದ್ದು ಹೆಮ್ಮೆಯ ವಿಷಯ’

ಫಿಫಾ ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ಸಂಜೀವ್ ಸ್ಟಾಲಿನ್ ಅವರ ಸಂತಸದ ನುಡಿಗಳಿವು. ದೆಹಲಿಯಲ್ಲಿ ಅ.9ರಂದು ನಡೆದಿದ್ದ ಕೊಲಂಬಿಯಾ ವಿರುದ್ಧದ ಪಂದ್ಯದ 82ನೇ ನಿಮಿಷದಲ್ಲಿ ಜೀಕ್ಸನ್‌ ಸಿಂಗ್ ಗೋಲು ಗಳಿಸಿದ್ದರು. ಆದು ಭಾರತ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಗಳಿಸಿದ ಮೊದಲ ಗೋಲಾಗಿತ್ತು. ಆ ಪಂದ್ಯದಲ್ಲಿ ಭಾರತ 1–2ರಿಂದ ಸೋತಿತ್ತು.  ಲೀಗ್ ಹಂತದ ಎಲ್ಲ ಮೂರು ಪಂದ್ಯಗಳಲ್ಲಿಯೂ ಸೋತಿತ್ತು.  ಶನಿವಾರ ರಾತ್ರಿ ತವರಿಗೆ ಮರಳಿರುವ ಸಂಜೀವ್ ಸ್ಟಾಲಿನ್ ಮತ್ತು ಹೆನ್ರಿ ಅಂಥೋಣಿ ಅವರನ್ನು ಭಾನುವಾರ ಸಂಜೆ ಮರ್ಫಿ ಟೌನ್‌ನಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಜೀವ್  ’ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

l ಕೊಲಂಬಿಯಾ ಎದುರಿನ ಗೋಲಿನ ಮಹತ್ವವನ್ನು ಯಾವ ರೀತಿ ವಿಶ್ಲೇಷಿಸುತ್ತೀರಿ?

ಭಾರತದ ಫುಟ್‌ಬಾಲ್‌ ಬೆಳವಣಿಗೆಗೆ ಅದು ದಿಕ್ಸೂಚಿಯಾಗಲಿದೆ. ನಮ್ಮ ದೇಶದ ಆಟಗಾರರಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯ  ಇದೆ. ಈ ಬಾರಿ ನಾವು ಯಾವುದೇ ಪಂದ್ಯದಲ್ಲಿ ಜಯಿಸಿಲ್ಲ. ಆದರೆ ಭವಿಷ್ಯದಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸುವುದು ಖಚಿತ.

l ಭಾರತ ತಂಡದೊಂದಿಗೆ ಇದ್ದ ಅನುಭವ ಕುರಿತು.

ವಿದೇಶದ ತಂಡಗಳ ಎದುರು ಆಡಿದ್ದು ಹೊಸ ಅನುಭವವಾಗಿದೆ. ಕಲಿಯುವುದು ಸಾಕಷ್ಟಿದೆ. ನವೀನ ತಂತ್ರಗಳನ್ನು ರೂಢಿಸಿಕೊಳ್ಳಲು ಅವಕಾಶ ಲಭಿಸಿತು. ತಂಡದ ಎಲ್ಲ ಆಟಗಾರರ ನಡುವೆಯೂ ಉತ್ತಮ ಬಾಂಧವ್ಯ ಇದೆ. ಅನುಭವಿ ಕೋಚ್‌ ಉತ್ತಮ ತರಬೇತಿ ನೀಡಿದ್ದಾರೆ. ಈ ಅನುಭವವು ನಮ್ಮ ಮುಂದಿನ ಭವಿಷ್ಯವನ್ನು ಉತ್ತಮ ರೂಪಿಸಲು ಸಹಕಾರಿಯಾಗಲಿದೆ.

l ನಿಮ್ಮ ಮುಂದಿನ ಗುರಿ ಏನು?

ಭಾರತದ ಸೀನಿಯರ್ ತಂಡಕ್ಕೆ ಆಡುವುದು ನನ್ನ ಗುರಿ. ಯಾವುದೇ ವಯೋಮಿತಿಯಲ್ಲಿ ದೇಶದ ತಂಡವನ್ನು ಪ್ರತಿನಿಧಿಸುವುದು ದೊಡ್ಡ ಗೌರವ. ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ್ದು ನನ್ನ ಅದೃಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT